ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬ್ಬಾ...! 31 ವರ್ಷ

Last Updated 18 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಆಸ್ಟ್ರೇಲಿಯಾದ ಆಟಗಾರ್ತಿ ಸಮಂತಾ ಸ್ಟಾಸರ್ ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ಚೊಚ್ಚಲ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಹಾಗೂ  ತಮ್ಮ ದೇಶಕ್ಕೆ 31 ವರ್ಷಗಳ ಬಳಿಕ ಪ್ರಶಸ್ತಿ ಗೆದ್ದು ಕೊಟ್ಟರು. ಇದಕ್ಕೆ ನೊವಾಕ್ ಜೊಕೊವಿಚ್ ಹೆಚ್ಚಿನ ಮೆರಗು ನೀಡಿದರು.

ಅಬ್ಬಾ...! ಇದು ಕನಸೋ ನನಸೋ ನನಗೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಅಚ್ಚರಿಯಿಂದ ನ್ಯೂಯಾರ್ಕ್‌ನ ಅರ್ಥರ್ ಆಯಷ್ ಕ್ರೀಡಾಂಗಣದಲ್ಲಿ ನೆರದಿದ್ದ 23 ಸಾವಿರ ಅಭಿಮಾನಿಗಳ ನಡುವೆ ಸಮಂತಾ ಸ್ಟಾಸರ್ ಭಾವುಕರಾಗಿ ಕುಣಿಯುತ್ತಿದ್ದರೆ, ದೂರದ ಆಸ್ಟ್ರೇಲಿಯಾದಲ್ಲಿ ಇಡೀ ದೇಶಕ್ಕೆ ದೇಶವೇ ಸಂಭ್ರಮದಲ್ಲಿ ಮುಳುಗಿತ್ತು. ಈ ಸಂಭ್ರಮಕ್ಕೆ ಮೂರು ದಶಕಗಳ ಇತಿಹಾಸವಿದೆ.

ಅದು 1980ರ ವಿಂಬಲ್ಡನ್ ಟೂರ್ನಿ. ಈ ಟೂರ್ನಿಯ ಸಿಂಗಲ್ಸ್‌ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆಟಗಾರ್ತಿ ಇವೊನೆ ಗೂಲಾಗೊಂಗ್ ಅಮೆರಿಕದ ಕ್ರಿಸ್ ಇವೆರ್ಟ್ ವಿರುದ್ಧ ಗೆಲುವು ಪಡೆದು ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದಿದ್ದರು.

ಇವರ ನಂತರ ಆಸ್ಟ್ರೇಲಿಯಾ ಸಿಂಗಲ್ಸ್‌ನಲ್ಲಿ ಈ ಪ್ರಶಸ್ತಿ ಪಡೆಯಲು 31 ವರ್ಷ ಕಾಯಬೇಕಾಯಿತು. ಅದಕ್ಕೆ ಕಾರಣವಾಗಿದ್ದು ಸಮಂತಾ ಸ್ಟಾಸರ್. ಸಮಂತಾ ಜಯಿಸಿದ ಚೊಚ್ಚಲ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಇದು.

1973ರಲ್ಲಿ ನ್ಯೂಯಾರ್ಕ್‌ನ ಮಾರ್ಗರೇಟ್ ಕೋರ್ಟ್‌ನಲ್ಲಿ ಆಸ್ಟ್ರೇಲಿಯಾದ ಆಟಗಾರ್ತಿಯೊಬ್ಬರು ಅಮೆರಿಕ ಓಪನ್ ಪ್ರಶಸ್ತಿ ಜಯಿಸಿದ್ದರು. ನಂತರ ಮತ್ತೆ ಸ್ಟಾಸರ್ ನ್ಯೂಯಾರ್ಕ್‌ನಲ್ಲಿಯೇ ಪ್ರಶಸ್ತಿ ಗೆದ್ದಿದ್ದಾರೆ.

130 ವರ್ಷಗಳ ಭವ್ಯ ಇತಿಹಾಸವಿರುವ ಅಮೆರಿಕ ಓಪನ್ ಟೂರ್ನಿಯಲ್ಲಿ ಸ್ಟಾಸರ್ ಸಾಧನೆ ಮೆಚ್ಚುವಂತದ್ದು. ಕಳೆದ ಸಲ ಈ ಸಾಧನೆ ಮಾಡುವ ಅವಕಾಶ ಆಕೆಗಿತ್ತು. ಫ್ರೆಂಚ್ ಓಪನ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದರು. ಆದರೆ ಪ್ರಶಸ್ತಿ ಗೆಲ್ಲಲು ಇಟಲಿಯ ಫ್ರಾನ್ಸೆಸ್ಕಾ ಶಿಯವೋನ್ ಅಡ್ಡಿಯಾದರು.

ಅಮೆರಿಕದ ಸೆರೆನಾ ವಿಲಿಯಮ್ಸ ಈ ಸಲದ ಟೂರ್ನಿಯಲ್ಲಿ ಆಡಿದ (ಫೈನಲ್ ಪಂದ್ಯ ಹೊರತು ಪಡಿಸಿ) ಯಾವ ಸೆಟ್‌ನಲ್ಲಿಯೂ ಸೋಲು ಕಂಡಿರಲಿಲ್ಲ. ಚುರುಕಿನ ಆಟವಾಡಿದ 27 ವರ್ಷದ ಆಟಗಾರ್ತಿ ಎದುರು ಜಯ ಪಡೆದು ಸ್ಟಾಸರ್ ಆಸ್ಟ್ರೇಲಿಯಾ ಜನರ ದೊಡ್ಡ ಸಂಭ್ರಮಕ್ಕೆ ಕಾರಣರಾದರು.

ಈ ವರ್ಷದಲ್ಲಿ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಜಯಿಸುತ್ತಿರುವ ಮೂರನೇ ಮೊದಲ ಆಟಗಾರ್ತಿ ಎನ್ನುವ ಕೀರ್ತಿಯನ್ನು ಸ್ಟಾಸರ್ ಪಡೆದರು.  ಸಮಂತಾ ಆಗಿನ್ನು ಆರು ವರ್ಷದ ಹುಡುಗಿ, ಹುಟ್ಟಿದ್ದು ಬ್ರಿಸ್ಬೇನ್‌ನಲ್ಲಿ.

ಅಲ್ಲಿ ಭೀಕರವಾಗಿ ಬಂದ ನೆರೆ ಹಾವಳಿಯಿಂದ ಅಲ್ಲಿನ ಕೆಲ ಕುಟುಂಬಗಳು ತತ್ತರಿಸಿದವು. ಅವುಗಳಲ್ಲಿ ಈಕೆಯ ಮನೆಯೂ ಒಂದು. ಇದರಿಂದ ಅಡಿಲೇಡ್‌ಗೆ ವಲಸೆ ಹೋದರು. ಸಾಕಷ್ಟು ಸಂಕಷ್ಟಗಳ ನಡುವೆಯೂ ಸಹೋದರನೊಂದಿಗೆ 8 ವರ್ಷವಿದ್ದಾಗಿನಿಂದ ಟೆನಿಸ್ ಆಡಲು ಶುರು ಮಾಡಿದರು.

ಹವ್ಯಾಸಕ್ಕಾಗಿ ಆಡುತ್ತಿದ್ದ ಆಟವನ್ನು ಹಾಗೆಯೇ ಮುಂದುವರಿಸಿಕೊಂಡು ಬಂದಿದ್ದರಿಂದಲೇ ಇಂದು ಗ್ರ್ಯಾನ್ ಸ್ಲಾಮ್ ಒಡತಿಯಾಗಲು ಸಾಧ್ಯವಾಗಿದೆ. 15 ವರ್ಷವಾಗಿದ್ದಾಗ ಮೊದಲ ಐಟಿಎಫ್ ಟೂರ್ನಿ ಆಡಿದರು. ಆದರೆ ಆರ್ಹತಾ ಸುತ್ತು ದಾಟಲು ಆಕೆಗೆ ಸಾಧ್ಯವಾಗಲಿಲ್ಲ.

ಆದರೂ ನಿರಾಸೆಗೊಳ್ಳಲಿಲ್ಲ. ಟೀಕೆಗೆ ಮುನಿಸಿಕೊಳ್ಳಲಿಲ್ಲ.  ಮುಂದಿನ ವರ್ಷವೇ       ಸಿಂಗಲ್ಸ್‌ನಲ್ಲಿ ಚಾಂಪಿಯನ್ ಆಗಿ ಟೀಕಾಕಾರರಿಗೆ ಉತ್ತರ ನೀಡಿದರು. ಹೀಗೆ ಹಂತ ಹಂತವಾಗಿ ಬೆಳೆದು ಬಂದ ಸ್ಟಾಸರ್ ಡಬಲ್ಸ್‌ನಲ್ಲಿ ಇದುವರೆಗೂ ಒಟ್ಟು ನಾಲ್ಕು ಸಲ ಚಾಂಪಿಯನ್ ಆಗಿದ್ದಾರೆ.

ಆದರೆ ಅವರಿಗೆ  ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಟೆನಿಸ್ ವೃತ್ತಿ ಜೀವನಕ್ಕೆ ಕಾಲಿಟ್ಟು 19 ವರ್ಷಗಳ ನಂತರ ಈ ಸಾಧನೆ ಮಾಡಲು ಸಾಧ್ಯವಾಗಿದೆ.

ಮತ್ತೊಂದು ಸಂಭ್ರಮಕ್ಕೆ ಕಾರಣರಾದ ಜೊಕೊವಿಚ್: ಇದೇ ಟೂರ್ನಿಯಲ್ಲಿ ಇನ್ನೊಂದು ಸಂಭ್ರಮಕ್ಕೆ ಕಾರಣವಾಗಿದ್ದು ಅಗ್ರ ಶ್ರೇಯಾಂಕದ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್.

ಈ ಆಟಗಾರ ಮೂರು ವರ್ಷದಲ್ಲಿ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಒಟ್ಟು ನಾಲ್ಕು ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಜಯಿಸಿದ್ದಾರೆ. ಅದರಲ್ಲೂ ಮೂರು ಬಾರಿ ಚಾಂಪಿಯನ್ ಆಗಿದ್ದು ಇದೇ ವರ್ಷ.

ಆದರೆ ಅಮೆರಿಕ ಓಪನ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಬೇಕೆಂಬ ಕನಸು ಮಾತ್ರ ನನಸಾಗಿರಲಿಲ್ಲ. ಈಗ ಆ ಕನಸು ನನಸಾಗಿದೆ. ಈ ಸಲ ಮೂರು ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದು ಜೊಕೊವಿಚ್ ಎಟಿಪಿ ಬಹುಮಾನದ ಮೊತ್ತ ಪಡೆಯುವಲ್ಲಿಯೂ ದಾಖಲೆ ಮಾಡಿದ್ದಾರೆ.

2011ರಲ್ಲಿ ಆಡಿದ ಒಟ್ಟು 66 ಪಂದ್ಯಗಳಲ್ಲಿ ಕೇವಲ 2 ಪಂದ್ಯದಲ್ಲಿ ಮಾತ್ರ ಸೋಲು ಕಂಡು, 64 ಪಂದ್ಯಗಳನ್ನು ಜಯಿಸಿ 10.6 ಮಿಲಿಯನ್ ಅಮೆರಿಕನ್ ಡಾಲರ್ ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ.

ಈ ಮೊದಲು 2010ರಲ್ಲಿ ಹೆಚ್ಚು ಟೂರ್ನಿ ಜಯಿಸಿದ್ದಕ್ಕಾಗಿ ರಫೆಲ್ ನಡಾಲ್ ಹಾಗೂ 2007ರಲ್ಲಿ ರೋಜರ್ ಫೆಡರರ್ ತಲಾ 10.2 ಮಿಲಿಯನ್ ಡಾಲರ್ ಬಹುಮಾನ ಜಯಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.

ಸಾಕಷ್ಟು ವಿಶೇಷತೆಗಳ ಹೂರಣ ಹೊಂದಿದ್ದ ಈ ಸಲದ ಅಮೆರಿಕ ಓಪನ್ ಟೂರ್ನಿಯಲ್ಲಿ ಭಾರತದ ಸ್ಪರ್ಧಿಗಳ ಪ್ರದರ್ಶನ ಕಳಪೆಯಾಗಿತ್ತು. ಮಿಶ್ರ   ಡಬಲ್ಸ್ ವಿಭಾಗದಲ್ಲಿ ಭಾರತದ ಲಿಯಾಂಡರ್ ಪೇಸ್ ಹಾಗೂ ಎಲೆನಾ ವೆಸ್ನಿನಾ ಜೋಡಿ ಸೆಮಿಫೈನಲ್ ಪ್ರವೇಶಿಸಿತ್ತು ಎನ್ನುವುದಷ್ಟೇ ಸಮಾಧಾನ.

ಈ ವಿಭಾಗದಲ್ಲಿ ಭಾರತಕ್ಕೆ ಪ್ರಶಸ್ತಿ ಜಯಿಸುವ ಅವಕಾಶವಿತ್ತು. ಆದರೆ ಗಾಯದ ಸಮಸ್ಯೆಯಿಂದ ಬಳಲಿದ ಪೇಸ್ ಸೆಮಿಫೈನಲ್ ಪಂದ್ಯದಲ್ಲಿ ವಾಕ್ ಓವರ್ ನೀಡಿದರು. ಕಳಪೆ ಪ್ರದರ್ಶನ ನೀಡುತ್ತಿರುವ ಭಾರತದ ಸಿಂಗಲ್ಸ್ `ಸ್ಟಾರ್~ ಗಳೆನಿಸಿರುವ ಸಾನಿಯಾ, ಸೋಮದೇವ್ ಈ ಟೂರ್ನಿಯಲ್ಲಿಯೂ ಠುಸ್...!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT