ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪೂರ್ವ ಹರಿದಾಸ ಸಂಭ್ರಮ

Last Updated 9 ಜುಲೈ 2012, 19:30 IST
ಅಕ್ಷರ ಗಾತ್ರ

ವಿಪುಲ ಹಾಗೂ ವೈವಿಧ್ಯಮಯವಾದ ಹರಿದಾಸ ಸಾಹಿತ್ಯದ ಪ್ರಯೋಗ ಮತ್ತು ಪ್ರಯೋಜನಗಳು ನಾನಾ ಮುಖಿಯಾಗಿವೆ. ಸಂಶೋಧನೆಗೂ ಅಲ್ಲಿ ಬೇಕಾದಷ್ಟು ಅವಕಾಶಗಳಿವೆ. ಅದರಲ್ಲಿ ತುಂಬಿರುವ ವಸ್ತು ವೈವಿಧ್ಯ ಮಹತ್ವಪೂರ್ಣವಾದುದು. ಸಂಗೀತ ಮತ್ತು ನೃತ್ಯ ಕ್ಷೇತ್ರಗಳಲ್ಲೂ ಆ ಸಾಹಿತ್ಯದ ಬಳಕೆ ಗಮನಾರ್ಹವಾಗಿದೆ. ಕಾಲಕಾಲಕ್ಕೆ ಅದರ ಬಗೆಗೆ ಬೆಳಕನ್ನು ಚೆಲ್ಲಲಾಗುತ್ತಿದೆ.

ಮಲ್ಲೇಶ್ವರದ ಶ್ರೀಕನ್ನಿಕಾ ಪರಮೇಶ್ವರಿ ದೇವಾಲಯದ ಆವರಣದಲ್ಲಿರುವ ಆರ್.ಪಿ.ಎಸ್. ಸಭಾಂಗಣದಲ್ಲಿ ನಾದಜ್ಯೋತಿ ಶ್ರೀ ತ್ಯಾಗರಾಜ ಭಜನ ಸಭೆಯು ನಿಯಮಿತವಾಗಿ ಸಂಗೀತ ಕಾರ್ಯಕ್ರಮಗಳು ಮತ್ತು ಸಂಗೀತೋತ್ಸವಗಳನ್ನು ಏರ್ಪಡಿಸುತ್ತಿದೆ. ಅಂತಯೇ ಪ್ರತಿ ವರ್ಷದ ಆಷಾಢ (ಜೂನ್/ಜುಲೈ) ಮಾಸದಲ್ಲಿ `ಹರಿದಾಸ ಸಂಭ್ರಮ~ ಎಂಬ ಹೆಸರಿನಲ್ಲಿ ಎರಡು ದಿನಗಳ ಅಪೂರ್ವ ಕಾರ್ಯಕ್ರಮವನ್ನು ಏರ್ಪಡಿಸುತ್ತಿರುವುದು ಮಹತ್ವದ್ದಾಗಿದೆ.

ಅದರ ಶೀರ್ಷಿಕೆಯಂತೆ ಎರಡೂ ದಿನ ಪರಿಚಿತ ಮತ್ತು ಅಪರಿಚಿತ ಹರಿದಾಸರ ವ್ಯಕ್ತಿತ್ವ ಮತ್ತು ಕೃತಿತ್ವಗಳ ಬಗೆಗೆ ಚಿಂತನ-ಗಾಯನವೇ ಆ ಸಂಭ್ರಮದ ಮೂಲೋದ್ದೇಶ. ಕಳೆದ ಏಳು ವರ್ಷಗಳಲ್ಲಿ ಹಲವಾರು ಮಹಿಳಾ ಹರಿದಾಸರನ್ನೂ ಒಳಗೊಂಡಂತೆ ಅನೇಕ ಅಪರಿಚಿತ ಹರಿದಾಸರ ಕುರಿತಾಗಿ ಅಪೂರ್ವವಾದ ಮಾಹಿತಿ ಕಲೆಹಾಕಲಾಗಿದೆ.

ಜು.7 ಮತ್ತು 8ರಂದು ನಡೆದ ಎಂಟನೆಯ `ಹರಿದಾಸ ಸಂಭ್ರಮ~ವು ಮಹಾಭಾರತದ ಪರ್ವಗಳನ್ನು ಕೇಂದ್ರೀಕರಿಸಿ ನಡೆಯಿತು. ಮಹಾಭಾರತದ ಆದಿ ಪರ್ವ, ಸಭಾ ಪರ್ವ, ವನ ಪರ್ವ, ವಿರಾಟ ಪರ್ವ, ಉದ್ಯೋಗ ಪರ್ವ, ಭೀಷ್ಮ ಪರ್ವ, ಕರ್ಣ ಪರ್ವ, ಶಲ್ಯ ಪರ್ವ ಮತ್ತು ಗದಾ ಪರ್ವಗಳಲ್ಲಿ ವರ್ಣಿಸಲಾದ ವಿಷಯಗಳ ಬಗೆಗೆ ಪ್ರವಚನಗಳು ನಡೆದವು.

ಅದಕ್ಕೆ ಪೂರಕವಾಗಿ ಹೆಸರಾಂತ ಕಲಾವಿದರಿಂದ ಆ ವಿಷಯಗಳನ್ನು ಒಳಗೊಂಡ ಹರಿದಾಸ ಕೃತಿಗಳ ಗಾಯನ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದು ಸಂಗೀತ ಮತ್ತು ಸಾಹಿತ್ಯ ಪ್ರೇಮಿಗಳನ್ನು ತಣಿಸಿದವು. ಗಮಕ ವಾಚನ-ವ್ಯಾಖ್ಯಾನದ ರೂಪದಲ್ಲಿ ಎಸ್. ವಾಸುದೇವರಾವ್ ಅವರಿಂದ `ಶ್ರೀ ಕೃಷ್ಣ ಸಾರಥ್ಯ~ ಪ್ರಸಂಗದ ನಿರೂಪಣೆ ವಿಶೇಷ ಆಕರ್ಷಣೆಯಾಗಿತ್ತು.

ಶಾಸ್ತ್ರೋಕ್ತ ಗಾಯನ
ವಿಧ್ಯುಕ್ತ ಉದ್ಘಾಟನೆಯ ನಂತರ ಪ್ರಕಟಿತ ಕಲಾವಿದೆಯ ಬದಲಾಗಿ ನಾಡಿನ ಹಿರಿಯ ಗಾಯಕ ಎಸ್. ಶಂಕರ್ ಬೇರೆ ಬೇರೆ ಹರಿದಾಸರ ರಚನೆಗಳನ್ನು ಶಾಸ್ತ್ರೋಕ್ತವಾಗಿ ಹಾಡಿ ಅವುಗಳ ಆಶಯವನ್ನು ಮನಮುಟ್ಟುವಂತೆ ನಿವೇದಿಸಿದರು. ಭಾವ ವೈವಿಧ್ಯದಲ್ಲಿ ಅವರು ರಾಗ ಸೌಂದರ್ಯವನ್ನು ಧಾರಾಳವಾಗಿ ಚೆಲ್ಲಿದರು. ಯಾವುದೇ ರೀತಿಯ ಆತುರ, ಆವೇಗ, ಆವೇಶಗಳಿಲ್ಲದೆ ಹಾಡುವುದು ಶಂಕರ್ ಅವರ ವಿಶೇಷತೆ. ಅವರ ಧ್ವನಿ ಶಕ್ತಿ ಬಹು ಸುಲಭವಾಗಿ ರಸಿಕರನ್ನು ವಶಪಡಿಸಿಕೊಳ್ಳುತ್ತದೆ.

ಎನ್.ಎಸ್.ಗಣೇಶ್‌ಪ್ರಸಾದ್ (ಪಿಟೀಲು), ಜಯಚಂದ್ರರಾವ್ (ಮೃದಂಗ) ಮತ್ತು ಟಿ.ಎನ್.ರಮೇಶ್ (ಘಟ) ಅವರ ಸೌಮನಸ್ಯದ ಸಹಕಾರದ ಪ್ರಯೋಜನವನ್ನು ಸಂಪೂರ್ಣವಾಗಿ ಬಳಸಿಕೊಂಡು ಅವರ ವಿದ್ವತ್ ಪ್ರತಿಭೆ ಮಧುರ, ಲಲಿತ ಮತ್ತು ಮೋಹಕ ಮಾದರಿಯ ಪ್ರದರ್ಶನದಲ್ಲಿ ಪ್ರಕಾಶಿಸಿತು.

ಪುರಂದರದಾಸರ `ಗಜವದನ ಬೇಡುವೆ~ (ಹಂಸಧ್ವನಿ) ಕೃತಿಯನ್ನು ಲಘು ಸ್ವರ ಪ್ರಸ್ತಾರದ ಒಗ್ಗರಣೆಯನ್ನು ಒದಗಿಸಿ ರುಚಿ ವರ್ಧಿಸಿದರು. ವಲಚಿ ರಾಗವನ್ನು ಸೂಕ್ಷ್ಮವಾಗಿ ಆಲಾಪಿಸಿ `ಕರುಣಾನಿಧಿ~ಯನ್ನು ಸ್ತುತಿಸಿದರು. `ಗುರುಕರುಣ~ ಉಗಾಭೋಗದ ಮುನ್ನುಡಿಯೊಂದಿಗೆ `ಗುರುವಿನ ಗುಲಾಮನಾಗುವತನಕ~ ರಚನೆಯನ್ನು ಸಾರ್ಥಕಗೊಳಿಸಿದರು.

ಶಂಕರಾಭರಣ ರಾಗದ ಆಲಾಪನೆ ಸಂಕ್ಷಿಪ್ತವಾಗಿ ಸಾರಗರ್ಭಿತವಾಗಿತ್ತು. `ಭಜಿಸಿ ಬದುಕೆಲೋ ಮಾನವ~ದ ಭಾವಗಳನ್ನು ಸೂಕ್ತವಾಗಿ ಉದ್ದೀಪನಗೊಳಿಸಿ ಸ್ವರಗಳೊಂದಿಗೆ ಅದನ್ನು ಕಲಾತ್ಮಕಗೊಳಿಸಿದರು. `ಮನವ ನಿಲಿಸುವುದು~ (ನಾಟ್ಟಿಕುರಂಜಿ, ಉಗಾಭೋಗ ಸಹಿತ), `ಇಂದು ಎನಗೆ ಗೋವಿಂದ~ (ಭೈರವಿ) ಮುಂತಾದ ಕೃತಿಗಳ ಪ್ರತಿಪಾದನ ಕ್ರಮ ಮತ್ತು ಹೂರಣ ಸಹೃದಯರನ್ನು ಮೆಚ್ಚಿಸಿತು.

ತಮ್ಮ ಕಛೇರಿಯ ಪ್ರಧಾನ ಅಂಶವಾಗಿ `ಏನು ಧನ್ಯಳೋ ಲಕುಮಿ~ ರಚನೆಯನ್ನು ಅವರು ಆಯ್ದುಕೊಂಡಿದ್ದರು. ಅದಕ್ಕಾಗಿ ತೋಡಿ ರಾಗವನ್ನು ಸೂಕ್ಷ್ಮ ವಿವರಗಳೊಂದಿಗೆ ವಿಸ್ತರಿಸಿದರು. `ಸರ್ವ ದೋಷರಹಿತ~ ಎಂಬಲ್ಲಿ ನೆರವಲ್ ಮಾಡಿ ಅದನ್ನು ವಿದ್ವತ್ಪೂರ್ಣ ಸ್ವರವಿನ್ಯಾಸದೊಂದಿಗೆ ಅಂದಗಾಣಿಸಿದರು.

ಪ್ರಬುದ್ಧ ವೇಣು ವಾದನ
ಕರ್ನಾಟಕ ಸಂಗೀತಕ್ಕೆ ನಮ್ಮ ನಾಡಿನ ಬೆಳಕವಾಡಿ ವಂಶಸ್ಥರ ವಿಶಿಷ್ಟ ಕೊಡುಗೆಯಿದೆ. ತಮ್ಮ ಕಂಠಸಿರಿಗೆ ಪ್ರಸಿದ್ಧರಾಗಿದ್ದ ಕೀರ್ತಿಶೇಷ ಬಿ.ಎಸ್.ರಾಜಯ್ಯಂಗಾರ್ ಮತ್ತು ಗಾಯಕಿ-ದಂತಕತೆಯಾಗಿರುವ ಎಂ.ಎಸ್.ಸುಬ್ಬುಲಕ್ಷ್ಮಿ ಅವರು ಜನಪ್ರಿಯಗೊಳಿಸಿದ ಪುರಂದರದಾಸರ `ಜಗದೋದ್ಧಾರನ ಆಡಿಸಿದಳೆಶೋದಾ~ ಪದಕ್ಕೆ ಸತ್ವಯುತವಾದ ಮಟ್ಟುಗಳನ್ನು ಹಾಕಿ ಕಾಪಿ ರಾಗಕ್ಕೆ ಸಂಯೋಜಿಸಿದ ಶ್ರೇಯಸ್ಸು ಪರಿಣತ ಗಾಯಕರಾಗಿದ್ದ ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್ ಅವರದ್ದು ಎಂಬ ವಿಷಯ ಕೆಲವೇ ಮಂದಿಗೆ ಗೊತ್ತಿರುವಂತಹುದು.

ಆ ಕೀರ್ತಿಗೆ ಭಾಜನರಾಗಿರುವ ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್ ಅವರ ಪುತ್ರರೂ ತಮ್ಮ ತಂದೆಯವರ ಜಾಡನ್ನೇ ಹಿಡಿದು ಮುಂದುವರಿದು ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ಅಪಾರವಾದ ಸೇವೆ ಸಲ್ಲಿಸಿದ್ದಾರೆ. ಅವರ ಪುತ್ರರಲ್ಲಿ ಒಬ್ಬರಾದ ತೊಂಬತ್ತರ ಹರಯದ ಬೆಳಕವಾಡಿ ರಂಗಸ್ವಾಮಿ ಅಯ್ಯಂಗಾರ್ ಇಂದಿಗೂ ಆ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಗಣನೀಯವಾದುದು.

ಅವರು ಅನೇಕ ಶಿಷ್ಯರನ್ನು ರೂಪಿಸುತ್ತಿರುವುದು ಸ್ತುತ್ಯರ್ಹ. ಅವರ ಮಕ್ಕಳಾದ ಬಿ.ಆರ್.ಶ್ರೀಧರ್ ಮತ್ತು ಬಿ. ಆರ್. ಗೀತಾ ಹಾಗೆಯೇ ಅವರ ಮೊಮ್ಮಗ ಎಲ್.ವಿ.ಮುಕುಂದ ಶ್ರೇಷ್ಠ ಮಟ್ಟದ ಕರ್ನಾಟಕ ಸಂಗೀತ ಕಲಾವಿದರಾಗಿರುವುದು ಸಂತಸದ ವಿಷಯ.

ರಂಗಸ್ವಾಮಿ ಅಯ್ಯಂಗಾರ್ ತಮ್ಮ ತಂದೆಯವರ ನೆನೆಪಿನಲ್ಲಿ ಬೆಳಕವಾಡಿ ಸಂಗೀತ ಸಭೆಯನ್ನು ಆರಂಭಿಸಿ ಕಿರಿಯ ಪೀಳಿಗೆಯನ್ನು ಶಾಸ್ತ್ರೀಯ ಸಂಗೀತದ ಕಡೆಗೆ ಆಕರ್ಷಿಸಬೇಕೆಂಬ ಅಪೇಕ್ಷೆ ಇಟ್ಟುಕೊಂಡಿದ್ದರು. ಭಾನುವಾರ ನಯನ ಸಭಾಂಗಣದಲ್ಲಿ ಆ ಅಪೇಕ್ಷೆ ಈಡೇರಿತು. ಹಿರಿಯ ಕಲಾವಿದರಾದ ಡಾ.ಎನ್. ರಮಣಿ ಮತ್ತು ಟಿ.ಎ.ಎಸ್.ಮಣಿ ಸಭೆಯನ್ನು ಉದ್ಘಾಟಿಸಿದರು.

ಅದಕ್ಕೆ ಮೊದಲು ಡಾ. ಎನ್.ರಮಣಿ ಅವರ ಪ್ರಬುದ್ಧ ವೇಣುವಾದನ ನಡೆಯಿತು. ಇಳಿ ವಯಸ್ಸು ಮತ್ತು ಅನಾರೋಗ್ಯದ ಪರಿಣಾಮಗಳು ಗೋಚರಿಸಿದರೂ ಅವರ ಕಲಾ ತಪಸ್ಸಿನಿಂದ ಕಛೇರಿ ಶ್ರೀಮಂತವಾಗಿತ್ತು. ಆರಂಭದ ಮೋಹನ ವರ್ಣವನ್ನು ಅತಿ ವಿಶಿಷ್ಟವಾಗಿ ನಿರೂಪಿಸಲು ಅವರು ಪ್ರಯತ್ನಿಸಿದರು. ವರ್ಣವನ್ನು ಒಂದನೆ ಕಾಲದಿಂದ ಆರಂಭಿಸಿ ತ್ರಿಶ್ರ ಮತ್ತು ತ್ರಿಶ್ರದಲ್ಲಿ ಮೇಲ್ಕಾಲ ತ್ರಿಶ್ರಗತಿಯಲ್ಲಿ ಅದನ್ನು ಬಾಜಿಸಿದರು. ಕೊನೆಯ ಎತ್ತುಕಡೆಯಂತೂ ರೋಚಕವಾಗಿತ್ತು.
 
`ಪ್ರಣಮಾಮ್ಯಹಂ~ (ಗೌಳ) ಕೀರ್ತನೆ ಕಲ್ಪನಾಸ್ವರಗಳಿಂದ ಇಷ್ಟವಾಯಿತು. `ಮರಿವೇರೆ~ ಎರಡು ಕಾಲದ ಸ್ವರಗಳ ಅಲಂಕರಣವನ್ನು ಹೊಂದಿತ್ತು. ಕಾಪಿ ರಾಗದ ಸೌಂದರ್ಯವನ್ನು ವಿಶಾಲವಾಗಿ ಹರಡಿ ತಮ್ಮ ಅನುಭವ ಮತ್ತು ವಾದನ ಕೌಶಲ್ಯಗಳನ್ನು ಪ್ರಕಟಗೊಳಿಸಿದರು. `ಇಂತ ಸೌಖ್ಯ~ ಕೀರ್ತನೆಯನ್ನು ಸುಖಪ್ರದವಾಗಿ ನುಡಿಸಿ ಸ್ವರ ಸಂಯೋಜನೆಯ ನಂತರ ತನಿ ಆವರ್ತನಕ್ಕೆ ಎಡಮಾಡಿಕೊಟ್ಟರು.

ಎಂದಿನಂತೆ ಮಣಿ ಅವರ ನೇತೃತ್ವದಲ್ಲಿ ಲಯ ವಿನ್ಯಾಸವು ಸಂಕ್ಷಿಪ್ತವಾಗಿ, ಅಷ್ಟೇ ಸಮಗ್ರತೆಯಿಂದ ಪ್ರಶಂಸೆಗೆ ಒಳಗಾಯಿತು. ಜೆ. ಕೆ. ಶ್ರೀಧರ್ (ಪಿಟೀಲು), ಟಿ.ಎ.ಎಸ್. ಮಣಿ (ಮೃದಂಗ), ಎ.ಎಸ್.ಎನ್.ಸ್ವಾಮಿ (ಖಂಜರಿ) ಮತ್ತು ಲಕ್ಷ್ಮೀನಾರಾಯಣ (ಮೋರ್ಸಿಂಗ್) ಅವರ ಕಿರೀಟಪ್ರಾಯವಾಗಿದ್ದ ಸಹಕಾರ ರಂಜಿಸಿತು.

ಸರಸ ನಾದಾಂಜಲಿ
ಸಭಾ ಕಾರ್ಯಕ್ರಮದ ನಂತರ ರಂಗಸ್ವಾಮಿ ಅಯ್ಯಂಗಾರ್ ಅವರ ಶಿಷ್ಯರು ಶ್ರೀನಿವಾಸ ಅಯ್ಯಂಗಾರ್ ಅವರ ಕೆಲವು ಕೃತಿಗಳನ್ನು ಸಮೂಹ ಗಾಯನದಲ್ಲಿ ಪ್ರಸ್ತುತ ಪಡಿಸಿದರು. ಹೇಮವತಿ ರಾಗದ ವರ್ಣ ಲಯ ಬಿಗುವು ಮತ್ತು ವೈವಿಧ್ಯದ ಆಗರವಾಗಿತ್ತು. ತಮ್ಮ ತಂದೆಯ ಹಂಸಧ್ವನಿ ರಾಗದ `ನೀಪಾದಮೇ ಗತಿ~ ಕೃತಿಗೆ ಮಗ ರಂಗಸ್ವಾಮಿ ಅಯ್ಯಂಗಾರ್‌ರ ಚಿಟ್ಟೆಸ್ವರಗಳು ವಿಶೇಷವಾಗಿ ಗಮನಸೆಳೆದವು. 

  ಹಂಸಧ್ವನಿ ರಾಗದಲ್ಲಿ ಷಡ್ಜವನ್ನು ಬಿಟ್ಟು ಬೇರೆ ಬೇರೆ ಗತಿ ಮತ್ತು ಯತಿಗಳಲ್ಲಿದ್ದ ಆ ಚಿಟ್ಟೆಸ್ವರಗಳು ರೋಚಕವೆನಿಸಿದವು. ಅದರಂತೆಯೇ ಸರಸ್ವತಿ ರಾಗದ `ಏ ಪಾಪಮು~ವಿನ ಚಿಟ್ಟೆಸ್ವರಗಳೂ ಆಕರ್ಷಿಸಿದವು. `ಜಗದೋದ್ಧಾರನ~ ಪದದ ಗಾಯನ ಶ್ರೀನಿವಾಸಯ್ಯಂಗಾರ್ ಅವರಿಗೆ ನಾದಾಂಜಲಿಯನ್ನು ಅರ್ಪಿಸಿದಂತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT