ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನು ಎಂಬ ಐರನ್ ಲೇಡಿ

Last Updated 5 ಜೂನ್ 2011, 19:30 IST
ಅಕ್ಷರ ಗಾತ್ರ

`ಜೀವನ ನಿಮಗೆ ಸವಾಲೊಡ್ಡದಿದ್ದರೆ ಅದು ಜೀವನವೇ ಅಲ್ಲ. ನಿಜ, ಕೆಲ ಸವಾಲುಗಳನ್ನು ಎದುರಿಸಿ ನಿಲ್ಲಲು ನಿಮಗೆ ಸಾಧ್ಯವಾಗುವುದಿಲ್ಲ. ಆದರೆ ಜೀವನದಲ್ಲಿ ಕ್ಷಣಕ್ಷಣ ಆಸಕ್ತಿ ಉಳಿಸಿಕೊಂಡು ಹೋಗಲು ಇಂತಹ ಸವಾಲುಗಳು ಸಹಾಯವಾಗುತ್ತವೆ~ಅಥ್ಲೀಟ್ ಅನು ವೈದ್ಯನಾಥನ್ ಅವರ ಈ ಮಾತನ್ನು ಒಪ್ಪಲೇಬೇಕು.
ಅನು ಸಾಫ್ಟ್‌ವೇರ್ ಕಂಪೆನಿಯೊಂದರ ಸಿಇಒ.

ಆದರೆ ಅವರ ಕ್ರೀಡಾ ಆಸಕ್ತಿ ಅದ್ಭುತ. ಕ್ರೀಡಾ ಬದ್ಧತೆ ಅಮೋಘ. ಅದರಲ್ಲೂ ಅಥ್ಲೆಟಿಕ್ಸ್‌ನ ಒಂದು ಭಾಗವಾದ `ಐರನ್‌ಮನ್~ ಹಾಗೂ `ಅಲ್ಟ್ರಾಮನ್~ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಏಕೈಕ ಸ್ಪರ್ಧಿ ಅನು.

ಐರನ್‌ಮನ್ ಎಂದರೆ ಟ್ರಯಥ್ಲಾನ್ ಸ್ಪರ್ಧೆ. ಇದು 3.8 ಕಿ.ಮೀ ಈಜು, 180 ಕಿ.ಮೀ ಸೈಕಲ್ ರೇಸಿಂಗ್ ಹಾಗೂ 42.2 ಕಿ.ಮೀ. ಓಟ (ಮ್ಯಾರಥಾನ್)ವನ್ನು ಒಳಗೊಂಡಿರುತ್ತದೆ. ಒಂದೇ ದಿನದಲ್ಲಿ ಇದನ್ನು ಪೂರೈಸಬೇಕು.

ಈ ಮೂರೂ ಸ್ಪರ್ಧೆಗಳ ನಡುವೆ ತಿಂಡಿ ತಿನ್ನಲು ಕೂಡ ಸಮಯ ಇರುವುದಿಲ್ಲ. ಒಂದಾದ ನಂತರ ಮತ್ತೊಂದರಲ್ಲಿ ಸ್ಪರ್ಧಿಸುತ್ತಿರಬೇಕು. ಹಾಗಾಗಿ ಇದೊಂದು ಅಥ್ಲೆಟಿಕ್ಸ್‌ನಲ್ಲಿಯೇ ಕಠಿಣ ಎನಿಸಿರುವ ಸ್ಪರ್ಧೆ. ಅಂಥದರಲ್ಲಿ ಬೆಂಗಳೂರಿನ  ಅನು ಅಂತರರಾಷ್ಟ್ರೀಯ ಸ್ಪರ್ಧಿಗಳಿಗೆ ಸೆಡ್ಡುಯೊಡೆಯುತ್ತಿದ್ದಾರೆ. ಐರನ್‌ಮನ್ ಸ್ಪರ್ಧೆಯನ್ನು ಪೂರ್ಣಗೊಳಿಸಿದ ಏಷ್ಯಾದ ಏಕೈಕ ಮಹಿಳೆ ಎನಿಸಿಕೊಂಡಿದ್ದಾರೆ.

`ಆಸಕ್ತಿಯೊಂದಿದ್ದರೆ ಸಾಕು, ಎಂಥ ಕಷ್ಟದ ಸ್ಪರ್ಧೆಯಲ್ಲೂ ಪಾಲ್ಗೊಳ್ಳಬಹುದು. ಐರನ್‌ಮನ್ ಸ್ಪರ್ಧೆ ವೇಳೆ ತಿಂಡಿ ತಿನ್ನಲು ಕೂಡ ಸಮಯವಿರುವುದಿಲ್ಲ. ಆದರೆ ಜೀವನದಲ್ಲಿ ಯಾವುದು ಕೂಡ ಅಸಾಧ್ಯ ಎನ್ನುವ ಮಾತಿನಲ್ಲಿ ನಂಬಿಕೆ ಇಟ್ಟವಳು ನಾನು. ಹಾಗಾಗಿ ಈ ಸ್ಪರ್ಧೆಯನ್ನು ಸವಾಲಾಗಿ ಸ್ವೀಕರಿಸಿದ್ದೇನೆ. ಆ ಕನಸಿನ ಬೆನ್ನಟ್ಟಿದ್ದೇನೆ. ಅದನ್ನು ಮುಟ್ಟುವವರೆಗೆ ವಿರಮಿಸಬಾರದು ಅಂದುಕೊಂಡಿದ್ದೇನೆ~ ಎಂದು ಅನು `ಪ್ರಜಾವಾಣಿ~ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಈಗಿನ ಕಾಲದಲ್ಲಿ ಕೆಲಸ ಮಾಡುತ್ತಾ ಸಂಸಾರ ನೋಡಿಕೊಳ್ಳುವುದೇ ಕಷ್ಟವಾಗಿದೆ. ಅಂಥದ್ದರಲ್ಲಿ ಅನು ಒಂದು ಕಂಪೆನಿಯ ಮುಖ್ಯಸ್ಥರಾಗಿ, ಕುಟುಂಬದ ಪ್ರಮುಖ ವ್ಯಕ್ತಿಯಾಗಿ ವಿದೇಶದಲ್ಲಿ ನಡೆಯುತ್ತಿರುವ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ. ಅನು ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಕೂಡ ಮಾಡಿದ್ದಾರೆ.

ಅಲ್ಟ್ರಾಮನ್ ಎಂಬುದು ಮೂರು ದಿನಗಳ ಟ್ರಯಥ್ಲಾನ್ ಸ್ಪರ್ಧೆ. ಇದು 10 ಕಿ.ಮೀ. ಈಜು, 420 ಕಿ.ಮೀ. ಸೈಕ್ಲಿಂಗ್ ಹಾಗೂ 84.4 ಕಿ.ಮೀ ಮ್ಯಾರಥಾನ್ ಸ್ಪರ್ಧೆಗಳನ್ನು ಒಳಗೊಂಡಿರುತ್ತದೆ. 2009ರಲ್ಲಿ ಕೆನಡಾದಲ್ಲಿ ನಡೆದ ಈ ಸ್ಪರ್ಧೆಯನ್ನು ಅವರು ಯಶಸ್ವಿಯಾಗಿ ಪೂರೈಸಿದ್ದರು.

ಅಷ್ಟು ಮಾತ್ರವಲ್ಲದೇ, ಆರನೇ ಸ್ಥಾನ ಪಡೆದಿದ್ದರು. ವಿಶೇಷವೆಂದರೆ ಇದುವರೆಗೆ ಕೇವಲ 450 ಮಂದಿ ಮಾತ್ರ ಈ ಸ್ಪರ್ಧೆಯನ್ನು ಪೂರೈಸಿದ್ದಾರೆ. ಇದಾದ ನಂತರ ಮೂರು ವಾರದಲ್ಲಿ ಮತ್ತೆ ಐರನ್‌ಮನ್ ಸ್ಪರ್ಧೆಯಲ್ಲಿ ಅನು ಪಾಲೊಂಡಿದ್ದು ಮತ್ತೊಂದು ವಿಶೇಷ. ಈ ಸಾಧನೆ ಮಾಡಿದ ವಿಶ್ವದ ಏಕೈಕ ಮಹಿಳೆ.
2001ರಲ್ಲಿ ಅಮೆರಿಕದಲ್ಲಿ ಓದುತ್ತಿದ್ದಾಗಲೇ ಅವರು ಈ ಸ್ಪರ್ಧೆಯತ್ತ ಆಕರ್ಷಿತರಾಗಿದ್ದರು.
 
2006ರಲ್ಲಿ ಕೆನಡಾದಲ್ಲಿ ನಡೆದ ಸ್ಪರ್ಧೆಯಲ್ಲಿ ಮೊದಲ ಬಾರಿ ಪಾಲ್ಗೊಂಡಿದ್ದರು. 66 ಮಂದಿ ಇದ್ದ ಸ್ಪರ್ಧೆಯಲ್ಲಿ ಇವರಿಗೆ 43ನೇ ಸ್ಥಾನ ಸಿಕ್ಕಿತ್ತು. 2008ರಲ್ಲಿ ಚೀನಾದಲ್ಲಿ ನಡೆದ ಸ್ಪರ್ಧೆಯಲ್ಲಿ 29ನೇ ಸ್ಥಾನ ಗಳಿಸಿದ್ದರು.
`2007ರಲ್ಲಿ ಬ್ರೆಜಿಲ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾಗ ಅಲ್ಲಿ 1200 ಮಂದಿ ಸ್ಪರ್ಧಿಗಳಿದ್ದರು. ಅಲ್ಲೆಲ್ಲಾ ಈ ಸ್ಪರ್ಧೆ ತುಂಬಾ ಪ್ರಸಿದ್ಧಿ ಹೊಂದಿದೆ.

ವಿಪರೀತ ಚಳಿ ಇರುತ್ತದೆ. ಈಜುವಾಗ ಆಕಸ್ಮಿಕವಾಗಿ ಮುಖಕ್ಕೆ ಒದೆಯುತ್ತಾರೆ. ಇದನ್ನೆಲ್ಲಾ ಸಹಿಸಿಕೊಂಡು ಸ್ಪರ್ಧಿಸುವುದು ತುಂಬಾ ಕಷ್ಟ. ಸ್ಪರ್ಧೆಯಿಂದ ಹಿಂದೆ ಸರಿಯಬೇಕು ಅನಿಸಿಬಿಡುತ್ತದೆ~ ಎಂದು ಅವರು ವಿವರಿಸುತ್ತಾರೆ.

ಈ ಸ್ಪರ್ಧೆಗಳಲ್ಲಿ ಗೆಲ್ಲಬೇಕು ಎಂಬ ಛಲದಿಂದ ಅನು ಬೆಳಿಗ್ಗೆ ಮೂರು ಗಂಟೆಗೆ ಎದ್ದು ಅಭ್ಯಾಸ ನಡೆಸಿದ ಉದಾಹರಣೆ ಇದೆ. ಅಲ್ಟ್ರಾಮನ್ ಹಾಗೂ ಐರನ್‌ಮನ್ ಸ್ಪರ್ಧೆಗಳು ಹೆಚ್ಚಾಗಿ ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ನಲ್ಲಿ ನಡೆಯುತ್ತವೆ.

ವಿವಿಧ 50 ದೇಶಗಳಿಂದ ಸಾವಿರಾರು ಸ್ಪರ್ಧೆಗಳು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಅದರಲ್ಲಿ 18ರಿಂದ 80 ವರ್ಷ ವಯಸ್ಸಿನ ಸ್ಪರ್ಧಿಗಳು ಇರುತ್ತಾರೆ ಎಂಬುದು ವಿಶೇಷ. `ಆದರೆ ಭಾರತದಲ್ಲಿ ಈಗೆಲ್ಲಾ ಮಾಡಲು ಸಾಧ್ಯವಿಲ್ಲ. ಬೆಳಿಗ್ಗೆ ಎದ್ದು ರಸ್ತೆಯಲ್ಲಿ ಅಭ್ಯಾಸ ಮಾಡಲು ತೆರಳಿದರೆ ಎಲ್ಲರೂ ಒಂದು ರೀತಿ ನೋಡುತ್ತಾರೆ.

ಏನೇನೊ ಮಾತನಾಡುತ್ತಾರೆ. ಬಳಿಕ ಅಭ್ಯಾಸ ನಡೆಸೋಣವೆಂದರೆ ವಿಪರೀತ ಟ್ರಾಫಿಕ್. ಕೆಲವರಿಗೆ ಈ ಸ್ಪರ್ಧೆಯ ಬಗ್ಗೆ ಗೊತ್ತೇ ಇಲ್ಲ. ಹಾಗಾಗಿ ಅಲ್ಟ್ರಾಮನ್ ಹಾಗೂ ಐರನ್‌ಮನ್ ಸ್ಪರ್ಧೆಗಳನ್ನು ಭಾರತದಲ್ಲಿ ಕಾಣಲು ಸಾಧ್ಯವಿಲ್ಲ~ ಎನ್ನುತ್ತಾರೆ ಅನು.  ನ್ಯೂಜಿಲೆಂಡ್‌ನಲ್ಲಿ ಫೆಬ್ರುವರಿಯಲ್ಲಿ ಸಂಭವಿಸಿದ ಭೂಕಂಪನದ ವೇಳೆ ಅನು ಅಲ್ಲಿ ತರಬೇತಿ ನಿರತರಾಗಿದ್ದರು. ಆ ಘಟನೆ ನಡುವೆಯೂ ಅವರು ಅಲ್ಲಿ ತರಬೇತಿ ಪೂರ್ಣಗೊಳಿಸಿ ಸ್ಪರ್ಧಿಸ್ದ್ದಿದರು.

ಜುಲೈನಲ್ಲಿ ಅವರು ಐರನ್‌ಮನ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಮತ್ತೆ ತೆರಳುತ್ತಿದ್ದಾರೆ. ಅವರ ಪ್ರಮುಖ ಗುರಿ 2015ರೊಳಗೆ ಈ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಬೇಕು ಎಂಬುದು. ವಿಪರ್ಯಾಸವೆಂದರೆ ಭಾರತದ ಮತ್ತೊಬ್ಬ ವ್ಯಕ್ತಿ ಇಂತಹ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಮುಂದಾಗುತ್ತಿಲ್ಲ. ಅದಕ್ಕೆ ಕಾರಣ ಆ ಸ್ಪರ್ಧೆಯಲ್ಲಿ ಪಾಲ್ಗೊಂಡಾಗ ಎದುರಾಗುವ ಸಮಸ್ಯೆಗಳು.

ಅನು ಅವರ ಹಾದಿಯೇನು ಹೂವಿನ ಹಾಸಿಗೆಯಲ್ಲ. ಅಲ್ಲಿ ಗುಂಡಿಗಳಿವೆ, ಕಲ್ಲು ಮುಳ್ಳುಗಳಿವೆ. ಆದರೆ ಅವುಗಳನ್ನೆಲ್ಲಾ ಧೈರ್ಯವಾಗಿ ಎದುರಿಸಿ ಮುನ್ನುಗ್ಗುತ್ತಿದ್ದಾರೆ. ಇವೆಲ್ಲಾ ಸಾಧನೆಯ ಹಾದಿಯಲ್ಲಿ ಇದ್ದದ್ದೆ ಎಂಬುದು ಅವರಿಗೆ ಚೆನ್ನಾಗಿ ಅರ್ಥವಾಗಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT