ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಸುಗೆ ರಾಯಲ್ ಸೆಲ್ಯೂಟ್

Last Updated 7 ಜೂನ್ 2011, 8:30 IST
ಅಕ್ಷರ ಗಾತ್ರ

ಮೈಸೂರು: ಸಂಸದ ಅಡಗೂರು ಎಚ್.ವಿಶ್ವನಾಥ್ ತಮ್ಮ ರಾಜಕೀಯ ಗುರು ದಿವಂಗತ ಡಿ.ದೇವರಾಜ ಅರಸು ಅವರಿಗೆ `ರಾಯಲ್ ಸೆಲ್ಯೂಟ್~ ಅರ್ಪಿಸಿದರು. ನಂತರದಲ್ಲಿ ಹಿರಿಯ ರಾಜಕಾರಣಿ ಹಾಗೂ ಸಂಸದ ಡಿ.ಬಿ.ಚಂದ್ರೇಗೌಡ ಗೆಳೆಯ ಎಚ್.ವಿಶ್ವನಾಥ್‌ಗೆ `ಸೆಲ್ಯೂಟ್~ ಹೇಳಿದರು. ಇವರ ನಂತರ ಮಾತನಾಡಿದ ಮಾಜಿ ಸ್ಪೀಕರ್ ರಮೇಶ್‌ಕುಮಾರ್, ದೇವರಾಜ ಅರಸು ಹಾಗೂ ವಿಭಿನ್ನವಾಗಿ ಕಾರ್ಯಕ್ರಮ ಆಯೋಜಿಸಿದ್ದ ಎಚ್.ವಿಶ್ವನಾಥ್‌ಗೆ `ಡಬ್ಬಲ್ ರಾಯಲ್ ಸೆಲ್ಯೂಟ್~ ಗೌರವ ಸಂದಾಯ ಮಾಡಿದರು.

ಮೈಸೂರು ವಿಶ್ವವಿದ್ಯಾನಿಲಯದ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಸೋಮವಾರ ನಡೆದ `ಸಂಸದರ ಅಂಗಳದಲ್ಲಿ ಅರಸು ನೆನಪು~ ಹೊಸ ಬಗೆಯ ವಿಚಾರಗೋಷ್ಠಿ ತುಂಬ ರಾಯಲ್ ಸೆಲ್ಯೂಟ್, ಸೆಲ್ಯೂಟ್ ಪದಗಳು ರಿಂಗಣಿಸಿದವು.

`ದೇವರಾಜ ಅರಸು ಎಂದಿಗೂ ಓಟ್ ಬ್ಯಾಂಕ್, ಜಾತಿ, ಧರ್ಮದ ಹೆಸರಲ್ಲಿ ತಾರತಮ್ಯ ಮಾಡಲಿಲ್ಲ. ಜಾತಿ ಆಧಾರದ ಮೇಲೆ ಕಾರ್ಯಕ್ರಮಗಳನ್ನು ಜಾರಿಗೆ ತರಲಿಲ್ಲ. ಈಗ ಜಾತಿ ನಾಯಕರು ಬೆಳೆಯುತ್ತಿದ್ದಾರೆ.

ಲಿಂಗಾಯತ, ಒಕ್ಕಲಿಗ, ಕುರುಬ- ಹೀಗೆ ಜಾತಿಯ ನಾಯಕರಾಗಿ ಸಂಕುಚಿತರಾಗುತ್ತಿದ್ದಾರೆ. ಸೂಕ್ಷ್ಮ ಜಾತಿಗಳಾದ ಕುಂಬಾರ, ಉಪ್ಪಾರ, ನೊಣಬ, ನೇಕಾರ, ಗೊಲ್ಲರನ್ನು ತಮ್ಮಂದಿಗೆ ಕರೆದುಕೊಂಡು ಹೋಗುವವರು ಇಲ್ಲವಾಗಿದ್ದಾರೆ. 12 ನೇ ಶತಮಾನದ ಬಸವಣ್ಣ, 15 ನೇ ಶತಮಾನದ ವಿಜಯನಗರದ ಅರಸರು, ಮೈಸೂರಿನ ಯದುವಂಶಸ್ಥರು, ಕೆಂಗಲ್ ಹನುಮಂತಯ್ಯ, ಎಸ್.ನಿಜಲಿಂಗಪ್ಪ, ಡಿ.ದೇವರಾಜ ಅರಸು, ರಾಮಕೃಷ್ಣ ಹೆಗಡೆ ರಾಜ್ಯದ ಅಭಿವೃದ್ಧಿಗಾಗಿ ದುಡಿದಿದ್ದಾರೆ. ಆದರೆ ಈಗ ನಾವು ನಮ್ಮತನವನ್ನು ಕಳೆದುಕೊಂಡಿದ್ದೇವೆ~ ಎಂದು ಸಂಸದ ಎಚ್.ವಿಶ್ವನಾಥ್ ಬೇಸರ ವ್ಯಕ್ತಪಡಿಸಿದರು.

`ಕಾಂಗ್ರೆಸ್‌ನಲ್ಲಿ ರಾಜಕೀಯ ತೀಟೆಗಾಗಿ ಅರಸುವನ್ನು ಮರೆತರವರೇ ಹೆಚ್ಚು. ಇದಕ್ಕೆ ಕಾರಣ ಅರಸು ಹಾಗೂ ಇಂದಿರಾಗಾಂಧಿ ನಡುವಿನ ವಿರಸ. ಆದ್ದರಿಂದಲೇ ಹೆಚ್ಚಿನವರು ಅರಸು ಹೆಸರು ಹೇಳಲು ಭಯ ಪಡುತ್ತಾರೆ.

ಅರಸು ಜಗ ಮೆಚ್ಚಿದ ಮಗ. ಆದ್ದರಿಂದ ಅರಸು-ಇಂದಿರಾಗಾಂಧಿ ನಡುವಿನ ವಿರಸಕ್ಕೂ ಸಂಬಂಧ ಕಲ್ಪಿಸುವುದು ಬೇಡ. ಇವರಿಬ್ಬರು ಕಟ್ಟಿಕೊಟ್ಟ ಬದುಕಿಗೆ ಸಂಬಂಧ ಕಲ್ಪಿಸೋಣ. ಅವರ ಹಾದಿಯಲ್ಲಿ ನಡೆಯೋಣ. ಬದುಕು ಕಟ್ಟಿಕೊಟ್ಟ ಅರಸುಗೆ ರಾಯಲ್ ಸೆಲ್ಯೂಟ್~ ಎಂದು ಮಾತು ಮುಗಿಸಿದರು.

ಸಂಸದ ಡಿ.ಬಿ.ಚಂದ್ರೇಗೌಡ ಮಾತನಾಡಿ `ಅರಸು ಅವರಿಗೆ ಚರಿತ್ರೆ, ಭೂಗೋಳ ಚೆನ್ನಾಗಿ ಗೊತ್ತಿತ್ತು. ಯಾರಿಗೆ ಏನು ಕೊಡಬೇಕು ಎನ್ನುವುದು ಅವರಿಗೆ ತಿಳಿದಿತ್ತು. ಅವರೊಂದು ಗ್ರಂಥಾಲಯದ ರೀತಿ ಇರುತ್ತಿದ್ದರು. ರಾಜ್ಯದ ಜನ 1947 ರಿಂದ 67 ರ ವರೆಗೆ ಸ್ವಾತಂತ್ರ್ಯದ ರುಚಿಯನ್ನು ಸವಿಯಲಿಲ್ಲ. ಬಡವನಿಗೆ ಗಂಜಿಯ ಚಿಂತೆಯಾಗಿತ್ತು.
 
ಆಗ ಭೂ ಸುಧಾರಣೆ ಕಾಯ್ದೆ ಜಾರಿಗೆ ತಂದು ಗೇಣಿದಾರರಿಗೆ ಭೂಮಿ ಕೊಡಿಸಿದರು. ಇದರಿಂದ ಭೂ ಮಾಲೀಕರ ವಿರೋಧ ಕಟ್ಟಿಕೊಳ್ಳಬೇಕಾಯಿತು. ಆದರೂ ಅಂಜಲಿಲ್ಲ ಎಂದರು.

ಎರಡು ರಾಯಲ್ ಸೆಲ್ಯೂಟ್
*ಅಂದು ಹಿರಿಯ ಪತ್ರಕರ್ತರೊಬ್ಬರು ಪತ್ರಿಕಾಗೋಷ್ಠಿಯಲ್ಲಿ ನಿಮ್ಮ ಬೊಮ್ಮಪ್ಪ, ತಿಪ್ಪಮ್ಮ ಸೇರಿದಂತೆ ಚುನಾವಣೆಯಲ್ಲಿ ಎಷ್ಟು ಸೀಟು ಗೆಲ್ಲುತ್ತೀರಿ ಎಂದು ಕೇಳಿದರು. ಆಗ ಅರಸು 150 ಎಂದರು. ಒಂದು ವೇಳೆ ಅಷ್ಟು ಸೀಟು ಗೆದ್ದರೆ ನಾನು ಅಂದಿನಿಂದ ಬರೆಯುವುದನ್ನೇ ಬಿಡುತ್ತೇನೆ ಎಂದು ಸವಾಲು ಹಾಕಿದರು. ಪ್ರತಿಯಾಗಿ ಅರಸು ನಾನು ರಾಜಕೀಯ ಬಿಡುತ್ತೇನೆ ಎಂದರು. ಫಲಿತಾಂಶ  ಅರಸು ಪರವಾಗಿತ್ತು. ಇದಕ್ಕೆ ಮೊದಲ ರಾಯಲ್ ಸೆಲ್ಯೂಟ್.

* ಅದು ಜೂನ್ 6, 1982. ಅಂದು ಅರಸು ಇಲ್ಲವಾಗಿದ್ದರು. ಅವರ ಅಂತಿಮ ಯಾತ್ರೆಗೆ ಜನಸಾಗರವೇ ಹರಿದುಬಂದಿತ್ತು. ಅಷ್ಟೊಂದು ಜನ ನಾಡಿನ ಯಾವ ರಾಜಕಾರಣಿಯ ಅಂತಿಮ ಯಾತ್ರೆಗೂ ಸೇರಿಲ್ಲ. ಅಷ್ಟೊಂದು ಜನರ ಪ್ರೀತಿ ಗಳಿಸಿದಕ್ಕಾಗಿ ಎರಡನೇ ರಾಯಲ್ ಸೆಲ್ಯೂಟ್ ಎಂದು ರಮೇಶ್‌ಕುಮಾರ್ ಹೇಳಿ ರೋಮಾಂಚನವನ್ನುಂಟು ಮಾಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT