ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಮನೆ ಮೈದಾನದಲ್ಲಿ ಪುಸ್ತಕ ಪ್ರಪಂಚ

Last Updated 2 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಹಣ ತೆಗೆದುಕೊಳ್ಳುವುದು ಮಾತ್ರವೇ ಭ್ರಷ್ಟಾಚಾರವಲ್ಲ. ವಿದ್ಯಾರ್ಥಿಗಳಿಗೆ ಬೋಧಕರು ಸರಿಯಾಗಿ ಪಾಠ ಮಾಡದಿರುವುದು ಮತ್ತು ಬೋಧನೆಗೆ ಸಂಬಂಧಪಟ್ಟ ಪುಸ್ತಕಗಳನ್ನು ಓದದಿರುವುದೂ ಒಂದು ರೀತಿಯ ಭ್ರಷ್ಟಾಚಾರವೇ~ ಎಂದು ಹಿರಿಯ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ ನುಡಿದರು.

ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಇಂಡ್ಯಾ ಕಾಮಿಕ್ಸ್ ಜಂಟಿಯಾಗಿ ನಗರದ ಅರಮನೆ ಮೈದಾನದಲ್ಲಿ ಶುಕ್ರವಾರದಿಂದ 10 ದಿನಗಳವರೆಗೆ ಏರ್ಪಡಿಸಿದ `ಪುಸ್ತಕ ಪ್ರಪಂಚ~ ಪುಸ್ತಕ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

`ಪ್ರಾಧ್ಯಾಪಕರಲ್ಲಿ ಓದುವ ಅಭ್ಯಾಸ ಕಡಿಮೆಯಾಗುತ್ತಿದೆ. ಆದರೆ ಸಂಬಳ ಹೆಚ್ಚುತ್ತಿದೆ. ಗ್ರಂಥಾಲಯಗಳಿಗೆ ನಿತ್ಯ ಹೋಗದ ಪ್ರಾಧ್ಯಾಪಕರ ವೇತನ ಹೆಚ್ಚಳವನ್ನು ತಡೆಹಿಡಿಯಬೇಕು~ ಎಂದು ಸಲಹೆ ನೀಡಿದರು.

`ಹಿಂದೆ ಹಲವು ರಾಜಕಾರಣಿಗಳು ರಾಜಕೀಯ ಕಾರಣಕ್ಕಾಗಿ ಜೈಲಿಗೆ ಹೋಗುತ್ತಿದ್ದರು. ಹಾಗೆ ಹೋಗುವವರ ಘನತೆಯೂ ಹೆಚ್ಚುತ್ತಿತ್ತು. ಆದರೆ ಇದೀಗ ಭ್ರಷ್ಟಾಚಾರದ ಆರೋಪದ ಮೇಲೆ ರಾಜಕಾರಣಿಗಳು ಜೈಲು ಸೇರುತ್ತಿದ್ದಾರೆ~ ಎಂದು ವ್ಯಂಗ್ಯವಾಡಿದರು.

ಹಿರಿಯ ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು ಮಾತನಾಡಿ, `1947ಕ್ಕೂ ಮೊದಲು ಕನ್ನಡದಲ್ಲಿ ಕೇವಲ 100ರಿಂದ 200 ಪುಸ್ತಕಗಳು ಪ್ರಕಟವಾಗುತ್ತಿದ್ದವು. ಆದರೆ ಈಗ ಪ್ರತಿವರ್ಷ 4 ಸಾವಿರ ಪುಸ್ತಕಗಳು ಪ್ರಕಟವಾಗುತ್ತಿವೆ. ಪುಸ್ತಕಗಳ ಬೆಲೆ ಹೆಚ್ಚಳವಾಗಿದ್ದರೂ ಓದುವ ಸಂಸ್ಕೃತಿ ಕಡಿಮೆಯಾಗಿಲ್ಲ. ನಗರ ಪ್ರದೇಶಗಳಲ್ಲದೇ ಗ್ರಾಮೀಣ ಪ್ರದೇಶದವರೂ ಪುಸ್ತ ಓದುವ ಸಂಸ್ಕೃತಿಯನ್ನು ರೂಢಿಸಿಕೊಂಡಿದ್ದಾರೆ~ ಎಂದು ಹೇಳಿದರು.

ಸಚಿವ ಡಾ.ವಿ.ಎಸ್.ಆಚಾರ್ಯ ಮಾತನಾಡಿ, `ವಿಶ್ವವಿದ್ಯಾಲಯವೊಂದು 250 ಮಾರಾಟ ಮಳಿಗೆಗಳನ್ನು ಹೊಂದಿದ ಪುಸ್ತಕ ಪ್ರದರ್ಶನವನ್ನು ಏರ್ಪಡಿಸಿರುವುದು ಶ್ಲಾಘನೀಯ. ಇತರ ವಿ.ವಿ.ಗಳೂ ಇಂಥ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ಪುಸ್ತಕ ಪ್ರಕಟಿಸಲು ಅಸಾಧ್ಯವಾದ ಲೇಖಕರನ್ನು ಪ್ರೋತ್ಸಾಹಿಸಲು ಕನ್ನಡ ಪುಸ್ತಕ ಪ್ರಾಧಿಕಾರದ ಮೂಲಕ ಹಲವಾರು ಪ್ರೋತ್ಸಾಹಕ ಕ್ರಮಗಳನ್ನು ಕೈಗೊಂಡಿದೆ~ ಎಂದರು.

ಬೆಂಗಳೂರು ವಿ.ವಿ.ಕುಲಪತಿ ಡಾ.ಎನ್.ಪ್ರಭುದೇವ್, `ಈ ಮೇಳದಲ್ಲಿ ವಿ.ವಿ.ವ್ಯಾಪ್ತಿಯ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಲಿ ಎಂಬ ಉದ್ದೇಶದಿಂದ ದಿನಾಲು 60 ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಪ್ರಾಂಶುಪಾಲರು ಈ ಮೇಳದಲ್ಲಿ ಭಾಗವಹಿಸಬೇಕು ಎಂಬ ಸೂಚಿಸಲಾಗಿದೆ. 10 ದಿನಗಳಲ್ಲಿ 600 ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸುವಂತಾಗುತ್ತದೆ. ಪುಸ್ತಕ ಕೊಳ್ಳುವ ಕಾಲೇಜುಗಳಿಗೆ ರಿಯಾಯಿತಿಯನ್ನೂ ನೀಡಲಾಗುತ್ತಿದೆ. ವಿ.ವಿ.ಗ್ರಂಥಾಲಯಕ್ಕೂ 1.20 ಕೋಟಿ ಮೌಲ್ಯದ ಪುಸ್ತಕ ಖರೀದಿಗೆ ಪುಸ್ತಕಗಳನ್ನು ಇದೇ ಮೇಳದಲ್ಲಿ ಗುರುತಿಸಲಾಗುವುದು~ ಎಂದು ಹೇಳಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ, ಬೆಂಗಳೂರು ವಿ.ವಿ. ಕುಲಸಚಿವ ಡಾ.ಆರ್.ಎಂ.ರಂಗನಾಥ್, ಮೌಲ್ಯಮಾಪನ ಕುಲಸಚಿವ ಪ್ರೊ.ಟಿ.ಆರ್.ಸುಬ್ರಹ್ಮಣ್ಯ, ಗ್ರಂಥಾಲಯಾಧಿಕಾರಿ ಡಾ.ಪಿ.ವಿ.ಕೊಣ್ಣೂರ, ಇಂಡ್ಯಾ ಕಾಮಿಕ್ಸ್‌ನ ಮುಖ್ಯಸ್ಥ ರಘುರಾಮ್ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT