ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಲಿ ವೈವಾಹಿಕ ಶಿಕ್ಷಣ ಈಗ ಶುರು!

Last Updated 19 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮಕ್ಕಳಿಗೆ ಹನ್ನೊಂದು ಹನ್ನೆರಡು ವರ್ಷಗಳಾಗುವ ಹೊತ್ತಿಗೆ ದೈಹಿಕ ಬದಲಾವಣೆಗಳು ಶುರುವಾಗುತ್ತವೆ. ಇದು ಸಾಕಷ್ಟು ಮಾನಸಿಕ ತಳಮಳ, ಆತಂಕಗಳ ಮೂಲವೂ ಆಗಬಹುದು. ಹಾಗಾಗಿ ಇಲ್ಲಿಂದ ಮಾನವನ ಪೂರ್ಣ ಲೈಂಗಿಕತೆಯ ಚಿತ್ರಣವನ್ನು ಮಕ್ಕಳಿಗೆ ಒದಗಿಸಲೇಬೇಕು. ಜೊತೆಗೆ ಜವಾಬ್ದಾರಿಯುತ ಲೈಂಗಿಕ ನಡವಳಿಕೆಗಳ ಬಗೆಗೆ ಅವರಲ್ಲಿ ಜಾಗೃತಿಯನ್ನೂ ಮೂಡಿಸಬೇಕು. ಹಾಗಾಗಿ ಈ ಕೆಲಸವನ್ನು ಪೋಷಕರು ಇತರರಿಗೆ ಒಪ್ಪಿಸಿ, ಮಕ್ಕಳ ಭವಿಷ್ಯವನ್ನು ತಮಗೆ ಬೇಕಾದಂತೆ ರೂಪಿಸುವ ಅವಕಾಶವನ್ನು ಕಳೆದುಕೊಳ್ಳಬಾರದು. ಇದರ ಬಗೆಗೆ ಕೆಲವು ಸಲಹೆಗಳು ಹೀಗಿವೆ:

* ಹೆಣ್ಣು, ಗಂಡು ಮಕ್ಕಳಲ್ಲಿ ಹದಿವಯಸ್ಸಿನಿಂದ ಆಗುವ ದೈಹಿಕ ಬದಲಾವಣೆಗಳನ್ನು ಇಬ್ಬರಿಗೂ ವಿವರಿಸಿ. ಈ ರೀತಿಯ ಹಂತಗಳನ್ನು ನಾವೆಲ್ಲಾ ಅನುಭವಿಸಿದ್ದೇವೆ, ಹಾಗಾಗಿ ಭಯಪಡುವ ಅಗತ್ಯವಿಲ್ಲ ಎಂದು ಧೈರ್ಯ ನೀಡಿ.

* ಲೈಂಗಿಕ ಕ್ರಿಯೆಯ ಸಮಗ್ರ ವಿವರಣೆಯನ್ನು ವೈಜ್ಞಾನಿಕವಾಗಿ, ಸಾಧ್ಯವಿದ್ದರೆ ಸಚಿತ್ರವಾಗಿ ವಿವರಿಸಿ. ಮಕ್ಕಳು ಅವರ ಭಾವನೆಗಳನ್ನು ಸಹಜವಾಗಿ ಆನಂದಿಸಬಹುದೆಂದೂ, ಆದರೆ ನಿಜವಾದ ಅನುಭವಕ್ಕೆ ಸಮಯವಿನ್ನೂ ಸೂಕ್ತವಾದುದಲ್ಲವೆಂದೂ ತಿಳಿಸಿ. ಭಿನ್ನ ಲಿಂಗದವರೊಡನೆ ಈ ವಯಸ್ಸಿನಲ್ಲಿ ಮೂಡುವ ಆಕರ್ಷಣೆ ಸಹಜವಾದದ್ದು, ಅದನ್ನು ಜವಾಬ್ದಾರಿಯುತವಾಗಿ ನಿರ್ವಹಿಬೇಕೆಂದು ಮನವರಿಕೆ ಮಾಡಿಕೊಡಿ.

* ಲೈಂಗಿಕ ಕ್ರಿಯೆ ಒಂದು ಅನನ್ಯವಾದ ಅನುಭವ, ಇದು ಗಂಡು ಹೆಣ್ಣುಗಳನ್ನು ಪ್ರೀತಿಯಲ್ಲಿ ಬಂಧಿಸಿ ಮಾನವ ಕುಲ ಮುಂದುವರಿಸಲು ಸಹಾಯ ಮಾಡುತ್ತದೆ, ಆದ್ದರಿಂದ ವಿವಾಹದ ನಂತರ ಮಾತ್ರ ಇದನ್ನು ಪಡೆಯಬೇಕು, ಇಲ್ಲದಿದ್ದರೆ ಸಾಮಾಜಿಕ, ದೈಹಿಕ ತೊಂದರೆಗಳಾಗಬಹುದು ಎಂದು ವಿವರಿಸಿ.

* ಲೈಂಗಿಕ ಜೀವನದಿಂದ ಸಿಗುವ ತೃಪ್ತಿಗಾಗಿ ಮಕ್ಕಳು ಸಾಂಸಾರಿಕ ಹೊಣೆಗಾರಿಕೆಗೆ ಸಿದ್ಧರಾಗಿರಬೇಕು. ಆದ್ದರಿಂದ ಮೊದಲು ಅವರು ವಿದ್ಯಾಭ್ಯಾಸದ ಬಗ್ಗೆ ಮನಸ್ಸನ್ನು ಕೇಂದ್ರೀಕರಿಸಿ ಜೀವನವನ್ನು ರೂಪಿಸಿಕೊಳ್ಳಬೇಕು ಎಂಬುದನ್ನು ಮನಗಾಣಿಸಿ.

* ಲೈಂಗಿಕ ತೃಪ್ತಿ ಬರೀ ದೈಹಿಕವಾದದ್ದಲ್ಲ, ಇದರಲ್ಲಿ ಮನಸ್ಸಿನ ಪಾಲೇ ಹೆಚ್ಚು. ಹಾಗಾಗಿ ಪತಿ- ಪತ್ನಿಯ ಮಧ್ಯೆ ಮಾತ್ರ ಇದು ಸೀಮಿತವಾಗಿದ್ದರೆ ಬಹುಕಾಲ ಇದನ್ನು ಹೊಂದಲು ಸಾಧ್ಯ ಎನ್ನುವುದನ್ನು ಉದಾಹರಣೆಗಳೊಂದಿಗೆ ವಿವರಿಸಿ.

* ಇದು ಎಲ್ಲ ಪ್ರಾಣಿ ವರ್ಗಕ್ಕೆ ಸಹಜವಾದದ್ದು ಮತ್ತು ಇದರಲ್ಲಿ ಮುಚ್ಚಿಡುವ ಅಥವಾ ನಾಚಿಕೆ ಪಟ್ಟುಕೊಳ್ಳುವಂತಹದ್ದೇನೂ ಇರುವುದಿಲ್ಲ ಎಂದು ತಿಳಿಸಿ.

* ಲೈಂಗಿಕ ಶುಚಿತ್ವ ಕಾಪಾಡಿಕೊಳ್ಳುವ ವಿಧಾನ ತಿಳಿಸಿ. ಲೈಂಗಿಕ ರೋಗಗಳ ಬಗೆಗೆ ಮಾಹಿತಿ ನೀಡಿ ಮತ್ತು ಅದರಿಂದ ದೂರ ಇರುವುದು ಹೇಗೆಂದು ತಿಳಿಸಿ.

* ಇತರರು ಮಕ್ಕಳನ್ನು ಲೈಂಗಿಕವಾಗಿ ದುರುಪಯೋಗ ಪಡಿಸಿಕೊಳ್ಳುವ ಬಗೆಗೆ ಎಚ್ಚರಿಸಿ. ಮಕ್ಕಳು ಅತ್ಯಾಚಾರದ ದೃಶ್ಯಗಳನ್ನು ಟಿ.ವಿ, ಸಿನಿಮಾಗಳಲ್ಲಿ ನೋಡುವ ಸಾಧ್ಯತೆ ಇರುವುದರಿಂದ ಇದರ ಬಗೆಗೆ ಕಾನೂನು ಕಟ್ಟಳೆಗಳ ಸಮೇತ ವಿವರಿಸಿ.

* ಹಸ್ತಮೈಥುನದ ಬಗೆಗೆ ಇರಬಹುದಾದ ತಪ್ಪು ಕಲ್ಪನೆಗಳನ್ನು ನಿವಾರಿಸಿ. ಹೆಣ್ಣು ಮಕ್ಕಳಿಗೆ ಋತುಚಕ್ರದ ಬಗೆಗೆ ಮತ್ತು ಗಂಡು ಮಕ್ಕಳಿಗೆ ಸ್ವಪ್ನ ಸ್ಖಲನ ಮುಂತಾದವುಗಳ ಬಗೆಗೆ ವೈಜ್ಞಾನಿಕ ವಿವರಣೆ ನೀಡಿ.

* ಹೆಣ್ಣು ಮಕ್ಕಳಿಗೆ ಮೊದಲ ಮಿಲನ ಮತ್ತು ಹೆರಿಗೆ ತೀರಾ ನೋವಿನಿಂದ ಕೂಡಿರುತ್ತದೆ ಎನ್ನುವ ತಪ್ಪು ಕಲ್ಪನೆಗಳಿದ್ದರೆ ಅದನ್ನು ಹೋಗಲಾಡಿಸಿ.

* ಹದಿನೈದು ವರ್ಷದವರಾಗುವ ಹೊತ್ತಿಗೆ ಮಕ್ಕಳಿಗೆ ಸಲಿಂಗ ಕಾಮದ ಬಗೆಗೆ ತಿಳಿವಳಿಕೆ ನೀಡಿ.

* ಗರ್ಭನಿರೋಧಕಗಳ ಬಗ್ಗೆ ಮಾಹಿತಿ ನೀಡಿ. ವೈವಾಹಿಕ ಜೀವನದಲ್ಲಿ ಮಾತ್ರ ಇದನ್ನೆಲ್ಲ ಬಳಸಬೇಕೆಂದು ಎಚ್ಚರಿಸಿ.

* ಹದಿವಯಸ್ಸಿನ ಮಕ್ಕಳಿಗೆ ವೈಜ್ಞಾನಿಕವಾಗಿ ಬರೆದಿರುವ ಪುಸ್ತಕವನ್ನು ಓದಲು ಕೊಡಿ. ಹಾಗೆಯೇ ಅಶ್ಲೀಲ ಸಾಹಿತ್ಯ ಮತ್ತು ದೃಶ್ಯಾವಳಿಗಳಿಂದ ದಾರಿ ತಪ್ಪುವ ಬಗೆಗೆ ಎಚ್ಚರಿಸಿ. ಅದರಲ್ಲಿ ಕೊಟ್ಟಿರುವುದೆಲ್ಲಾ ಹಣ ಮಾಡುವ ಉದ್ದೇಶದಿಂದ ಬರಿಯ ವಿಕೃತ,  ವೈಭವೀಕೃತ ವಿವರಣೆ ಎಂದು ಮನದಟ್ಟು ಮಾಡಿ.

* ಸ್ನೇಹಿತರ ಒತ್ತಾಯ ಅಥವಾ ಛೇಡನೆಗೆ ಒಳಗಾಗಿ ಯಾವುದೇ ಸಾಹಸಕ್ಕೆ ಇಳಿಯುವ ಮುನ್ನ ನಿಮ್ಮ ಸಲಹೆ ಪಡೆಯಲು ಹೇಳಿ. `ನೀನು ಗಂಡ್ಸಲ್ವಾ ಬಾ~ `ಏ ನಿನ್ನ ಹತ್ರ ಏನೂ ಆಗಲ್ಲ, ನೀನು ಹೆಣ್ಣೇ ಅಲ್ಲ~ ಎಂಬಂತಹ ಮಾತುಗಳಿಗೆ ಬಲಿಯಾಗದಿರಲು ತಿಳಿಸಿ.

* ಮಕ್ಕಳಿಂದ ಪ್ರಶ್ನೆಗಳನ್ನು ಆಹ್ವಾನಿಸಿ. ಅವರ ಅನುಭವಗಳನ್ನು ಕೇಳಿ ಮತ್ತು ಅದಕ್ಕೆ ವೈಜ್ಞಾನಿಕ ವಿವರಣೆ ನೀಡಿ. ಅವರ ಹಿಂಜರಿಕೆ, ಮುಜುಗರಗಳನ್ನು ಹೋಗಲಾಡಿಸಿ.

ಇದೆಲ್ಲದರ ಒಟ್ಟು ಉದ್ದೇಶ ಮಕ್ಕಳಿಗೆ ಸಮಗ್ರ ಮತ್ತು ಸರಿಯಾದ ಮಾಹಿತಿ ನೀಡುವುದಷ್ಟೇ ಅಲ್ಲ, ಎಲ್ಲ ಸಂದರ್ಭಗಳಲ್ಲೂ ಅವರ ಸಹಾಯಕ್ಕೆ ಪೋಷಕರು ಇದ್ದಾರೆಂಬ ಭರವಸೆಯನ್ನು ಮೂಡಿಸುವುದೂ ಆಗಿರುತ್ತದೆ. ಹೀಗಾದಾಗ ಮಕ್ಕಳಲ್ಲಿ ಹಿಂಜರಿಕೆ, ಪಾಪಪ್ರಜ್ಞೆ ಮೂಡುವುದಕ್ಕೆ ಆಸ್ಪದವಿಲ್ಲದೆ ಅವರ ವ್ಯಕ್ತಿತ್ವ ಸಂಪೂರ್ಣವಾಗಿ ಅರಳುತ್ತದೆ.

ಕೆಲವು ಸಾಮಾನ್ಯ ವಿಚಾರಗಳು
ಇಲ್ಲಿಯವರೆಗೆ ಶಿಕ್ಷಣ ನೀಡುವ ವಯಸ್ಸು ಮತ್ತು ರೀತಿಗಳ ಬಗೆಗೆ ಹೇಳಿರುವುದು ಸಮಗ್ರವೂ ಅಲ್ಲ, ಅಂತಿಮವೂ ಅಲ್ಲ, ಬರಿಯ ಸ್ಥೂಲ ರೂಪುರೇಷೆ ಅಷ್ಟೆ. ವಿಷಯಗಳನ್ನು ಸರಳವಾಗಿ ವಿವರಿಸುವುದಕ್ಕಾಗಿ ಮೂರು ಹಂತಗಳನ್ನು ಮಾಡಿದ್ದೇನೆ. ವಾಸ್ತವದಲ್ಲಿ ಇದೇ ರೀತಿ ಇರುವುದು ಸಾಧ್ಯವೇ ಇಲ್ಲ. ಹಾಗಾಗಿ ಪೋಷಕರು  ಮಕ್ಕಳ ವಯಸ್ಸು, ಅವರ ದೈಹಿಕ, ಮಾನಸಿಕ ಬೆಳವಣಿಗೆ, ತಿಳಿವಳಿಕೆಯ ಮಟ್ಟ, ಅವರು ಕೇಳುವ ಪ್ರಶ್ನೆಗಳು- ಇವುಗಳ ಮೇಲೆ ಸೂಕ್ತ ಬದಲಾವಣೆ ಮಾಡಿಕೊಳ್ಳುತ್ತಾ ಹೋಗಬೇಕಾಗುತ್ತದೆ.

ಉದಾಹರಣೆಗೆ ಬೇಗ ಋತುಮತಿಯರಾಗುವ ಹೆಣ್ಣು ಮಕ್ಕಳಿಗೆ ಅಥವಾ ಹೆಚ್ಚಿನ ದೈಹಿಕ ಬೆಳವಣಿಗೆ ಇರುವ ಗಂಡು ಮಕ್ಕಳಿಗೆ ಮೊದಲೇ ಎಲ್ಲ ವಿವರಣೆ ನೀಡಬೇಕಾಗಬಹುದು.

ಪೋಷಕರಿಂದ ದೂರ ಇರುವ ಮಕ್ಕಳ ಬಗೆಗೆ ಹೆಚ್ಚಿನ ಕಾಳಜಿ ವಹಿಸಿ, ಅವರು ರಜೆಗೆ ಮನೆಗೆ ಬಂದಾಗ ಎಲ್ಲ  ವಿವರ ಪಡೆದು ಸೂಕ್ತ ಮಾರ್ಗದರ್ಶನ ಮಾಡಬೇಕಾಗಬಹುದು. ಮಕ್ಕಳು ಅವರಾಗಿಯೇ ಕೇಳುವವರೆಗೆ ಕಾಯುತ್ತಿದ್ದರೆ ಅವರು ಹಿಂಜರಿಕೆಯಿಂದ ತೊಂದರೆಗೆ ಒಳಗಾಗಬಹುದು. ಹಾಗಾಗಿ ಪೋಷಕರು ಹೆಚ್ಚು ಕ್ರಿಯಾಶೀಲರಾಗಬೇಕು.

ಇಷ್ಟೆಲ್ಲಾ ಹೇಳಿದ ಮೇಲೂ ಮಕ್ಕಳಿಂದ ಹೊಸ ಹೊಸ ಪ್ರಶ್ನೆಗಳು ಬರಬಹುದು ಅಥವಾ ವಿಭಿನ್ನ ರೀತಿಯ ಸಮಸ್ಯೆಗಳು ಎದುರಾಗಬಹುದು. ಎಲ್ಲದಕ್ಕೂ ಪರಿಹಾರವನ್ನು ಸಿದ್ಧವಾಗಿಟ್ಟುಕೊಳ್ಳುವುದು ಜನಸಾಮಾನ್ಯರಿಗಿರಲಿ, ತಜ್ಞರಿಗೇ ಅಸಾಧ್ಯ. ಹಾಗೆಂದು ಇದು ಬಹಳ ತಾಂತ್ರಿಕ ವಿಚಾರ, ಹಾಗಾಗಿ ವೈದ್ಯರು ಅಥವಾ ಮನಃಶಾಸ್ತ್ರಜ್ಞರಿಗೆ ಮಾತ್ರ ಸಾಧ್ಯ ಎಂದು ಯಾವ ಪೋಷಕರೂ ಅಂದುಕೊಳ್ಳಬಾರದು.
 
ನಿಮ್ಮ ಕೆಲಸ ಶುರು ಮಾಡಿ, ಹೊಸ ದಾರಿಗಳು ತನ್ನಿಂದ ತಾನೇ ತೆರೆದುಕೊಳ್ಳುತ್ತವೆ. ಹೆಚ್ಚಿನ ಬಾರಿ ಮಕ್ಕಳಿಗೆ ಪ್ರಶ್ನೆಗಳನ್ನು ಕೇಳಲು ಮುಕ್ತವಾಗಿ ಅವಕಾಶ ಕೊಟ್ಟಲ್ಲಿ ಉತ್ತರವನ್ನು ಅವರೇ ಪಡೆದುಕೊಳ್ಳುತ್ತಾರೆ.

ನಮ್ಮ ಮಕ್ಕಳು ಈಗಾಗಲೇ ಬೆಳೆದು ಬಿಟ್ಟಿದ್ದಾರೆ, ಹಿಂದೆ ಮಾಡದ ಕೆಲಸವನ್ನು ಈಗ ಮಾಡಲು ಸಾಧ್ಯವೇ?- ಎನ್ನುವುದು ಹಲವಾರು ಹದಿಹರೆಯದ  ಮಕ್ಕಳ ಪೋಷಕರ ಆತಂಕ. `ಮಾಡದೇ ಇರುವುದಕ್ಕಿಂತ ತಡವಾಗಿ ಮಾಡುವುದಾದರೂ ಒಳ್ಳೆಯದು~ ಎನ್ನುವುದು ಇಂಗ್ಲಿಷ್‌ನ ಹಳೆಯ ನಾಣ್ನುಡಿ. ಹಾಗಾಗಿ ಈಗಲೂ ಕಾಲ ಮಿಂಚಿಲ್ಲ, ನಿಧಾನವಾಗಿ ಪ್ರಾರಂಭಿಸಿ.
 
ಈ ವಯಸ್ಸಿನಲ್ಲಿ ನಿಮಗೆ ಸಾಧ್ಯವೇ ಇಲ್ಲ ಎನಿಸಿದರೆ ನಿಮ್ಮ ಇಚ್ಛೆ, ಹಿಂಜರಿಕೆಗಳನ್ನು ಮಕ್ಕಳೆದುರು ಒಪ್ಪಿಕೊಳ್ಳಿ. ನಂತರ ವೈದ್ಯರ ಮೂಲಕ ಶಿಕ್ಷಣ ಕೊಡಿಸಿ ಅಥವಾ ವೈಜ್ಞಾನಿಕ ಪುಸ್ತಗಳನ್ನು ಓದಲು ಕೊಡಿ ಮತ್ತು ನೀವೂ ಓದಿ! ನಿಮ್ಮ ಕಾಳಜಿಯನ್ನು ಮಕ್ಕಳು ಖಂಡಿತಾ ಮೆಚ್ಚಿಕೊಳ್ಳುತ್ತಾರೆ. ಮನೆಯಲ್ಲಿ ಇಬ್ಬರು ಒಂದೇ ಲಿಂಗದ ಮಕ್ಕಳಿದ್ದರೆ ಹಿರಿಯವರ ಮೂಲಕ ಕಿರಿಯರಿಗೆ ಶಿಕ್ಷಣ ಕೊಡಿಸಿ ನಿಮ್ಮ ಕೆಲಸ ಹಗುರ ಮಾಡಿಕೊಳ್ಳಿ!

ಮೊದಲೇ ಹೇಳಿದಂತೆ ಪೋಷಕರ ದೃಷ್ಟಿಕೋನದಲ್ಲಿ ಆಮೂಲಾಗ್ರ ಬದಲಾವಣೆಯಾಗದೇ ಅವರು ಮುಂದುವರಿಯುವುದು ಅಸಾಧ್ಯ. ಅಯ್ಯೋ ನಮ್ಮದು ಒಟ್ಟು ಕುಟುಂಬ; ನಮ್ಮದು ಸಂಪ್ರದಾಯಸ್ಥರ ಮನೆ; ನಮಗೇ ಇವೆಲ್ಲಾ ಗೊತ್ತೇ ಇಲ್ಲ; ಛೀ ಹೊಲಸು, ಮಕ್ಕಳ ಜೊತೆ ಇವೆಲ್ಲಾ ಮತನಾಡೋದಾ ಅಂತೆಲ್ಲಾ ನೀವು ಅಂದುಕೊಳ್ಳುತ್ತಿದ್ದೀರಾ ಎಂದರೆ ಮಕ್ಕಳಿಗಿಂತ ಮೊದಲು ನಿಮಗೇ ವೈವಾಹಿಕ ಶಿಕ್ಷಣದ ಅಗತ್ಯ ಇದೆ ಎಂದರ್ಥ. ಈ ಗುಂಗಿನಿಂದ ಹೊರಬಂದು ಒಮ್ಮೆ ಪ್ರಾರಂಭಿಸಿ ನೋಡಿದಾಗ, ಹೊಸ ವಿಚಾರಗಳು ಪೋಷಕರಿಗೂ ತಿಳಿಯುತ್ತಾ ಹೋಗಿ ಅವರ ವೈವಾಹಿಕ ಜೀವನವೂ ಉತ್ತಮಗೊಳ್ಳುತ್ತದೆ!

(ಮಕ್ಕಳಿಗೆ ಜೀವನ ಶಿಕ್ಷಣ ನೀಡುವ ಬಗೆಗೆ ಇದೇ ಲೇಖಕರ `ಏ ಬೀಳ್ತಿಯಾ ಹುಶಾರು~ ಪುಸ್ತಕ ನೋಡಬಹುದು)  
- ಮುಗಿಯಿತು                                                           

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT