ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿಶ್ಚಿತತೆಯಲ್ಲಿ ವಿದ್ಯಾರ್ಥಿಗಳು, ಪ್ರಾಧ್ಯಾಪಕರು

Last Updated 11 ಅಕ್ಟೋಬರ್ 2011, 6:25 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಬೆಂಗಳೂರು ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗೆ ಅಗತ್ಯ ಸಹಕಾರ ನೀಡದಿರುವ ಆರೋಪ ಎದುರಿಸುತ್ತಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ.ವಿ.ಕೃಷ್ಣಪ್ಪ ಅವರು ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಕಟುವಾದ ಟೀಕೆಗಳಿಗೆ ಗುರಿಯಾಗುತ್ತಿದ್ದಾರೆ. ತಮ್ಮ ಕಾಲೇಜಿನಲ್ಲಿ ನಡೆಯಬೇಕಿದ್ದ ಪರೀಕ್ಷೆಗಳು ಬೇರೊಂದು ಪರೀಕ್ಷಾ ಕೇಂದ್ರಕ್ಕೆ ವರ್ಗವಾಗಿರುವುದನ್ನೇ ನೆಪವಾಗಿಸಿಕೊಂಡು ಅವರು ಪರೀಕ್ಷೆಗೆ ಅಸಹಕಾರ ತೋರುತ್ತಿದ್ದಾರೆ ಎಂದು ಕಾಲೇಜಿನ ಮೂಲಗಳು ಹೇಳುತ್ತಿವೆ.

ಪರೀಕ್ಷೆಗಳ ಉಸ್ತುವಾರಿಯನ್ನು ಹೊತ್ತಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ನಾರಾಯಣಸ್ವಾಮಿ ಅವರು ಪದೇ ಪದೇ ಮನವಿ ಮಾಡಿಕೊಳ್ಳುತ್ತಿದ್ದು, ಒಂದುಕ್ಕೊಂದು ಕಾರಣಗಳನ್ನು ಹೇಳಿ ಕೃಷ್ಣಪ್ಪ ಅವರು ಸಹಕಾರ ನಿರಾಕರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಪರೀಕ್ಷೆಗೆಂದು ನಿಯೋಜಿತಗೊಂಡಿರುವ ಪ್ರಾಧ್ಯಾಪಕರು ಕುರಿತು ಮಾಹಿತಿ ಮತ್ತು ಪರೀಕ್ಷಾರ್ಥಿಗಳ ಪಟ್ಟಿಯನ್ನೂ ಸಹ ನೀಡದೇ  ಪರೀಕ್ಷಾ ಉಸ್ತುವಾರಿ ಸಿಬ್ಬಂದಿಗಳಿಗೆ ಗೊಂದಲ ಉಂಟು ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

`ಪರೀಕ್ಷೆಗೆ 48 ಗಂಟೆಗಳು ಮಾತ್ರವೇ ಬಾಕಿಯಿದ್ದು, ಪರೀಕ್ಷೆಗೆ ಸಂಬಂಧಿಸಿದಂತೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಪೂರ್ಣಪ್ರಮಾಣದ ಮಾಹಿತಿ ಲಭ್ಯವಾಗಿಲ್ಲ. ಪರೀಕ್ಷೆಗಾಗಿ ನಿಯೋಜಿತಗೊಂಡಿರುವ ಪ್ರಾಧ್ಯಾಪಕರು ವರದಿ ಮಾಡಿಕೊಂಡಿಲ್ಲ. ಯಾವ್ಯಾವ ವಿಭಾಗದ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲ. ಸಂಪೂರ್ಣ ಮಾಹಿತಿಯುಳ್ಳ ಸಿ.ಡಿ ಕೂಡ ಇನ್ನೂ ನಮಗೆ ದೊರಕಿಲ್ಲ~ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಎಂ. ನಾರಾಯಣ ಸ್ವಾಮಿ `ಪ್ರಜಾವಾಣಿ~ಗೆ ತಿಳಿಸಿದರು.

ಪರೀಕ್ಷಾ ಕೇಂದ್ರ ಬದಲಾಗಿದ್ದು ಯಾಕೆ?: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲೇ ಪ್ರತಿ ವರ್ಷ ನಡೆಯುತ್ತಿದ್ದ ಪದವಿ ಪರೀಕ್ಷೆಗಳು ಈ ಬಾರಿ ಬೇರೆ ಕೇಂದ್ರದಲ್ಲಿ ನಡೆಯುತ್ತಿರುವುದಕ್ಕೆ ಹಲವು ಕಾರಣಗಳಿವೆ ಎಂದು ಕಾಲೇಜಿನ ಪ್ರಾಧ್ಯಾಪಕರೇ ಹೇಳುತ್ತಾರೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ನಕಲು ಮಾಡುತ್ತಾರೆ, ಪರೀಕ್ಷೆ ವೇಳೆ ಬಿಗಿ ಬಂದೋಬಸ್ತ್ ಇರುವುದಿಲ್ಲ, ಪರೀಕ್ಷೆ ಅವ್ಯವಹಾರದಲ್ಲಿ ಕೆಲ ಸಿಬ್ಬಂದಿಗಳು ಶಾಮೀಲಾಗಿದ್ದಾರೆ ಎಂಬ ದೂರು ಆಗಾಗ್ಗೆ ಕೇಳಿ ಬರುತಿತ್ತು. ಪರೀಕ್ಷಾ ಕೇಂದ್ರವನ್ನು ಬದಲಾಯಿಸುವಂತೆ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯವರಿಗೆ ಮನವಿಪತ್ರಗಳನ್ನು ಸಲ್ಲಿಸಲಾಗಿತ್ತು. ಆದರೆ ಕುಲಪತಿಯವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.

ಆದರೆ ಕಳೆದ ಬಾರಿಯ ಸೆಮಿಸ್ಟರ್ ಪರೀಕ್ಷೆ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ.ವಿ.ಕೃಷ್ಣಪ್ಪ ಅವರು ಡಿಬಾರ್‌ಗೊಂಡಿದ್ದ ವಿದ್ಯಾರ್ಥಿನಿಯನ್ನು ಮತ್ತೊಮ್ಮೆ ಪರೀಕ್ಷೆಗೆ ಕೂರಿಸಿ, ಉತ್ತೀರ್ಣಗೊಳಿಸಲು ಪ್ರಯತ್ನಿಸಿದ್ದಾರೆ ಎಂಬ ಆರೋಪ ಬಲವಾಗಿ ಕೇಳಿ ಬಂತು. ವಿಶ್ವವಿದ್ಯಾಲಯದ ಪರೀಕ್ಷಾ ವಿಭಾಗದ ಮುಖ್ಯಸ್ಥರೇ ಕಾಲೇಜಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಕೃಷ್ಣಪ್ಪ ಅವರ ವಿರುದ್ಧ ಶಿಸ್ತಿನ ಕ್ರಮ ಕೈಗೊಂಡಿದ್ದ ಅವರು ಅಮಾನತು ಮಾಡಲು ಸಹ ಮುಂದಾಗಿದ್ದರು. ಪರೀಕ್ಷಾ ಕೇಂದ್ರವನ್ನು ಬದಲು ಮಾಡುವ ಬಗ್ಗೆಯೂ ತಿಳಿಸಿದ್ದರು.

`ಈ ಎಲ್ಲ ಅನಿರೀಕ್ಷಿತ ಬೆಳವಣಿಗೆಗಳಿಂದ ಆತಂಕಗೊಂಡ ಕೃಷ್ಣಪ್ಪ ಅವರು ಸರ್ಕಾರದಲ್ಲಿನ ಕೆಲ ಪ್ರಭಾವಿ ಸಚಿವರ ಮತ್ತು ನಿಕಟವರ್ತಿಗಳ ನೆರವನ್ನು ಕೋರಿ ತಮ್ಮ ಹುದ್ದೆಯನ್ನು ಉಳಿಸಿಕೊಂಡಿದ್ದರು. ಈಗ ಪರೀಕ್ಷಾ ಕೇಂದ್ರವು ಬದಲಾಗಿರುವುದನ್ನು ತಿಳಿದು ಕೃಷ್ಣಪ್ಪ ಅವರು ಸಿಟ್ಟಿನಿಂದ ಅಸಹಕಾರ ತೋರುತ್ತಿದ್ದಾರೆ~ ಎಂದು ಕಾಲೇಜಿನ ಪ್ರಾಧ್ಯಾಪಕರು ತಿಳಿಸಿದರು.
 

`ಪದವಿ ಪರೀಕ್ಷೆಗೆ ಸುಮಾರು ಐದು ಸಾವಿರ ವಿದ್ಯಾರ್ಥಿಗಳು ಹಾಜರಾಗಲಿದ್ದು, ಅವರಿಗೆ ಸ್ಥಳಾವಕಾಶ ಮಾಡಬೇಕಿದೆ.

ಜೂನಿಯರ್ ಕಾಲೇಜಿನ ಡೆಸ್ಕ್‌ಗಳು ಸಾಕಾಗದ ಕಾರಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡೆಸ್ಕ್‌ಗಳು ಕೇಳಿದ್ದೆವು. ಆದರೆ ಎಲ್ಲ ಕೊಠಡಿಗಳ ಬಾಗಿಲುಗಳನ್ನು ಹಾಕಲಾಗಿದೆ. ಕೃಷ್ಣಪ್ಪ ಅವರು ದೂರವಾಣಿ ಕರೆಗಳನ್ನು ಸಹ ಸ್ವೀಕರಿಸುತ್ತಿಲ್ಲ. ಕಲ್ಯಾಣ ಮಂಟಪಗಳಲ್ಲಿ ಊಟಕ್ಕೆ ಬಳಸುವ ಮೇಜುಗಳನ್ನೇ ಬಳಸಬೇಕಾದ ಅನಿವಾರ್ಯ ಪರಿಸ್ಥಿತಿ ಬಂದಿದೆ~ ಎಂದು  ಡಾ. ಂ.ನಾರಾಯಣ ಸ್ವಾಮಿ ತಿಳಿಸಿದರು.

ಪರೀಕ್ಷಾ ಕೇಂದ್ರಕ್ಕೆ ಬಿಗಿ ಬಂದೋಬಸ್ತ್
ಚಿಕ್ಕಬಳ್ಳಾಪುರ: ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿಗಳು ನಕಲು ಮಾಡದಿರಲಿ ಮತ್ತು ಯಾವುದೇ ಅವ್ಯವಹಾರ ನಡೆಯದಿರಲಿ ಎಂಬ ಕಾರಣಕ್ಕಾಗಿ ಸರ್ಕಾರಿ ಜೂನಿಯರ್ ಕಾಲೇಜು ಆವರಣದ ಸುತ್ತ ಪೊಲೀಸ್ ಬಿಗಿ ಬಂದೋ     ಬಸ್ತ್ ಕಲ್ಪಿಸಲಾಗುವುದು ಎಂದು ಪರೀಕ್ಷೆ ಉಸ್ತುವಾರಿ ಸಿಬ್ಬಂದಿ ತಿಳಿಸಿದ್ದಾರೆ.

ಪರೀಕ್ಷೆ ವೇಳೆ ಯಾವುದೇ ರೀತಿಯ ತೊಂದರೆಯಾಗದಿರಲಿ ಎಂಬ ಕಾರಣಕ್ಕಾಗಿ ಜೆರಾಕ್ಸ್ ಸಾಧನ, ಜೆನರೇಟರ್ ಸಾಧನ ಮುಂತಾದವುಗಳನ್ನು ಬಾಡಿಗೆಗೆ ತೆಗೆದುಕೊಳ್ಳ ಲಾಗಿದೆ. ಪ್ರಾಧ್ಯಾಪಕರು, ಮೇಜು ಸೇರಿದಂತೆ ಇತರ ಸೌಕರ್ಯಗಳ ಕೊರತೆಯಿದ್ದರೂ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ಪ್ರಯತ್ನಿಸಲಾಗುವುದು~ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT