ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮಾ... ಗುಂಡಿನ ಸಹವಾಸ ಬೇಡಮ್ಮಾ...

Last Updated 8 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರಿನ ಲಲನೆಯರಲ್ಲಿ ಗುಂಡಿನ ಗೀಳಿಗೆ ಬಿದ್ದವರ ಸಂಖ್ಯೆ ಏರಿದೆ. ಅಮ್ಮನಾಗುವ ಸಂದರ್ಭದಲ್ಲಿ ಗುಂಡಿನ ಚಟ ಬಿಡದಿದ್ದರೆ ಹುಟ್ಟುವ ಕಂದ ಆಜೀವ ಪರ್ಯಂತ ನ್ಯೂನತೆಗಳೊಂದಿಗೆ ಹೆಣಗಬೇಕಾಗುತ್ತದೆ. ಅದರ ವೈದ್ಯಕೀಯ ಹೆಸರೇ ‘ಫೀಟಲ್ ಆಲ್ಕೊಹಾಲ್ ಸಿಂಡ್ರೊಮ್'.

ಬದಲಾದ ಜೀವನ ಶೈಲಿ, ಆರ್ಥಿಕ ಸಬಲತೆ, ಸ್ವತಂತ್ರ ಮನೋಭಾವ, ಬದಲಾಗುತ್ತಿರುವ ಮೌಲ್ಯಗಳು ಮುಂತಾದ ಕಾರಣಗಳಿಂದಾಗಿ ಮೆಟ್ರೊ ನಗರಗಳಲ್ಲಿ ಮದ್ಯಕ್ಕೆ ದಾಸರಾಗುತ್ತಿರುವ ಯುವ ಮಹಿಳೆಯರ ಸಾಲು ಬೆಳೆಯುತ್ತಿದೆ. ಶೇ 12 ಮಹಿಳೆಯರು ಗರ್ಭಿಣಿಯಾಗಿದ್ದಾಗಲೂ ಮದ್ಯಪಾನ ಮಾಡುತ್ತಾರೆ ಎಂದು ‘ನ್ಯಾಷನಲ್ ಇನ್ಸ್‌ಟಿಟ್ಯೂಟ್‌ ಆಫ್‌ ಆಲ್ಕೊಹಾಲ್‌ ಅಬ್ಯೂಸ್‌’ ಸಂಸ್ಥೆಯ ಸಮೀಕ್ಷೆ ವರದಿ ಮಾಡಿದೆ. ಅಂತೆಯೇ  ವಿಶೇಷ ಸಮಾರಂಭಗಳಂದು ಮದ್ಯ ಸೇವಿಸುವವರ ಸಂಖ್ಯೆ ಶೇ 30 ಬೆಳೆದು ನಿಂತಿದೆ.

ಮದ್ಯದ ಕಾರುಬಾರು
ಶಿಶುವಿನಲ್ಲಿ ನಿದ್ರಾ ಸಮಸ್ಯೆ, ಆಹಾರ ಸೇವನೆ ಹಾಗೂ ಉಸಿರಾಟದಲ್ಲಿ ತೊಂದರೆ, ಮುಖದ ಅಥವಾ ಹಲ್ಲಿನ ವಕ್ರತೆ, ಹೃದಯಕ್ಕೆ ಸಂಬಂಧಿಸಿದ ತೊಂದರೆಗಳು ಅಥವಾ ಇತರೆ ಅಂಗಗಳ ನ್ಯೂನತೆ, ವಿರೂಪ ಬೆರಳುಗಳು, ದೃಷ್ಟಿ ಅಥವಾ ಶ್ರವಣ ಸಮಸ್ಯೆ, ಮಂದಬುದ್ಧಿ, ವರ್ತನೆಯ ಸಮಸ್ಯೆಗಳು...

ಮದ್ಯವ್ಯಸನಿ ಮಹಿಳೆ ಗರ್ಭಾವಸ್ಥೆಯಲ್ಲಿಯೂ ಮದ್ಯಪಾನದಿಂದ ವಿಮುಕ್ತಳಾಗದಿದ್ದರೆ ಶಿಶುವಿಗೆ ಬರಬಹುದಾದ ಬಳುವಳಿಗಳಿವು. ಇವೆಲ್ಲ ಲಕ್ಷಣಗಳನ್ನು ಒಟ್ಟಾಗಿ ‘ಫೀಟಲ್ ಆಲ್ಕೊಹಾಲ್ ಸಿಂಡ್ರೋಮ್' ಎಂದು ಕರೆಯಲಾಗುತ್ತದೆ.

ಗರ್ಭಾವಸ್ಥೆಯಲ್ಲಿ ತಾಯಿ ಮದ್ಯ ಸೇವಿದಾಗ ಅದು ಹೊಕ್ಕಳು ಬಳ್ಳಿಯ ಮೂಲಕ ಭ್ರೂಣದ ರಕ್ತ ಸೇರುತ್ತದೆ. ಗರ್ಭಧಾರಣೆಯ ಮೊದಲ ತ್ರೈಮಾಸಿಕ ಭ್ರೂಣದ ಬೆಳವಣಿಗೆಯ ಮಹತ್ವದ ಘಟ್ಟವಾಗಿರುತ್ತದೆ. ಹೃದಯ, ಮೆದುಳು ಸೇರಿದಂತೆ ಮುಖ್ಯ ಅಂಗಗಳು ಅಭಿವೃದ್ಧಿ ಹೊಂದುವ ಸಮಯವಿದು. ಈ ಅವಧಿಯಲ್ಲಿ ತಾಯಿ ಸೇವಿಸುವ ಮದ್ಯ ಕಂದನನ್ನು ತನ್ನ ವಿಷ ವರ್ತುಲಕ್ಕೆ ಎಳೆದುಕೊಳ್ಳಲು ಆರಂಭಿಸುತ್ತದೆ.

ಇಂತಹ ಮಕ್ಕಳು ವಕ್ರ ಮುಖಚರ್ಯೆ, ವಕ್ರ ಹಲ್ಲು, ಸಣ್ಣ ತಲೆ, ಕಣ್ಣುಗಳ ನಡುವೆ ಹೆಚ್ಚಿನ ಅಂತರ, ಚಪ್ಪಟೆ ಕೆನ್ನೆ, ಚಪ್ಪಟೆ ಗದ್ದದಂತಹ ವಿಕೃತ ಮುಖದ ಲಕ್ಷಣಗಳನ್ನು ಹೊಂದುತ್ತವೆ. ತೀಕ್ಷ್ಣ ಬೆಳಕು, ಬಣ್ಣ ಹಾಗೂ ಶಬ್ಧದ ಬಗ್ಗೆ ಅತಿ ಸೂಕ್ಷ್ಮ ಸಂವೇದನೆ ಹೊಂದುತ್ತಾರೆ. ಅಲ್ಲದೇ ಮುಂದೆ ಅವರಲ್ಲಿ ವರ್ತನಾ ಸಮಸ್ಯೆಯೂ ಉಂಟಾಗುತ್ತದೆ. ಕಾಗುಣಿತ, ಅಂಕಗಣಿತದಲ್ಲಿ ಕಡಿಮೆ ಸಾಮರ್ಥ್ಯ ಹೊಂದುವ ಈ ಮಕ್ಕಳು ಶಾಲಾ ಹಂತದಿಂದಲೇ ಸೋಲುತ್ತಾ ಹೋಗುತ್ತಾರೆ. ಮುಂದೆ ಸಾಮಾಜಿಕ ಹಾಗೂ ಕೌಟುಂಬಿಕ ಬದುಕಿನಲ್ಲಿಯೂ ಸಮಸ್ಯೆ ಎದುರಿಸುತ್ತಾರೆ.

ಈ ಸಿಂಡ್ರೋಮ್‌ಗೆ ಚಿಕಿತ್ಸೆ ಇಲ್ಲ. ಮುನ್ನೆಚ್ಚರಿಕೆಯೊಂದೇ ಇದಕ್ಕಿರುವ ಮಾರ್ಗ. ಈ ನಿಟ್ಟಿನಲ್ಲಿ ಮದ್ಯವ್ಯಸನಿ ತಾಯಂದಿರನ್ನು ಮದ್ಯದ ಬಲೆಯಿಂದ ಆಚೆ ತರಲು ಪ್ರತಿ ವರ್ಷ 9ನೇ ತಿಂಗಳು, 9ನೇ ತಾರೀಕು ವಿಶ್ವದಾದ್ಯಂತ ಫೀಟಲ್ ಆಲ್ಕೊಹಾಲ್ ಸಿಂಡ್ರೋಮ್ ಬಗ್ಗೆ ಎಚ್ಚರಿಕೆಯ ದಿನವನ್ನಾಗಿ ಆಚರಿಸಲಾಗುತ್ತದೆ.
---

ಬೆಂಗಳೂರಿನಲ್ಲಿ ಮದ್ಯದ ಮೋಜಿಗೆ ಒಳಗಾಗುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದೆ. ವಿಶೇಷ ಸಂದರ್ಭಗಳಲ್ಲಂತೂ ಇದು ಸಾಮಾನ್ಯ ಟ್ರೆಂಡ್ ಆಗಿ ಮಾರ್ಪಟ್ಟಿದೆ. ಮದ್ಯ ಇಲ್ಲದಿದ್ದರೆ ಅದು ಪಾರ್ಟಿ ಅಲ್ಲ ಎನ್ನುವ ಮನೋಭಾವವಿದೆ. ಆದರೆ ತಾಯ್ತನದ ವಿಚಾರಕ್ಕೆ ಬಂದಾಗ ಮದ್ಯ ಪ್ರಮುಖವಾಗಬಾರದು.

ಗರ್ಭಾವಸ್ಥೆಯ ಯಾವುದೇ ಹಂತದಲ್ಲಿ ಯಾವುದೇ ಪ್ರಮಾಣದ ಮದ್ಯವೂ ವಿಷವೇ. ಹೀಗಾಗಿ ಯಾವ ಅವಧಿಯಲ್ಲಿ, ಎಷ್ಟು ಪ್ರಮಾಣದ ಮದ್ಯ ಸೇವನೆ ಅಪಾಯಕರವಲ್ಲ ಎಂಬ ಪ್ರಶ್ನೆ ಅಸಂಬದ್ಧ. ತಾಯ್ತನಕ್ಕೆ ಆಲೋಚಿಸುವ ಮುನ್ನ ಮೊದಲು ಮದ್ಯದಿಂದ ದೂರ ನಿಲ್ಲಬೇಕು. ಅಷ್ಟಕ್ಕೂ, ತಾಯ್ತನದ ಅನುಭೂತಿಯೇ ಒಂದು ಅದ್ಭುತ ನಶೆ. ಈ ನಶೆಯ ಮುಂದೆ ಮದ್ಯ ನೀಡುವ ಮೋಜು ಏನೇನೂ ಅಲ್ಲ. ನಿಮ್ಮ ಕಂದನಿಗಿಂತ ಮದ್ಯದ ಒಂದು ‘ಸಿಪ್’  ಮುಖ್ಯವಲ್ಲ ಅಲ್ಲವೇ?
–ಡಾ.ಶ್ವೇತಾ ಅಗರ್‌ವಾಲ್, ಶಿಶುವೈದ್ಯೆ, ಮೆಡಿಹೋಪ್ ಆಸ್ಪತ್ರೆ

ಮದ್ಯ ಸೇವನೆ ತಪ್ಪಲ್ಲ, ವಾರಕ್ಕೆ ಒಂದೆರಡು ಡ್ರಿಂಕ್ ತೆಗೆದುಕೊಂಡರೆ ತೊಂದರೆ ಇಲ್ಲ ಎಂಬ ನಂಬಿಕೆ ಇದೆ. ಬೆಂಗಳೂರಿನಲ್ಲೇ ಈ ಟ್ರೆಂಡ್ ಹೆಚ್ಚುತ್ತಿದ್ದು, ಮಧ್ಯಮ ವರ್ಗದ ಮಹಿಳೆಯರು ಧಾರಾಳವಾಗಿ ಮದ್ಯ ಸೇವಿಸುತ್ತಿದ್ದಾರೆ. ಎಷ್ಟೋ ಮಹಿಳೆಯರಿಗೆ ಗರ್ಭಧಾರಣೆಯ ಸಂದರ್ಭದಲ್ಲಿ ಮದ್ಯ ಸೇವಿಸುವುದರಿಂದ ಮುಂದೆ ಇಷ್ಟು ದೊಡ್ಡ ಮಟ್ಟದ ಬೆಲೆ ತೆರಬೇಕಾಗುತ್ತದೆ ಎಂಬುದು ತಿಳಿದಿರುವುದಿಲ್ಲ. ಇಂತಹ ನಂಬಿಕೆಯೇ ಈ ಸಿಂಡ್ರೋಮ್ ಹೆಚ್ಚಲು ಕಾರಣ.
–ಡಾ.ಕಾಮಿನಿ ರಾವ್,  ಸ್ತ್ರೀರೋಗ ತಜ್ಞೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT