ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಅಬ್ದುಲ್ ನಾಸಿರ್ ಮದನಿ ಬಿಡುಗಡೆ ಸಲ್ಲ'

ಸರ್ಕಾರಕ್ಕೆ ಪ್ರಣವಾನಂದ ಸ್ವಾಮೀಜಿ ಒತ್ತಾಯ
Last Updated 17 ಜುಲೈ 2013, 9:06 IST
ಅಕ್ಷರ ಗಾತ್ರ

ದಾವಣಗೆರೆ: ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಅಬ್ದುಲ್ ನಾಸಿರ್ ಮದನಿ ಬಿಡುಗಡೆಯನ್ನು ರಾಮರಾಜ್ಯ ನಿರ್ಮಾಣ ಪರಿಷದ್ ಖಂಡಿಸಿದೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ರಾಮರಾಜ್ಯ ನಿರ್ಮಾಣ ಪರಿಷದ್‌ನ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ರಾಣೇಬೆನ್ನೂರಿನ ಶರಣ ಬಸವೇಶ್ವರ ಮಠದ ಪೀಠಾಧಿಪತಿ ಪ್ರಣವಾನಂದ ಸ್ವಾಮೀಜಿ ಮಾತನಾಡಿ, `ಕೇರಳ ಸರ್ಕಾರ ಮದನಿ ಬಿಡುಗಡೆ ಕುರಿತು ಪರಿಶೀಲಿಸುವಂತೆ ಮನವಿ ಮಾಡಿದೆ. ಕೇರಳ ಮನವಿಗೆ ಸರ್ಕಾರ ಪೂರಕವಾಗಿ ಸ್ಪಂದಿಸಬಾರದು' ಎಂದು ಸರ್ಕಾರಕ್ಕೆ ತಾಕೀತು ಮಾಡಿದರು.

ಪರಪ್ಪನ ಅಗ್ರಹಾರದಲ್ಲಿ ಇರುವ ಮದನಿ ಅಮಾಯಕ ಜನರ ಪ್ರಾಣ ಹರಣ ಮಾಡಿದ್ದಾನೆ. ಅಲ್ಲದೇ ಹೈದರಾಬಾದ್ ಅವಳಿ ನಗರದಲ್ಲಿ ಬಾಂಬ್ ಸ್ಫೋಟ ಪ್ರಕರಣದ ರೂವಾರಿ ಉಸ್ತಾದ್ ಜತೆಗೆ ನಿಕಟ ಸಂಪರ್ಕ ಹೊಂದಿದ್ದಾನೆ. ಸುಪ್ರೀಂ ಕೋರ್ಟ್ ಕೂಡ ಈತನಿಗೆ ಜಾಮೀನು ನೀಡಲು ನಿರಾಕರಿಸಿದೆ.

ಇಂತಹ ಸಂದರ್ಭದಲ್ಲಿ ಸರ್ಕಾರ ಮದನಿ ಬಿಡುಗಡೆ ಕುರಿತು ಕೇರಳ ಸರ್ಕಾರ ನೀಡಿರುವ ಮನವಿ ಪುರಸ್ಕರಿಸಿದರೆ ರಾಮರಾಜ್ಯ ನಿರ್ಮಾಣ ಪರಿಷದ್ ವತಿಯಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ತೀವ್ರ ಹೋರಾಟ ಮಾಡುವುದಾಗಿ ಅವರು ಎಚ್ಚರಿಸಿದರು.

`ರಾಜ್ಯದಲ್ಲಿ ಟಿಪ್ಪು ವಿಶ್ವವಿದ್ಯಾಲಯ ಸ್ಥಾಪಿಸುವುದಕ್ಕೆ ಕೂಡ ಅವಕಾಶ ನೀಡುವುದಿಲ್ಲ. ಟಿಪ್ಪುಸುಲ್ತಾನ್ ರಾಜ್ಯದಲ್ಲಿನ 5 ಸಾವಿರ ಹಿಂದೂ ದೇವಾಲಯಗಳನ್ನು ಲೂಟಿ ಮಾಡಿದ್ದಾನೆ. ಮುಗ್ಧ ಹಿಂದೂಗಳನ್ನು ಇಸ್ಲಾಂ ಧರ್ಮಕ್ಕೆ ಬಲವಂತವಾಗಿ ಮತಾಂತರಗೊಳಿಸಿದ್ದಾನೆ.

ಇಂತಹ ಮತಾಂಧ, ಧರ್ಮ ದ್ರೋಹಿಯ ಹೆಸರಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ ಸರಿಯಲ್ಲ. ಕೇವಲ ಶ್ರೀರಂಗಪಟ್ಟಣ ಅಷ್ಟೇ ಅಲ್ಲ; ದೇಶದ ಬೇರ್ಲ್ಲೆಲೊ ಟಿಪ್ಪು ವಿಶ್ವದ್ಯಾಲಯ ಸ್ಥಾಪನೆಗೆ ರಾಮರಾಜ್ಯ ನಿರ್ಮಾಣ ಪರಿಷದ್ ಬಿಡುವುದಿಲ್ಲ' ಎಂದರು.

ವಿಶ್ವವಿದ್ಯಾಲಯ ಬೇಕಿದ್ದರೆ ಅದಕ್ಕೆ ರಾಷ್ಟ್ರಭಕ್ತರ, ಸ್ವಾತಂತ್ರ್ಯ ಹೋರಾಟಗಾರರ ಹೆಸರಿಡಲಿ ಅಥವಾ ಶ್ರೀರಂಗಪಟ್ಟಣ ಎಂದು ಹೆಸರಿಡಲಿ. ಒಂದು ವೇಳೆ ಟಿಪ್ಪು ಹೆಸರಿಟ್ಟಲ್ಲಿ ಮುಂದೊಂದು ದಿನ ಅದು ಭಯೋತ್ಪಾದಕರ ಕಾರ್ಖಾನೆಯಾಗುವ ಸಂಭವ ಹೆಚ್ಚು.

ಈಗಾಗಲೇ, ಬುದ್ಧಗಯಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ನಡೆಸಿರುವ ಭಯೋತ್ಪಾದಕರು ಮುಂಬೈ ನಗರಿಯನ್ನು ಗುರಿಯನ್ನಾಗಿಸಿಕೊಂಡಿದ್ದಾರೆ. ನಮ್ಮ ಸರ್ಕಾರ ಮತ್ತು ಪೊಲೀಸ್ ಇಲಾಖೆ ತಾಕತ್ತಿದ್ದರೆ ಅದನ್ನು ತಡೆಯಲಿ ಎಂದು ಸರ್ಕಾರಕ್ಕೆ ಸವಾಲು ಎಸೆದರು.

ಅಮೆರಿಕಾದಲ್ಲಿ ಬಾಂಬ್ ಸ್ಫೋಟ ನಡೆದ ಮೂರು ದಿನಗಳಲ್ಲಿ ಅಲ್ಲಿನ ಸರ್ಕಾರ ಭಯೋತ್ಪಾದಕರ ಬೆನ್ನಟ್ಟಿ ಕೊಂದು ಹಾಕಿತು. ಆದರೆ, ಭಾರತದಲ್ಲಿ ತಲೆತಲಾಂತರದಿಂದ ಬಾಂಬ್‌ಸ್ಫೋಟಕ್ಕೆ ಸಾವಿರಾರು ಅಮಾಯಕರು ಬಲಿಯಾಗುತ್ತಿದ್ದರೂ, ಸರ್ಕಾರ ಭಯೋತ್ಪಾದನೆಯನ್ನು ಹಿಮ್ಮೆಟ್ಟಿಸುವಲ್ಲಿ ವಿಫಲವಾಗುತ್ತಿದೆ.

ಈಚೆಗೆ ಗೋವುಗಳ ಮೇಲೆ ಆಸಿಡ್ ಹಾಕಿ ಕೊಲ್ಲುವಂತಹ ಹೇಯ ಕೃತ್ಯಗಳು ನಡೆಯುತ್ತಿವೆ. ಇಂಥ ಕೃತ್ಯಗಳನ್ನು ನಡೆಸಿರುವ ಕಿಡಿಗೇಡಿಗಳನ್ನು ನಮ್ಮ ಪೊಲೀಸರು ಇದುವರೆಗೂ ಬಂಧಿಸಿಲ್ಲ ಎಂದು ಆರೋಪಿಸಿದರು.

ದೇಶದಲ್ಲಿ ಭಯೋತ್ಪಾದನೆ, ಮತಾಂತರದ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಠಿಣ ಕ್ರಮ ಕೈಗೊಳ್ಳುವಂತೆ ಅವರು  ಒತ್ತಾಯಿಸಿದರು. ಐರಣಿ ಮಠದ ಗಜದಂಡ ಸ್ವಾಮೀಜಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT