ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮರ ಸ್ನೇಹದ ಸ್ವಗತ...

Last Updated 8 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ನನಗಿನ್ನು ನಿನ್ನೆ ಮೊನ್ನೆಯಂತೆ ನೆನಪು. ಮೊದಲ ದಿನ ಪದವಿ ವಿದ್ಯಾರ್ಥಿಗಳನ್ನೆಲ್ಲಾ ಆಡಿಟೋರಿಯಂನಲ್ಲಿ ಸೇರುವಂತೆ ಕಾಲೇಜು ನೋಟಿಸ್ ಬೋರ್ಡಿನಲ್ಲಿ ಹಾಕಿರುವುದನ್ನು ನೋಡಿ ಅದೇ  ಕಾಲೇಜ್‌ನಲ್ಲಿ ಪಿಯು ಮಾಡಿದ್ದ ನಾವೆಲ್ಲರೂ ಇದೇನಪ್ಪ ಹೊಸದು ಎಂದು ನಕ್ಕಿದ್ದು ಉಂಟು.

ಮೊದಲೇ ಆಡಿಟೋರಿಯಂಗೆ ಏಕೆ ಹೋಗಬೇಕೆಂದು ನಮ್ಮ ಗ್ಯಾಂಗ್‌ನವರೆಲ್ಲಾ ಬಾಗಿಲಲ್ಲೇ ನಿಂತು, ಹೊಸ ಹುಡುಗಿಯರು ಯಾರಾದರೂ ಕಾಲೇಜ್‌ಗೆ ಸೇರಿದ್ದಾರೆಯೇ ಎಂದು ಬಂದವರನ್ನೆಲ್ಲಾ ಗಮನಿಸುತ್ತಾ ನಿಂತಿದ್ದೆವು. ಬಂದವರೆಲ್ಲಾ ಪರಿಚಯಸ್ಥ ಮುಖಗಳೇ. ಅಲ್ಲೊಂದು       ಇಲ್ಲೊಂದು ಹೊಸ ಮುಖ ಕಾಣುತ್ತಿತ್ತು.

 ಇನ್ನೇನು ಕಾರ್ಯಕ್ರಮ ಆರಂಭವಾಗುತ್ತದೆ ಎನ್ನುವ ಹೊತ್ತಿಗೆ ನೀನು ಬಂದೆ. ನೋಡಲು ಸುರ ಸುಂದರಿಯಲ್ಲದಿದ್ದರೂ ನಿನ್ನ ನಂದಿಬಟ್ಟಲ ಕಣ್ಣಲ್ಲಿ ಇದ್ದ ಕಾಂತಿ ಎಲ್ಲರನ್ನು ನಿನ್ನತ್ತ ಸೆಳೆಯುತ್ತಿತ್ತು. ಆಡಿಟೋರಿಯಂ ಒಳಗೆ ಹೋಗಲು ಹೊರಟ ನಾವು ನಿನ್ನ ನೋಡಿ ಒಂದು ಕ್ಷಣ ಅಲ್ಲೇ ನಿಂತು ಬಿಟ್ಟೆವು. ಮುರಳಿ ಹೇಳಿದ ಈ ಹುಡುಗಿ ನಮ್ಮ ಸೆಕ್ಷನ್‌ಗೆ ಹಾಕಿದರೆ ಚೆನ್ನ, ನೋಡಲು ಸುಮಾರಾಗಿದ್ದಾಳೆ ಎಂದಾಗ, ಇವಳೇನು ಜೂಹಿ ಚಾವ್ಲಾನಾ ಎಂದು ಚೇಷ್ಟೆ ಮಾಡಿ ಕೇಶವ ನಕ್ಕಿದ್ದ.

ಸಮಾರಂಭ ಅಚ್ಚುಕಟ್ಟಾಗಿ ನಡೆಸಿಕೊಟ್ಟ ಸೋಷಿಯಾಲಜಿ ಲೆಕ್ಚರರ್ ಸೂರಿ, ಹೊಸ ಹುಡುಗಿಯರಿಗೆ ಕಿವಿಮಾತೆಂದು  ‘ಹಳೆಯ ವಿದ್ಯಾರ್ಥಿಗಳು ಒಳ್ಳೆಯ ವಿದ್ಯಾರ್ಥಿಗಳೇ. ಆದರೆ, ಸ್ವಲ್ಪ ತುಂಟ’ರೆಂದಾಗ ನಾವೆಲ್ಲರೂ ಹೋ ಎಂದು ಆಡಿಟೋರಿಯಂ ಸಿಡಿದು ಹೋಗುವಂತೆ ಕಿರುಚಿದಾಗ, ಹೊಸದಾಗಿ ಬಂದ ಹುಡುಗಿಯರೆಲ್ಲಾ ಬೆಪ್ಪಾಗಿ ನಿಂತ ನೆನಪು ಇನ್ನೂ ಮಾಸಿಲ್ಲ.

ಮಾರನೆಯ ದಿನ ನೀನು ನಮ್ಮ ಸೆಕ್ಷನ್ ಹುಡುಕುತ್ತಿರುವಾಗ ನಾವೆಲ್ಲಾ ಕಾರಿಡಾರ್‌ನಲ್ಲಿ ನಿಂತು ಯಾವ ಸೆಕ್ಷನ್‌ಗೆ ಹೋಗುತ್ತಾಳೆಂದು ನೋಡುತ್ತಾ ನಿಂತಿದ್ದೆವು, ನೀನು ನಮ್ಮ ಸೆಕ್ಷನ್‌ಗೆ ಹೋದಾಗ ಮುರಳಿ ಪ್ರಪಂಚವನ್ನೇ ಗೆದ್ದಂತೆ ಬೀಗಿದ್ದ. ಇತಿಹಾಸದ ಕ್ಲಾಸ್‌ನಲ್ಲಿ ನಿನ್ನ ಪೂರ್ವಾಪರವನ್ನು  ಲೆಕ್ಚರರ್ ವಿಚಾರಿಸುತ್ತಿದ್ದಾಗ ತಿಳಿದ ವಿಷಯ ನೀನು ಮಲೆನಾಡ ಚೆಲುವೆ ಎಂಬುದು.

ದಿನಗಳು ಉರುಳಿದವು. ನೀನು ನಮ್ಮ ಕ್ಲಾಸ್‌ನ ಬುದ್ಧಿವಂತರ ಗ್ಯಾಂಗ್‌ನ ಸದಸ್ಯೆಯಾದೆ. ತುಂಟ - ಬುದ್ಧಿವಂತ ಎರಡೂ ಗ್ಯಾಂಗ್‌ಗಳ ಕಣ್ಮಣಿಗಳಾದ ನಾವು ಎಲ್ಲವನ್ನು ಒಂದು ರೀತಿಯಲ್ಲಿ ಸರಿದೂಗಿಸಿಕೊಂಡು ಹೋಗುತ್ತಿದ್ದೆವು.

ಆಕಸ್ಮಿಕವೋ ಎಂಬಂತೆ ಬಿಎಂಎಸ್ ಲೇಡಿಸ್ ಕಾಲೇಜ್‌ನಲ್ಲಿ ನಮ್ಮ ಕಾಲೇಜು ವಿದ್ಯಾರ್ಥಿನಿಯರು ಮತ್ತು ಬಿಎಂಎಸ್ ಕಾಲೇಜು ವಿದ್ಯಾರ್ಥಿನಿಯರ ನಡುವೆ ನಡೆದ ಥ್ರೋಬಾಲ್ ಪಂದ್ಯವನ್ನು ನೋಡಲು ನಾವು ಹೋಗಿದ್ದೆವು. ಆದರೆ, ಬಿಎಂಎಸ್‌ನವರು ಹುಡುಗರನ್ನು ಒಳಗೆ ಬಿಡುವುದಿಲ್ಲ  ಎಂದಾಗ ನೀವೆಲ್ಲರೂ ನಮ್ಮ ಪರವಾಗಿ ವಾದಿಸಿ, ಅವರನ್ನು ಪಂದ್ಯ ನೋಡಲು ಬಿಡದೆ ಹೋದರೆ ಅಂತಹ ಪಂದ್ಯದಲ್ಲಿ ನಾವು ಆಡುವುದಿಲ್ಲ ಎಂದಾಗ ಅವರು ನಮ್ಮನ್ನು ಒಳಗೆ ಬಿಟಿದ್ದರು.

ಅದ್ಭುತ ಆಟವಾಡಿ ನೀವು ಗೆದ್ದಾಗ ಹುಡುಗರೆಲ್ಲಾ ಸೇರಿ ವಿದ್ಯಾರ್ಥಿ ಭವನದಲ್ಲಿ ಆಟಗಾರರಿಗೆ ಹಾಗೂ ಅವರ ಜೊತೆ ಇದ್ದವರಿಗೆಲ್ಲಾ ಮಸಾಲೆ ದೋಸೆ ಕೊಡಿಸಿ, ಸಂತಸದಿಂದ ಡಿವಿಜಿ ರಸ್ತೆಯಲ್ಲಿ ಟ್ರೋಫಿಯನ್ನು ಮೆರವಣಿಗೆ ಮಾಡಿ ತಂದು, ಕಾಲೇಜ್‌ನಲ್ಲಿ ಪ್ರಾಂಶುಪಾಲರ ಹತ್ತಿರ ಚೆನ್ನಾಗಿ ಮಂಗಳಾರತಿ ಮಾಡಿಸಿಕೊಂಡಿದ್ದೆವು.

ದಿನ ಕಳೆದಂತೆ ನಮ್ಮ ಸ್ನೇಹ ಬಲವಾಗುತ್ತಾ ಹೋಯಿತು. ನಾವು ಜೊತೆಯಲ್ಲೇ ಕಾಲೇಜಿಗೆ ಬರುವುದು ಹೋಗುವುದು ಮಾಡ್ತಾ ಇದ್ವಿ. ಕೆಲವು ಹುಡುಗರು ಚುಡಾಯಿಸಿದರೂ ಕೇರ್ ಮಾಡದೆ ನೀನು ನಮ್ಮೊಡನೆ ತಿರುಗುತ್ತಿದ್ದೆ. ಬ್ಯೂಗಲ್‌ರಾಕ್, ಗಾಂಧಿ ಬಜಾರ್, ಶಂಕರಮಠ ಎಲ್ಲೆಂದರಲ್ಲಿ ನಮ್ಮ ಜೊತೆ ಸುತ್ತುತ್ತಿದ್ದೆ.

ಪದವಿಯ ಅಂತಿಮ ವರ್ಷದ ಹೊತ್ತಿಗೆ ನಾವು ಆತ್ಮೀಯ ಸ್ನೇಹಿತರಾಗಿದ್ದೆವು. ಕೆಲವು ಹುಡುಗಿಯರು ಆಗಲೇ ಹಸೆಮಣೆ ಏರಲು ರೆಡಿಯಾಗಿದ್ದರು. ನೀನು ಮಲೆನಾಡಿಗೆ ಹೋದ ಮೇಲೆ ಬೆಂಗಳೂರು ಬಣಗುಟ್ಟುತ್ತಿದೆ ಎನಿಸುತ್ತಿತ್ತು. ಫಲಿತಾಂಶ ಬಂದ ಮೇಲೆ ನಮ್ಮ ಗ್ಯಾಂಗ್‌ನವರೆಲ್ಲಾ ಪಾಸ್ ಆಗಿದ್ದರು. ನೀನು ಅಣ್ಣನ ಮನೆ ಬಿಟ್ಟು ಊರಿಗೆ ಹೋಗಿ ಶಿವಮೊಗ್ಗದಲ್ಲಿ ಪಿಜಿ ಮಾಡುತ್ತೆನೆಂದೆ. ನಾನು ಕೂಡ ಪಿಜಿ ಮಾಡಬೇಕೆಂದು ನೀನು ಆಸೆ ಪಟ್ಟೆ. ಆದರೆ, ನಾನಾಗಲೇ ಒಬ್ಬ ಸಾಮಾನ್ಯ ಗುಮಾಸ್ತನಾಗಿ ಸರಕಾರಿ ನೌಕರನಾಗಿದ್ದನ್ನು ಹೇಳಿದಾಗ ನೀನು ಪಟ್ಟ ಸಂಕಟ ಅಷ್ಟಿಷ್ಟಲ್ಲ. ನನ್ನನ್ನು ಕಾಲೇಜು ಉಪನ್ಯಾಸಕನಾಗಿ ನೋಡಬೇಕೆಂದಿದ್ದ ನಿನ್ನ ಆಸೆಯನ್ನು ನಾನು ಕಮರಿಸಿದ್ದೆ.

ಹೇಗೆ ಮರೆಯಲ್ಲಿ ಗೆಳತಿ ನಿನ್ನ. ಇಬ್ಬರಲ್ಲಿದ್ದ ಪರಿಶುದ್ಧ ಸ್ನೇಹವನ್ನು ಜೀವನಪೂರ್ತಿ ಹಂಚಿಕೊಳ್ಳಲಾಗಲಿಲ್ಲ ಎಂಬ ಬೇಸರವಂತು ನನ್ನಲ್ಲಿದೆ. ಸರಕಾರಿ ಅಧಿಕಾರಿ ನಿನ್ನನ್ನು ವರಿಸಿದ. ಆದರೆ ಏನಂತೆ ನಮ್ಮ ನಡುವೆ ಇದ್ದ ಪವಿತ್ರ, ನಿಷ್ಕಲ್ಮಷ ಸ್ನೇಹ ಅಮರವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT