ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪನ ನೆನಪಲ್ಲಿ ತೇಲಿದ ಚಂದ್ರಾ...

Last Updated 16 ಜನವರಿ 2011, 20:30 IST
ಅಕ್ಷರ ಗಾತ್ರ

ನ್ಯುಮೋನಿಯಾದಿಂದ ಚೇತರಿಸಿಕೊಳ್ಳುತ್ತಿದ್ದ ಚಂದ್ರಾ ಸಿ.ಕೆ. ನಾಯ್ಡು ಸಂದರ್ಶನಕ್ಕೆ ನೀಡಿದ್ದು ಕೇವಲ ಹತ್ತು ನಿಮಿಷಗಳ ಸಮಯ ಮಾತ್ರ. ಆದರೆ ನಂತರ ತಮ್ಮ ಅಪ್ಪ ಕ್ಯಾಪ್ಟನ್ ಸಿ.ಕೆ. ನಾಯ್ಡು ಅವರ ಬಗ್ಗೆ ಮಾತನಾಡುತ್ತ ತಮ್ಮ ಕಾಯಿಲೆಯನ್ನೂ ಮರೆತು ಸುಮಾರು ಒಂದು ತಾಸು ಸಂದರ್ಶನ ನೀಡಿದ್ದರು. ಕ್ರಿಕೆಟ್ ವಿಶ್ವದ ಪ್ರಪ್ರಥಮ ಮಹಿಳಾ ವೀಕ್ಷಕ ವಿವರಣೆಗಾರರಾದ ಚಂದ್ರಾ ಮೃದು ಮಾತಿನಲ್ಲಿಯೇ ಕ್ರಿಕೆಟ್ ವೈಭವ ತೆರೆದಿಟ್ಟರು.

ರಾಯಲ್ ಅಪಾರ್ಟ್‌ಮೆಂಟಿನ ಫ್ಲ್ಯಾಟ್‌ನ ದೊಡ್ಡ ಹಾಲ್‌ನ ಮೂಲೆ ಮೂಲೆಯಲ್ಲಿಯೂ ಕ್ರಿಕೆಟ್ ಸಂಸ್ಕೃತಿಯ ಅನಾವರಣ. ಭಾರತ ಟೆಸ್ಟ್ ಕ್ರಿಕೆಟ್ ತಂಡದ ಪ್ರಪ್ರಥಮ ನಾಯಕ  ಸಿ.ಕೆ. ನಾಯ್ಡು ಅವರ ಆಟದ ವೈಭವದ ಸೆಳಕುಗಳು. ಕ್ರಿಕೆಟ್ ಪ್ರೀತಿಯ ಸೊಗಡು ಮನೆಯ ತುಂಬಾ ಇತ್ತು. ಕೆಲವು ವರ್ಷಗಳ ಹಿಂದೆ ಬಿಸಿಸಿಐ ರಚಿಸಿದ  ‘ಸಿ.ಕೆ ಟು ಸಚಿನ್’ ದ ಟೀಮ್ ಆಫ್ ಮಿಲೇನಿಯಂ ಫೋಟೋ ಪ್ಲೇಟ್ ತೋರಿಸುತ್ತ ಮಾತಿಗಾರಂಭಿಸಿದರು. ಅಲ್ಲಿಯೇ ಪಕ್ಕದಲ್ಲಿದ್ದ ಚಿತ್ರದಲ್ಲಿ ಕಟ್ಟುಮಸ್ತಾದ ವ್ಯಕ್ತಿ ನಾಯ್ಡು ನೀಟಾಗಿ ಸೂಟು ಧರಿಸಿ ಇಂಗ್ಲೆಂಡ್‌ನ ಡಗ್ಲಾಸ್ ಜಾರ್ಡಿನ್ ಅವರೊಂದಿಗೆ ಇದ್ದ ಚಿತ್ರವಿತ್ತು.

1976ನೇ ಇಸ್ವಿ. ಸಮಾಜದಲ್ಲಿ ಮಹಿಳೆಯರಿಗೆ ಈಗಿನಷ್ಟು ಸ್ವಾತಂತ್ರ್ಯ ಇರದ ಸಮಯ. ಆಗಿನ ಕಾಲದಲ್ಲಿ ಇನ್ನೂ ಮಹಿಳಾ ಕ್ರಿಕೆಟ್ ತಂಡ ಇರಲಿಲ್ಲ. ಇಂದೋರಿನ ಹೋಳ್ಕರ್ ಮೈದಾನದಲ್ಲಿ ಜನ ಕಿಕ್ಕಿರಿದು ತುಂಬಿದ್ದರು. ಅಂದು ಇಂಗ್ಲೆಂಡ್ ವಿರುದ್ಧ ನಡೆಯಲಿದ್ದ ಕ್ರಿಕೆಟ್ ಪಂದ್ಯದ  ಕುರಿತು ವೀಕ್ಷಕ ವಿವರಣೆ ನೀಡಲು ಮಹಿಳೆಯೊಬ್ಬರು ಬರುತ್ತಿರುವುದೇ ಅಲ್ಲಿನ ಜನರ ಕುತೂಹಲಕ್ಕೆ  ಕಾರಣವಾಗಿತ್ತು. 

ಅಲ್ಲದೇ ಈ ಹೆಣ್ಣುಮಗಳು ಏನು ಕಾಮೆಂಟ್ರಿ ಮಾಡ್ತಾಳೆ ಎಂದು ಮೂಗು ಮುರಿದ ಹಲವು ಸಂಪ್ರದಾಯಸ್ಥರು. ಆದರೆ ಅಪ್ಪನ ಛಲದ ಗುಣ ರಕ್ತದಲ್ಲಿ ಹರಿಯುತ್ತಿತ್ತು. ಅಪ್ಪನಿಗೆ ಗೌರವ ಸಲ್ಲಿಸಲು ಇದಕ್ಕಿಂತ ಉತ್ತಮವಾದ ಮಾರ್ಗವಿಲ್ಲ ಎಂದು ಅರಿತ ಚಂದ್ರಾ ಮೈಕ್ ಮುಂದೆ ಬಂದು ಕುಳಿತಾಗ, ಪ್ರೇಕ್ಷಕರೆಲ್ಲರೂ ತಮ್ಮ ಕೈಯಲ್ಲಿದ್ದ ರೇಡಿಯೋಗಳ ಶಬ್ದವನ್ನು ಹೆಚ್ಚಿಸಿದರು.ವಾಲ್ಯೂಮ್ ಕಡಿಮೆ ಮಾಡಿ ಎಂಬ ಮನವಿಗೆ ಸ್ಪಂದಿಸಲೇ ಇಲ್ಲ. ಹೆದರುತ್ತಲೇ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ವೀಕ್ಷಕ ವಿವರಣೆ ನೀಡಲು ಆರಂಭಿಸಿದರು. 

ಮೊದಲ ದಿನ ವಿವರಣೆ ಕೊಟ್ಟ ಅವರ ಧ್ವನಿಗೆ ಮಾರುಹೋದ ಕೆಲವರು ಬಂದು ಮೆಚ್ಚುಗೆ ಸೂಚಿಸಿದರು. ಎರಡನೇ ದಿನ ಸಂಪೂರ್ಣ ಆತ್ಮವಿಶ್ವಾಸದಿಂದ ಕಾರ್ಯ ನಿರ್ವಹಿಸಿದರು. ಇದಕ್ಕೂ ಮೊದಲು ಟೆನಿಸ್‌ನಲ್ಲಿ ಒಂದೆರಡು ಬಾರಿ ಕಾಮೆಂಟ್ರಿ ಕೊಟ್ಟಿದ್ದನ್ನು ನೋಡಿದ್ದ ಆಗಿನ ಆಕಾಶವಾಣಿ ನಿಲಯ ನಿರ್ದೇಶಕರು (ಹೆಸರು ನೆನಪಿಲ್ಲ) ಬಂದು ಕ್ರಿಕೆಟ್‌ಗೆ ವೀಕ್ಷಕ ವಿವರಣೆ ನೀಡುವಂತೆ ಕೇಳಿಕೊಂಡರು.ಇಂಗ್ಲೆಂಡ್ ತಂಡದ ಟೋನಿ ಬಿಬಿಸಿಯಲ್ಲಿ ಚಂದ್ರಾ ಅವರ ಬಗ್ಗೆ ಮಾತನಾಡುತ್ತ, ಕ್ರಿಕೆಟ್ ಲೋಕದ ಪ್ರಥಮ ಮಹಿಳಾ ಕಾಮೇಂಟೇಟರ್ ಆಗಿರುವುದು ಭಾರತಕ್ಕೆ ಹೆಮ್ಮೆ ಎಂದಿದ್ದರು.  ನಂತರ ಹಲವಾರು ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಿಗೆ ವೀಕ್ಷಕ ವಿವರಣೆ ನೀಡಿದ ಚಂದ್ರಾ ಅಪ್ಪನ ಪ್ರತಿನಿಧಿಯಾಗಿ ಕ್ರಿಕೆಟ್ ನೊಂದಿಗೆ ನಂಟು ಉಳಿಸಿಕೊಂಡವರು.

ಅಪ್ಪನ ಬಗ್ಗೆ..ಸೈನ್ಯದ ಕಮಾಂಡರ್ ಆಗಿದ್ದವರು ಸಿ.ಕೆ. ನಾಯ್ಡು. 63-64ನೇ ವಯಸ್ಸಿನಲ್ಲಿಯೂ ಸಿಕ್ಸರ್ ಹೊಡೆದು ಪ್ರೇಕ್ಷಕರು ಮನರಂಜಿಸುವ ಕಲೆ ಅವರಿಗೆ ಗೊತ್ತಿತ್ತು. ತಂಡವನ್ನು ಮುನ್ನಡೆಸುವ ನಾಯಕತ್ವ ಗುಣ ಅವರಲ್ಲಿ ರಕ್ತಗತವಾಗಿತ್ತು. ಬ್ರಿಟಿಷ್ ಆಟಗಾರರ ವಿರುದ್ಧ ಸ್ಕೋರು ಮಾಡುವುದೆಂದರೆ ಅವರಿಗೆ ಅತಿ ಪ್ರೀತಿ. ಕೊನೆಯವರೆಗೂ  ಕ್ರಿಕೆಟ್ ಅನ್ನು ಆರಾಧಿಸುತ್ತಲೇ ಇದ್ದವರು ಅವರು.
ಇವತ್ತು ಅವರು ಇದ್ದಿದ್ದರೆ ಬಹುಶಃ ಸಚಿನ್ ತೆಂಡೂಲ್ಕರ್ ಮತ್ತು ಮಹೇಂದ್ರ ಸಿಂಗ್ ದೋನಿಯನ್ನು ಮೆಚ್ಚುತ್ತಿದ್ದರು.ಇಂದಿನ ನಾಯಕ ದೋನಿಯಲ್ಲಿ ನಾಯ್ಡು ಅವರಿಗಿರುವ ಕೆಲವು ಗುಣಗಳಿವೆ.  “ಕ್ರಿಕೆಟ್ ಎನ್ನುವುದು ಮನಸ್ಸಿನ ಆಟ. ಮೆದುಳಿನಲ್ಲಿ ರೂಪುಗೊಳ್ಳುವ ಯೋಜನೆಗಳನ್ನು ಮೈದಾನದಲ್ಲಿ ಅನುಷ್ಠಾನಗೊಳಿಸುವ ಶಕ್ತಿಯಿರಬೇಕು” ಎನ್ನುತ್ತಿದ್ದರು ಅಪ್ಪ. ಅಂತಹ ಚಾಕಚಕ್ಯತೆ ಮತ್ತು ತಾಳ್ಮೆ ದೋನಿಯಲ್ಲಿದೆ.  ಇದನ್ನು ನಾನು  ಒಮ್ಮೆ ದೋನಿಗೆ ಹೇಳಿದ್ದೇನೆ.

ಐಸಿಸಿಯ ಸುವರ್ಣಮಹೋತ್ಸವ ಸಮಾರಂಭಕ್ಕೆ ಲಂಡನ್‌ಗೆ ತಮ್ಮ ಸ್ವಂತ ಖರ್ಚಿನಲ್ಲಿಯೇ ಒಬ್ಬರೇ ಹೋಗಿ ಅಪ್ಪ ಶತಕ ಬಾರಿಸಿದ್ದ ಬ್ಯಾಟ್ ಅನ್ನು  ಕಾಣಿಕೆಯಾಗಿ ಕೊಟ್ಟು ಬಂದಿದ್ದನ್ನು ಹೇಳುವಾಗ ಚಂದ್ರಾ ಕಣ್ಣುಗಳಲ್ಲಿ ಹೆಮ್ಮೆಯ ಧಾರೆ ಇತ್ತು. 1926ರಲ್ಲಿ ನಾಯ್ಡು ಅವರಿಗೆ ಎಂಸಿಸಿಯು ನೀಡಿದ್ದ ಬೆಳ್ಳಿ ಬ್ಯಾಟ್ ಅನ್ನು 2004ರಲ್ಲಿ ಮುಂಬೈನ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ (ಸಿಸಿಐ) ಅಧ್ಯಕ್ಷ ರಾಜಸಿಂಗ್ ಡುಂಗರ್‌ಪುರ್ ಅವರಿಗೆ ನೀಡಿದ್ದನ್ನೂ ಅವರು ಸ್ಮರಿಸಿಕೊಂಡು ಗದ್ಗದಿತರಾದರು.

ಅಂದ ಹಾಗೆ ಚಂದ್ರಾ ಅವರು ‘ಸಿ ಕೆ ನಾಯ್ಡು: ಎ ಡಾಟರ್ ರಿಮೆಂಬರ್ಸ್‌’ ಪುಸ್ತಕವನ್ನೂ ಬರೆದಿದ್ದಾರೆ.  ತಂದೆಯ  ಬಗ್ಗೆ ಮಾತನಾಡುತ್ತಲೇ ಇದ್ದ ಅವರಿಗೆ ದಣಿವಾಗಿರಲೇ ಇಲ್ಲ. ತಮ್ಮ ಕುಟುಂಬದಲ್ಲಿ ಬಹುತೇಕ ಎಲ್ಲರೂ ಕ್ರೀಡಾಪಟುಗಳಾಗಿರುವ ಬಗ್ಗೆ ಹೆಮ್ಮೆಯಿದೆ. ಅವಿವಾಹಿತೆಯಾಗಿರುವ ಚಂದ್ರಾ ಮತ್ತು ವಿದೇಶದಲ್ಲಿರುವ ಅವರ ಸಹೋದರಿ ತಮ್ಮ ಅಪ್ಪನ ಕ್ರಿಕೆಟ್ ನೆನಪುಗಳೊಂದಿಗೆ ಬಾಳುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT