ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನ ಬಳಕೆಯಲ್ಲಿ ವಿಫಲ

Last Updated 25 ಏಪ್ರಿಲ್ 2013, 20:08 IST
ಅಕ್ಷರ ಗಾತ್ರ

ಬೆಂಗಳೂರು: `ಬಸವನಗುಡಿ ವಿಧಾನಸಭಾ ಕ್ಷೇತ್ರಕ್ಕೆ ಕಳೆದ ಆರ್ಥಿಕ ವರ್ಷದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ರೂ. 1200 ಕೋಟಿಗೂ ಅಧಿಕ ಅನುದಾನ ಬಿಡುಗಡೆಯಾಗ್ದ್ದಿದು,  ಅದನ್ನು ಸದುಪಯೋಗ ಪಡಿಸಿಕೊಳ್ಳಲು ಅಲ್ಲಿಯ ಶಾಸಕರು ವಿಫಲವಾಗಿದ್ದಾರೆ' ಎಂದು ಬಸವನಗುಡಿ ಕ್ಷೇತ್ರದ ನಾಗರಿಕರು ಆರೋಪಿಸಿದ್ದಾರೆ.

ಗಾಂಧಿ ಸ್ಮಾರಕ ನಿಧಿ, ಗಾಂಧಿ ಶಾಂತಿ ಪ್ರತಿಷ್ಠಾನ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಮತ್ತಿತರ ಸಂಘ ಸಂಸ್ಥೆಗಳು ಗುರುವಾರ ನಗರದಲ್ಲಿ ಏರ್ಪಡಿಸಿದ್ದ `ಜನರೆದುರು ಜನಪ್ರತಿನಿಧಿ ಮುಖಾಮುಖಿ' ಕಾರ್ಯಕ್ರಮದಲ್ಲಿ ನಾಗರಿಕರು ದೂರಿದರು.

`ಬಸವನಗುಡಿ ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿ ಸರಿಯಾದ ಪಾದಚಾರಿ ಮಾರ್ಗಗಳಿಲ್ಲ. ಪಾದಚಾರಿ ಮಾರ್ಗದಲ್ಲೇ ಅಂಗಡಿಗಳು ತಲೆಯೆತ್ತಿವೆ. ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲ. ವಾಹನಗಳನ್ನು ನಿಲ್ಲಿಸಲು ಸರಿಯಾದ ಪಾರ್ಕಿಂಗ್ ವ್ಯವಸ್ಥೆಯಿಲ್ಲ. ಮೇಲ್ಸೇತುವೆಯನ್ನು ವೈಜ್ಞಾನಿಕವಾಗಿ ನಿರ್ಮಿಸಿಲ್ಲ. ಈ ಕುರಿತು ಪ್ರಶ್ನಿಸಲು  ಜನಪ್ರತಿನಿಧಿಗಳು ಜನಸಾಮಾನ್ಯರ ಸಂಪರ್ಕಕ್ಕೆ ಸಿಗುತ್ತಿಲ್ಲ' ಎಂದು ಕ್ಷೇತ್ರದ ಮತದಾರರು ಜನಪ್ರತಿನಿಧಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

`ಬಿಬಿಎಂಪಿಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದ ಬಗ್ಗೆ ಆಡಿಟ್ ವರದಿಯಲ್ಲಿ ಉಲ್ಲೇಖವಾಗಿದೆ. ಆದರೆ, ಈ ಬಗ್ಗೆ ಯಾವುದೇ ಜನಪ್ರತಿನಿಧಿ ತಲೆಕೆಡಿಸಿಕೊಂಡಿಲ್ಲ. ಜನಪ್ರತಿನಿಧಿಗಳ ಬೇಜಬ್ದಾರಿಯಿಂದ ಜನರ ತೆರಿಗೆಯ ಹಣ ಸಮರ್ಪಕವಾಗಿ ವಿನಿಯೋಗವಾಗುತ್ತಿಲ್ಲ' ಎಂದು ಸಮಾಜ ಸೇವಕ ಎಂ.ಎ.ಅಶ್ವತ್ಥ ನಾರಾಯಣ ಶೆಟ್ಟಿ ಆರೋಪಿಸಿದರು.

ಬಸವನಗುಡಿ ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ರವಿಕಿರಣ್ ಪ್ರತಿಕ್ರಿಯೆ ನೀಡಿ, `ಜನಸೇವೆ ಮಾಡಲು ನಾನು ರಾಜಕೀಯಕ್ಕೆ ಬಂದಿದ್ದೇನೆ. ಈ ಹಿಂದಿನ ಜನಪ್ರತಿನಿಧಿ ಸದಾ ಜನರ ಸಂಪರ್ಕದಿಂದ ದೂರ ಇದ್ದರು. ಜನಪ್ರತಿನಿಧಿಗಳು ಸರ್ಕಾರ ಮತ್ತು ಜನರ ನಡುವಿನ ಸೇತುವೆಯಂತೆ ಕೆಲಸ ಮಾಡಬೇಕು. ಚುನಾವಣೆಯಲ್ಲಿ ಗೆದ್ದರೂ, ಸೋತರೂ ಜನಸೇವೆಗೆ ಬದ್ಧವಾಗಿರುತ್ತೇನೆ' ಎಂದು ಭರವಸೆ ನೀಡಿದರು.

ಮುಖಾಮುಖಿ ಕಾರ್ಯಕ್ರಮಕ್ಕೆ ಬಸವನಗುಡಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮತ್ತು ಬಿಎಸ್ಪಿಯ ಅಭ್ಯರ್ಥಿಗಳು ಗೈರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT