ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಕ್ಷ ಪಟ್ಟ ಉಳಿಸಿಕೊಂಡ ಸುನಿತಾ

Last Updated 5 ಜೂನ್ 2012, 7:00 IST
ಅಕ್ಷರ ಗಾತ್ರ

ಚಿತ್ರದುರ್ಗ: ಸುನಿತಾ ಮಲ್ಲಿಕಾರ್ಜುನ್ ನಗರಸಭೆ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.

ವಿಧಾನ ಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ ಅವರ ಬೆಂಬಲ ಪಡೆದ ಸುನಿತಾ ಮಲ್ಲಿಕಾರ್ಜುನ್ ತಮ್ಮ ಬುಟ್ಟಿಗೆ 15 ಸದಸ್ಯರನ್ನು ಹಾಕಿಕೊಳ್ಳುವ ಮೂಲಕ ಅವಿಶ್ವಾಸ ಗೊತ್ತುವಳಿ ಸೋಲಿಸಿದ್ದಾರೆ.

ಎಲ್ಲ 34 ಸದಸ್ಯರು ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್ ವಿರುದ್ಧ ಇತ್ತೀಚೆಗೆ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದರು. ಎಲ್ಲ ಸದಸ್ಯರು ಅವಿಶ್ವಾಸ ಮಂಡಿಸಿದ್ದು ಅಪರೂಪವಾಗಿತ್ತು. ಈ ಹಿನ್ನೆಲೆಯಲ್ಲಿ  ಸೋಮವಾರ ವಿಶೇಷ ಸಭೆ ಕರೆಯಲಾಗಿತ್ತು. ಆದರೆ, ಕೆಲವು ಸದಸ್ಯರು ತಮ್ಮ ನಿಷ್ಠೆಯನ್ನು ಬದಲಾಯಿಸಿ ಸುನಿತಾ ಅವರಿಗೆ ಬೆಂಬಲ ಸೂಚಿಸಿದರು.

ವಿಧಾನ ಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ ಅವರ ರಂಗಪ್ರವೇಶದಿಂದ ಪರಿಸ್ಥಿತಿ ಬದಲಾಗಿ ಶಾಸಕ ಹಾಗೂ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಕೆ. ಬಸವರಾಜನ್ ಅವರಿಗೆ ಹಿನ್ನಡೆ ಆಯಿತು. ಜೆಡಿಎಸ್ ವಿಪ್ ಜಾರಿ ಮಾಡಿದ್ದರೂ ಸದಸ್ಯರು ಉಲ್ಲಂಘಿಸಿದರು. ತಿಪ್ಪಾರೆಡ್ಡಿ ತಮ್ಮ ರಾಜಕೀಯ ತಂತ್ರಗಾರಿಕೆಯಿಂದ ಸುನಿತಾ ಅವರಿಗೆ ಅಗತ್ಯ ಸದಸ್ಯರ ಬೆಂಬಲ ಕೊಡಿಸುವಲ್ಲಿ ಯಶಸ್ವಿಯಾದರು.

ಸುನಿತಾ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಅವಿಶ್ವಾಸ ಗೊತ್ತುವಳಿ ಪರ ಸಭೆಯಲ್ಲಿ ಹಾಜರಿದ್ದ 37 ಮಂದಿ ಪೈಕಿ ಒಟ್ಟು 25 ಮಂದಿಯ ಬೆಂಬಲ ಅಗತ್ಯವಾಗಿತ್ತು. ಆದರೆ, ಅವಿಶ್ವಾಸ ಗೊತ್ತುವಳಿ ಪರ ಶಾಸಕ ಬಸವರಾಜನ್ ಸೇರಿದಂತೆ 22 ಸದಸ್ಯರ ಬೆಂಬಲ ಮಾತ್ರ ದೊರೆಯಿತು.

ಅವಿಶ್ವಾಸ ಗೊತ್ತುವಳಿ ವಿರುದ್ಧ ವಿಧಾನ ಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ ಸೇರಿದಂತೆ 15 ಸದಸ್ಯರು ಕೈ ಎತ್ತಿದರು. ಇದರಿಂದ ಅವಿಶ್ವಾಸ ಗೊತ್ತುವಳಿಗೆ ಸೋಲು ಉಂಟಾಯಿತು.

ಜಿ.ಎಚ್. ತಿಪ್ಪಾರೆಡ್ಡಿ ಹಾಗೂ ಜೆಡಿಎಸ್‌ನ 7  ಮತ್ತು ಕಾಂಗ್ರೆಸ್‌ನ 7 ಸದಸ್ಯರು ಸುನಿತಾ ಅವರಿಗೆ ಬೆಂಬಲ ಸೂಚಿಸಿ ಕೈ ಎತ್ತಿದರು. ಜೆಡಿಎಸ್ ಸದಸ್ಯರಾದ ಎಸ್. ಭಾಸ್ಕರ್, ಸುನಿತಾ ಮಲ್ಲಿಕಾರ್ಜುನ್, ರಘುರಾಮರೆಡ್ಡಿ, ರವಿಶಂಕರ್ ಬಾಬು, ಡಿ. ಪ್ರಕಾಶ್, ಎಂ.ಬಿ. ವೀಣಾ, ಗಾಡಿ ಮಂಜುನಾಥ್ ಹಾಗೂ ಕಾಂಗ್ರೆಸ್ ಸದಸ್ಯರಾದ  ಎಚ್. ಶ್ರೀನಿವಾಸ್, ಲಕ್ಷ್ಮಮ್ಮ, ಮೊಹಸಿನ್ ಖಾನಂ, ಗೌರಮ್ಮ, ಬಿ. ವೆಂಕಟೇಶಪ್ಪ, ಬಿ. ಮಾಧವಿ ಹಾಗೂ ಪಕ್ಷೇತರರಾದ ಜಯಮ್ಮ ಬೆಂಬಲ ಸೂಚಿಸಿದರು.

ಸಭೆ ಅಸಿಂಧು: ತಕರಾರು
 ಅವಿಶ್ವಾಸ ಗೊತ್ತುವಳಿ ಮಂಡಿಸಲು ಕರೆದಿದ್ದ ಸಭೆಯನ್ನು ಉಪಾಧ್ಯಕ್ಷ ಅಬ್ಬುಲ್ ಜಬ್ಬಾರ್ ಅಧ್ಯಕ್ಷತೆಯಲ್ಲಿ ನಡೆಸಲು ಮುಂದಾದಾಗ ಶಾಸಕ ಎಸ್.ಕೆ. ಬಸವರಾಜನ್ ತಕರಾರು ಎತ್ತಿದರು.

ಸಭೆಯ ಅಧ್ಯಕ್ಷತೆಯನ್ನು ಹಾಲಿ ಅಧ್ಯಕ್ಷರೇ ವಹಿಸಿಕೊಳ್ಳಬೇಕು. ನೋಟಿಸ್‌ನಲ್ಲಿ ನೀಡಿರುವಂತೆ ಅಧ್ಯಕ್ಷರೇ ಸಭೆಯ ಅಧ್ಯಕ್ಷತೆ ವಹಿಸಿಕೊಳ್ಳಬೇಕು. ಇಲ್ಲದಿದ್ದರೆ ಈ ಸಭೆ ಅಸಿಂಧುವಾಗುತ್ತದೆ. ಸಭೆ ನಡೆಸಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ವಿಜಯಕುಮಾರ್, ಕಾನೂನು ಪ್ರಕಾರವೇ ಸಭೆ ನಡೆಸಲಾಗುತ್ತದೆ. ಸಭೆ ಮುಂದೂಡಲು ಅವಕಾಶವಿಲ್ಲ. ಅಧ್ಯಕ್ಷರ ಮೇಲೆ ಅವಿಶ್ವಾಸ ಬಂದಿರುವುದರಿಂದ ಸೆಕ್ಷನ್ 51ರ ಅಡಿಯಲ್ಲಿ ಉಪಾಧ್ಯಕ್ಷರು ಸಭೆಯ ಅಧ್ಯಕ್ಷತೆ ವಹಿಸಲು ಅವಕಾಶವಿದೆ ಎಂದು ತಿಳಿಸಿದರು.

ಸುನಿತಾ ಮಲ್ಲಿಕಾರ್ಜುನ್ ಮಾತನಾಡಿ, ಗೌಸಿಯಾಬಾನು ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವಾಗ ಉಪಾಧ್ಯಕ್ಷರು ಅಧ್ಯಕ್ಷತೆ ವಹಿಸಿದ್ದರು. ಅಂದು ಇಲ್ಲದ ತಕರಾರು ಇಂದು ಏಕೆ ಎಂದು ಪ್ರಶ್ನಿಸಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಸದಸ್ಯರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.

ಶಾಸಕರ ಪತ್ನಿ ವಿರುದ್ಧ ಸುನಿತಾ ಗರಂ!
ಅವಿಶ್ವಾಸ ಗೊತ್ತುವಳಿ ಸೋಲಿಸುವಲ್ಲಿ ಯಶಸ್ವಿಯಾದ ನಗರಸಭೆ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್ ಅವರು ಶಾಸಕ ಎಸ್.ಕೆ. ಬಸವರಾಜನ್ ಹಾಗೂ ಅವರ ಪತ್ನಿ ಸೌಭಾಗ್ಯಾ ವಿರುದ್ಧ ಹರಿಹಾಯ್ದರು.

`ನೀನು ಎಂಎಲ್‌ಎ ಎಲೆಕ್ಷನ್‌ಗೆ ನಿಲ್ತಿಯಾ? ಬಹಳಷ್ಟು ಪ್ರಚಾರ ಪಡೆಯುತ್ತಿದ್ದೀಯಾ ಎಂದು ಶಾಸಕರು ತಮ್ಮನ್ನು ಹೀಯಾಳಿಸುತ್ತಿದ್ದರು. ಕುತಂತ್ರದಿಂದ ತಮ್ಮ ವಿರುದ್ಧ ಸದಸ್ಯರನ್ನು ಎತ್ತಿಕಟ್ಟಿದ್ದರು. ನಿನ್ನೆವರೆಗೂ ಸದಸ್ಯರ ಮನೆಗೆ ಹೋಗಿ ತಮಗೆ ಯಾರೂ ಬೆಂಬಲ ನೀಡಬಾರದು ಎಂದು ಸೂಚಿಸಿದ್ದರು.

ನಗರಸಭೆ ಮಾಜಿ ಅಧ್ಯಕ್ಷ ಬಿ. ಕಾಂತರಾಜ್ ಸಹ ಶಾಸಕರ ಪತ್ನಿ ಜತೆ ನೀನು ಚೆನ್ನಾಗಿದ್ದರೆ ಮಾತ್ರ ಅಧ್ಯಕ್ಷ ಸ್ಥಾನ ಉಳಿಯುತ್ತದೆ ಎಂದು ಹೇಳಿದ್ದರು. ಆದರೆ, ಶಾಸಕರ ಪತ್ನಿ ನನಗೆ ಗೌರವ ನೀಡುತ್ತಿರಲಿಲ್ಲ. ಹಲವಾರು ಕಾರ್ಯಕ್ರಮಗಳಲ್ಲಿ ಶಾಸಕರ ಅನುಪಸ್ಥಿತಿಯಲ್ಲಿ ಅವರ ಪತ್ನಿ ಅಧ್ಯಕ್ಷ ಸ್ಥಾನವಹಿಸಿಕೊಳ್ಳುತ್ತಿದ್ದರು. ಇದು ಶಿಷ್ಟಾಚಾರ ಉಲ್ಲಂಘನೆಯಾಗಿತ್ತು. ಜತೆಗೆ, ನನ್ನ ಹೆಸರನ್ನು ಉದ್ದೇಶಪೂರ್ವಕವಾಗಿ ಹೇಳದೆ ಅವಮಾನ ಮಾಡುತ್ತಿದ್ದರು ಎಂದು ಸುದ್ದಿಗಾರರಿಗೆ ತಿಳಿಸಿದರು.

ಅಧ್ಯಕ್ಷ ಸ್ಥಾನದಿಂದ ಇಷ್ಟು ಕೆಟ್ಟದಾಗಿ ಇಳಿಸುವ ಪ್ರಯತ್ನ ಮಾಡುತ್ತಾರೆ ಎಂದು ಅನಿಸಿರಲಿಲ್ಲ. ತಾವು ಕುರ್ಚಿಗೆ ಮೋಸ ಮಾಡುವುದಿಲ್ಲ. ತಮ್ಮ ವಿರುದ್ಧ ಅವಿಶ್ವಾಸ ಮಂಡಿಸಲು ಅವರು ಎಷ್ಟು `ಡೀಲ್~ ಮಾಡಿದ್ದಾರೋ ಅವರನ್ನೇ ಕೇಳಬೇಕು ಎಂದು ಬಸವರಾಜನ್ ವಿರುದ್ಧ ಕಿಡಿಕಾರಿದರು.

ತಿಪ್ಪಾರೆಡ್ಡಿ ಅವರು ಬಿಜೆಪಿಯವರಾಗಿದ್ದರೂ ನನ್ನ ಮೇಲೆ ವಿಶ್ವಾಸವಿಟ್ಟು ಬೆಂಬಲ ಸೂಚಿಸಿದರು. ಉಳಿದ 9 ತಿಂಗಳ ಇನ್ನೂ ಹೆಚ್ಚಿನ ರೀತಿಯಲ್ಲಿ ಉತ್ತಮ ಕೆಲಸ ಮಾಡುವ ಜವಾಬ್ದಾರಿ ಹೊರೆಸಿದ್ದಾರೆ ಎಂದು ಹೇಳಿದರು.

ವ್ಯಾಪಾರ ನಡೆದಿದೆ: ಬಸವರಾಜನ್ ಆರೋಪ

ನಗರಸಭೆ ಅವಿಶ್ವಾಸ ಗೊತ್ತುವಳಿ ವಿಷಯದಲ್ಲಿ ಎರಡು ಬಣಗಳ ಸದಸ್ಯರ ಬೆಂಬಲ ಪಡೆಯಲು ವ್ಯಾಪಾರ ನಡೆದಿದೆ. ಯಾರು ಹೆಚ್ಚು ಆಮಿಷ ಒಡ್ಡಿದ್ದಾರೆ ಅವರು ಗೆಲುವು ಸಾಧಿಸಿದ್ದಾರೆ ಎಂದು ಶಾಸಕ ಎಸ್.ಕೆ. ಬಸವರಾಜನ್ ಆರೋಪಿಸಿದರು.

ಜೆಡಿಎಸ್ ಸದಸ್ಯರು ವಿಪ್ ಉಲ್ಲಂಘಿಸಿರುವ ಬಗ್ಗೆ ವರಿಷ್ಠರ ಜತೆ ಚರ್ಚಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತೇನೆ. ಸ್ಥಳೀಯ ಸಂಸ್ಥೆಗಳಲ್ಲಿ ಈ ರೀತಿ ನಿಷ್ಠೆ ಬದಲಾಯಿಸುವುದು ಸಾಮಾನ್ಯ. ಇದರಿಂದ ಅವಿಶ್ವಾಸ ಗೊತ್ತುವಳಿ ಸೋಲಾಗಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ ಎಂದು ಸಮರ್ಥಿಸಿಕೊಂಡರು.

ವಿಧಾನ ಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ ಸುದ್ದಿಗಾರರ ಜತೆ ಮಾತನಾಡಿ, ಮತ ಚಲಾಯಿಸುವ ಹಕ್ಕು ತಮಗಿದೆ. ನನಗೆ ಮತ ಚಲಾಯಿಸುವಂತೆ ಸುನಿತಾ ಕೋರಿದ್ದರು. ಆದ್ದರಿಂದ ಮತ ಚಲಾಯಿಸಿದ್ದೇನೆ ಎಂದು ಪ್ರತಿಕ್ರಿಯಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT