ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಕಾವತಿ ಪುನಶ್ಚೇತನಕ್ಕೆ ಜನರ ಪಾಲುದಾರಿಕೆ

ಸಾರ್ವಜನಿಕ ಸಂವಾದದಲ್ಲಿ ಜನಾಭಿಪ್ರಾಯ
Last Updated 2 ಜುಲೈ 2013, 19:32 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ನದಿಗಳ ಪುನಶ್ಚೇತನ ನೀತಿಯನ್ನು ಜಾರಿಗೆ ತರಬೇಕು. ಅರ್ಕಾವತಿ ನದಿ ಪುನಶ್ವೇತನ ಪ್ರಜಾಪ್ರಭುತ್ವ ಮಾದರಿಯಲ್ಲಿರಬೇಕು. ಈ ಯೋಜನೆ ಅನುಷ್ಠಾನ ಪಾರದರ್ಶಕವಾಗಿ ನಡೆಯಬೇಕು. ಅರ್ಕಾವತಿ ದಡದ ಎರಡೂ ಭಾಗದಲ್ಲಿ ಗಿಡಗಳನ್ನು ನೆಟ್ಟು ಹಸಿರು ಬೆಳೆಸಬೇಕು. ನದಿಯಲ್ಲಿ ಮರಳುಗಾರಿಕೆಗೆ ನಿಷೇಧ ಹೇರಬೇಕು...

ಅರ್ಕಾವತಿ ನದಿ ಪುನಶ್ಚೇತನ ಜನಾಂದೋಲನ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಗರದ ಗಾಂಧಿ ಭವನದಲ್ಲಿ ಮಂಗಳವಾರ ನಡೆದ `ಅರ್ಕಾವತಿ ನದಿ ಪುನಶ್ಚೇತನ ಮುಂದೇನು?' ಸಾರ್ವಜನಿಕ ಸಂವಾದದಲ್ಲಿ ಮೂಡಿ ಬಂದ ಒಟ್ಟು ಅಭಿಪ್ರಾಯ ಇದು. ಜಲತಜ್ಞ ಡಾ.ರಾಜೇಂದ್ರ ಸಿಂಗ್ ಶಿಫಾರಸುಗಳನ್ನು ಮಂಡಿಸಿದರು.

`ಅರ್ಕಾವತಿ ಯೋಜನೆಯ ಅನುಷ್ಠಾನ ಸಂದರ್ಭ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ವಿಸ್ತೃತ ಯೋಜನಾ ವರದಿ (ಡಿಪಿಆರ್)ಯನ್ನು ಗುತ್ತಿಗೆದಾರರು ತಯಾರಿಸಬಾರದು. ಸ್ಥಳೀಯ ಜನರು, ಜನಪ್ರತಿನಿಧಿಗಳು ಹಾಗೂ ಅಡಳಿತಗಾರರು ಒಟ್ಟಾಗಿ ಡಿಪಿಆರ್ ರೂಪಿಸಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು' ಎಂದು ರಾಜೇಂದ್ರ ಸಿಂಗ್ ಆಗ್ರಹಿಸಿದರು.

`ಯೋಜನೆಯ ಅನುಷ್ಠಾನದಲ್ಲಿ ಪಾರದರ್ಶಕತೆ ಕಾಪಾಡಬೇಕು. ಜನರು ಸಂಶಯದಿಂದ ನೋಡುವ ಪರಿಸ್ಥಿತಿ ಆಗಬಾರದು. ಸ್ಥಳೀಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆಯ ಪಾಲುದಾರರನ್ನಾಗಿ ಮಾಡಬೇಕು. ಅರ್ಕಾವತಿ ಸಮಸ್ಯೆ ಪರಿಹಾರಕ್ಕೆ ತಾತ್ಕಾಲಿಕ ಪರಿಹಾರ ಕಾರ್ಯಗಳು ಬೇಡ. ನದಿ ಪ್ರದೇಶದ ಒತ್ತುವರಿ ತೆರವು, ಗಣಿಗಾರಿಕೆಗೆ ಕಡಿವಾಣ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಂಡು ಶಾಶ್ವತ ಯೋಜನೆಯನ್ನು ರೂಪಿಸಬೇಕು' ಎಂದು ಅವರು ಕಿವಿಮಾತು ಹೇಳಿದರು.

`ಮಳೆ ನೀರು ಹಾಗೂ ಕೊಳಚೆ ನೀರು ಒಟ್ಟಿಗೆ ನದಿಗೆ ಸೇರದಂತೆ ನೋಡಿಕೊಳ್ಳಬೇಕು. ಶುದ್ಧ ನೀರು ಕುಡಿಯಲು ಬಳಕೆಯಾಗಬೇಕು. ಕೊಳಚೆ ನೀರನ್ನು ಶುದ್ಧೀಕರಿಸಿ ಅದನ್ನು ಕೃಷಿ ಹಾಗೂ ಕೈಗಾರಿಕಾ ಚಟುವಟಿಕೆಗಳಿಗೆ ಬಳಸಬೇಕು. ಈ ಮೂಲಕ ನದಿ ಮಲಿನವಾಗುವುದನ್ನು ತಡೆಗಟ್ಟಬಹುದು' ಎಂದು ಅವರು ಪ್ರತಿಪಾದಿಸಿದರು.

`ಕೆರೆಯನ್ನು ಒತ್ತುವರಿ ಮಾಡಿದರೆ ನದಿಯನ್ನು ಒತ್ತುವರಿ ಮಾಡಿದಂತೆ. ಅರ್ಕಾವತಿ ಜಲಾನಯನ ಪ್ರದೇಶದಲ್ಲಿರುವ ಕೆರೆಗಳ ಸಂರಕ್ಷಣೆಗೆ ತುರ್ತು ಆದ್ಯತೆ ಕೊಡಬೇಕು. ನದಿಯಲ್ಲಿ ಮರಳು ಸ್ಪಂಜಿನ ಕೆಲಸ ಮಾಡುತ್ತದೆ. ಮರಳು ನದಿಯ ಜೀವಾಳ. ಈ ನಿಟ್ಟಿನಲ್ಲಿ ಮರಳು ಗಣಿಗಾರಿಕೆಗೆ ಅವಕಾಶ ಕಲ್ಪಿಸಬಾರದು. ಈ ಮೂಲಕವೂ ನದಿಯನ್ನು ಉಳಿಸಬಹುದು' ಎಂದು ಅವರು ಅಭಿಪ್ರಾಯಪಟ್ಟರು.

`ಪುನಶ್ಚೇತನಕ್ಕೆ ಸಮಗ್ರ  ವರದಿ'
`ಅರ್ಕಾವತಿ ನದಿಯನ್ನು ಯಾವ ರೀತಿಯಲ್ಲಿ ಪುನಶ್ಚೇತನ ಮಾಡಬೇಕು ಎಂದು ಕಾವೇರಿ ನೀರಾವರಿ ನಿಗಮದಿಂದ ಸಮಗ್ರ ವರದಿ ತಯಾರಿಸಲಾಗುತ್ತಿದೆ' ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಕಪಿಲ್ ಮೋಹನ್ ತಿಳಿಸಿದರು.

`ಜಿಐಎಸ್, ರಿಮೋಟ್ ಸೆನ್ಸಿಂಗ್, ಅಂತರ್ಜಲ ಮಟ್ಟ, ಕೆರೆಗಳ ಸ್ಥಿತಿಗತಿ, ಭೂಮಿ ಒತ್ತುವರಿ, ಗಣಿಗಾರಿಕೆ ಮತ್ತಿತರ ವಿಷಯಗಳ ಆಳವಾದ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಲಾಗುತ್ತಿದೆ. ಕೆರೆಗಳ ಪುನಶ್ಚೇತನ ಕಾರ್ಯವೂ ಭರದಿಂದ ಸಾಗಿದೆ' ಎಂದು ಅವರು ಹೇಳಿದರು.

`ಅರ್ಕಾವತಿ ಪುನಶ್ಚೇತನಕ್ಕೆ ಕೇಂದ್ರೀಕೃತ ಯೋಜನೆ ಬೇಕಿದೆ. ಥೇಮ್ಸ ನದಿ ಮಾದರಿಯಲ್ಲಿ ಪುನಶ್ಚೇತನ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. 15 ವರ್ಷಗಳಲ್ಲಿ ಥೇಮ್ಸ ನದಿಯನ್ನು ಪುನಶ್ಚೇತನ ಮಾಡಲಾಗಿದೆ. ಅರ್ಕಾವತಿ ಪುನಶ್ಚೇತನವೂ ಏಕಾಏಕಿ ಆಗುವಂತಹುದು ಅಲ್ಲ. ಅದಕ್ಕೆ ಕೆಲವು ವರ್ಷಗಳು ಬೇಕಿದೆ. ಸಾರ್ವಜನಿಕ ಸಹಭಾಗಿತ್ವದಲ್ಲೇ ಪುನಶ್ಚೇತನ ಮಾಡಲಾಗುವುದು' ಎಂದು ಅವರು ಹೇಳಿದರು.

`ಶುದ್ಧೀಕರಿಸಿದ ನೀರು ಜಲಾಶಯಕ್ಕೆ- ಅವೈಜ್ಞಾನಿಕ'
`ಶುದ್ಧೀಕರಿಸಿದ 200 ದಶಲಕ್ಷ ಲೀಟರ್ ನೀರನ್ನು ನದಿ ಬೆಟ್ಟಕ್ಕೆ ಹರಿಸಿ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ನೀರು ಪೂರೈಕೆ ಮಾಡುವ ಜಲಮಂಡಳಿಯ ಯೋಜನೆ ಅವೈಜ್ಞಾನಿಕವಾದುದು' ಎಂದು ಏಟ್ರಿ ಸಂಸ್ಥೆಯ ಡಾ. ಶರದ್ ಲಿಲೆ ಪ್ರತಿಪಾದಿಸಿದರು.

`ನದಿ ಪುನಶ್ಚೇತನಕ್ಕೊಂದು ಸಮಗ್ರ ದೃಷ್ಟಿಕೋನ' ವಿಷಯದ ಕುರಿತು ಮಾತನಾಡಿದ ಅವರು, `135 ದಶಲಕ್ಷ ಲೀಟರ್ ಜಲಾಶಯಕ್ಕೆ ಹರಿದು ಬರುತ್ತದೆ ಎಂದು ಜಲಮಂಡಳಿ ಅಂದಾಜಿಸಿದೆ. ಅದು ಅಸಾಧ್ಯದ ಸಂಗತಿ. ನಂದಿ ಬೆಟ್ಟದಿಂದ ಜಲಾಶಯಕ್ಕೆ ಹರಿದು ಬರುವಾಗ ಆ ಪ್ರಮಾಣದ ನೀರು ಉಳಿಯುವುದು ಕಷ್ಟಸಾಧ್ಯ' ಎಂದರು.

`ಕಿಂಡಿ ಅಣೆಕಟ್ಟೆಗಳನ್ನು ನಿರ್ಮಿಸುವ ಮೂಲಕ ತಿಪ್ಪಗೊಂಡನಹಳ್ಳಿಯನ್ನು ಪುನಶ್ಚೇತನ ಮಾಡಬಹುದು ಎಂಬ ವಾದ ಇದೆ. ತಿಪ್ಪಗೊಂಡನಗಳ್ಳಿ ನದಿ ಹರಿಯುವ ಪ್ರದೇಶದಲ್ಲಿ ಎರಡು ಲಕ್ಷಕ್ಕೂ ಅಧಿಕ ಬೋರ್‌ವೆಲ್‌ಗಳು ಇವೆ. ಅಂತರ್ಜಲದ ಮಟ್ಟ 800 ಅಡಿಗಿಂತಲೂ ಕೆಳಕ್ಕೆ ಇಳಿದಿದೆ. ಹೀಗಾಗಿ ಕಿಂಡಿ ಅಣೆಕಟ್ಟೆ ಸಹ ಸದ್ಯಕ್ಕೆ ಕಾರ್ಯಸಾಧು ಅಲ್ಲ' ಎಂದು ಅವರು ವಿಶ್ಲೇಷಿಸಿದರು.

`ಹೃದಯದಲ್ಲಿ ಅರ್ಕಾವತಿ ಹರಿಯುತ್ತಿದ್ದಾಳೆ'
`ಅರ್ಕಾವತಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಊರುಗಳ ಜೀವಾಳ. ನನ್ನ ಹೃದಯದಲ್ಲಿ ಅರ್ಕಾವತಿ ನದಿ ಹರಿಯುತ್ತಿದ್ದಾಳೆ' ಎಂದು ಡಾ. ರಾಜೇಂದ್ರ ಸಿಂಗ್ ನುಡಿದರು.

ಸಮಾರಂಭದಲ್ಲಿ ಮಾತನಾಡಿದ ಅವರು, `ನಾನು ರಾಜಸ್ತಾನದಿಂದ ಬಂದವನು. ನನ್ನ ರಾಜ್ಯದಲ್ಲಿ ವರ್ಷಕ್ಕೆ 330 ಮಿ.ಮೀ. ಮಳೆಯಾಗುತ್ತದೆ. ಕರ್ನಾಟಕದಲ್ಲಿ ಮಳೆಗೆ ಬರ ಇಲ್ಲ. ಆದರೆ, ಇಲ್ಲಿನ ಜನರಿಗೆ ನೀರಿನ ಬಳಕೆಯ ಶಿಸ್ತು ಇಲ್ಲ. ನೀರಿನ ದುರ್ಬಳಕೆ ಮಾಡುತ್ತಿದ್ದಾರೆ' ಎಂದು ಬೇಸರ ವ್ಯಕ್ತಪಡಿಸಿದರು.

`ಗಂಗಾ ನದಿಯಂತೆ ಅರ್ಕಾವತಿ ನದಿಗೆ ಆಪತ್ತು ಬಂದಿಲ್ಲ. ಗಂಗಾನದಿಗೆ ಕೊಳಚೆ ನೀರು ಬಿಡಲು ರಾಜ್ಯಾದೇಶ ಆಗಿದೆ. ಆದರೆ, ಇಲ್ಲಿ ಅಂತಹ ಕಠಿಣ ಪರಿಸ್ಥಿತಿ ಇಲ್ಲ. ಒಂದು ಕಡೆಯಲ್ಲಿ ನೀರಿನ ಸಂರಕ್ಷಣೆ ಕಾರ್ಯ ನಡೆದರೆ, ಇನ್ನೊಂದು ಕಡೆಯಲ್ಲಿ ನೀರನ್ನು ಶಿಸ್ತಿನಿಂದ ಬಳಸಬೇಕು' ಎಂದು ಅವರು ಕಿವಿಮಾತು ಹೇಳಿದರು.

`ಅರ್ಕಾವತಿ ನದಿಯ ವ್ಯಾಪಕ ಅತಿಕ್ರಮಣ ಮಾಡಲಾಗಿದೆ. ನದಿಗೆ ಕೊಳಚೆ ನೀರು ಎಗ್ಗಿಲ್ಲದೆ ಸೇರಿ ಮಲಿನವಾಗುತ್ತಿದೆ. ನದಿ ಹುಟ್ಟುವ ಭಾಗದಲ್ಲಿ ಹಾಗೂ ನದಿ ದಂಡೆಯಲ್ಲಿ ಅವೈಜ್ಞಾನಿಕವಾಗಿ ಗಣಿಗಾರಿಕೆ ನಡೆಯುತ್ತಿದೆ. ಇವೆಲ್ಲ ಅರ್ಕಾವತಿ ನದಿ ಬತ್ತಿ ಹೋಗಲು ಕಾರಣಗಳು' ಎಂದು ಅವರು ವಿಶ್ಲೇಷಿಸಿದರು.

ಒಂದು ಕಡೆಯಲ್ಲಿ 10,500 ಎಕರೆ ಜಾಗದಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಬಂಡವಾಳ ಹೂಡಿಕೆ ಪಾರ್ಕ್ ನಿರ್ಮಾಣಕ್ಕೆ ಭೂಸ್ವಾಧೀನಕ್ಕೆ ಮುಂದಾಗಿದೆ. ಇನ್ನೊಂದು ಕಡೆಯಲ್ಲಿ ಅರ್ಕಾವತಿ ನದಿ ಪುನಶ್ಚೇತನದ ಮಾತನ್ನಾಡುತ್ತಿದೆ. ಅರ್ಕಾವತಿ ಸುತ್ತಮುತ್ತಲಿನ ಪ್ರದೇಶದಲ್ಲೇ ಈ ಪಾರ್ಕ್ ನಿರ್ಮಾಣವಾಗುತ್ತಿದೆ. ಸರ್ಕಾರದ ನಿಲುವು ದ್ವಂದ್ವದಿಂದ ಕೂಡಿದೆ.
- ಸಿ.ನಾರಾಯಣಸ್ವಾಮಿ, ಮಾಜಿ ಸಂಸದ

ಸರ್ಕಾರದ ನಿರ್ಲಕ್ಷ್ಯದಿಂದ ಅರ್ಕಾವತಿ ಹಾಗೂ ಉಪನದಿಗಳ ಜಲಾನಯನ ಪ್ರದೇಶಗಳಲ್ಲಿ ನಾಯಿ ಕೊಡೆಗಳಂತೆ ಅಕ್ರಮ ಬಡಾವಣೆಗಳು, ಕೈಗಾರಿಕೆಗಳು ತಲೆ ಎತ್ತುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಪುನಶ್ಚೇತನ ಕನಸಿನ ಮಾತು.
- ನಟರಾಜ ಗೌಡ, ಹೋರಾಟಗಾರ

ರಾಜಕಾಲುವೆಗಳನ್ನು ರಾಜಕಾರಣಿಗಳೇ ಒತ್ತುವರಿ ಮಾಡಿದ್ದಾರೆ. ಇವುಗಳ ಒತ್ತುವರಿ ತೆರವು ಮಾಡಿದರೆ ನೀರು ಸರಾಗವಾಗಿ ಹರಿದು ಹೋಗುತ್ತದೆ. ಒತ್ತುವರಿ ಸಹ ಅರ್ಕಾವತಿ ನದಿ ಬತ್ತಲು ಕಾರಣ.
- ರಾಮಕೃಷ್ಣಯ್ಯ, ಹೆಸರಘಟ್ಟ

ನಂದಿಬೆಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ನೀಲಗಿರಿ ಮರಗಳನ್ನು ಅಧಿಕ ಪ್ರಮಾಣದಲ್ಲಿ ಬೆಳೆಸಲಾಗುತ್ತಿದೆ. ಈ ಮರಗಳನ್ನು ಕಡಿದು ಹಾಕಬೇಕು. ಅಲ್ಲದೆ ಉತ್ತಮ ತಳಿಯ ಗಿಡಗಳನ್ನು ನೆಡಬೇಕು.
- ಹರೀಶ್, ಬೆಂಗಳೂರು

ಅರ್ಕಾವತಿ ಪುನಶ್ಚೇತನದ ಬಗ್ಗೆ ಈಗ ರೂಪಿಸುತ್ತಿರುವ ಯೋಜನೆಗಳು ಶಸ್ತ್ರಚಿಕಿತ್ಸೆ ಆದ ರೋಗಿಗೆ ಇಂಜೆಕ್ಷನ್ ಕೊಟ್ಟ ಹಾಗೆ ಆಗುತ್ತಿದೆ. ಇದು ಪ್ರಯೋಜನಕಾರಿ ಅಲ್ಲ. ಶಾಶ್ವತ ಯೋಜನೆಯನ್ನು ರೂಪಿಸುವುದೇ ಏಕೈಕ ಮಾರ್ಗ.
- ಹನುಮಂತರಾಯಪ್ಪ, ದೊಡ್ಡಬಳ್ಳಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT