ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ರತಿಮ ಗಾಂಧಿ ಅನುಯಾಯಿಯಾಗಿದ್ದ 'ಭಾರತರತ್ನ'

Last Updated 6 ಡಿಸೆಂಬರ್ 2013, 12:19 IST
ಅಕ್ಷರ ಗಾತ್ರ

ಜೋಹಾನ್ಸ್ ಬರ್ಗ್ (ಐಎಎನ್ಎಸ್): ನೊಬೆಲ್ ಶಾಂತಿ ಪ್ರಶಸ್ತಿ ಮತ್ತು ಭಾರತ ರತ್ನ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಪಾತ್ರರಾಗಿದ್ದ ದಕ್ಷಿಣ ಆಫ್ರಿಕಾದ ಮೊದಲ ಕರಿಯ ಅಧ್ಯಕ್ಷ ನೆಲ್ಸನ್ ಮಂಡೇಲಾ ಅಪ್ರತಿಮ ಗಾಂಧಿ ಅನುಯಾಯಿಯಾಗಿದ್ದರು.

ಮೂರು ದಶಕಗಳನ್ನು ಸೆರೆಮನೆಯಲ್ಲೇ ಕಳೆದಿದ್ದ ಮಂಡೇಲಾ ಅವರು 'ಯಾವ ವೈರಿಗಳಾದ ಅಜ್ಞಾನ, ರೋಗ ರುಜಿನ, ನಿರುದ್ಯೋಗ, ಬಡತನ ಮತ್ತು ಹಿಂಸೆ ಇವುಗಳ ವಿರುದ್ಧ ಮಹಾತ್ಮ ಗಾಂಧೀಜಿಯವರು ಹೋರಾಡಿದ್ದರೋ ಈ ವೈರಿಗಳೇ ಇಂದೂ ನಮ್ಮನ್ನು ಕಾಡುತ್ತಿವೆ. ಆಫ್ರಿಕಾವನ್ನು ಮುಂದಕ್ಕೆ ಒಯ್ಯುವ ಮತ್ತು ಮೇಲಕ್ಕೆ ಎತ್ತುವ ಸಾಮರ್ಥ್ಯ ಮಹಾತ್ಮ ಗಾಂಧಿಯವರ ತತ್ವಗಳಿಗೆ ಇದೆ. ನಾವು ಇಂದು ರಾಷ್ಟ್ರವನ್ನು ಸಂಪೂರ್ಣ ಹೊಸದಾಗಿ ನಿರ್ಮಿಸುವ ಮಹತ್ವದ ಕಾರ್ಯ ಕೈಗೆತ್ತಿಕೊಳ್ಳಬೇಕಾಗಿದೆ' ಎಂದು ಹೇಳಿದ್ದರು.

1993ರಲ್ಲಿ ಪೀಟರ್ ಮಾರಿಟ್ಸ್ ಬರ್ಗ್ ನಲ್ಲಿ ಈ ಮಾತು ಹೇಳಿದ್ದ ಮಂಡೇಲಾ 'ಮಹಾತ್ಮ ಗಾಂಧಿಯವರ ಪಾಠಗಳಿಗೆ ಓಗೊಡಬೇಕಾದ ಸಂದರ್ಭ ಈಗ ಹಿಂದೆಂದಿಗಿಂತಲೂ ಹೆಚ್ಚಾಗಿದೆ ಎಂದು ಸಾರಿದ್ದರು.

1994ರಲ್ಲಿ ಅವರು ರಾಷ್ಟ್ರದ ಅಧ್ಯಕ್ಷರಾಗಿ ಆಯ್ಕೆಯಾಗಿ ದಕ್ಷಿಣ ಆಫ್ರಿಕಾದ ಮೊತ್ತ ಮೊದಲ ಕರಿಯ ಅಧ್ಯಕ್ಷರೆಂಬ ಹೆಗ್ಗಳಿಕೆಗೆ ಪಾತ್ರರಾದರು.

'ದಕ್ಷಿಣ ಆಫ್ರಿಕಾದ ಪಿತ' ಎಂದೇ ಖ್ಯಾತರಾದ ಅವರು ವರ್ಣಭೇದ ವ್ಯವಸ್ಥೆ ವಿರುದ್ಧ ನಡೆದ ಮಹಾನ್ ಚಳವಳಿಯ ನೇತಾರರಾದರು.

ದಕ್ಷಿಣ ಆಫ್ರಿಕನ್ನರಿಂದ ಪ್ರೀತಿಯಿಂದ 'ಮಡಿಬಾ' (ಕುಲ ನಾಮ) ಎಂದು ಕರೆಸಿಕೊಳ್ಳುತ್ತಿದ್ದ ಮಂಡೇಲಾ ಜನಿಸಿದ್ದು  1918ರ ಜುಲೈ 18ರಂದು. ಮಗುವಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡ ಮಂಡೇಲಾ ಬೆಳೆದದ್ದು ಜೊಂಗಿನ್ಟಾಬ ಎಂಬ  ಪಾಲಕರ ಜೊತೆಗೆ. ಓದಿದ್ದು ಖುನು ಎಂಬ ಪುಟ್ಟ ಹಳ್ಳಿಯಲ್ಲಿ. ಈ ಶಾಲೆಯಲ್ಲಿ ಇದ್ದಾಗಲೇ ಶಿಕ್ಷಕ ಮಿಂಗನೆ ಅವರು ಈ ಬಾಲಕನಿಗೆ ಶಾಲೆಯ ಸಂಪ್ರದಾಯಕ್ಕೆ ಅನುಗುಣವಾಗಿ 'ನೆಲ್ಸನ್' ಎಂಬ ಹೆಸರು ನೀಡಿದರು.

ದಕ್ಷಿಣ ಆಫ್ರಿಕಾ ವಿಶ್ವವಿದ್ಯಾಲಯದಲ್ಲಿ ಬಿಎ ಪದವಿ ಪಡೆದ ಬಳಿಕ 1941ರಲ್ಲಿ ಜೊಹಾನ್ಸ್ ಬರ್ಗ್ ಗೆ ಬಂದ ನೆಲ್ಸನ್ ಗೆ ವಾಲ್ಟೇರ್ ಸಿಸುಲು ಎಂಬ ಎಸ್ಟೇಟ್ ಏಜೆಂಟ್ ಒಬ್ಬರ ಪರಿಚಯವಾಗಿ ಅವರ ಮೂಲಕ ದಕ್ಷಿಣ ಆಫ್ರಿಕಾದ ಶ್ವೇತ ವರ್ಣೀಯ ಯಹೂದಿ ವಕೀಲ ಲಾಝರ್ ಸಿಡೆಲ್ಸ್ಸಕಿ ಪರಿಚಯವಾಯಿತು. ಲಾಝರ್ ಸಿಡೆಲ್ಸ್ಸಕಿ ಅವರೇ ಯುವ ಮಂಡೇಲಾ ಬದುಕಿಗೆ ರೂವಾಯಿಯಾದರು. 1944ರಲ್ಲಿ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ (ಎ ಎನ್ ಸಿ) ಸೇರಿದ ಮಂಡೇಲಾ ಎಎನ್ಸಿ ಯುವ ಲೀಗ್ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು.

1952ರಲ್ಲಿ ಮೊದಲ ಬಾರಿಗೆ ನಾಗರಿಕ ಅಸಹಕಾರ ಚಳವಳಿಯಲ್ಲಿ ಪಾಲ್ಗೊಂಡು ಸೆರೆಮನೆ ಸೇರಿದ ಮಂಡೇಲಾ ಮುಂದೆ ನಿರಂತರ ಹೋರಾಟಗಳಲ್ಲಿ ಪಾಲ್ಗೊಂಡು ಜೀವನದ ಮೂರು ದಶಕಗಳನ್ನು ಸೆರೆಮನೆ ವಾಸ ಅನುಭವಿಸುತ್ತಲೇ ಕಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT