ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿಮಾನಿಗಳ ಶಿವಧ್ಯಾನ

Last Updated 30 ಮೇ 2012, 19:30 IST
ಅಕ್ಷರ ಗಾತ್ರ

ಶಿವಣ್ಣ ಅಭಿನಯದ `ಶಿವ~ ಚಿತ್ರದ ಸೀಡಿಯನ್ನು ಅವರ ಅಭಿಮಾನಿ ಬಳಗವೇ ಸಮಾರಂಭ ಆಯೋಜಿಸಿ ಬಿಡುಗಡೆ ಮಾಡಿಸಿದ್ದು ವಿಶೇಷ.

ಸುಡು ಬಿಸಿಲನ್ನೂ ಲೆಕ್ಕಿಸದೆ ಗಂಟೆಗೂ ಹೆಚ್ಚು ಸಮಯ ಕಾದು ಕುಳಿತಿದ್ದ ಅಭಿಮಾನಿಗಳು ನೆಚ್ಚಿನ ನಟ ಬಂದೊಡನೆ ಬಿಸಿಲ ಝಳವನ್ನೂ ಮರೆತು ಹರ್ಷೋದ್ಗಾರ ಹಾಕಿದರು. ಗಾಂಧಿನಗರದ ಗುಬ್ಬಿ ವೀರಣ್ಣ ರಂಗಮಂದಿರದ ಎದುರು ಬುಧವಾರ  `ಶಿವ~ ಚಲನಚಿತ್ರದ ಸಿ.ಡಿ ಬಿಡುಗಡೆ ಸಮಾರಂಭಕ್ಕಾಗಿ ನೆರೆದಿದ್ದವರು ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್.

ತಮ್ಮ ನೆಚ್ಚಿನ ಶಿವಣ್ಣ ಅಭಿನಯಿಸಿದ ಚಿತ್ರ ಎಂಬ ಖುಷಿಗೆ ಅವರ ಅಭಿಮಾನಿಗಳೇ ಈ ಸಮಾರಂಭವನ್ನು ಆಯೋಜಿಸಿದ್ದು ವಿಶೇಷ.ರಂಗಮಂದಿರದ ಮುಂದಿನ ರಸ್ತೆಯಲ್ಲಿ ಬೆಳಿಗ್ಗೆ 9ರಿಂದಲೇ ಜಮಾಯಿಸಿದ್ದ ಅಭಿಮಾನಿಗಳು ಶಿವರಾಜ್‌ಕುಮಾರ್, ಗೀತಾ ಶಿವರಾಜ್‌ಕುಮಾರ್, ಪುನೀತ್‌ರಾಜ್‌ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಜೊತೆಗೆ `ಶಿವ~ ಚಿತ್ರ ತಂಡ ಬರುತ್ತಿದ್ದಂತೆ ಪಟಾಕಿ ಸಿಡಿಸಿ ಸ್ವಾಗತಿಸಿದರು. ಆಕಾಶನೀಲಿ ಬಣ್ಣದ ಟೀಶರ್ಟ್ ತೊಟ್ಟಿದ್ದ ಶಿವರಾಜ್ ಕುಮಾರ್ ಅಭಿಮಾನಿಗಳತ್ತ ಕೈ ಬೀಸುತ್ತಾ ವೇದಿಕೆಯೇರಿದರು.

ಸೀಡಿ ಬಿಡುಗಡೆ ಮಾಡಿದ ಪುನೀತ್‌ರಾಜ್‌ಕುಮಾರ್, `ಕಾರ್ಯಕ್ರಮದ ರೂವಾರಿಗಳು ನಮ್ಮ ಅಭಿಮಾನಿಗಳು. ಹಾಗಾಗಿ ಇದರ ಯಶಸ್ಸು ಅವರಿಗೆ ಸಲ್ಲಬೇಕು~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸೂರ್ಯ ಮುನಿಸಿಕೊಂಡಂತೆ ಬಿಸಿಲೇರುತ್ತಲೇ ಇತ್ತು. ಅಷ್ಟರಲ್ಲಿ ಶಿವಣ್ಣ ಮೈಕ್ ಎತ್ತಿಕೊಂಡರು. `ಅಂತೂ ಇಂತೂ `ಶಿವ~ ಆಡಿಯೊ ಕ್ಯಾಸೆಟ್ ಬಂತು. ಅಭಿಮಾನಿಗಳೇ ಈ ಕಾರ್ಯಕ್ರಮ ಆಯೋಜಿಸಿದ್ದು ಖುಷಿ ನೀಡಿದೆ~ ಎಂದವರೇ ತಕ್ಷಣ, `ತೆರೆದ ಬಯಲಿನಲ್ಲಿ ಕಾರ್ಯಕ್ರಮ ನಡೆಯುತ್ತಿರುವುದರಿಂದ ಸಾರ್ವಜನಿಕರಿಗೆ ವಿಶೇಷವಾಗಿ ಟ್ರಾಫಿಕ್‌ಗೆ ತೊಂದರೆಯಾಗಬಾರದು~ ಎಂದು ಸಮಯಪ್ರಜ್ಞೆಯ ಮಾತನಾಡಿದರು.

`ಒಂದು ವರ್ಷದಿಂದ ಚಿತ್ರೀಕರಣ ನಡೆದಿದ್ದು, ಹಾಡುಗಳು ಚೆನ್ನಾಗಿವೆ. ಅದರಲ್ಲೂ ಮೂರು ಹಾಡುಗಳು ತುಂಬಾ ಇಷ್ಟವಾಗಿವೆ. ಹರ್ಷ ಮತ್ತು ಇಮ್ರಾನ್ ಕೋರಿಯೋಗ್ರಫಿ ಮಾಡಿದ್ದು, ಮೈಲಾರಿ ಚಿತ್ರದವರೇ ವಸ್ತ್ರವಿನ್ಯಾಸ ಮಾಡಿರುವುದು ವಿಶೇಷ~ ಎಂದು ತಂಡದ ಶ್ರಮವನ್ನು ಸ್ಮರಿಸಿದರು.

`ಮೈಲಾರಿ ಚಿತ್ರದ ನಂತರ ಶಿವಣ್ಣನ ಜೊತೆ ಮಾಡಿದ ಚಿತ್ರವಿದು. ಐದು ಹಾಡುಗಳು ಚಿತ್ರದಲ್ಲಿವೆ. ಶಿವಣ್ಣ ನನಗೆ ಲಕ್ಕಿ ಸ್ಟಾರ್. ಮೈಲಾರಿ ಚಿತ್ರಕ್ಕೆ ರಾಜ್ಯ ಪ್ರಶಸ್ತಿಯೂ ಬಂತು~ ಎಂದು ಸಂಗೀತ ನಿರ್ದೇಶಕ ಗುರುಕಿರಣ್ ಹೆಮ್ಮೆಪಟ್ಟರು.

ಯೋಗರಾಜ್ ಭಟ್, ಕವಿರಾಜ್, ಮಹೇಶ್‌ದೇವ್‌ಶೆಟ್ಟಿ, ಗುರುಕಿರಣ್ ಹಾಡುಗಳನ್ನು ಬರೆದಿದ್ದು, ಮಾಲ್ಗುಡಿ ಶುಭಾ, ಗುರುಕಿರಣ್, ಪಿಚ್ಚಹಳ್ಳಿ ಶ್ರೀನಿವಾಸ್, ಚೈತ್ರಾ ಅವರು ಹಾಡಿದ್ದಾರೆ. ಎ.ಕೆ.47ಚಿತ್ರದ ನಿರ್ದೇಶನದ ನಂತರ ಓಂ ಪ್ರಕಾಶ್‌ರಾವ್ ಅವರು `ಶಿವ~ ಮೂಲಕ ಶಿವಣ್ಣನ ಜೊತೆಗೂಡಿದ್ದಾರೆ. ರಾಗಿಣಿ ದ್ವಿವೇದಿ ಚಿತ್ರದ ನಾಯಕಿ.

ಅಖಿಲ ಕರ್ನಾಟಕ ಶಿವರಾಜ್‌ಕುಮಾರ್ ಸೇನಾ ಸಮಿತಿ, ಗಂಡುಗಲಿ ಶಿವರಾಜ್‌ಕುಮಾರ್ ಅಭಿಮಾನಿಗಳ ಸಂಘ, ಶ್ರೀರಾಮ್ ಶಿವರಾಜ್‌ಕುಮಾರ್ ಅಭಿಮಾನಿಗಳ ಸಂಘ ಹಾಗೂ ಶಿವು ಅಡ್ಡಾ ಮತ್ತು ಶಿವ ಸೈನ್ಯ ಸಂಘಗಳು ಶಿವ ಚಿತ್ರದ ಧ್ವನಿಸುರಳಿ ಬಿಡುಗಡೆ ಸಮಾರಂಭ ಆಯೋಜಿಸಿದ್ದವು. ಕಾರ್ಯಕ್ರಮಕ್ಕೂ ಮುನ್ನ ಶಿವರಾಜ್‌ಕುಮಾರ್ ಮತ್ತು ಡಾ.ರಾಜ್‌ಕುಮಾರ್ ಅಭಿನಯದ ಚಿತ್ರಗೀತೆಗಳ ಗಾಯನ ನಡೆದುದು ಅಭಿಮಾನಗಳು ಬಿಸಿಲಿನ ತಾಪವನ್ನು ಮರೆಯುವಂತೆ ಮಾಡಿತ್ತು.

ಅಖಿಲ ಕರ್ನಾಟಕ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ, ನಿರ್ಮಾಪಕ ಸಾ.ರಾ. ಗೋವಿಂದು, ನಿರ್ಮಾಪಕ ಕೆ.ಪಿ. ಶ್ರೀಕಾಂತ್, ರಾಗಿಣಿ ದ್ವಿವೇದಿ, ಅಶ್ವಿನಿ ಆಡಿಯೊ ಪ್ರಸಾದ್ ಇತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT