ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನನ್ಯದ ನೃತ್ಯೋಲ್ಲಾಸ

Last Updated 27 ಜೂನ್ 2012, 19:30 IST
ಅಕ್ಷರ ಗಾತ್ರ

ಅನನ್ಯದವರು ಸೇವಾಸದನ ಸಭಾಂಗಣದಲ್ಲಿ ನಡೆಸಿದ `ನೃತ್ಯೋಲ್ಲಾಸ-1~ರಲ್ಲಿ ಬೆಂಗಳೂರಲ್ಲದೆ ರಾಷ್ಟ್ರದ ಬೇರೆ ಭಾಗಗಳಿಂದ ಬಂದ ಕಲಾವಿದರೂ ಭಾಗವಹಿಸಿದ್ದರು.

ಬೆಂಗಳೂರಿನ ವೈಷ್ಣವಿ ನಾಟ್ಯ ಶಾಲೆಯ ಮಿಥುನ್ ಶ್ಯಾಂ ಅವರ ಶಿಷ್ಯೆಯಾದ ಕೃತ್ತಿಕಾ ಜಯಕುಮಾರ್ ಪ್ರಾರಂಭದಲ್ಲಿ ಪದ್ಮಿನಿ ರಾಮಚಂದ್ರನ್ ಅವರಲ್ಲಿ ನೃತ್ಯಾಭ್ಯಾಸ ತೆಗೆದುಕೊಂಡು ಮುಂದುವರೆದವರು.

2011ರಲ್ಲಿ ರಂಗಪ್ರವೇಶವನ್ನೂ ಮಾಡಿ, ಶಿಕ್ಷಣ ಮುಂದುವರೆಸಿದ್ದಾರೆ. ಕೃತ್ತಿಕಾ ತನ್ನ ಕಾರ್ಯಕ್ರಮದ ಪ್ರಧಾನ ಅಂಗವಾಗಿ ಒಂದು ವರ್ಣವನ್ನೇ ಆಯ್ದರು. ಕನ್ನಡದಲ್ಲಿ ವರ್ಣಗಳು ಕಡಿಮೆ ಎನ್ನುವ ಕಾಲದಲ್ಲಿ ಒಂದು ಕನ್ನಡದ ವರ್ಣ ಆಯ್ದುದು ಅಭಿನಂದನೀಯ.

`ನೀಲ ಮೇಘಶ್ಯಾಮ ಸುಂದರನ ಕರೆತಾರೆ~ ರಾಗಮಾಲಿಕೆಯ ಈ ವರ್ಣವನ್ನು ರಚಿಸಿದವರು ಹಿರಿಯ ಮೃದಂಗ ವಾದಕ ಗುರುಮೂರ್ತಿ. ಇನ್ನೂ ಷೋಡಶಿಯಾದ ಕೃತ್ತಿಕಾಗೆ ಒಳ್ಳೆಯ ಭವಿಷ್ಯವಿದೆ. ಸಂಗೀತ ಕಛೇರಿಗಳಲ್ಲಿ ಜನಪ್ರಿಯವಾದ ರಂಜನಿಮಾಲ (ರಂಜನಿ ಮೃದು ಪಂಕಜ ಲೋಚನಿ) ತೆಗೆದುಕೊಂಡು, ನೃತ್ಯೋಲ್ಲಾಸಕ್ಕೆ ಒಳ್ಳೆಯ ಚಾಲನೆ ನೀಡಿದರು.

ಆಂಧ್ರದಿಂದ ಬಂದ ನರ್ತಕಿ
ಎರಡನೆಯ ಕಾರ್ಯಕ್ರಮ ನೀಡಿದ ನಿತ್ಯಾ ಶೇಷಾದ್ರಿ ಚೆನ್ನೈನ ಕಲಾಕ್ಷೇತ್ರದಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡಿ, ಹೈದರಾಬಾದ್‌ನ ಸೆಂಟ್ರಲ್ ಯೂನಿವರ್ಸಿಟಿಯಿಂದ ಸ್ನಾತಕೋತ್ತರ ಪದವಿ ಗಳಿಸಿ, ಹೈದರಾಬಾದ್ ನಿವಾಸಿಯಾಗಿದ್ದಾರೆ.

ಅಮೃತವರ್ಷಿಣಿ ರಾಗದಲ್ಲಿ `ಮಾತಂಗಿ ಕೌತ್ವಂ~ನಿಂದ ನಾಂದಿ. ಅದು ಚರ್ವಿತ ಕೃತಿಗಳಿಗಿಂತ ಸ್ವಲ್ಪ ಭಿನ್ನ. ಸ್ವಾತಿ ತಿರುನಾಳರ `ಶಂಕರ ಶ್ರೀಗಿರಿ~ಯೂ ಮಾಮೂಲಿ ರಚನೆಗಳಿಗಿಂತ ಭಿನ್ನ.
 
ಶಿವಪುರಾಣದ ವಸ್ತು ಕೈಲಾಸ, ಶಿವನ ಸುತ್ತ ಹೆಣೆದುದು. ದೃಢ ಹೆಜ್ಜೆಗಳನ್ನು ಹಾಕುತ್ತಾ ಶಿವನ ಕೆಲ ಘಟನೆಗಳನ್ನು ಹೆಣೆದರು. ಸುಪರಿಚಿತ `ಏರಾ ರಾರಾ~ ಮತ್ತು ರಾಗಮಾಲಿಕೆಯಲ್ಲಿ `ಜಗನ್ಮೋಹನನೆ ಕೃಷ್ಣ~ದಲ್ಲಿ ಅವರಿಗೆ ಅಭಿನಯಕ್ಕೂ ಅವಕಾಶ ಒದಗಿತು. ಹೆಚ್ಚಿನ ಅನುಭವದಿಂದ ನಿತ್ಯಾ ಅಭಿನಯಕ್ಕೆ ಸೊಬಗು ತುಂಬಬಹುದು.

ಯುವ ಕಲಾವಿದೆ
ದಿನದ ಕೊನೆಯ ಕಾರ್ಯಕ್ರಮ ನೀಡಿದ ಮಧುಲಿಕಾ ಆಚಾರ್ಯ ಅವರು ಪದ್ಮಿನಿ ರಾವ್ ಅವರಲ್ಲಿ ಪ್ರಾರಂಭಿಸಿ, ಕೆಲ ಕಾಲದಿಂದ ಬಿ.ಭಾನುಮತಿ ಅವರಲ್ಲಿ ಶಿಕ್ಷಣ ಮುಂದುವರೆಸಿದ್ದಾರೆ. ಜೊತೆಗೆ ನೃತ್ಯದಲ್ಲಿ ಎಂ.ಎ. ವ್ಯಾಸಂಗವನ್ನೂ ಮಾಡುತ್ತಿದ್ದಾರೆ.

ಜನಪ್ರಿಯವಾದ  `ಜಯ ಜಾನಕೀರಮಣ~ವನ್ನು ರಾಗಮಾಲಿಕೆಯಲ್ಲಿ ಶುಭಾರಂಭ ಮಾಡಿ ಅದರಲ್ಲಿ ಪುರಾಣದ ಕೆಲವು ಅವತಾರಗಳನ್ನೂ ಮಿಲನಗೊಳಿಸಿ, ಹಿತಮಿತವಾಗಿ ಅಭಿನಯಿಸಿದರು. ಕಲ್ಯಾಣಿ ರಾಗದಲ್ಲಿ  ಶೃಂಗ ಪುರಾಧೀಶ್ವರಿ ಶಾರದೆ  ಆಯ್ದು, ಉತ್ತಕ್ಕಾಡು ವೆಂಕಟ್‌ಸುಬ್ಬಯ್ಯರ್ ಅವರ ಪದಕ್ಕೆ ಸರಿದರು.
 
ಸುಬ್ರಹ್ಮಣ್ಯ, ವಲ್ಲಿದೇವಿ, ದೇವಸೇನೆಯರ ಸ್ವಾರಸ್ಯಕರ ಘಟನೆಗಳಿಗೆ ಸಂಬಂಧಪಟ್ಟ ಪ್ರಸಂಗವನ್ನು ಆಯ್ದುದು ಉಚಿತವಾಗಿತ್ತು. ಹಾಗೆಯೇ ಅಂಬುಜಂ ಕೃಷ್ಣಮೂರ್ತಿ ಅವರ ಕೃತಿಯೂ ಚೇತೋಹಾರಿ. ದ್ವಾರಕೀ ಕೃಷ್ಣಮೂರ್ತಿ ಅವರ ತಿಲ್ಲಾನ ಸುಭಗ. ಮಧುಲಿಕಾರ ಭವಿಷ್ಯವೂ ಸುಭದ್ರ.

ಯುವ ಗಾಯಕಿ
ರಾಜಮಹಲ್ ವಿಲಾಸ ಸಂಗೀತ ಸಭಾದ 228ನೇ ಕಾರ್ಯಕ್ರಮ ಕಳೆದ ಭಾನುವಾರ ನಡೆಯಿತು. ನಾಲ್ವರು ಕಿರಿಯ ಕಲಾವಿದರು ಅಲಂಕರಿಸಿದ್ದ ವೇದಿಕೆ ನೋಡಲು ಸಂತೋಷದಾಯಕವಾಗಿತ್ತು. ಗಾಯಕಿ ಕಮಲಾಮೂರ್ತಿ ಅವರು ವಿದ್ವತ್‌ನಲ್ಲಿ ತೇರ್ಗಡೆಯಾಗಿರುವರು. ಖ್ಯಾತ ಕಲಾವಿದೆ ಆರ್.ಎ. ರಮಾಮಣಿ ಅವರಲ್ಲಿ ಶಿಷ್ಯ ವೃತ್ತಿ ಮಾಡುತ್ತಿದ್ದಾರೆ.

 ಕಂಪ್ಯೂಟರ್‌ನಲ್ಲಿ ಮಾಸ್ಟರ್ ಡಿಗ್ರಿ ಪಡೆದಿದ್ದು ಹುಬ್ಬಳ್ಳಿ (ಗಾನಸುಧಾ, ಧಾರವಾಡ ಉತ್ಸವ, ಧಾರವಾಡ ಕಲೋತ್ಸವ, ಪುರಂದರದಾಸರ ಆರಾಧನೆ, ಶ್ರೀವೈಷ್ಣವ ಸಭಾ), ಕುಂದಗೋಳ್ (ಪಂಡಿತ್ ಸವಾಯಿ ಗಂಧರ್ವರ ಜನ್ಮಶತಾಬ್ದಿ ಮಹೋತ್ಸವ), ಬೆಂಗಳೂರು, ಧಾರವಾಡ, ಶಿವಮೊಗ್ಗ, ಸಿರಸಿ, ಮೈಸೂರು   ಮುಂತಾದ ಸ್ಥಳಗಳಲ್ಲಿ ತನಿಯಾಗೂ ವೃಂದದಲ್ಲೂ ಹಾಡಿದ್ದಾರೆ. ಸದ್ಯ `ಸ್ಟ್ರಕ್ಚರಲ್ ಸ್ಕೂಲ್ ಆಫ್ ಫೈನ್ ಆರ್ಟ್~ನಲ್ಲಿ ಬೋಧಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅವರೊಂದಿಗೆ ಪಿಟೀಲು ನುಡಿಸಿದ ಸಿ.ಎಸ್. ಉಷಾ ಸಂಗೀತ ಸ್ನಾತಕೋತ್ತರ ತರಗತಿಯಲ್ಲಿ ಪ್ರಥಮ ರ‌್ಯಾಂಕ್ ಗಳಿಸಿ, ಎಸ್. ಶೇಷಗಿರಿರಾವ್ ಅವರಲ್ಲಿ ಶಿಷ್ಯತ್ವ ಮುಂದುವರೆಸಿದ್ದಾರೆ. ಗಾಯನ ಸಮಾಜದಿಂದ ಬಹುಮಾನ ಹಾಗೂ ಅಕಾಡೆಮಿಯಿಂದ ಶಿಷ್ಯವೇತನ ಸಹ ಗಳಿಸಿದ್ದಾರೆ.

ಮೃದಂಗ ಪಕ್ಕವಾದ್ಯ ನುಡಿಸಿದ ಎಚ್.ಎಸ್. ನರಸಿಂಹ ಪ್ರಸಾದ್ ಅವರು ವಿ.ಎಸ್. ರಾಜಗೋಪಾಲ್ ಅವರ ಶಿಷ್ಯ. ಗಾಯನದಲ್ಲೂ ಸೀನಿಯರ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು ಮೃದಂಗ, ಘಟಗಳೆರಡರಲ್ಲೂ ಅಭ್ಯಾಸ ಮಾಡುತ್ತಿದ್ದಾರೆ.

ಇವರೊಂದಿಗೆ ಘಟ ನುಡಿಸಿದ ಆರ್. ಸತ್ಯಕುಮಾರ್ ಅವರು ಆರ್.ಎ. ರಾಜಗೋಪಾಲ್ ಅವರ ಶಿಷ್ಯ. ಡೋಲಕ್, ಮೃದಂಗಗಳಲ್ಲೂ ಸಾಧಕ. ಯೂರೋಪ್‌ನಲ್ಲೂ ವಾದನ ಮಾಡಿದ್ದಾರೆ ಹಾಗೂ ಅಯ್ಯನಾರ್ ಕಲಾ ಶಾಲೆಯಲ್ಲಿ ಬೋಧಕ.

ಕಮಲಾ ಮೂರ್ತಿ ಅನೇಕ ಜನಪ್ರಿಯ ಕೃತಿಗಳನ್ನು ರಕ್ತಿರಾಗಗಳಲ್ಲಿ ಹಾಡುತ್ತಾ, ಕಛೇರಿಗೆ ಕಾವು ಬಂದಾಗ `ರಾಮ ನೀ ಸಮಾನ~ ತೆಗೆದುಕೊಂಡರು. ಖರಹರಪ್ರಿಯ ರಾಗವನ್ನು ಆಲಾಪಿಸಿ, ಕೃತಿಗೆ ಪಾಯ ಹಾಕಿ ಕೀರ್ತನೆಯನ್ನು ತೆಗೆದುಕೊಂಡರು.

ಈ ಕೃತಿಯಲ್ಲಿ ತ್ಯಾಗರಾಜರು ತಮ್ಮ ಇಷ್ಟದೈವವಾದ ರಾಮನನ್ನು ಗಾಢ ಭಕ್ತಿಯಿಂದ ಸ್ತುತಿಸಿದ್ದಾರೆ. ರಾಮನಿಗೆ ಸಮಾನರು ಯಾರೂ ಇಲ್ಲ. ಸೀತೆಯ ಭಕ್ತಿಯ ಪಂಜರದಲ್ಲಿರುವವನು ಶ್ರೀರಾಮ. ಈ ಜ್ಞಾನವೇ ಭಕ್ತಿ ಎಂದು ಕೀರ್ತಿಸಿದ್ದಾರೆ. ಕಮಲಾ ಮೂರ್ತಿ ಹಿತಮಿತವಾಗಿ ಕೀರ್ತನೆಯನ್ನು ವಿಸ್ತರಿಸಿ, ಸ್ವರಪ್ರಸ್ತಾರದ ಕಳಶವಿಡುವ ಪ್ರಯತ್ನ ಮಾಡಿದರು.

ವೇದಿಕೆಯ ಹೆಚ್ಚಿನ ಅನುಭವದಿಂದ ಸ್ವರಪ್ರಸ್ತಾರದಲ್ಲಿ ತಿಣಕಾಟ ತಪ್ಪಬಹುದು ಹಾಗೂ ನೆರವಲ್ ಪ್ರೌಢವಾಗಬಹುದು. ಆ ಮೊದಲು -ಪಾರ್ವತಿ ಕುಮಾರಂ, ರಾಮನಾಮ ಜನ್ಮರಕ್ಷಕಮಂತ್ರ, ಪಂಚಾಶಕ್ತಿ ಸ್ವರೂಪಿಣಿ- ಸರಳವಾಗಿ ಹಾಡಿದರು. ತ್ಯಾಗರಾಜರ ಉತ್ತಮ ಕೃತಿಗಳಲ್ಲಿ `ಎಂತ ನಿನೆ ವರ್ಣಿಂತುನು ಶಬರಿ~ ಸಹ ಒಂದು. ಇನ್ನೊಂದು ಘನವಾದ  ಏತವುನರಾ  ಮಿತವಾಗಿ ಅರಳಿಸಿದರು.
 
ರಾಗಾಲಾಪನೆ ಮಾಡಿ, ಕೀರ್ತನೆಗೆ ನೆರವಲ್ (ಶ್ರೀಕರುಡಗು ತ್ಯಾಗರಾಜಕರಾರ್ಚಿತ) ಸೇರಿಸಿ, ಸ್ವರ ಹಾಕಿ, ವಿಸ್ತರಿಸಿದರು. ತ್ಯಾಗರಾಜಸ್ವಾಮಿಯು ಈ ಕೃತಿಯಲ್ಲಿ ಭಗವದ್ ಸ್ವರೂಪ ಮತ್ತು ತತ್ವಗಳನ್ನು ಕುರಿತು ಹಾಡಿದ್ದಾರೆ. ಎಲ್ಲಾ ದೇವತೆಗಳ ರೂಪನಾದ ಬ್ರಹ್ಮವಸ್ತುವು `ಶ್ರೀರಾಮ~ ಎಂಬ ತತ್ವವನ್ನು ಪ್ರತಿಪಾದಿಸಿದ್ದಾರೆ.

ಒಂದು ಉಗಾಭೋಗದ (ಜಗವ ಸುತ್ತಿಹುದೆಲ್ಲಾ ನಿನ್ನ ಮಾಯೆಯಯ್ಯೊ) ಮುನ್ನುಡಿಯೊಂದಿಗೆ ದಾಸರ ದೇವರನಾಮ `ನಾ ನಿನ್ನ ಧ್ಯಾನದೊಳಿರಲು~ ಹಾಡಿ, ಮಂಗಳಕ್ಕೆ (ಮಂಗಳಂ ಶುಭ ಮಂಗಳಂ) ಸರಿದರು.
ವೇದಿಕೆಯ ಹೆಚ್ಚಿನ ಅನುಭವ, ಕೇಳ್ಮೆ ಹಾಗೂ ಪ್ರೌಢ ಶಿಕ್ಷಣಗಳಿಂದ ಕಮಲ ಮೂರ್ತಿ ಔನತ್ಯಕ್ಕೆ ಏರಬಹುದು. ಇದೇ ಮಾತನ್ನು ಪಕ್ಕವಾದ್ಯದವರಿಗೂ ಅನ್ವಯಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT