ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಧಿ ಮುಗಿದ ಪೌಷ್ಟಿಕ ಆಹಾರ ಪೊಟ್ಟಣ ವಿತರಣೆ

Last Updated 12 ಜನವರಿ 2012, 6:20 IST
ಅಕ್ಷರ ಗಾತ್ರ

ಚಿಕ್ಕೋಡಿ: ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಪ್ರಮಾಣವನ್ನು ತಗ್ಗಿಸಲು ಸರಕಾರ ನಾನಾ ರೀತಿಯಲ್ಲಿ ಶ್ರಮಿಸುತ್ತಿರುವ ಅಂಶ ಒಂದೆಡೆಯಾದರೆ, ಅವಧಿ ಮೀರಿದ ಪೌಷ್ಟಿಕ ಆಹಾರದ ಪೊಟ್ಟಣಗಳನ್ನು ಅಂಗನವಾಡಿ ಕೇಂದ್ರವೊಂದರ ಮಕ್ಕಳಿಗೆ ವಿತರಿಸಿರುವ ಪ್ರಕರಣ ತಾಲ್ಲೂಕಿನ ಸದಲಗಾ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.

ಸದಲಗಾ ಪಟ್ಟಣದ ಅಂಗನವಾಡಿ ಕೇಂದ್ರ ನಂ-4ರಲ್ಲಿ ಕೆಲವು ಮಕ್ಕಳಿಗೆ ಅವಧಿ ಮೀರಿದ ಪೌಷ್ಠಿಕ ಆಹಾರ ಪೊಟ್ಟಣಗಳನ್ನು ವಿತರಿಸಿರುವ ಅಂಶವನ್ನು ಸಂಬಂಧಿಸಿದ ಪಾಲಕರು ಬಹಿರಂಗಪಡಿಸಿದ್ದಾರೆ. ಅಂಗನವಾಡಿ ಕೇಂದ್ರಗಳಿಗೆ ಬರುವ ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಸರಕಾರ ಪೌಷ್ಟಿಕ ಆಹಾರವನ್ನು ನೀಡಲಾಗುತ್ತದೆ.
 
ಆದರೆ, ಸದಲಗಾ ಪಟ್ಟಣದ ಈ ಅಂಗನವಾಡಿ ಕೇಂದ್ರದಲ್ಲಿ ಕೆಲವು ಮಕ್ಕಳಿಗೆ ಅವಧಿ ಮೀರಿದ ಅಮೈಲೆಸ್ ಸಮೃದ್ದ ಪೌಷ್ಟಿಕ ಆಹಾರ, ನ್ಯೂಟ್ರಿ ಕೇಸರಿ ಭಾತ್‌ಗಳ ಏಳು ಪೊಟ್ಟಣಗಳನ್ನು ವಿತರಿಸಲಾಗಿದ್ದು, ನ್ಯೂಟ್ರಿ ಮಸಾಲಾ ಎಂಬ ಪಾಕೀಟ್ ಮೇಲೆ ದಿನಾಂಕವನ್ನೇ ನಮೂದಿಸಲಾಗಿಲ್ಲ ಎಂದು ಪಾಲಕರು ದೂರಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಬಹುತೇಕ ಪಾಲಕರು ಪೊಟ್ಟಣಗಳ ಮೇಲಿರುವ ದಿನಾಂಕಗಳನ್ನು ಗಮನಿಸದೇ ಮಕ್ಕಳಿಗೆ ಆಹಾರವನ್ನು ತಿನ್ನಲು ಕೊಡುತ್ತಾರೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದ್ದು, ಇಲಾಖೆು ಅಧಿಕಾರಿಗಳು ಮತ್ತು ಸಿಬ್ಬಂದಿವರ್ಗದವರು ಪೌಷ್ಟಿಕ ಆಹಾರ ಪೊಟ್ಟಣಗಳನ್ನು ಪರಿಶೀಲಿಸಿದ ನಂತರವೇ ಮಕ್ಕಳಿಗೆ ವಿತರಣೆ ಮಾಡಬೇಕು ಎಂದು ಪಾಲಕರು ಆಗ್ರಹಿಸಿದ್ದಾರೆ.

ಈ ಕುರಿತು ಸಿಡಿಪಿಓ ಎಸ್.ಡಿ.ಕುಲಕರ್ಣಿ ಅವರನ್ನು ಸಂಪರ್ಕಿಸಿದಾಗ, ತಾವು ಖುದ್ದಾಗಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT