ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರುಣಾಗೆ ಜೀವ; ಸುಪ್ರೀಂ ಕರುಣೆ

Last Updated 7 ಮಾರ್ಚ್ 2011, 18:10 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಳೆದ 37 ವರ್ಷಗಳಿಂದ ಮುಂಬೈಯ ಕೆಇಎಂ ಆಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಅರುಣಾ ರಾಮಚಂದ್ರ ಶಾನಭಾಗ (60) ಅವರಿಗೆ ದಯಾಮರಣ ನೀಡಲು ಸಾಧ್ಯವಿಲ್ಲ ಎಂದು ಹೇಳಿರುವ ಸುಪ್ರೀಂ ಕೋರ್ಟ್, ಅತ್ಯಂತ ಅಗತ್ಯ ಇದ್ದಾಗ ನಿಷ್ಕ್ರಿಯ ದಯಾಮರಣ (ಪ್ಯಾಸಿವ್ ಯುಥನೇಸಿಯಾ) ಕರುಣಿಸಬಹುದು ಎಂಬ ಮಹತ್ವದ ತೀರ್ಪು ನೀಡಿದೆ.

ಮರಣ ತರಿಸುವ ಚುಚ್ಚುಮದ್ದು ನೀಡಿ ಸಕ್ರಿಯ ದಯಾಮರಣ (ಆಕ್ಟಿವ್ ಯುಥನೇಸಿಯಾ) ಕರುಣಿಸಲೇಬಾರದು ಎಂದು ತಾಕೀತು ಮಾಡಿದ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ಮತ್ತು ಜ್ಞಾನ ಸುಧಾ ಮಿಶ್ರಾ ಅವರನ್ನು ಒಳಗೊಂಡ ಪೀಠ, ತೀರಾ ಅಪರೂಪದ ಸಂದರ್ಭದಲ್ಲಿ, ಆಯಾ ರಾಜ್ಯಗಳ ಹೈಕೋರ್ಟ್‌ಗಳ ಸಮ್ಮತಿ ಪಡೆದು ಜೀವ ರಕ್ಷಕಗಳನ್ನು ತೆಗೆದು ಹಾಕುವಂತಹ ನಿಷ್ಕ್ರಿಯ ದಯಾಮರಣ ಕರುಣಿಸಬಹುದು ಎಂದು ಹೇಳಿತು.

ಅರುಣಾ ಅವರ ಆರೈಕೆ ಸ್ಥಿತಿಗತಿ, ವೈದ್ಯಕೀಯ ಸಾಕ್ಷ್ಯಗಳು ಮತ್ತು ಇತರ ಅಂಶಗಳನ್ನು ಗಮನಿಸಿದಾಗ ಅವರಿಗೆ ದಯಾಮರಣ ಕರುಣಿಸುವ ಅಗತ್ಯ ಇಲ್ಲ ಎಂದು ಸ್ಪಷ್ಟವಾಗುತ್ತದೆ ಎಂದ ಪೀಠ, ಅರುಣಾ ಅವರನ್ನು ಉತ್ತಮವಾಗಿ ಆರೈಕೆ ಮಾಡುತ್ತಿರುವ ಆಸ್ಪತ್ರೆಯ ಸಿಬ್ಬಂದಿಯನ್ನು ಶ್ಲಾಘಿಸಿತು.

ದಯಾಮರಣ ವಿಚಾರದಲ್ಲಿ ದೇಶದಲ್ಲಿ ಸೂಕ್ತ ಕಾನೂನು ಇಲ್ಲ. ಹೀಗಾಗಿ ಸಂಸತ್ತು ಕಾನೂನೊಂದನ್ನು ರೂಪಿಸುವ ತನಕ ತಾನು ಈಗ ನೀಡಿರುವ ಆದೇಶ ಜಾರಿಯಲ್ಲಿರುತ್ತದೆ ಎಂದು ಪೀಠ ಹೇಳಿತು.

ಹೊನ್ನಾವರ ತಾಲ್ಲೂಕಿನ ಹಳದೀಪುರದ ಅರುಣಾ ಅವರು ಮುಂಬೈಯ ಕಿಂಗ್ ಎಡ್ವರ್ಡ್ ಮೆಮೋರಿಯಲ್ (ಕೆಇಎಂ) ಆಸ್ಪತ್ರೆಯಲ್ಲಿ ದಾದಿಯಾಗಿ ಸೇವೆ ಸಲ್ಲಿಸುತ್ತಿದ್ದರು. 1973ರ ನವೆಂಬರ್ 27ರಂದು ಅದೇ ಆಸ್ಪತ್ರೆಯ ಸಿಬ್ಬಂದಿ (ವಾರ್ಡ್‌ಬಾಯ್) ಆಕೆಯ ಕುತ್ತಿಗೆಗೆ ನಾಯಿ ಕಟ್ಟಿ ಹಾಕುವ ಸರಪಣಿ ಸುತ್ತಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಅಲ್ಲಿಂದೀಚೆಗೆ ಅರುಣಾ ಪ್ರಜ್ಞಾಹೀನ ಸ್ಥಿತಿಯಲ್ಲೇ ಇದ್ದು, ಅದೇ ಆಸ್ಪತ್ರೆಯಲ್ಲಿ ನಿಷ್ಕ್ರಿಯ ಮೆದುಳಿನೊಂದಿಗೆ ದಿನ ದೂಡುತ್ತಿದ್ದಾರೆ. ಅವರ ಜೀವನ ಚರಿತ್ರೆಯನ್ನು ಬರೆದ ಲೇಖಕಿ ಹಾಗೂ ಪತ್ರಕರ್ತೆ ಪಿಂಕಿ ವಿರಾನಿ ಅವರು ಅರುಣಾಗೆ ದಯಾಮರಣ ಕಲ್ಪಿಸಬೇಕು ಎಂದು ಕೋರಿ ಈ ಅರ್ಜಿ ಸಲ್ಲಿಸಿದ್ದರು.

ಮರುಜೀವ: ‘ಅರುಣಾಗೆ ಕಾಣಿಸುವುದೂ ಇಲ್ಲ, ಕೇಳಿಸುವುದೂ ಇಲ್ಲ. ಅವರಿಗೆ ಏನನ್ನೂ ವ್ಯಕ್ತಪಡಿಸಲೂ ಸಾಧ್ಯವಾಗುತ್ತಿಲ್ಲ. ಆಕೆಯ ದೇಹ ಸತ್ತ ಪ್ರಾಣಿಯ ದೇಹದಂತೆ ಆಸ್ಪತ್ರೆಯೆ ಹಾಸಿಗೆಯಲ್ಲಿ ಬಿದ್ದುಕೊಂಡಿದೆ. ಅವರ ಆರೋಗ್ಯ ಸುಧಾರಿಸುವ ಯಾವ ಸಾಧ್ಯತೆಯೂ ಇಲ್ಲ. ಹೀಗಾಗಿ ಅವರಿಗೆ ಕೆಇಎಂ ಆಸ್ಪತ್ರೆ ಆಹಾರ ಪೂರೈಸುವುದನ್ನು ಸ್ಥಗಿತಗೊಳಿಸಿ ಅವರ ಸಾವಿಗೆ ಎಡೆಮಾಡಿಕೊಡಬೇಕು’ ಎಂದು ವಿರಾನಿ ಕೋರಿದ್ದರು. ಆದರೆ ಈ ವಾದವನ್ನು ನ್ಯಾಯಪೀಠ  ತಳ್ಳಿಹಾಕಿತು. ‘ವಿರಾನಿ ಅವರು ಅರುಣಾ ಅವರ ಸ್ನೇಹಿತೆಯೇ’ ಎಂಬ ಖಾರವಾದ ಪ್ರಶ್ನೆ ಕೇಳಿತು. ಕೆಇಎಂ ಆಸ್ಪತ್ರೆಯ ಸಿಬ್ಬಂದಿ ಮಾತ್ರ ಅರುಣಾ ಅವರ ಸ್ನೇಹಿತರೇ ಹೊರತು ವಿರಾನಿ ಅಲ್ಲ ಎಂದು ಹೇಳಿತು.

 ‘ಆಸ್ಪತ್ರೆಯ ಸಿಬ್ಬಂದಿ ಇಷ್ಟೂ ವರ್ಷಗಳಿಂದ ಅರುಣಾ ಅವರನ್ನು ಅತ್ಯಂತ ಯೋಗ್ಯ ರೀತಿಯಿಂದ ಆರೈಕೆ ಮಾಡುತ್ತ ಬಂದಿದ್ದಾರೆ. ಅರುಣಾ ಅವರನ್ನು ಬದುಕಲು ಬಿಡಬೇಕು ಎಂಬುದು ಅವರ ಸ್ಪಷ್ಟ ಅಭಿಪ್ರಾಯ’ ಎಂಬುದನ್ನು ಪೀಠ ಗುರುತಿಸಿತು.

ಆದರೂ ವಿರಾನಿ ಅವರ ‘ಅಮೋಘ ಸಾಮಾಜಿಕ ಹುರುಪಿನ ಪ್ರಯತ್ನ’ಕ್ಕೆ ಪೀಠ ಮೆಚ್ಚುಗೆ ಸೂಚಿಸಿತು. ವಿರಾನಿ ಅವರ ಪ್ರಯತ್ನವನ್ನು ಆಸ್ಪತ್ರೆಯ ಸಿಬ್ಬಂದಿ ಅರುಣಾ ವಿಚಾರದಲ್ಲಿ ತೆಗೆದುಕೊಳ್ಳುತ್ತಿರುವ ಕಾಳಜಿಗೆ ಹೋಲಿಕೆ ಮಾಡಲಾಗದು ಎಂದು ಅದು ಹೇಳಿತು.

ಆಸ್ಪತ್ರೆಯ ಸಿಬ್ಬಂದಿ ಭವಿಷ್ಯದಲ್ಲಿ ತಮ್ಮ ನಿರ್ಧಾರ ಬದಲಿಸಿದರೆ ಅರುಣಾಗೆ ನೀಡಿದ ಜೀವ ರಕ್ಷಕ ವ್ಯವಸ್ಥೆಯನ್ನು ತೆಗೆದು ಹಾಕುವುದಕ್ಕೆ  ಅವರು ಬಾಂಬೆ ಹೈಕೋರ್ಟ್‌ನ ಅನುಮತಿ ಪಡೆಯಬೇಕಾಗುತ್ತದೆ ಎಂದು ಪೀಠ ತಿಳಿಸಿತು.

‘1994ರ ಮಾನವ ಅಂಗಗಳ ಕಸಿ ಕಾಯ್ದೆಯ ಪ್ರಕಾರವೂ ಅರುಣಾ ಅವರ ಮಿದುಳು ಸತ್ತಿದೆ ಎಂದು ಪರಿಗಣಿಸಲಾಗದು. ತನ್ನ ಸುತ್ತಲೂ ಜನರು ಇದ್ದಾರೆ ಎಂಬುದನ್ನು ಆಕೆ ಗುರುತಿಸಬಲ್ಲಳು.

ತನ್ನ ಬೇಕು, ಬೇಡಗಳನ್ನು ಕೆಲವು ಧ್ವನಿಗಳ ಮೂಲಕ ಮತ್ತು ತನ್ನ ಕೈಯನ್ನು ನಿರ್ದಿಷ್ಟವಾಗಿ ಅಲ್ಲಾಡಿಸುವ ಮೂಲಕ ತಿಳಿಸಬಲ್ಲಳು. ತನ್ನ ಇಷ್ಟದ ಆಹಾರವಾದ ಮೀನು ಮತ್ತು ಚಿಕನ್ ಸೂಪ್ ದೊರೆತರೆ ಆಕೆ ಮುಗುಳ್ನಗುತ್ತಾಳೆ’ ಎಂದು ಕೋರ್ಟ್ ಹೇಳಿತು.

ತನ್ನ 110 ಪುಟಗಳ ತೀರ್ಪಿನಲ್ಲಿ ಕೋರ್ಟ್ ನಿಷ್ಕ್ರಿಯ ದಯಾಮರಣ ನೀಡುವ ಸಂಬಂಧ ನಿಯಮಗಳನ್ನು ವಿಧಿಸಿತು. ದಯಾಮರಣವನ್ನು ಕರುಣಿಸಲೇಬಾರದು ಎಂಬ ಅಟಾರ್ನಿ ಜನರಲ್ ಜಿ.ಇ.ವಹನ್‌ವತಿ ಅವರ ಅಭಿಪ್ರಾಯಕ್ಕೆ ವಿರುದ್ಧವಾಗಿ ಈ ನಿರ್ಧಾರ ಕೈಗೊಂಡಿತು.

ರೋಗಿಯ ಹತ್ತಿರದ ಬಂಧುಗಳು, ವೈದ್ಯರು ಅಥವಾ ಮಿತ್ರರು ರೋಗಿಗೆ ನೀಡಿರುವ ಜೀವ ರಕ್ಷಕಗಳನ್ನು ಹಿಂದೆಗೆದುಕೊಳ್ಳಲು ನಿರ್ಧರಿಸಿದರೂ ಅದಕ್ಕೆ ಸಂಬಂಧಪಟ್ಟ ಹೈಕೋರ್ಟ್‌ನ ಅನುಮತಿ ಪಡೆದಿರಬೇಕು.

ಮೂವರು ತಜ್ಞ ವೈದ್ಯರ ಶಿಫಾರಸನ್ನು ಕೋರ್ಟ್‌ಗೆ ಸಲ್ಲಿಸಬೇಕಾಗುತ್ತದೆ ಎಂಬ ನಿಯಮ ವಿಧಿಸಿತು. ತನ್ನ ತೀರ್ಪು  ಪ್ರಕಟಿಸುವುದಕ್ಕೆ ಮೊದಲು ಪೀಠವು ಬ್ರಿಟನ್, ಅಮೆರಿಕ, ಅಲ್ಲಿನ ವಿವಿಧ ರಾಜ್ಯಗಳು, ಕೆನಡಾ, ಬೆಲ್ಜಿಯಂ, ನೆದರ್ಲೆಂಡ್ಸ್, ಸ್ವಿಟ್ಜರ್ಲೆಂಡ್, ಜರ್ಮನಿ, ಫ್ರಾನ್ಸ್, ಸ್ಪೇನ್, ಆಸ್ಟ್ರಿಯಾ ಮತ್ತಿತರ ದೇಶಗಳಲ್ಲಿನ ಕಾನೂನು ಸನ್ನಿವೇಶಗಳನ್ನು ಪರಿಶೀಲಿಸಿತ್ತು.
ಅರುಣಾ ಅವರ ಕೂಲಂಕಷ ಪರಿಶೀಲನೆ ನಡೆಸಿ ತನಗೆ ವರದಿ ಸಲ್ಲಿಸಿದ ಮೂವರು ವೈದ್ಯರ ತಂಡದ ಅಭಿಪ್ರಾಯವನ್ನೂ ಪರಿಗಣಿಸಿತ್ತು. 

ಅರುಣಾ ಸಂಬಂಧಿಕರ ಹರ್ಷ
ಕಾರವಾರ: ಅರುಣಾ ಶಾನಭಾಗಳ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡದೇ ಇರುವುದಕ್ಕೆ ಈಕೆಯ ಸಂಬಂಧಿಕರು ಹಾಗೂ ಗುರುಗಳು ಹರ್ಷ ವ್ಯಕ್ತಪಡಿಸಿದ್ದಾರೆ.
‘ಜನ್ಮ ಕೊಡುವವನು ದೇವರು, ಅಂತ್ಯ ಕಾಣಿಸುವವನು ಅವನೇ. ಅವನ ಇಚ್ಛೆಯಂತೆಯೇ ಎಲ್ಲವೂ ನಡೆಯುತ್ತದೆ ಹೊರತು ನಾವ್ಯಾರೂ ಬಯಸಿದಂತೆ ಆಗುವುದಿಲ್ಲ. ದಯಾಮರಣದ ಕುರಿತು ಬಂದ ತೀರ್ಪು ಸರಿಯಾಗಿಯೇ ಇದೆ’ ಎಂದವರು ಅರುಣಾಳ ಸಂಬಂಧಿ ಲಕ್ಷ್ಮಣ ಸುಬ್ರಾಯ ಶಾನಭಾಗ.

’ದಯಾಮರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಸರಿಯಾಗಿದೆ. ಆಕೆಯನ್ನು ದೇವರು ಚೆನ್ನಾಗಿಟ್ಟಿರಲಿ’ ಎನ್ನುತ್ತಾರೆ ಅರುಣಾ ಕಲಿತ ಶಾಲೆಯ ಶಿಕ್ಷಕ 77 ವರ್ಷದ ಹನುಮಂತ ಮಂಗೇಶ ಶ್ಯಾನಭಾಗ.

‘ಯಾರಿಗೂ ಯಾರನ್ನೂ ಸಾಯಿಸುವ ಹಕ್ಕಿಲ್ಲ ಎಂದ ಮೇಲೆ ಅರುಣಾಳ ವಿಷಯದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ನನಗೆ ಖುಷಿ ತಂದಿದೆ’ ಎಂದು ಆಕೆಯ ಶಾಲಾದಿನಗಳ ಸಹಪಾಠಿ 63 ವರ್ಷದ ಅನಂತ ರಾಮಚಂದ್ರ ಪ್ರಭು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT