ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಧಿಕೃತ ವಿದ್ಯುತ್ ಪೂರೈಕೆ: ಗುತ್ತಿಗೆದಾರರ ದೂರು

Last Updated 7 ಮೇ 2012, 8:35 IST
ಅಕ್ಷರ ಗಾತ್ರ

ಬೀಳಗಿ: ತಾಲ್ಲೂಕಿನ ಸಿದ್ದಾಪುರ ಗ್ರಾಮದ ಪರಿಸರಲ್ಲಿ ಕೆಲವರು ವಿದ್ಯುತ್ ಮೋಟರ್‌ಗಳಿಗೆ ಅಕ್ರಮ ಸಂಪರ್ಕ ಪಡೆಯುತ್ತಿರುವುದು ಹೆಸ್ಕಾಂ ಸಿಬ್ಬಂದಿಗೆ ತಲೆ ನೋವಾಗಿ ಪರಿಣಮಿಸಿದೆ.

ಮಾಜಿ ಪ್ರಧಾನಿಗಳ ಆಪ್ತರು ಎಂದು ಹೇಳಿಕೊಂಡು ತಿರುಗುತ್ತಿರುವ ಸ್ವಯಂ ಘೋಷಿತ ರಾಜಕಾರಣಿಯೊಬ್ಬರ ಪ್ರಭಾವ ಕೆಲಸ ಮಾಡುತ್ತಿದೆ ಎಂದು ತಾಲ್ಲೂಕಿನ ಅಧಿಕೃತ ಪರವಾನಿಗೆ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಸವರಾಜ ದೇವೀನವರ ಹಾಗೂ ಖಜಾಂಚಿ ವಿಕ್ರಮ ಪಾಟೀಲ ದೂರುತ್ತಾರೆ.

ಅಂದಾಜು ವೆಚ್ಚದ ಶೇ.10ರಷ್ಟು ಮೇಲ್ವಿಚಾರಣೆ ಶುಲ್ಕ,  ಪ್ರತಿ ಅಶ್ವಶಕ್ತಿಗೆ ನಿಗದಿಪಡಿಸಿದ ರೂ. 850ರಷ್ಟು ಹಣ ಕಟ್ಟಿ ತಿಂಗಳಾನುಗಟ್ಟಲೇ ಕಚೇರಿಗೆ ತಿರುಗಿದರೂ ವಿದ್ಯುತ್ ಸಂಪರ್ಕ ಕಲ್ಪಿಸದ ಅಧಿಕಾರಿಗಳು 31.1.2012ರಂದು ನೋಂದಣಿ ಮಾಡಿಸಿದ ದಾಖಲೆಯೊಂದನ್ನು ಬಿಟ್ಟರೆ ಕಾನೂನು ಪ್ರಕಾರ ಯಾವುದೇ ಕಾಗದ ಪತ್ರಗಳಿರದೇ ನೋಂದಣಿಗೂ ಪೂರ್ವದಲ್ಲಿಯೇ ವಿದ್ಯುತ್ ಸಂಪರ್ಕ ಕಲ್ಪಿಸಿದ್ದು ಹೇಗೆ ಎಂದು ಪ್ರಶ್ನಿಸುತ್ತಾರೆ.

ಗ್ರಾಹಕರು ವಿದ್ಯುತ್ ಸಂಪರ್ಕಕ್ಕಾಗಿ ಮೊದಲು ಹೆಸ್ಕಾಂ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ನಂತರ ಹೆಸ್ಕಾಂನ ಶಾಖಾಧಿಕಾರಿಗಳು ನೋಂದಣಿ ಪತ್ರದ ಆಧಾರದ ಮೇಲೆ ಅಂದಾಜು ಪತ್ರ ತಯಾರಿಸಿ ಉಪ ವಿಭಾಗೀಯ ಎಂಜಿನಿಯರ್ ಶಿಫಾರಸ್ಸಿನೊಂದಿಗೆ ಮಂಜೂರು ಮಾಡಲು ವಿಭಾಗೀಯ ಕಚೇರಿಗೆ ಕಳಿಸಬೇಕು.

ವಿಭಾಗೀಯ ಕಚೇರಿಯಿಂದ ಒಪ್ಪಿಗೆ ದೊರೆತ ನಂತರ ಶಾಖಾಧಿಕಾರಿ ಗ್ರಾಹಕರಿಗೆ ಶೇ. 10ರಷ್ಟು ಮೇಲ್ವಿಚಾರಣೆ ಶುಲ್ಕ ಹಾಗೂ ಪ್ರತಿ ಅಶ್ವ ಶಕ್ತಿಗೆ ರೂ. 850 ರಂತೆ ಶುಲ್ಕ ಕಟ್ಟಲು ಸೂಚನಾ ಪತ್ರ ನೀಡಬೇಕು. ಗ್ರಾಹಕರು ಹಣ ಕಟ್ಟಿದನಂತರ ವಿದ್ಯುತ್ ಸಂಪರ್ಕ ಪಡೆದುಕೊಳ್ಳಲು ಅರ್ಹರಾಗುತ್ತಾರೆ.

ಆದರೆ ಸಿದ್ದಾಪುರ ಗ್ರಾಮದ ಈ 6 ಪಂಪ್ ಶೆಟ್‌ಗಳಿಗೆ (ಇದು ಒಂದು ಉದಾಹರಣೆ ಮಾತ್ರ, ಇಂಥವು ನೂರಾರು ಸಂಖ್ಯೆಯಲ್ಲಿ ಇವೆ) ನೋಂದಣಿಗೂ ಮುನ್ನವೇ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಅವರು ಹೇಳುತ್ತಾರೆ.

ಗ್ರಾಹಕರು ನೋಂದಣಿ ಮಾಡಿಸುವಾಗ ಹೆಸ್ಕಾಂಗೆ ಸಂಬಂಧಿಸಿದಂತೆ ಒಂದೇ ಒಂದು ಪೈಸೆ ಬಾಕಿ ಇರಕೂಡದೆಂದು ಹೆಸ್ಕಾಂ ನಿಯಮಾವಳಿ ಹೇಳುತ್ತದೆ. ಆದರೆ ಈ 6 ಜನ ಗ್ರಾಹಕರದು ಇಂದಿನವರೆಗೂ ರೂ. 48 ಸಾವಿರ ಬಾಕಿ ಇದ್ದು ಹೆಸ್ಕಾಂ ನಿಯಮಾವಳಿಗಳನ್ನು ಇಲ್ಲಿ ಗಾಳಿಗೆ ತೂರಲಾಗಿದೆ ಎಂದು ಹೇಳಲಾಗುತ್ತಿದೆ.

ಗ್ರಾಮದಲ್ಲಿ ಆರು ಪಂಪ್‌ಸೆಟ್‌ಗಳಿವೆ ಅನಧೀಕೃತ ಸಂಪರ್ಕ ಪಡೆಯಲಾಗಿದೆ. ಒಟ್ಟು ಸೇರಿ 35 ಆಶ್ವ ಶಕ್ತಿ ಹೊಂದುತ್ತವೆ. ಈ 35 ಆಶ್ವಶಕ್ತಿಗೆ 63 ಕೆ.ವಿ.ಎ. ಸಾಮರ್ಥ್ಯದ ವಿದ್ಯುತ್ ಪರಿವರ್ತಕ ಸಾಕಾಗುತ್ತದೆ.

ಅದಕ್ಕಿಂತಲೂ ಹೆಚ್ಚಿನ ಸಾಮರ್ಥ್ಯದ ವಿದ್ಯುತ್ ಪರಿವರ್ತಕ ಅಳವಡಿಸಲು ಹೆಸ್ಕಾಂ ಅನುಮತಿ ಇಲ್ಲ. ಹೆಸ್ಕಾಂ ಅನುಮತಿ ಇಲ್ಲದಿದ್ದರೂ ಇಲ್ಲಿ 100 ಕೆ.ವಿ.ಎ.ಸಾಮರ್ಥ್ಯದ ವಿದ್ಯುತ್ ಪರಿವರ್ತಕವನ್ನು ಅಳವಡಿಸಲಾಗಿದೆ.    ಇದು ಸಂಶಯಕ್ಕೆ ದಾರಿ ಮಾಡಿಕೊಟ್ಟಿದೆ.

ವಿದ್ಯುತ್ ಪರಿವರ್ತಕದಿಂದ ಸಂಪರ್ಕ ಕಲ್ಪಿಸುವಾಗ ಫ್ಯೂಜ್ ಕಿಟ್ಟ್, ಗ್ರುಪ್ ಆಪರೇಟಿಂಗ್ ಸೆಟ್, ಟಿ.ಸಿ.ಸ್ಟ್ರಕ್ಚರ್ ಎಲ್ಲವುಗಳನ್ನು ಕಾನೂನಿನ ಪ್ರಕಾರ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಅಳವಡಿಸಬೇಕು. ಆದರೆ ಇವಾವುಗಳ ಅಗತ್ಯವೇ ಇಲ್ಲವೇನೋ ಎಂಬಂತೆ ಕಂಬದ ಮೇಲಿರುವ ಕಟ್ಟಿಗೆಯ ತುಂಡಿಗೆ ತಂತಿಗಳನ್ನು ಬಿಗಿದು ಸಂಪರ್ಕ ಕಲ್ಪಿಸಿಕೊಳ್ಳಲಾಗಿದೆ.

ಕಾನೂನು ಪ್ರಕಾರ ಎಲ್ಲ ಕಾಗದ ಪತ್ರಗಳನ್ನು ಕೈಯ್ಯಲ್ಲಿಟ್ಟು, ತುಂಬ ಬೇಕಾದ ಹಣ ತುಂಬಿ, ಸುರಕ್ಷತೆಯ ಎಲ್ಲ ಕ್ರಮ ಪೂರೈಸಿದರೂ ವಿದ್ಯುತ್ ಸಂಪರ್ಕ ಕಲ್ಪಿಸದೇ ತಿಂಗಳಾನುಗಟ್ಟಲೇ ನಮ್ಮನ್ನೇ ಓಡಾಡಿಸುವ ಅಧಿಕಾರಿಗಳು ಸುಮ್ಮನೇ  ಇಷ್ಟೆಲ್ಲಾ ಸವಲತ್ತುಗಳನ್ನು ಕೊಡಲು ಹೇಗೆ ಸಾಧ್ಯ? ಇಲ್ಲಿ ಹಣದ ಪ್ರಭಾವ ಕೆಲಸ ಮಾಡಿಲ್ಲವೇ ನೀವೇ ಹೇಳಿ ಎಂದು  ಪ್ರಶ್ನಿಸುತ್ತಾರೆ ಗುತ್ತಿಗೆದಾರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT