ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಯಾರಣ್ಯಕ್ಕೆ `ಅಗ್ನಿ ಪರೀಕ್ಷೆ'

Last Updated 15 ಫೆಬ್ರುವರಿ 2013, 8:11 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ನಾಗರಹೊಳೆ ಅಭಯಾರಣ್ಯ ಈಗ ಅಕ್ಷರಶಃ ನೀರಿನ ಬವನೆ ಅನುಭವಿಸುತ್ತಿದೆ. ಎಲ್ಲಿ ನೋಡಿದರೂ ಹಸಿವು, ಬಾಯಾರಿಕೆ. ಅಸಂಖ್ಯಾತ ವನ್ಯಜೀವಿಗಳಿಗೆ ತೊಟ್ಟಿಲಾಗಿರುವ ಈ ಅಭಯಾರಣ್ಯ ಬಿಸಿಲಿನ ಪ್ರತಾಪಕ್ಕೆ ಸಿಕ್ಕಿ ಒಣಗಿ ನಿಂತಿದೆ.
ಹಸಿರಿಗಾಗಿ, ಹನಿ ನೀರಿಗಾಗಿ ಪ್ರಾಣಿ, ಪಕ್ಷಿ ಮೂಕವೇದನೆ ಅನುಭವಿಸುತ್ತಿವೆ. ವರುಣದೇವನ ಅವಕೃಪೆ ಇಲ್ಲಿನ ಜೀವಸಂಕುಲವನ್ನೇ `ಅಗ್ನಿ ಪರೀಕ್ಷೆ' ಮಾಡುತ್ತಿದೆ.

ಹೌದು. ಗೋಣಿಕೊಪ್ಪಲು ಸುತ್ತಮುತ್ತ ನಾಗರಹೊಳೆ ರಾಜೀವ ಗಾಂಧಿ ರಾಷ್ಟ್ರೀಯ ಉದ್ಯಾನಕ್ಕೆ ಕಾಲಿಟ್ಟರೆ ನಿಮಗೆ ಇಲ್ಲಿನ ರೌದ್ರತೆ ಅನುಭವವಾಗುತ್ತದೆ. ಇಲ್ಲೆಗ ಹಸಿರಿಲ್ಲ, ಸಾಕಷ್ಟು ನೀರಿಲ್ಲ, ತಂಗಾಳಿ ಇಲ್ಲ, ಮನಸ್ಸಿಗೆ ಮುದ ನೀಡುವ ಪ್ರಾಣಿ, ಪಕ್ಷಿಗಳ ಸಂಭ್ರಮವಿಲ್ಲ. ಅರಣ್ಯದಲ್ಲಿನ ಮರಗಳೆಲ್ಲೆ ಎಲೆ ಉದುರಿ ಒಣಗಿ ನಿಂತಿವೆ. ಕಣ್ಣು ಹಾಯಿಸಿದಷ್ಟೂ ಬರೀ ರೆಂಬೆ-ಕೊಂಬೆಗಳೇ ಕಾಣುತ್ತಿವೆ. ಮರದ ಕೆಳಗಿನ ಸಣ್ಣಪುಟ್ಟ ಪೊದೆಗಳು ಕೂಡ ಒಣಗಿದ್ದು, ಪ್ರಾಣಿಗಳಿಗೆ ಹುಲ್ಲುಕಡ್ಡಿಯೂ ದೊರೆಯುತ್ತಿಲ್ಲ.

ಹಸಿರು ಹುಲ್ಲನ್ನೇ ಆಶ್ರಯಿಸಿರುವ ಅರಣ್ಯದ ಸಾವಿರಾರು ಜಿಂಕೆಗಳು ಈಗ ವಿವಿಧ ಮರದ ಬೀಜಗಳನ್ನು ತಿಂದು ಬದುಕುತ್ತಿವೆ. ಇತರ ಸಣ್ಣಪುಟ್ಟ ಪ್ರಾಣಿಗಳು ಒಣಗಿದ ಕಡ್ಡಿ, ಮರದ ತೊಗಟೆ ತಿಂದು ಕಾಲ ಕಳೆಯುತ್ತಿವೆ. ಆದರೆ ಆನೆಗಳ ಗತಿ? ಆನೆಗಳ ಪಾಡು ಹೇಳತೀರದು. ಕಾಡಿನಲ್ಲಿ ಆಹಾರ ಅರಸಿ ಎಲ್ಲೆಂದರಲ್ಲಿ ಅಲೆಯುತ್ತಿವೆ. ತೀರದ ದಾಹ, ನೀಗದ ಹಸಿವು ಇಲ್ಲಿನ ಜೀವಿಗಳನ್ನು ಸಾವಿನ ಅಂಚಿಗೆ ತಂದುನಿಲ್ಲಿಸಿದೆ.

ಅರಣ್ಯ ಇಲಾಖೆ ಬಹಳಷ್ಟು ಕಡೆ ತೇಗದ ಮರ ನೆಟ್ಟು ತೋಪು ಬೆಳೆಸಿದೆ. ತೇಗದ ಮರ ಬೇಸಿಗೆಯಲ್ಲಿ ಎಲೆ ಉದುರಿಸಿ ಒಣಗಿ ಹೋಗುತ್ತದೆ. ಬುಡದಲ್ಲಿ ಯಾವುದೇ ಗಿಡಮರ ಬೆಳೆಯದಂತೆ ಮಾಡುತ್ತದೆ. ಆನೆಗಳಿಗೆ ಪ್ರಮುಖ ಆಹಾರವಾಗಿದ್ದ ಬಿದಿರು ಕೂಡ ಒಣಗಿ ಹೋಗಿದೆ. ಕಾಡಿನಲ್ಲಿ ಒಂದೇ ಒಂದು ಆಲ, ಗೋಣಿ, ತಡಚಲು ಮರಗಳಿಲ್ಲ. ಒಣಗಿದ ಬಿದಿರು ಇದ್ದರೂ ಆನೆಗಳು ಇಷ್ಟೊಂದು ಬಳಲುತ್ತಿರಲಿಲ್ಲ ಎನ್ನುತ್ತಾರೆ ಪರಿಸರ ತಜ್ಞ ಅಮರ್.

ಅಭಯಾರಣ್ಯಕ್ಕೆ `ಅಗ್ನಿ' ಭಯ
ಕಳೆದ ವರ್ಷ ಬೇಸಿಗೆಯಲ್ಲಿ ಅರಣ್ಯಕ್ಕೆ ಪದೇ ಪದೇ ಬೆಂಕಿ ಬಿದ್ದು ಸಾವಿರಾರು ಎಕರೆ ಅರಣ್ಯ ಕರಕಲಾಗಿತ್ತು. ಅಪಾರ ವನ್ಯಜೀವಿಗಳು ದಹಿಸಿ ಹೋಗಿದ್ದವು. ಈ ಬಾರಿ ಕೂಡ ಅಂಥದ್ದೇ ಭಯ ಅಭಯಾರಣ್ಯವನ್ನು ಆವರಿಸಿದೆ.

ಕಳೆದ ಅಕ್ಟೋಬರ್‌ನಿಂದ ಈ ಭಾಗದಲ್ಲಿ ಮಳೆ ಆಗಿಲ್ಲ. ಅರಣ್ಯಕ್ಕೆ ಒಂದು ಸಣ್ಣ ಕಿಡಿ ಬಿದ್ದರೂ ಧಗಧಗಿಸಿ ಉರಿಯುವಂಥ ಸ್ಥಿತಿಗೆ ಬಂದಿದೆ ಅರಣ್ಯ. ಇಂಥ ಸಂದರ್ಭದಲ್ಲಿ ಕಾಳ್ಗಿಚ್ಚಿನಿಂದ ಇನ್ನೂ ಎರಡು ತಿಂಗಳು ಅರಣ್ಯವನ್ನು ರಕ್ಷಿಸುವುದು ಹೇಗೆ ಎಂಬ ಚಿಂತೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಕಳೆದ ಒಂದು ವಾರದಿಂದ ಮೋಡ ಕಂಡುಬಂದರೂ ಅಷ್ಟಕ್ಕೇ ಸಮಾಧಾನ ಪಟ್ಟುಕೊಳ್ಳುವಂತಿಲ್ಲ.

ಈಗ ತುಸು ಮಳೆ ಬಿದ್ದರೂ ಕಾಡು ಹಸಿರೊಡೆದು ಕಾಳ್ಗಿಚ್ಚಿನಿಂದ ಪಾರಾಗಬಹುದು. ವನ್ಯಜೀವಿಗಳ ಆಹಾರದ ಸಮಸ್ಯೆಗೂ ಪರಿಹಾರ ಸಿಗಬಹುದು. ಪ್ರಾಣಿಗಳಿಗೆ ಕುಡಿಯುವ ನೀರು ಲಭಿಸಬಹುದು. ಮಳೆಯಾಗದಿದ್ದರೆ ಬೇಸಿಗೆ ಮುಗಿಯುವವರೆಗೆ ವನ್ಯಜೀವಿಗಳಿಗೆ `ವನವಾಸ' ತಪ್ಪಿದ್ದಲ್ಲ.

`ಅಭಯಾರಣ್ಯದಲ್ಲಿ ಅಗ್ನಿ ಆಕಸ್ಮಿಕ ತಡೆಗೆ ಕ್ರಮ'
ಮೈಸೂರು: ಬಿಳಿಗಿರಿರಂಗನಬೆಟ್ಟ, ಬಂಡೀಪುರ, ನಾಗರಹೊಳೆ ಅಭಯಾ ರಣ್ಯಗಳಲ್ಲಿ ಬೇಸಿಗೆಯಲ್ಲಿ ಅಗ್ನಿ ಆಕಸ್ಮಿಕ ಸಂಭವಿಸದಂತೆ ಹಾಗೂ ಪ್ರಾಣಿಗಳಿಗೆ ತಾತ್ಕಾಲಿಕ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್ ಬುಧವಾರ ವಿಧಾನ ಪರಿಷತ್‌ನಲ್ಲಿ ತಿಳಿಸಿದ್ದಾರೆ.

ವಿಧಾನ ಪರಿಷತ್ ಸಂದೇಶ್ ನಾಗರಾಜ್ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು ಬಂಡೀಪುರ, ನಾಗರಹೊಳೆ ಮತ್ತು ಬಿಳಿಗಿರಿರಂಗನ ಬೆಟ್ಟ ಅಭಯಾರಣ್ಯ ಗಳಿಂದ ಕಬಿನಿ ಹಿನ್ನೀರಿಗೆ ಆಹಾರ ಮತ್ತು ನೀರನ್ನು ಹುಡುಕಿಕೊಂಡು ಬರುತ್ತಿರುವ ವನ್ಯಪ್ರಾಣಿಗಳು ಮತ್ತು ಮಾನವರ ನಡುವೆ ಸಂಘರ್ಷ ಉಂಟಾಗದಂತೆ ತಡೆಯುವುದು, ವನ್ಯಪ್ರಾಣಿಗಳು ಮತ್ತು ಮಾನವರ ಜೀವಹಾನಿ ಆಗದಂತೆ ನೋಡಿಕೊಳ್ಳಲು ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಕಳೆದ 15 ದಿನಗಳಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಮೂರು ಸಭೆಗಳನ್ನು ನಡೆಸಿದ್ದೇನೆ. ವನ್ಯಪ್ರಾಣಿಗಳಿಂದ ಮಾನವ ಮತ್ತು ಜಾನುವಾರು ಪ್ರಾಣಹಾನಿ ಆಗದಂತೆ ಸೋಲಾರ್ ಬೇಲಿ, ಆನೆ ಕಂದಕಗಳನ್ನು ನಿರ್ಮಿಸಿದ್ದು ಆನೆಗಳನ್ನು ಹಿಮ್ಮೆಟ್ಟಿಸುವ ಶಿಬಿರಗಳನ್ನು ನಿಯೋಜಿಸಲಾಗಿದೆ. ಅಭಯಾರಣ್ಯಗಳಲ್ಲಿ ಕಳೆದ ಬಾರಿ ಸಂಭವಿಸಿದ ಬೆಂಕಿ ಅನಾಹುತವನ್ನು ಗಮನದಲ್ಲಿ ಇಟ್ಟುಕೊಂಡು ಮುಂಬರುವ ಬೇಸಿಗೆಯಲ್ಲಿ ಇಂತಹ ಅವಘಡವನ್ನು ತಪ್ಪಿಸಲು ತಾತ್ಕಾಲಿಕ ಸಿಬ್ಬಂದಿಯನ್ನು ನೇಮಿಸಲಾಗಿದೆ. ಬಹುತೇಕ ಬೆಂಕಿ ಅನಾಹುತ ಮಾನವ ನಿರ್ಮಿತವಾಗಿದ್ದು, ಈ ಬಗ್ಗೆ ಕಾಡಂಚಿನಲ್ಲಿ ವಾಸಿಸುವ ಜನರಿಗೆ ತಿಳಿವಳಿಕೆ ನೀಡಲಾಗಿದೆ ಎಂದು ಯೋಗೇಶ್ವರ್ ವಿವರಿಸಿದ್ದಾರೆ.

ಅರಣ್ಯದಲ್ಲಿ ನೀರಿಗೆ ಸಮಸ್ಯೆ ಇಲ್ಲ
ಕೊಡಗಿನ ವ್ಯಾಪ್ತಿಯಲ್ಲಿ ಬರುವ ನಾಗರಹೊಳೆ ಅರಣ್ಯದಲ್ಲಿ ನೀರಿಗೆ ಸಮಸ್ಯೆ ಇಲ್ಲ. ಅರಣ್ಯದೊಳಗಿನ ಎಲ್ಲ ಕರೆಗಳಲ್ಲಿಯೂ ಶೇ. 80ರಷ್ಟು ನೀರಿದೆ. ಮೈಸೂರು ಜಿಲ್ಲೆ ವ್ಯಾಪ್ತಿಗೆ ಒಳಪಡುವ ಮೇಟಿಕುಪ್ಪೆ, ವೀರನಹೊಸಳ್ಳಿ ಭಾಗದಲ್ಲಿ ಮಾತ್ರ ಕೆರೆಗಳು ಒಣಗಿವೆ. ಇದೀಗ ಅರಣ್ಯ ಒಣಗಿರುವುದರಿಂದ ಪ್ರಾಣಿಗಳ ಆಹಾರಕ್ಕೆ ಯಾವುದೇ ತೊಂದರೆಯಾಗಿಲ್ಲ.

ಬೇಸಿಗೆಯಲ್ಲಿ ಗಿಡಮರಗಳು ಹೂ ಮತ್ತು ಹಣ್ಣು ಬಿಡುತ್ತವೆ. ಇವುಗಳು ಜಿಂಕೆ ಮತ್ತಿತರ ಪ್ರಾಣಿಗಳಿಗೆ ಆಹಾರ ವಾಗುತ್ತವೆ. ಜತೆಗೆ ಬೇಸಿಗೆಯಲ್ಲಿ ಯಾವುದೇ ಪಕ್ಷಿ ಮೊಟ್ಟೆ ಇಟ್ಟು ಮರಿಮಾಡುವುದಿಲ್ಲ. ಈ ವೇಳೆಯಲ್ಲಿ ಬೆಂಕಿ ಬಿದ್ದರೂ ಪಕ್ಷಿಗಳು ಬದುಕುಳಿಯುತ್ತವೆ.

ಆಯಾ ಋತುಮಾನಗಳಿಗೆ ತಕ್ಕಂತೆ ಪ್ರಾಣಿ, ಪಕ್ಷಿಗಳು ಹೊಂದಿಕೊಂಡು ಬಾಳುವುದನ್ನು ಪ್ರಕೃತಿಯೇ ಕಲಿಸಿದೆ. ಕಳೆದ ವಾರ ಬಿದ್ದ ಮಳೆಗೆ ಸ್ವಲ್ಪಮಟ್ಟಿಗೆ ಅರಣ್ಯ ಹಸಿರಾಗತೊಡಗಿದೆ. ಮತ್ತೆ ಮೂರು ದಿನಗಳಿಂದ ಮಳೆ ಮೋಡವಿದ್ದು, ಬೇಗನೆ ಮಳೆಯಾಗುವ ಆಶಾಭಾವನೆ ಮೂಡಿಸಿದೆ.
-ದೇವರಾಜು, ಮತ್ತಿಗೋಡು ವಲಯ ಅರಣ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT