ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಾಜಕತೆಯತ್ತ ಈಜಿಪ್ಟ್

Last Updated 10 ಡಿಸೆಂಬರ್ 2012, 21:01 IST
ಅಕ್ಷರ ಗಾತ್ರ

ಈಜಿಪ್ಟ್ ಮತ್ತೆ ಅಶಾಂತಿ ಮತ್ತು ಅರಾಜಕತೆಯ ಹಾದಿ ಹಿಡಿದಿದೆ.  ಇಪ್ಪತ್ತೆರಡು ತಿಂಗಳುಗಳ ಹಿಂದೆ  ವಿದ್ಯಾರ್ಥಿಗಳು, ನೌಕರರು, ಮಹಿಳೆಯರೆನ್ನದೆ ಈಜಿಪ್ಟ್‌ನ ಬಹುಸಂಖ್ಯಾತ ಜನ ಬೀದಿಗಿಳಿದು ಅಧ್ಯಕ್ಷ ಹೊಸ್ನಿಮುಬಾರಕ್ ವಿರುದ್ಧ ದನಿ ಎತ್ತಿದ್ದ ಪರಿಣಾಮವಾಗಿ ಸರ್ವಾಧಿಕಾರಿಯ ದೀರ್ಘ ಆಡಳಿತ ಕೊನೆಗೊಂಡಿತ್ತು. ಆಗಿನ ಪ್ರತಿಭಟನೆಯ ನೇತೃತ್ವ ವಹಿಸಿದ್ದು ಹಲವು ವಿರೋಧಪಕ್ಷಗಳ ಕೂಟ.

ಅದರಲ್ಲಿ ಬಹುಮತ ಗಳಿಸಿದ್ದ `ದಿ ಬ್ರದರ್‌ಹುಡ್' ಪಕ್ಷದ ನಾಯಕ ಮೊಹಮ್ಮದ್ ಮೊರ್ಸಿ ದೇಶದ ಅಧ್ಯಕ್ಷ ಸ್ಥಾನ ಏರಿದ್ದರು. ಈಗ ಜನ ಹೊಸ ಅಧ್ಯಕ್ಷರ `ಸರ್ವಾಧಿಕಾರಿ ಧೋರಣೆ' ವಿರುದ್ಧ ಸಿಡಿದೆದ್ದಿದ್ದಾರೆ. ಹೊಸ ಸಂವಿಧಾನದಲ್ಲಿ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗವನ್ನೂ ಮೀರಿದ ಅನಿಯಂತ್ರಿತ ಅಧಿಕಾರವನ್ನು ಅಧ್ಯಕ್ಷರಿಗೆ ನೀಡುವ ಪ್ರಯತ್ನ ನಡೆಯುತ್ತಿದೆ ಎನ್ನುವುದು ವಿರೋಧಪಕ್ಷಗಳ ಆರೋಪ. ಈ  ಸಂಘರ್ಷದ ಹಿನ್ನೆಲೆ ಮೇಲ್ನೋಟಕ್ಕೆ ಕಾಣುವಷ್ಟು ಸರಳವಾಗಿಲ್ಲ.

ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರವನ್ನು ನೀಡುವ ಸರ್ಕಾರದ ನಿರ್ಧಾರಕ್ಕೆ ಬಹುತೇಕ ವಿರೋಧಪಕ್ಷಗಳು ಮೊದಲು ಅಂಗೀಕಾರದ ಮುದ್ರೆ ಒತ್ತಿದ್ದವು. ಅದರ ನಂತರ ತಮ್ಮ ನಿಲುವನ್ನು ಬದಲಾಯಿಸಿವೆ. ಅಧ್ಯಕ್ಷರ ಅಧಿಕಾರದ ವಿವಾದಾತ್ಮಕ ಅಂಶಗಳ ಬಗ್ಗೆ ಚರ್ಚೆಗೆ ಕೂಡಾ ವಿರೋಧಪಕ್ಷಗಳು ಒಪ್ಪಿಲ್ಲ.

ಈ ಬಗ್ಗೆ ಜನಮತಗಣನೆ ನಡೆಯುವ ದಿನಾಂಕವನ್ನು ಮುಂದೂಡುವುದಾಗಿ ಕಾನೂನು ಸಚಿವ ಅಹ್ಮದ್ ಮೆಕ್ಕಿ ಹೇಳಿದರೂ ಅದನ್ನು ಬಹಿಷ್ಕರಿಸುವುದಾಗಿ ವಿರೋಧಪಕ್ಷಗಳು ಹಟ ಹಿಡಿದು ಕೂತಿವೆ. ಈ ಎಲ್ಲ ಅಂಶಗಳನ್ನು ಗಮನಿಸಿದರೆ ವಿರೋಧಪಕ್ಷಗಳು ವಿರೋಧಿಸುತ್ತಿರುವುದು ಅಧ್ಯಕ್ಷರ ಅಧಿಕಾರವನ್ನು ಅಲ್ಲ, ಅವರು ಕೇಳುತ್ತಿರುವುದು ಅಧ್ಯಕ್ಷ ಮೊಹಮ್ಮದ್ ಮೊರ್ಸಿ ಅವರ ತಲೆದಂಡ ಎನ್ನುವುದು ಸ್ಪಷ್ಟ.

ಹೊಸ್ನಿ ಮುಬಾರಕ್ ಪತನದ ನಂತರ ಈಜಿಪ್ಟ್‌ನಲ್ಲಿ ನಡೆದ ಚುನಾವಣೆಯಲ್ಲಿ ಸರ್ವಾಧಿಕಾರಿಯ ಪದಚ್ಯುತಿಗಾಗಿ ನಡೆದ ಹೋರಾಟದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಸೌಮ್ಯವಾದಿಗಳು, ಜಾತ್ಯತೀತರು ಮತ್ತು ಮಧ್ಯಮವರ್ಗದ ಯುವಜನರಿಗೆ ತಮ್ಮ ಯಶಸ್ಸನ್ನು ಚುನಾವಣಾ ಫಲಿತಾಂಶವಾಗಿ ಪರಿವರ್ತನೆಗೊಳಿಸಲು ಸಾಧ್ಯವಾಗಿಲ್ಲ. ಈ ಕಾರಣದಿಂದಾಗಿ ಮೊರ್ಸಿ ನೇತೃತ್ವದ `ದಿ ಬ್ರದರ್‌ಹುಡ್' ಪಕ್ಷವೇ ಅಧಿಕಾರಕ್ಕೆ ಬರುವಂತಾಯಿತು.

ತನಗೆ ಇರುವ ಬಹುಮತವನ್ನು ಬಳಸಿಕೊಂಡು ಮೊರ್ಸಿ ಈಜಿಪ್ಟ್ ಅನ್ನು ಮತ್ತೆ ಮುಸ್ಲಿಮ್‌ರಾಷ್ಟ್ರವಾಗಿ ರೂಪಿಸಲು ಹೊರಟಿದ್ದಾರೆ ಮತ್ತು ಸಂವಿಧಾನರಚನಾ ಮಂಡಳಿಯಲ್ಲಿ ಜಾತ್ಯತೀತರು, ಅಲ್ಪಸಂಖ್ಯಾತ ಕ್ರೈಸ್ತರು ಮತ್ತು ಮಹಿಳೆಯರಿಗೆ ಸ್ಥಾನ ನೀಡದೆ ಅನ್ಯಾಯ ಮಾಡುತ್ತಿದ್ದಾರೆ ಎಂದು ವಿರೋಧಪಕ್ಷಗಳು ಆರೋಪಿಸುತ್ತಿವೆ. ಅಧ್ಯಕ್ಷರಿಗೆ ಅನಿಯಂತ್ರಿತ ಅಧಿಕಾರವನ್ನು ನೀಡುವ ಪ್ರಸ್ತಾವವನ್ನು ಕೈಬಿಡಲು ಮೊಹಮ್ಮದ್ ಮೊರ್ಸಿ ಈಗ ಒಪ್ಪಿಕೊಂಡಿದ್ದಾರೆ.

ಆದರೆ ಹೊಸ ಸಂವಿಧಾನದ ಬಗ್ಗೆ ಡಿಸೆಂಬರ್ 15ರಂದು ನಡೆಯಲಿರುವ ಜನಮತಗಣನೆಯಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ಅವರು ಪಟ್ಟುಹಿಡಿದಿದ್ದಾರೆ. ಹೊಸ್ನಿ ಮುಬಾರಕ್ ವಿರುದ್ಧ ಹೋರಾಟ ನಡೆಸಿದ್ದ ರಾಜಕೀಯ ಪಕ್ಷಗಳ ಕೂಟ ಈಗ ಒಡೆದುಹೋಗಿರುವುದು ಸ್ಪಷ್ಟ. ಹೀಗಾಗಬಾರದು. ಆಡಳಿತ ಮತ್ತು ವಿರೋಧಪಕ್ಷಗಳು ಪರಸ್ಪರ ಮಾತುಕತೆಯ ಮೂಲಕ ಭಿನ್ನಾಭಿಪ್ರಾಯವನ್ನು ಬಗೆಹರಿಸಿಕೊಳ್ಳಬೇಕು.  ಪ್ರಜಾಪ್ರಭುತ್ವ ಸ್ಥಾಪನೆಗಾಗಿ ಈಜಿಪ್ಟ್‌ನ ಸಾಮಾನ್ಯ ಜನತೆ ನಡೆಸಿದ್ದ ಹೋರಾಟ ವ್ಯರ್ಥಗೊಳ್ಳಲು ಬಿಡಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT