ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವೈಜ್ಞಾನಿಕ ಏಕರೂಪ ಪಠ್ಯಕ್ರಮ ಜಾರಿ: ಆರೋಪ

Last Updated 23 ಜುಲೈ 2012, 9:20 IST
ಅಕ್ಷರ ಗಾತ್ರ

ದೇವದುರ್ಗ: ಈ ಬಾರಿಯ ಶೈಕ್ಷಣಿಕ ವರ್ಷದಿಂದ 5, 8ನೇ ತರಗತಿ ಮತ್ತು ಪ್ರಥಮ ಪಿಯುಸಿಗೆ (ವಿಜ್ಞಾನ ವಿಭಾಗ) ಜಾರಿಗೆ ತರಲಾಗಿರುವ ಕೇಂದ್ರೀಯ ಏಕರೂಪ (ಸಿಬಿಎಸ್‌ಸಿ) ಪಠ್ಯಕ್ರಮ ವಿಧಾನ ಅವೈಜ್ಞಾನಿಕ ಎಂದು ಡೆಮಾಕ್ರೆಟಿಕ್ ಟೀಚರ್ಸ್‌ ಆರ್ಗನೈಸೇಷನ್ (ಡಿಟಿಒ) ರಾಯಚೂರು ಜಿಲ್ಲಾ ಸಮಿತಿ ಸಂಚಾಲಕ ಡಾ. ಚಂದ್ರಗಿರೀಶ್ ಆರೋಪಿಸಿದರು.

ಪಟ್ಟಣದ ಬಸವ ಕಲಾ ಮಹಾವಿದ್ಯಾಲಯದಲ್ಲಿ ಭಾನುವಾರ ತಾಲ್ಲೂಕು ಡೆಮಾಕ್ರೆಟಿಕ್ ಟೀಚರ್ಸ್‌ ಆರ್ಗನೈಸೇಷನ್ ತಾಲ್ಲೂಕು ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ನೂತನ ಏಕರೂಪ ಪಠ್ಯಕ್ರಮದ ಸಾಧಕ, ಬಾಧಕಗಳ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಪಠ್ಯಕ್ರಮ ಬದಲಾವಣೆಗೆ ಯಾವುದೇ ತಕರಾರು ಇಲ್ಲ. ಆದರೆ ಬದಲಾವಣೆ ಮತ್ತು ಜಾರಿಗೊಳಿಸುವ ಪೂರ್ವದಲ್ಲಿ ಸಂಬಂಧಿಸಿದವರ ಅಭಿಪ್ರಾಯ ಸಂಗ್ರಹಿಸುವುದು ಮುಖ್ಯ. ಕೇವಲ ಪಠ್ಯಕ್ರಮ ಬದಲಾವಣೆ ಮಾಡಿದರೆ ಮಕ್ಕಳ ಶೈಕ್ಷಣಿಕ ಬೆಳವಣಿಗೆ ಸಾಧ್ಯವಿಲ್ಲ. ಅದರ ಜೊತೆಗೆ ಎಲ್ಲ ಸೌಲಭ್ಯಗಳ ಕ್ರೋಡೀಕರಣ ಅಗತ್ಯ ಎಂದರು. ಕೆಲವೇ ಕೆಲವು ತಜ್ಞರ ಅಭಿಪ್ರಾಯದಿಂದ ಇಡೀ ವ್ಯವಸ್ಥೆ ಬದಲಾವಣೆ ಸರಿಯಾದ ಕ್ರಮವಲ್ಲ. ಪಠ್ಯಕ್ರಮ ಬದಲಾವಣೆಯಿಂದ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎಂಬುದು ಸರಿಯಲ್ಲ ಎಂದರು.

ವಾಪಸ್: ಸಂಘಟನೆಯ ರಾಜ್ಯ ಸಂಚಾಲಕ ಬಿ.ಭಗವಾನ್‌ರೆಡ್ಡಿ ಅವರು ಮಾತನಾಡಿ, ಸರ್ಕಾರಗಳ ಏಕಪಕ್ಷೀಯ ನಿರ್ಧಾರ ಇಡೀ ಶೈಕ್ಷಣಿಕ ವ್ಯವಸ್ಥೆಗೆ ವಿರೋಧವಾಗಿದ್ದು, ಕೂಡಲೇ ಇದನ್ನು ವಾಪಸ್ ಪಡೆದು ವೈಜ್ಞಾನಿಕ ತಳಹದಿಯ ಮೇಲೆ ರಚಿತವಾಗುವ ಪಠ್ಯಕ್ರಮ ಜಾರಿಗೊಳಿಸಿದಾಗ ಮಾತ್ರ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಅನುಕೂಲವಾಗುತ್ತದೆ ಎಂದರು.

ಸಿಬಿಎಸ್‌ಸಿ ಜಾರಿಗೊಳಿಸುವ ಪೂರ್ವದಲ್ಲಿ ಸಂಬಂಧಿಸಿದ ಶಿಕ್ಷಕರ ಮತ್ತು ವಿಷಯ ತಜ್ಞರ ಅಭಿಪ್ರಾಯ ಸಂಗ್ರಹಿಸುವುದು ಅಗತ್ಯವಾಗಿದ್ದರೂ ಸರ್ಕಾರಗಳ ತುರ್ತು ನಿರ್ಧಾರ ಸರಿಯಲ್ಲ ಎಂದು ಖಂಡಿಸಿದರು.

ಡಿಟಿಒ ತಾಲ್ಲೂಕು ಸಂಚಾಲಕ ಎಂ.ಜಿ. ಸತೀಶ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಅಧ್ಯಕ್ಷ ವಿರೂಪಾಕ್ಷಪ್ಪಗೌಡ, ಪ್ರಾಚಾರ್ಯ ಮುನಿಯಪ್ಪ ನಾಗೋಲಿ, ಉಪನ್ಯಾಸಕ ಶಿವಗೇನಿ, ಸಂಘಟನೆಯ ಮುಖಂಡರಾದ ಸೈಯದ್ ಜಾಫರ್, ನಿಂಗಪ್ಪ ನಾಯಕ ಶಿಕ್ಷಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ವಿತರಣೆ

ಕವಿತಾಳ: ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಶನಿವಾರ ಬಿತ್ತನೆ ಬೀಜ ವಿತರಣೆ ಮಾಡಲಾಯಿತು.
ಸಜ್ಜೆ ಬೀಜ, ಪೋಷಕಾಂಶ ಕಲ್ಪವೃಕ್ಷ ರಜೋಬಿಯಂ ಮತ್ತು ತ್ರೈಕೋಡರ್ಮಾ ವಿತರಿಸಿದ ಕೃಷಿ ಸಹಾಯಕ ನಾರಾಯಣ ಕುಲ್ಲೊಳ್ಳಿ, ಇನ್‌ಸಿಂಪ್ ಯೋಜನೆಯಡಿ ಬೀಜ ಮತ್ತು ಪೋಷಕಾಂಶವನ್ನು ನೂರು ರೈತರಿಗೆ ಉಚಿತವಾಗಿ ನೀಡಲಾಗುತ್ತಿದೆ.

ರೈತರು ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು. ವೈಜ್ಞಾನಿಕ ವಿಧಾನ ಅಳವಡಿಸಿಕೊಂಡು ಹೆಚ್ಚು  ಇಳುವರಿ ಪಡೆಯಬೇಕು ಎಂದು ಹೇಳಿದರು. ರೈತರಾದ ಯಲ್ಲಪ್ಪ ಕೊಡ್ಲಿ, ಸಿಬ್ಬಂದಿ ಗೂಡಸಾಬ್ ಇತರರು ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT