ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ಯಾಯವಾದಲ್ಲಿ ನ್ಯಾಯಾಲಯಕ್ಕೆ ಮೊರೆ

Last Updated 1 ಜುಲೈ 2012, 10:40 IST
ಅಕ್ಷರ ಗಾತ್ರ

ಪುತ್ತೂರು: ಈ ವರ್ಷದ ಸಿಇಟಿ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಎಂಜಿನಿಯರಿಂಗ್, ಮೆಡಿಕಲ್ ಮತ್ತು ಐಎಸ್‌ಎಂಎಚ್‌ನಲ್ಲಿ ಉತ್ತಮ ರ‌್ಯಾಂಕ್ ಗಳಿಸಿರುವ ಅಕ್ಷರ ಕತ್ರಿಬೈಲು ಎಂಬ ವಿದ್ಯಾರ್ಥಿಗೆ ಪ್ರಾಧಿಕಾರದ ಪರಿಶೀಲನಾ ಸುತ್ತಿನಲ್ಲಿ ವಿನಾ ಕಾರಣ ಅವಕಾಶ ನಿರಾಕರಿಸಿ ಅನ್ಯಾಯ ಮಾಡಲಾಗಿದೆ.

ಇದರ ವಿರುದ್ಧ ನ್ಯಾಯಾಲಯದ ಮೊರೆ ಹೋಗುವುದಾಗಿ ವಿದ್ಯಾರ್ಥಿಯ ತಂದೆ ಡಾ.ಶ್ರೀಕುಮಾರ್ ಕತ್ರಿಬೈಲು ತಿಳಿಸಿದರು. ಪುತ್ತೂರು ತಾಲ್ಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲದ ಡಾ. ಶ್ರೀಕುಮಾರ್ ಕತ್ರಿಬೈಲು ಅವರು ಶುಕ್ರವಾರ ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ತನ್ನ ಪುತ್ರನಿಗಾದ ಅನ್ಯಾಯವನ್ನು ಮತ್ತು ಇದರಿಂದಾಗಿ ಕುಟುಂಬಕ್ಕಾಗಿರುವ ನೋವನ್ನು ತೋಡಿಕೊಂಡರು.

`ಅಕ್ಷರ ಕತ್ರಿಬೈಲು ಸಿಇಟಿ  ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಎಂಜಿನಿಯರಿಂಗ್ ವಿಭಾಗದಲ್ಲಿ 6476ನೇ ರ‌್ಯಾಂಕ್, ಮೆಡಿಕಲ್ ವಿಭಾಗದಲ್ಲಿ 7546ನೇ ರ‌್ಯಾಂಕ್ ಹಾಗೂ ಐಎಸ್‌ಎಂಎಚ್ ನಲ್ಲಿ 4291ನೇ ರ‌್ಯಾಂಕ್ ಪಡೆದಿದ್ದಾನೆ. ಆದರೆ ಆತನಿಗೆ  ಪ್ರಾಧಿಕಾರದ ಪರಿಶೀಲನಾ ಸುತ್ತಿನಲ್ಲಿ ವಂಚನೆಯಾಗಿದೆ.

ಆತ ಪರಿಶೀಲನಾ ಸುತ್ತಿನಲ್ಲಿ ಪಾಲ್ಗೊಳ್ಳಲು ಜೂ. 26ರಂದು ಹಾಜರಾಗಿದ್ದ. ಆ ಸಂದರ್ಭದಲ್ಲಿ ಪಿ.ಯು.ಸಿ. ವಿಭಾಗದ ಕಮಿಷನರ್ ರಶ್ಮಿ ಮಹೇಶ್ ಅವರು `ವಿದ್ಯಾರ್ಥಿಯು ಯಾವುದೇ ವರ್ಗದಲ್ಲಿ ಅರ್ಹತೆ ಪಡೆದಿಲ್ಲ~ ಎಂದು ಆತನ ಪ್ರವೇಶಾತಿಯನ್ನು ತಿರಸ್ಕರಿಸಿ, ಪರಿಶೀಲನಾ  ಕೊಠಡಿಯಿಂದ ಹೊರ ಕಳುಹಿಸುವ ಮೂಲಕ ದೌರ್ಜನ್ಯ ಎಸಗಿದ್ದಾರೆ~ ಎಂದು ಆರೋಪಿಸಿದರು.

`ನನ್ನ ಪುತ್ರ ಒಂದನೇ ತರಗತಿಯಿಂದ 7ನೇ ತರಗತಿಯ ತನಕ ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ  ಶಿಕ್ಷಣ ಪಡೆದಿದ್ದು, ಬಳಿಕ 8ನೇ ತರಗತಿಯಿಂದ ದ್ವಿತೀಯ ಪಿಯುಸಿ ತನಕದ 5 ವರ್ಷಗಳ ಶಿಕ್ಷಣವನ್ನು ಕಾಸರಗೋಡಿನ ಬಾಯಾರುಪದವು ಪ್ರಶಾಂತಿ ವಿದ್ಯಾ ಕೇಂದ್ರ ಮತ್ತು ಕಾಸರಗೋಡಿನ ಪೆರಿಯದ ಜವಾಹರ್ ನವೋದಯ ವಿದ್ಯಾಲಯದಲ್ಲಿ ಪಡೆದಿದ್ದಾನೆ. 12ನೇ ತರಗತಿಯಲ್ಲಿ (ಪ್ಲಸ್ ಟು ) ಶೇ. 92 ಅಂಕಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾನೆ~ ಎಂದು ತಿಳಿಸಿದರು. 

  2012ರಲ್ಲಿ ಕರ್ನಾಟಕದ ಕೆಇಎ ನಡೆಸಿರುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಿ ಪ್ರಾಧಿಕಾರವು ನೀಡಿದ ಮಾರ್ಗಸೂಚಿಯಂತೆ ಎಲ್ಲ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲಾಗಿತ್ತು. ಬಳಿಕ ಸಿಇಟಿ ಪರೀಕ್ಷಾ ಪ್ರವೇಶ ಪತ್ರ ಪಡೆದುಕೊಂಡು ಪ್ರಾಧಿಕಾರ ಸೂಚಿಸಿದ ಕೇಂದ್ರಗಳಲ್ಲಿ ಎಲ್ಲ ಪರೀಕ್ಷೆಗಳಿಗೂ ಹಾಜರಾಗಿದ್ದಾನೆ.

12ನೇ ತರಗತಿಯ ಫಲಿತಾಂಶವನ್ನು ಕೂಡ  ಮಾರ್ಗಸೂಚಿಯಂತೆ ಪ್ರಾಧಿಕಾರಕ್ಕೆ  ಸಲ್ಲಿಸಲಾಗಿದೆ. ಆದರೆ ಸೀಟು ಹಂಚಿಕೆಗೆ ಸಂಬಂಧಿಸಿದ ಪ್ರಾಧಿಕಾರದ ಪರಿಶೀಲನಾ ಸುತ್ತಿನಲ್ಲಿ ರಶ್ಮಿ ಮಹೇಶ್ ಅವಕಾಶ ನಿರಾಕರಿಸಿ ಅನ್ಯಾಯ ಮಾಡಿದ್ದಾರೆ. ಇದರಿಂದಾಗಿ ಆತ  ಮಾನಸಿಕ ಖಿನ್ನತೆಗೊಳಗಾಗಿದ್ದಾನೆ. ಅಲ್ಲದೆ ಇಡೀ ಕುಟುಂಬ ಮಾನಸಿಕ ಯಾತನೆ ಅನುಭವಿಸುವಂತಾಗಿದೆ ಎಂದರು.

ಮುಖ್ಯಮಂತ್ರಿ ಹಾಗೂ  ಉನ್ನತ ಶಿಕ್ಷಣ ಸಚಿವರು ಸಮಸ್ಯೆಯನ್ನು ಸರಿಪಡಿಸಿ ಪ್ರತಿಭಾವಂತ ವಿದ್ಯಾರ್ಥಿಯಾಗಿರುವ ಪುತ್ರನಿಗೆ ಸಾಮಾನ್ಯ ವಿದ್ಯಾರ್ಥಿಗಳಂತೆ ಪರಿಶೀಲನಾ ಸುತ್ತು, ಸೀಟು ಹಂಚಿಕೆ ಸುತ್ತು ಮತ್ತು ಕಾಲೇಜು ಪ್ರವೇಶ ಪ್ರಕ್ರಿಯೆಯಲ್ಲಿ ಭಾಗವಹಿಸಿ ಯೋಗ್ಯ ಕಾಲೇಜು ಹಾಗೂ ವಿಭಾಗವನ್ನು ಆತನ ಅರ್ಹತೆಗೆ ಅನುಸಾರವಾಗಿ ಪಡೆದುಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಶ್ರೀಕುಮಾರ್ ಆಗ್ರಹಿಸಿದರು. ನ್ಯಾಯ ಸಿಗದಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗುವುದಾಗಿ ಎಚ್ಚರಿಸಿದರು. ವಿದ್ಯಾರ್ಥಿ ಅಕ್ಷಯ ಕತ್ರಿಬೈಲು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT