ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರಾಧ ಅಧ್ಯಯನ

Last Updated 1 ಜುಲೈ 2012, 19:30 IST
ಅಕ್ಷರ ಗಾತ್ರ

ಅಪರಾಧಶಾಸ್ತ್ರ ಮತ್ತು ವಿಧಿ ವಿಜ್ಞಾನ (ಕ್ರಿಮಿನಾಲಜಿ ಅಂಡ್ ಫೊರೆನ್ಸಿಕ್ ಸೈನ್ಸ್) ಎನ್ನುವ ವಿಷಯವೊಂದು ಪದವಿ, ಸ್ನಾತಕೋತ್ತರ ಹಂತದಲ್ಲಿ ಇದೆ ಎಂಬುದು ಅನೇಕ ವಿದ್ಯಾರ್ಥಿಗಳಿಗೆ, ಅವರ ಪೋಷಕರಿಗೆ ತಿಳಿದಿಲ್ಲ. ಅಕಸ್ಮಾತ್ ಅಲ್ಪಸ್ವಲ್ಪ ಗೊತ್ತಿದ್ದರೂ ತಪ್ಪಾಗಿ ಗ್ರಹಿಸಿರುವ ಸಾಧ್ಯತೆಗಳೂ ಇವೆ. ಅಲ್ಲದೇ ಇದೊಂದು ಹೊಸ ವಿಷಯ ಮತ್ತು ಪೊಲೀಸ್ ಇಲಾಖೆಗೆ ಸಂಬಂಧಿಸಿದ್ದು ಎಂಬ ಹಿಂಜರಿಕೆಯಿಂದ ಇದರ ಅಧ್ಯಯನ ಮಾಡಲು ಅಭ್ಯರ್ಥಿಗಳು ಮುಂದೆ ಬರುತ್ತಿಲ್ಲ.

ನಿಜ ಹೇಳಬೇಕೆಂದರೆ ಈ ವಿಷಯ ಕರ್ನಾಟಕದಲ್ಲಿ ಆರಂಭವಾಗಿ ನಾಲ್ಕು ದಶಕಗಳೇ ಕಳೆದಿವೆ. ಕ್ರಿಮಿನಾಲಜಿ ಅಂಡ್ ಫೊರೆನ್ಸಿಕ್ ಸೈನ್ಸ್ ಪದವಿ ಮತ್ತು ಸ್ನಾತಕೋತ್ತರ ಪದವಿ ನೀಡುವಲ್ಲಿ ಧಾರವಾಡದ ಕರ್ನಾಟಕ ವಿವಿ ಮುಂಚೂಣಿಯಲ್ಲಿದೆ. 1969ರಷ್ಟು ಹಿಂದೆಯೇ ಇಲ್ಲಿ ಪಿಜಿ ಕೋರ್ಸ್ ಆರಂಭವಾಗಿ ದಕ್ಷಿಣ ಭಾರತದ ವಿದ್ಯಾರ್ಥಿಗಳನ್ನೂ ಆಕರ್ಷಿಸಿತ್ತು. 

ಇದನ್ನು ಮೈಸೂರು ವಿವಿಯ ಮಹಾರಾಜ ಕಾಲೇಜು, ಮಂಗಳೂರಿನ ರೋಷನಿ ನಿಲಯ, ಬೆಳಗಾವಿಯ ರಾಣಿ ಚೆನ್ನಮ್ಮ ವಿವಿಗಳೂ ಅಳವಡಿಸಿಕೊಂಡಿವೆ. ಇದೇ ರೀತಿ ಚಿತ್ರದುರ್ಗದ ಮಹಾರಾಜ ಮದಕರಿ ನಾಯಕ ಕಾಲೇಜು, ವಿಜಾಪುರದ ಅಂಜುಮನ್ ಕಾಲೇಜು, ಸಿಂದಗಿಯ ಮನಗೂಳಿ ಕಾಲೇಜು, ಮೈಸೂರಿನ ಮಹಾಜನ ಕಾಲೇಜು ಮುಂತಾದ ಕಡೆಯೂ ಪದವಿ ಹಂತದಲ್ಲಿ ಬೋಧಿಸಲಾಗುತ್ತಿದೆ.

ತೀರ ಇತ್ತೀಚೆಗೆ ಕೆ.ಆರ್. ನಗರ, ನರಗುಂದ, ಉಡುಪಿ, ಮಂಡ್ಯ, ಹಾಸನ, ಹಾವೇರಿ, ನೇಸರಗಿ, ಅಕ್ಕಿ ಆಲೂರು, ಸಿಂದಗಿ, ವಿಜಾಪುರಗಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಗಳಲ್ಲಿ ಕ್ರಿಮಿನಾಲಜಿ ಅಂಡ್ ಫೊರೆನ್ಸಿಕ್ ಸೈನ್ಸ್ ಪದವಿ ಅಧ್ಯಯನ ಆರಂಭವಾಗಿದೆ. ಪ್ರತಿಕ್ರಿಯೆಯೂ ಚೆನ್ನಾಗಿದೆ.

ಏನಿದು ಕ್ರಿಮಿನಾಲಜಿ?

ಕ್ರಿಮಿನಾಲಜಿ ಎಂದರೆ ಸಮಾಜದಲ್ಲಿ ನಡೆಯುವ ವಿವಿಧ ರೀತಿಯ ಅಪರಾಧ ಕೃತ್ಯಗಳು, ಅವುಗಳ ನಿಯಂತ್ರಣದ ವಿಧಾನ, ಅಪರಾಧಿಗಳ ನಡವಳಿಕೆ, ಪತ್ತೆ ಕೌಶಲ ಇತ್ಯಾದಿಗಳ ವೈಜ್ಞಾನಿಕ ಅಧ್ಯಯನ. ಫೊರೆನ್ಸಿಕ್ ಸೈನ್ಸ್ (ನ್ಯಾಯವಿಜ್ಞಾನ ಅಥವಾ ವಿಧಿವಿಜ್ಞಾನ) ಎಂಬುದು ಅನ್ವಯಿಕ ವಿಜ್ಞಾನ. ಇದು ಅಪರಾಧ ಶೋಧನೆ, ವಿವಿಧ ಶಾಸ್ತ್ರೀಯ ವಿಷಯಗಳ ಸಹಾಯದಿಂದ ನಿಖರ ಮತ್ತು ವೈಜ್ಞಾನಿಕವಾಗಿ ತನಿಖೆ ನಡೆಸಲು ಅನುಕೂಲ ಮಾಡಿಕೊಡುವ ಅಧ್ಯಯನ.ಇವುಗಳಲ್ಲಿ ಅಪರಾಧಶಾಸ್ತ್ರ (ಕ್ರಿಮಿನಾಲಜಿ), ಪೊಲೀಸ್ ಸೈನ್ಸ್, ನ್ಯಾಯ ವಿಜ್ಞಾನ (ಫೊರೆನ್ಸಿಕ್ ಸೈನ್ಸ್), ಅಪರಾಧ ನ್ಯಾಯ ವ್ಯವಸ್ಥೆ, ಪೆನಾಲಜಿ, ಅಡ್ವಾನ್ಸ್ಡ್ ಕ್ರಿಮಿನಾಲಜಿ, ಫೊರೆನ್ಸಿಕ್ ಮೆಡಿಸಿನ್ ಅಂಡ್ ಟಾಕ್ಸಿಕಾಲಜಿ, ಅಪರಾಧಗಳ ಮನೋವೈಜ್ಞಾನಿಕ ಮತ್ತು ಸಾಮಾಜಿಕ ಅಧ್ಯಯನ,  ಕ್ರಿಮಿನಲ್ ಕಾನೂನು, ಮಾನವ ಹಕ್ಕು, ಸೈಬರ್ ಅಪರಾಧ, ಬೆರಳಚ್ಚು ವಿಜ್ಞಾನ, ದಾಖಲಾತಿಗಳು ಹಾಗೂ ಬರಹಗಳ ತಪಾಸಣೆ ಮುಂತಾದ ವಿಷಯಗಳಿರುತ್ತವೆ.

ಅವಕಾಶಗಳು
ಕ್ರಿಮಿನಾಲಜಿ ಪದವಿ, ಸ್ನಾತಕೋತ್ತರ ಪದವೀಧರರಿಗೆ ರಾಜ್ಯ, ರಾಷ್ಟ್ರ ಮತ್ತು ಅಂತರ‌್ರಾಷ್ಟ್ರೀಯ ಮಟ್ಟದಲ್ಲಿ ಅನೇಕ ರೀತಿಯ ಅವಕಾಶಗಳಿವೆ ಅವುಗಳನ್ನು ಬಳಸಿಕೊಳ್ಳುವ ತಂತ್ರಗಾರಿಕೆ ಅಭ್ಯರ್ಥಿಗಳಲ್ಲಿ ಮೂಡಬೇಕಿದೆ.

ಮುಖ್ಯವಾಗಿ ಈ ಪದವಿ ಪೂರೈಸಿದವರು ಪೊಲೀಸ್, ಬಂದೀಖಾನೆ, ಗುಪ್ತಚರ, ನ್ಯಾಯಾಂಗ ಇಲಾಖೆಗಳು, ಅಪರಾಧ ತನಿಖಾ ಸಂಸ್ಥೆಗಳು, ನ್ಯಾಯವಿಜ್ಞಾನ ಪ್ರಯೋಗಾಲಯ ಮತ್ತು ಶೈಕ್ಷಣಿಕ ಬೋಧನಾ ಕ್ಷೇತ್ರದಲ್ಲಿ ತಮ್ಮ ಬದುಕು ಕಂಡುಕೊಳ್ಳಬಹುದು. ಇದನ್ನು ಕಲಿತು ಖಾಸಗಿಯಾಗಿ ಭದ್ರತಾ, ಗುಪ್ತಚರ (ಸೆಕ್ಯುರಿಟಿ, ಡಿಟೆಕ್ಟಿವ್) ಸಂಸ್ಥೆಗಳನ್ನು ಸಹ ಆರಂಭಿಸಿದವರಿದ್ದಾರೆ. ಕೆಎಎಸ್, ಐಎಎಸ್ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಐಚ್ಛಿಕ ವಿಷಯವಾಗಿ ಕ್ರಿಮಿನಾಲಜಿ ತೆಗೆದುಕೊಂಡು ಅದೆಷ್ಟೋ ಅಭ್ಯರ್ಥಿಗಳು ಉತ್ತಮ ಫಲಿತಾಂಶ ಕಂಡುಕೊಂಡಿದ್ದಾರೆ.

ಪ್ರವೇಶ ವಿಧಾನ
ಎಂಎ, ಎಂಎಸ್ಸಿ (ಅಪರಾಧಶಾಸ್ತ್ರ ಮತ್ತು ನ್ಯಾಯ ವಿಜ್ಞಾನ) ಸ್ನಾತಕೋತ್ತರ ಅಧ್ಯಯನಕ್ಕೆ ಕರ್ನಾಟಕ ವಿವಿಯಲ್ಲಿ ಜೂನ್ 30 ರಿಂದಲೇ ಪ್ರವೇಶ ಪರೀಕ್ಷಾ ಅರ್ಜಿ ವಿತರಣೆ ಆರಂಭವಾಗಿದೆ. ಇದನ್ನು ಕಲಿಯಲು ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.

ಕೋರ್ಸ್ ಅವಧಿ ನಾಲ್ಕು ಸೆಮಿಸ್ಟರ್ (ಎರಡು ವರ್ಷ). ಪ್ರವೇಶ ಪರೀಕ್ಷೆ ಮತ್ತು ಪದವಿಯಲ್ಲಿ ಪಡೆದ ಅಂಕಗಳು ಹಾಗೂ ರೋಸ್ಟರ್ ಅನುಸರಿಸಿ ಆಯ್ಕೆ ಮಾಡಲಾಗುತ್ತದೆ.
ವಿವರಗಳಿಗೆ 0836-2215 282, 94484 42361.
(ಲೇಖಕರು ಅಪರಾಧಶಾಸ್ತ್ರದ ಸಹಾಯಕ ಪ್ರಾಧ್ಯಾಪಕರು)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT