ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರೇಬಿಕಾ ಕಾಫಿಗೆ ದಾಖಲೆ ಬೆಲೆ

Last Updated 21 ಜನವರಿ 2011, 19:30 IST
ಅಕ್ಷರ ಗಾತ್ರ

ಮಡಿಕೇರಿ: ದೇಶದಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿದ ಬೆನ್ನಲ್ಲಿಯೇ ಇದೀಗ ವಾಣಿಜ್ಯ ಬೆಳೆ ಕಾಫಿಗೂ ದಾಖಲೆ ಬೆಲೆ ಬಂದಿದೆ. ಆದರೆ, ಉತ್ಪಾದನೆ ಕೂಡ ಗಣನೀಯ ಪ್ರಮಾಣದಲ್ಲಿ ಕುಸಿದಿರುವುದರಿಂದ ಉತ್ತಮ ಬೆಲೆ ಸಿಕ್ಕರೂ ಬೆಳೆಗಾರರು ಅತೀವ ಸಂತಸ ಪಡುವಂತಹ ಸನ್ನಿವೇಶ ಇಲ್ಲದಂತಾಗಿದೆ.

ವಿಶ್ವದಲ್ಲಿಯೇ ಕಾಫಿ ಬೆಳೆಯುವಲ್ಲಿ ಮುಂಚೂಣಿಯಲ್ಲಿರುವ ರಾಷ್ಟ್ರಗಳಾದ ಬ್ರೆಜಿಲ್, ಕೊಲಂಬಿಯಾ ಜತೆಗೆ, ಭಾರತದಲ್ಲಿಯೂ ಈ ವರ್ಷ ಅರೇಬಿಕಾ ಕಾಫಿ ಉತ್ಪಾದನೆ ಶೇ 30ರಷ್ಟು ಕುಸಿದಿದೆ. ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾದ ಪರಿಣಾಮ, ಅರೇಬಿಕಾ ಕಾಫಿ ಬೆಲೆ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಪ್ರಸ್ತುತ 50 ಕೆ.ಜಿ. ಅರೇಬಿಕಾ ಪಾರ್ಚ್‌ಮೆಂಟ್ ಕಾಫಿ ಬೆಲೆ ಮಾರುಕಟ್ಟೆಯಲ್ಲಿ ರೂ. 9,500ಗಳಷ್ಟಿದೆ. ಅರೇಬಿಕಾ ಚೆರಿಗೆ ರೂ. 4,500ರಿಂದ ರೂ. 4,800ವರೆಗೆ ಬೆಲೆ ಇದೆ. 1994ರಲ್ಲಿ ಅರೇಬಿಕಾ ಪಾರ್ಚ್‌ಮೆಂಟ್ ಕಾಫಿ ಬೆಲೆ ರೂ. 8,500 (50 ಕೆ.ಜಿ. ಚೀಲಕ್ಕೆ) ರೂಪಾಯಿಗಳಷ್ಟಿತ್ತು. ಬಹುಶಃ ಈ ವರ್ಷ ಅರೇಬಿಕಾ ಕಾಫಿಗೆ ಇದುವರೆಗೆ ದೊರೆಯದಷ್ಟು ದಾಖಲೆ ಧಾರಣೆ ಕಂಡು ಬಂದಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಗೆ ಅಗತ್ಯ ಪ್ರಮಾಣದಷ್ಟು ಅರೇಬಿಕಾ ಕಾಫಿ ಪೂರೈಕೆಯಾಗದಿರುವ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಾಗಿ ಬೆಲೆ ಏರಲು ಮುಖ್ಯ ಕಾರಣ. ಅದರ ಜತೆಗೆ, ಅರೇಬಿಕಾ ಕಾಫಿ ಬೆಳೆಯುವ ಪ್ರಮುಖ ದೇಶಗಳಲ್ಲಿಯೇ ಅಕಾಲಿಕ ಮಳೆ, ಬೆರ್ರಿ ಬೋರರ್ (ಹಣ್ಣುಗಳಲ್ಲಿ ಬೀಜ ತಿನ್ನುವ ಹುಳು), ಕಾರ್ಮಿಕರ ಸಮಸ್ಯೆ ಮತ್ತಿತರ ಕಾರಣಗಳಿಂದ ಉತ್ಪಾದನೆ ಕುಸಿದಿರುವುದು ಬೆಲೆ ಏರಿಕೆಯಾಗಲು ಮುಖ್ಯ ಕಾರಣ ಎಂದು ಬೆಳೆಗಾರರು ವಿಶ್ಲೇಷಿಸುತ್ತಾರೆ.

ದೇಶದಲ್ಲಿ ಪ್ರಸಕ್ತ ವರ್ಷ 3,03,000 ಮೆಟ್ರಿಕ್ ಟನ್ ಕಾಫಿ ಉತ್ಪಾದನೆಯಾಗಬಹುದು ಎಂದು ಕಾಫಿ ಮಂಡಳಿ ಅಂದಾಜಿಸಿತ್ತು. ಬಹುಶಃ ಅದು 2,80,000 ಮೆಟ್ರಿಕ್ ಟನ್‌ಗಿಂತಲೂ ಕುಸಿದಿದೆ.  ದೇಶೀಯ ಕಾಫಿ ಉತ್ಪಾದನೆಯಲ್ಲಿ 1/3 ಭಾಗದಷ್ಟು ಕಾಫಿ ಉತ್ಪಾದಿಸುತ್ತಿರುವ ಕಾಫಿ ನಾಡು ಕೊಡಗಿನಲ್ಲಿಯೂ 20 ಸಾವಿರ ಮೆಟ್ರಿಕ್ ಟನ್ ಅರೇಬಿಕಾ ಕಾಫಿ ಉತ್ಪಾದಿಸುವ ಅಂದಾಜಿತ್ತು. ಆದರೆ, ಅದು ಅಂದಾಜು 16ರಿಂದ 17 ಸಾವಿರ ಮೆಟ್ರಿಕ್ ಟನ್‌ಗೆ ಕುಸಿದಿರಬಹುದು ಎನ್ನುತ್ತಾರೆ ಕಾಫಿ ಉದ್ಯಮಿ ಪಿ.ಕೆ. ದೇವಯ್ಯ.

ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಸಮರ್ಪಕವಾಗಿ ಹೂ ಮಳೆ ಬೀಳದಿರುವುದು, ಮಳೆಯ ಅವಧಿ ಜಾಸ್ತಿಯಾಗಿ ಶೀತ ವಾತಾವರಣ ಕಂಡು ಬಂದದ್ದು, ಬೆರ್ರಿ ಬೋರರ್ ಹಾವಳಿ ಹೆಚ್ಚಾಗಿದ್ದು ಮತ್ತಿತರ ಕಾರಣಗಳಿಂದ ಇಳುವರಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಕಾರ್ಮಿಕರ ಸಮಸ್ಯೆಯಿಂದ ತೋಟಗಳನ್ನು ಕಾಲ ಕಾಲಕ್ಕೆ ನಿರ್ವಹಣೆ ಮಾಡಲು ಸಾಧ್ಯವಾಗದೆ ಬೆಳೆಗಾರರು ತೊಂದರೆ ಅನುಭವಿಸುತ್ತಿರುವುದು ಕೂಡ ಉತ್ಪಾದನೆ ಕುಸಿಯಲು ಮತ್ತೊಂದು ಕಾರಣ ಎನ್ನಬಹುದು.

ರೋಬಸ್ಟಾಗೂ ಆಶಾದಾಯಕ ಬೆಲೆ: ಅಮೆರಿಕ, ಜರ್ಮನಿ, ಇಟಲಿ ಸೇರಿದಂತೆ ಅತ್ಯಧಿಕ ಕಾಫಿ ಬಳಸುವ ರಾಷ್ಟ್ರಗಳಲ್ಲಿ ಅರೇಬಿಕಾ ಕಾಫಿ ಲಭ್ಯವಾಗದಿರುವುದರಿಂದ ಸಹಜವಾಗಿ ರೋಬಸ್ಟಾಗೂ ಈ ವರ್ಷ ಉತ್ತಮ ಬೆಲೆ ಸಿಗುತ್ತಿದೆ. ವಿಶ್ವದಲ್ಲಿ ಭಾರತ ಮತ್ತು ಉಗಾಂಡ ರೋಬಸ್ಟಾ ಕಾಫಿ ಉತ್ತಮ ಗುಣಮಟ್ಟ ಹೊಂದಿದೆ. ಪ್ರಸ್ತುತ ರೋಬಸ್ಟಾ ಚೆರಿಗೆ ರೂ. 2,600 (50 ಕೆಜಿ ಚೀಲ) ಹಾಗೂ ಪಾರ್ಚ್‌ಮೆಂಟ್‌ಗೆ ರೂ. 4,200 ಬೆಲೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT