ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಷ್ಠಾನಗೊಳ್ಳುವುದೇ ಶಾಶ್ವತ ನೀರಾವರಿ ?

Last Updated 6 ಡಿಸೆಂಬರ್ 2012, 9:46 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ವಿವಿಧ ಸಂಘ ಸಂಸ್ಥೆಗಳ ನೇತೃತ್ವದ ಶಾಶ್ವತ ನೀರಾವರಿ ಹೋರಾಟ ಸಮಿತಿಯು ಎರಡು ತಿಂಗಳು ಅನಿರ್ದಿಷ್ಟಾವಧಿ ಧರಣಿ ಕೈಗೊಂಡ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಹೋರಾಟ ಸಮಿತಿಯ ಸದಸ್ಯರ ಬೇಡಿಕೆಗಳಿಗೆ ಸ್ಪಂದಿಸಿದೆ.

ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ವರದಿ ಯಾಧಾರಿತ ಶಾಶ್ವತ ನೀರಾವರಿ ಯೋಜನೆ ಜಾರಿ ಗೊಳಿಸುವುದರ ಬಗ್ಗೆ ಸರ್ಕಾರವು ಮಂಗಳವಾರ ಹಸಿರು ನಿಶಾನೆ ತೋರಿದೆ. ಆದರೆ ಯೋಜನೆ ಜಾರಿಗೊಳಿಸುವಿಕೆ ಸುಲಭದ ಸಂಗತಿಯೇನಲ್ಲ ಎಂದು ಕೆಲ ತಜ್ಞರು ಅಭಿಪ್ರಾಯಪಡುತ್ತಾರೆ. ಹತ್ತು ವರ್ಷಗಳಿಂದ ಹೋರಾಟ ನಡೆಯುತ್ತಿದ್ದರೂ ಸ್ಪಂದಿಸದ ಸರ್ಕಾರ ಈಗ ದಿಢೀರ್‌ನೇ ಹೇಗೆ ಒಪ್ಪಿಗೆ ಕೊಟ್ಟಿತು ಎಂಬುದು ಕೆಲವರಿಗೆ ಅಚ್ಚರಿ ಮೂಡಿಸಿದೆ.

`ಪರಮಶಿವಯ್ಯ ವರದಿಯಾಧಾರಿತ ಯೋಜನೆ ಜಾರಿಗೊಳಿಸುವುದು ಕಷ್ಟಕರವೆಂದು ಹೇಳುತ್ತಲೇ ಬಂದ ಕೇಂದ್ರ ಸಚಿವ ವೀರಪ್ಪ ಮೊಯಿಲಿ ಅವರು ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸುವುದರ ಬಗ್ಗೆ ಆದ್ಯತೆ ನೀಡಿದ್ದರು. ಈ ಹಿಂದಿನ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಚಿಕ್ಕಬಳ್ಳಾಪುರ- ಕೋಲಾರ ಜಿಲ್ಲೆಗಳ ಸಂಸದರು ಮತ್ತು ಶಾಸಕರ ಸಮ್ಮುಖದಲ್ಲೇ `ಎತ್ತಿನಹೊಳೆ ಯೋಜನೆ ಮೊದಲು, ಪರಮಶಿವಯ್ಯ ಯೋಜನೆ ನಂತರ' ಎಂದು ಹೇಳಿದ್ದರು. ನೀರಾವರಿ ಯೋಜನೆ ಕುರಿತು ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ಅವರು ಭರವಸೆ ನೀಡಿದರೆ ಹೊರತು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ದಕ್ಷಿಣ ಕನ್ನಡ ಜಿಲ್ಲೆಗಳ ಅಡ್ಡಿ-ಆತಂಕ ಮತ್ತು ವಿರೋಧದ ನಡುವೆ ರಾಜ್ಯ ಸರ್ಕಾರ ದಿಢೀರ್ ನಿರ್ಣಯ ಕೈಗೊಂಡಿದ್ದು ಹೇಗೆ' ಎಂದು ಜಿಲ್ಲೆಯ ಕೆಲ ತಜ್ಞರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

2004ರಲ್ಲಿ ಚುನಾವಣೆ ಸಮೀಪಿಸಿದ ಸಂದರ್ಭದಲ್ಲಿ ಆಗಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಪರಮಶಿವಯ್ಯ ವರದಿ ಯೋಜನೆ ಬಗ್ಗೆ ಸಮಗ್ರ ಮಾಹಿತಿಗೆ ಪಡೆಯಲು ಉಪಗ್ರಹ ಸಮೀಕ್ಷೆಗಾಗಿ ಹಣ ಬಿಡುಗಡೆಗೊಳಿಸಿದ್ದರು. ಈಗ 8 ವರ್ಷಗಳ ನಂತರ 2013ರ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೇತೃತ್ವದ ರಾಜ್ಯ ಸರ್ಕಾರವು ಪರಮಶಿವಯ್ಯ ವರದಿಯಾಧಾರಿತ ನೀರಾವರಿ ಯೋಜನೆ ಅನುಷ್ಠಾನಗೊಳಿಸುವುದಾಗಿ ಭರವಸೆ ನೀಡಿದೆ. ನೀರಾವರಿ ಯೋಜನೆ ಎಂಬುದು ಚುನಾವಣೆ ಸಮೀಪದಲ್ಲಿರುವಾಗ ರಾಜ್ಯ ಸರ್ಕಾರಕ್ಕೆ ಮತ್ತು ಕೆಲವರಿಗೆ ನೆನಪಾಗುತ್ತದೆ ಹೊರತು ಇತರ ಸಂದರ್ಭದಲ್ಲಿ ಅಲ್ಲ' ಎಂದು ವೈದ್ಯ ಡಾ. ಮಧುಸೀತಪ್ಪ ತಿಳಿಸಿದ್ದಾರೆ.

ನೀರಾವರಿ ಯೋಜನೆ ಕುರಿತು `ಮತ್ತೆ ಬರ ಬೇಡ' ಎಂಬ ಸಾಕ್ಷ್ಯಚಿತ್ರ ಸಿದ್ಧಪಡಿಸಿರುವ ಅವರು ಶಾಶ್ವತ ನೀರಾವರಿ ಯೋಜನೆಯ ಸಾಧಕ- ಬಾಧಕಗಳ ಬಗ್ಗೆ `ಪ್ರಜಾವಾಣಿ'ಗೆ ವಿವರಣೆ ನೀಡಿದ್ದಾರೆ. `ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಪರಮಶಿವಯ್ಯ ಅವರು ಚರ್ಚಿಸಲು ಮುಂದಾದಾಗಲೆಲ್ಲ ಬಿ.ಎಸ್.ಯಡಿಯೂರಪ್ಪ ಮತ್ತು ಜಲಸಂಪನ್ಮೂಲ ಸಚಿವ ಬಸವರಾಜ್ ಬೊಮ್ಮಾಯಿ ಕಾಲಾವಕಾಶ ನೀಡಲಿಲ್ಲ. ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದು ನಾಲ್ಕುವರೆ ವರ್ಷಗಳಾದರೂ ಸರ್ಕಾರ ಶಾಶ್ವತ ನೀರಾವರಿ ಬಗ್ಗೆ ಪ್ರಸ್ತಾಪಿಸಲಿಲ್ಲ. ಆದರೆ ಈಗ ದಿಢೀರ್‌ನೇ ನೀರಾವರಿ ಯೋಜನೆ ಕುರಿತು ಆಸಕ್ತಿ ತೋರುತ್ತಿದೆ. ಇದು ಚುನಾವಣೆ ಮುನ್ನ ರಾಜಕೀಯ ಭರವಸೆಗಳೇ ಹೊರತು ಮತ್ತೇನೂ ಅಲ್ಲ' ಎಂದು ಅವರು ಹೇಳಿದ್ದಾರೆ.

`ಪರಿಸರಕ್ಕೆ ಹಾನಿ': `ಪರಮಶಿವಯ್ಯ ವರದಿಯಾಧಾರಿತ ನೀರಾವರಿ ಯೋಜನೆ ಜಾರಿಗೊಳಿಸಲು ಹಲವಾರು ಅಡ್ಡಿ- ಆತಂಕಗಳಿವೆ. ಆ ಎಲ್ಲ ಅಡ್ಡಿ-ಆತಂಕ-ವಿರೋಧವನ್ನು ನಿವಾರಿಸಿಕೊಂಡು ರಾಜ್ಯ ಸರ್ಕಾರವು ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತವಾಗಿ ನೀರು ಹರಿಸುವುದು ಕಷ್ಟಕರವಾಗಿದೆ.

ಅಮೆರಿಕದ ಅಮೆಜಾನ್ ಅರಣ್ಯ ಪ್ರದೇಶದ ನಂತರ ಅತ್ಯಮೂಲ್ಯ, ಪ್ರಾಚೀನ ಮತ್ತು ಸೂಕ್ಷ್ಮಜೀವಿಗಳ ಅರಣ್ಯವೆಂದು ಪಶ್ಚಿಮಘಟ್ಟ ಪ್ರದೇಶವನ್ನು ಪರಿಗಣಿಸಲಾಗುತ್ತದೆ. ಧಾರಾಕರ ಮಳೆ ಯಾಗಲು ಈ ಅರಣ್ಯ ಪ್ರದೇಶ ಕಾರಣ. ನೀರಾವರಿ ಯೋಜನೆ ಅನುಷ್ಠಾನಗೊಳ್ಳಬೇಕಿದ್ದರೆ, ಈ ಕಾಡಿನಲ್ಲಿನ ಮರಗಳನ್ನು ನಾಶಪಡಿಸಬೇಕಾಗುತ್ತದೆ. ಕೆಲವಷ್ಟು ಪ್ರದೇಶ ನೀರಾವರಿಗಾಗಿ ಮೀಸಲಿಡಬೇಕಾಗುತ್ತದೆ. ಇದಕ್ಕೆ ದಕ್ಷಿಣ ಕನ್ನಡ, ಕರಾವಳಿ ಜಿಲ್ಲೆಗಳ ಜನರು ಮತ್ತು ಪರಿಸರವಾದಿಗಳ ವಿರೋಧವಿದೆ' ಎಂದು ಅವರು ಹೇಳಿದರು.

`ಕರಾವಳಿ ಜಿಲ್ಲೆಯ ತಜ್ಞರ ಪ್ರಕಾರ ನೇತ್ರಾವತಿ ನದಿಯಲ್ಲಿ ಪ್ರವಾಹ ಆಗುವುದು ಸಮುದ್ರ ಮಟ್ಟಕ್ಕಿಂತ 350 ಮೀಟರುಗಳ ಎತ್ತರದಲ್ಲಿ. ಆದರೆ ಯೋಜನೆಯಂತೆ ನೀರನ್ನು ಹರಿಸಿಕೊಳ್ಳಲು ಯತ್ನಿಸುತ್ತಿರುವುದು 935 ಮೀಟರುಗಷ್ಟು ಎತ್ತರದಲ್ಲಿ. ಅರಣ್ಯಪ್ರದೇಶಕ್ಕೆ ಅಷ್ಟೇ ಅಲ್ಲ, ಜೀವ ವೈವಿಧ್ಯತೆಗೂ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ವಿಜ್ಞಾನಿಗಳು 1 ಟಿಎಂಸಿಯಷ್ಟು ನೀರನ್ನು ಸಾಧ್ಯವಲ್ಲದ ದಿಕ್ಕಿನಲ್ಲಿ ಹರಿಸಲು ಬಿಡುವುದಿಲ್ಲ. ಪರಮಶಿವಯ್ಯ ಅವರು ಸುಮಾರು 315 ಟಿಎಂಸಿಯಷ್ಟು ನೀರನ್ನು ಇನ್ನೊಂದು ದಿಕ್ಕಿನಲ್ಲಿ ಹರಿಸಿಕೊಂಡು ಬಯಲುಸೀಮೆ ಜಿಲ್ಲೆಗಳಿಗೆ ಪೂರೈಸುವುದಾಗಿ ಹೇಳಿದ್ದಾರೆ. ಇದು ಹೇಗೆ ಸಾಧ್ಯ' ಎಂದು ಅವರು ಹೇಳಿದ್ದಾರೆ.

`ಪರ್ಯಾಯ ಮಾರ್ಗ': `ಪಶ್ಚಿಮ ಘಟ್ಟ ಪ್ರದೇಶವನ್ನು ಪಾರಂಪರಿಕ ತಾಣವಾಗಿಸಲು ಒಂದೆಡೆ ಯುನೆಸ್ಕೊ ಸಂಸ್ಥೆಯು ಚಿಂತನೆ ನಡೆಸುತ್ತಿದ್ದರೆ, ಮತ್ತೊಂದೆಡೆ ಅರಣ್ಯ ಪ್ರದೇಶದಲ್ಲಿ ಮರಗಳನ್ನು ಕಡಿಯಲು ಕೇಂದ್ರ ಸರ್ಕಾರವು ಅನುಮತಿ ನೀಡುವುದು ಕಷ್ಟಕರವಿದೆ. ದಟ್ಟವಾದ ಅರಣ್ಯ ಪ್ರದೇಶ ಇಲ್ಲದಿದ್ದರೂ ಕೋಲಾರದಲ್ಲಿ ಯರಗೋಳು ಯೋಜನೆ ಜಾರಿಗೊಳಿಸಲು ಅರಣ್ಯ ಇಲಾಖೆ ಇನ್ನೂ ಅನುಮತಿ ನೀಡಿಲ್ಲ. ಅಂತಹದ್ದರಲ್ಲಿ ಪಶ್ಚಿಮ ಘಟ್ಟದ ಪರಿಸರವನ್ನು ಹಾನಿಯುಂಟು ಮಾಡಿ, ಬಯಲುಸೀಮೆ ಜಿಲ್ಲೆಗಳಿಗೆ ನೀರು ಹರಿಸಲು ಹೇಗೆ ಸಾಧ್ಯ' ಎಂದು ಅವರು ಪ್ರಶ್ನಿಸಿದ್ದಾರೆ.

`ಪರಮಶಿವಯ್ಯ ವರದಿಯಾಧಾರಿತ ನೀರಾವರಿ ಯೋಜನೆಗೆ ರಾಜ್ಯ ಸರ್ಕಾರವು ವಿಸ್ತ್ರತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವುದರ ಜೊತೆಜೊತೆಗೆ ಪರಮಶಿವಯ್ಯ ಅವರ ನೀರಾವರಿ ಯೋಜನೆ ಸುಲಭವಾಗಿ ಅನುಷ್ಠಾನಗೊಳಿಸಲು ಪರ್ಯಾಯ ಮಾರ್ಗ ಕಂಡು ಹಿಡಿಯಬೇಕು. ಅಮೂಲ್ಯವಾದ ಪರಿಸರ ಮತ್ತು ಅರಣ್ಯಪ್ರದೇಶಕ್ಕೆ ಹಾನಿಯುಂಟು ಮಾಡದೇ ಬಯಲುಸೀಮೆ ಜಿಲ್ಲೆಗಳಿಗೆ ನೀರನ್ನು ಹೇಗೆ ಹರಿಸಬಹುದು ಎಂಬುದರ ಬಗ್ಗೆ ಆಲೋಚನೆ ಮಾಡಬೇಕು. ಆಗ ಮಾತ್ರವೇ ಯಾವುದೇ ವಿರೋಧವಿಲ್ಲದೇ ನೀರಾವರಿ ಯೋಜನೆ ಅನುಷ್ಠಾನಗೊಳ್ಳುತ್ತದೆ' ಎಂದು ಮಧುಸೀತಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT