ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ತಮಸ್ ಕಬೀರ್ ವಿರುದ್ಧ ಸ್ವತಂತ್ರ ತನಿಖೆಗೆ ಒತ್ತಾಯ

ಪ್ರಕಟವಾಗುವ ಮುನ್ನವೇ ತೀರ್ಪು ಸೋರಿಕೆ
Last Updated 19 ಜುಲೈ 2013, 19:59 IST
ಅಕ್ಷರ ಗಾತ್ರ

ಲಖನೌ (ಐಎಎನ್‌ಎಸ್): ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯ (ಎನ್‌ಇಇಟಿ)  ತೀರ್ಪು ಪ್ರಕಟವಾಗುವುದಕ್ಕೂ ಮುನ್ನವೇ ಸೋರಿಕೆಯಾಗಿರುವ ಆಪಾದನೆಗೆ ಸಂಬಂಧಿಸಿದಂತೆ, ಮುಖ್ಯ ನ್ಯಾಯಮೂರ್ತಿಯಾಗಿ ಮೊನ್ನೆಯಷ್ಟೇ ನಿವೃತ್ತರಾದ  (ಜುಲೈ 18ರಂದು) ಅಲ್ತಮಸ್ ಕಬೀರ್ ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ಇಲ್ಲಿನ ಸಾಮಾಜಿಕ ಕಾರ್ಯಕರ್ತ ಮತ್ತು ವಕೀಲರೊಬ್ಬರು  ಮುಖ್ಯ  ನ್ಯಾಯಮೂರ್ತಿಯವರಿಗೆ ಪತ್ರ ಬರೆದಿದ್ದಾರೆ.

ಅಲ್ತಮಸ್ ಕಬೀರ್ ಅವರ  ನಿವೃತ್ತಿ ದಿನದಂದು ನ್ಯಾಯಪೀಠವು ಸಂಬಂಧಿಸಿದ ತೀರ್ಪು ಪ್ರಕಟಿಸುವ ಮುನ್ನವೇ ಸೋರಿಕೆಯಾಗಿರುವ ಆರೋಪದ ಹಿನ್ನೆಲೆಯಲ್ಲಿ  ತನಿಖೆ ಅಗತ್ಯ. ಸುಪ್ರೀಂ ಕೋರ್ಟ್‌ನ ನಿವೃತ್ತ ಮಾಜಿ ಮುಖ್ಯ ನ್ಯಾಯಮೂರ್ತಿ ಅವರ ನೇತೃತ್ವದಲ್ಲಿ ಈ ಕುರಿತು ಸ್ವತಂತ್ರ ತನಿಖೆ ನಡೆಸಬೇಕು  ಎಂದು ಅಶೋಕ್ ಪಾಂಡೆ ಮತ್ತು ನೂತನ್ ಠಾಕೂರ್ ಅವರು ಒತ್ತಾಯಿಸಿದ್ದಾರೆ. ಅಲ್ತಮಸ್ ಅವರು ಈ ನ್ಯಾಯಪೀಠದ ಮುಖ್ಯಸ್ಥರಾಗಿದ್ದರು.

ವೈದ್ಯಕೀಯ ಕೋರ್ಸ್‌ಗಳಿಗೆ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಪ್ರವೇಶ ಪರೀಕ್ಷೆ ನಡೆಸಲು ಉದ್ದೇಶಿಸಿದ್ದ ಪ್ರವೇಶ ಪರೀಕ್ಷೆಯ ವಿರುದ್ಧ ಖಾಸಗಿ ಕಾಲೇಜುಗಳು ಮೇಲ್ಮನವಿ ಸಲ್ಲಿಸಿದ್ದವು.

ಈ ಪ್ರಕರಣದಲ್ಲಿ,  `ಎಂಸಿಐ ಗೆ ಪ್ರವೇಶ ಪರೀಕ್ಷೆ ನಡೆಸುವ ಅಧಿಕಾರವಿಲ್ಲ' ಎಂಬ ತೀರ್ಪು ಹೊರಬೀಳುತ್ತದೆಂದು ಹಾಗೂ `ನ್ಯಾಯಮೂರ್ತಿ ದವೆ ಅವರು ಇದಕ್ಕೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ' ಎಂದು ಮೊದಲೇ ದಟ್ಟವಾಗಿ ಕೇಳಿಬಂದಿತ್ತು. ಮೂರು  ಗಂಟೆಗಳ ನಂತರ ಪ್ರಕಟವಾದ ತೀರ್ಪು ಕೂಡ  ಬಹುತೇಕ ಅದೇ ರೀತಿ ಇತ್ತು  ಎಂದು ವಿವರಿಸಲಾಗಿದೆ.

ಗುಜರಾತ್ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಭಾಸ್ಕರ್ ಭಟ್ಟಾಚಾರ್ಯ ಅವರಿಗೆ ಬಡ್ತಿ ನೀಡದಿರುವ ಬಗ್ಗೆ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ನೀಡುವ ಸಂದರ್ಭದಲ್ಲಿ ನೇಮಕಾತಿ ಮಂಡಳಿ ಮೇಲೆ ಒತ್ತಡ ಹೇರಲಾಗುತ್ತದೆ ಎಂಬ ದೂರುಗಳ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT