ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾಯದಲ್ಲಿ ಲೈನ್‌ಮನ್ ಬದುಕು

Last Updated 18 ಜೂನ್ 2011, 8:50 IST
ಅಕ್ಷರ ಗಾತ್ರ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ಹಾಗೂ ಶಿರಸಿ ವಿಭಾಗದ ಹೆಸ್ಕಾಂ ಲೈನ್‌ಮನ್‌ಗಳ ಬದುಕು ತಂತಿ ಮೇಲಿನ ನಡಿಗೆಯಂತಾಗಿದೆ. ಜೀವ ಸುರಕ್ಷತಾ ಸಾಧನಗಳನ್ನು ಒದಗಿಸದೇ ಇರುವುದರಿಂದ ಪ್ರತಿವರ್ಷ 10ರಿಂದ 15 ಲೈನ್‌ಮನ್‌ಗಳು ಸಾವನ್ನಪ್ಪುತ್ತಿದ್ದಾರೆ.

ಮಳೆಗಾಲ ಆರಂಭವಾಗುವುದಕ್ಕೂ ಮುನ್ನ ಲೈನ್‌ಮನ್‌ಗಳಿಗೆ ಅಗತ್ಯವಾಗಿ ಬೇಕಾಗುವ ಕೈಗವಸು, ರೈನ್‌ಕೋಟ್, ಗಮ್‌ಬೂಟ್ ಹಾಗೂ ಟೂಲ್‌ಕಿಟ್‌ಗಳನ್ನು ವಿತರಣೆ ಮಾಡಬೇಕು. ಆದರೆ, ಮೂರ‌್ನಾಲ್ಕು ವರ್ಷಗಳಿಂದ ಯಾವುದನ್ನೂ ಹೆಸ್ಕಾಂ ವಿತರಣೆ ಮಾಡದೇ ಇರುವುದರಿಂದ ಎರಡೂ ವಿಭಾಗದ 300ಕ್ಕೂ ಹೆಚ್ಚು ಲೈನ್‌ಮನ್‌ಗಳು ಜೀವ ಕೈಯಲ್ಲಿ ಹಿಡಿದುಕೊಂಡೇ ಕೆಲಸಮಾಡುತ್ತಿದ್ದಾರೆ.

ಲೈನ್‌ಮನ್‌ಗಳು ಸಮವಸ್ತ್ರ ಧರಿಸದೇ ಇದ್ದರೆ ಗೈರು ಹಾಜರು ಎಂದು ದಾಖಲಿಸುವ ಹೆಸ್ಕಾಂ ಲೈನ್‌ಮನ್‌ಗಳಿಗೆ ಎರಡು ವರ್ಷದಿಂದ ಸಮವಸ್ತ್ರವನ್ನು ವಿತರಣೆ ಮಾಡಿಲ್ಲ. ಪ್ರತಿವರ್ಷ ಎರಡು ಜೊತೆ ಸಮವಸ್ತ್ರ ಕೊಡಬೇಕು ಆದರೆ, 2008-09ನೇ ಸಾಲಿನಲ್ಲಿ ಮಾತ್ರ ಲೈನ್‌ಮನ್‌ಗಳಿಗೆ ಒಂದೇ ಜೊತೆ ಸಮವಸ್ತ್ರ ವಿತರಣೆ ಮಾಡಲಾಗಿದೆ.

ಇಷ್ಟೇ ಅಲ್ಲ. ವಿದ್ಯುತ್ ಪೂರೈಕೆ ಮಾಡಲು ಟ್ರಾನ್ಸ್‌ಫಾರ್ಮರ್‌ಗೆ ಬೇಕಾಗಿರುವ ಲಗ್ಸ್, 10, 20 ಹಾಗೂ 100 ಆ್ಯಮ್ಸ ಸಾಮರ್ಥ್ಯದ ಪ್ಯೂಸ್ ವಯರ್, 99, 120 ಸ್ಕ್ವೇರ್ ಎಂ.ಎಂ. ಗಾತ್ರದ ಟ್ರಾನ್ಸ್‌ಫಾರ್ಮರ್ ಕೇಬಲ್‌ಗಳನ್ನೂ ಹೆಸ್ಕಾಂ ಪೂರೈಕೆ ಮಾಡದೇ ಇರುವುದರಿಂದ ಲೈನ್‌ಮನ್‌ಗಳ ಕರ್ತವ್ಯ ನಿರ್ವಹಣೆಗೆ ತೊಂದರೆ ಯಾಗಿದೆ. 

ಲೈನ್‌ಮನ್‌ಗಳ ಕೊರತೆ ಎರಡು ವಿಭಾಗಳಲ್ಲಿ ಇದೆ. 1200 ಲೈನ್‌ಮನ್‌ಹುದ್ದೆಗಳ ಪೈಕಿ ಕೇವಲ 300-350 ಲೈನ್‌ಮನ್‌ಗಳು ಇದ್ದಾರೆ. ಇದ್ದುದರಲ್ಲೇ ಎಲ್ಲವನ್ನು ಸರಿದೂಗಿಸಿ ಕೊಂಡು ಹೋಗ ಬೇಕೆಂದರೂ ಜೀವ ರಕ್ಷಕ ಸಲಕರಣೆಗಳನ್ನೂ ಹೆಸ್ಕಾಂ ವಿತರಣೆ ಮಾಡುತ್ತಿಲ್ಲ.

ಲೈನ್‌ಮನ್‌ಗಳಿಗೆ ಸುರಕ್ಷತಾ ಸಾಧನಗಳನ್ನು ವಿತರಿಸಬೇಕು ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಕಳೆದ ವರ್ಷ ಕಾರವಾರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ  ಮನವಿ ಸಲ್ಲಿಸಿತ್ತು. ಆದರೆ ಸಂಘದ ಬೇಡಿಕೆ ಮಾತ್ರ ಇಲ್ಲಿಯವರೆ ಈಡೇರಿಲ್ಲ.

`ಮಳೆ- ಬೀಸಿಲು, ರಾತ್ರಿ- ಹಗಲು ಎನ್ನದೆ ಕೆಲಸ ಮಾಡುವ ಲೈನ್‌ಮನ್‌ಗಳಿಗೆ ಆಗುತ್ತಿರುವ ಅನ್ಯಾಯ  ಹೇಳತೀರದು. ಅವ್ಯವಸ್ಥೆಯ ಮಧ್ಯೆಯೂ ಗ್ರಾಹಕರಿಗೆ ಹೇಗಾದರೂ ಮಾಡಿ ಸೇವೆ ನೀಡಬೇಕಾಗಿದೆ~ ಎನ್ನುತ್ತಾರೆ ಕವಿಪ್ರನಿ ನೌಕರರ ಸಂಘದ ಕಾರ್ಯದರ್ಶಿ ಆರ್.ಪಿ. ಕಿಂದಳಕರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT