ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕ್ಸ್‌ಫರ್ಡ್ ಕಪ್: ಪರೀಕ್ಷಿತ್ ಸ್ಫೋಟಕ ದ್ವಿಶತಕ

Last Updated 13 ಡಿಸೆಂಬರ್ 2012, 8:57 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿ 223 ರನ್! ಇದು ತಂಡದ ಮೊತ್ತವಲ್ಲ, ಒಬ್ಬ ಬ್ಯಾಟ್ಸಮನ್‌ನ ವೈಯಕ್ತಿಕ  ಸಾಧನೆ. ನಗರದ ನೆಹರೂ ಮೈದಾನದಲ್ಲಿ ಬುಧವಾರ ಆರಂಭಗೊಂಡ ಆಕ್ಸ್‌ಫರ್ಡ್ ಕಾಲೇಜು ಆಶ್ರಯದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ `ಆಕ್ಸ್‌ಫರ್ಡ್ ಕಪ್ ಟಿ-20' ಕ್ರಿಕೆಟ್ ಟೂರ್ನಿಯಲ್ಲಿ ಇಂಥ ಅಪರೂಪದ ಸಾಧನೆ ಮಾಡಿದ್ದು ಆತಿಥೇಯ ತಂಡದ ಪರೀಕ್ಷಿತ್ ಶೆಟ್ಟಿ.

ಎದುರಾಳಿ ನಳಂದ ಕಾಲೇಜು ತಂಡದ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಬೌಲರ್‌ಗಳ ಬೆವರಿಳಿಸಿದ ಈ ಎಡಗೈ ಬ್ಯಾಟ್ಸ್‌ಮನ್ ಆರಂಭಿಕ ಆಟಗಾರನಾಗಿ ಮೈದಾನಕ್ಕೆ ಇಳಿದು ಕೊನೆಯ ವರೆಗೂ ಕ್ರೀಸ್‌ನಲ್ಲಿ ಉಳಿದರು. ಎದುರಿಸಿದ್ದು ಕೇವಲ 80ಎಸೆತ ಮಾತ್ರ. ಅಷ್ಟರಲ್ಲಿ 8 ಬಾರಿ ಚೆಂಡನ್ನು ಸಿಕ್ಸರ್‌ಗೆ ಅಟ್ಟಿದರೆ 28 ಬೌಂಡರಿಗಳನ್ನು ಕೂಡ ಚಚ್ಚಿದರು.

ಪರೀಕ್ಷಿತ್, ಶಿವಯೋಗಿ (36, 23 ಎಸೆತ, 1 ಸಿಕ್ಸರ್, 4 ಬೌಂಡರಿ) ಹಾಗೂ ಅಭಿಷೇಕ ಹೊನ್ನಾವರ (31, 13 ಎಸೆತ, 7 ಬೌಂಡರಿ) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ 368 ರನ್ ಗುಡ್ಡೆ ಹಾಕಿದ ಆಕ್ಸ್‌ಫರ್ಡ್ ಕಾಲೇಜು ತಂಡ 262 ರನ್‌ಗಳ ಜಯ ದಾಖಲಿಸಿ ಟೂರ್ನಿಯಲ್ಲಿ ಭರ್ಜರಿ ಆರಂಭ ಕಂಡಿತು.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆಕ್ಸ್‌ಫರ್ಡ್ ಕಾಲೇಜು ತಂಡಕ್ಕಾಗಿ ಪರೀಕ್ಷಿತ್,  ಮೂವರು ಬ್ಯಾಟ್ಸಮನ್‌ಗಳೊಂದಿಗೆ ಉತ್ತಮ ಜೊತೆಯಾಟ ವಾಡಿದರು.ಆರಂಭ ದಿಂದಲೇ ಸ್ಫೋಟಕ ಹೊಡೆತಗಳೊಂದಿಗೆ ಗಮನ ಸೆಳೆದ ಅವರು ಸ್ಕ್ವೇರ್‌ಲೆಗ್‌ಗೆ ಚೆಂಡನ್ನು ಫ್ಲಿಕ್ ಮಾಡಿ ಶತಕ ಪೂರೈ ಸಿದ ನಂತರವೂ ದಣಿಯಲಿಲ್ಲ. ಲಾಂಗ್‌ಆಫ್‌ನಲ್ಲಿ ಎರಡು ಬಾರಿ ಚೆಂಡನ್ನು ಬೌಂಡರಿ ಗೆರೆಯ ಮೇಲಿಂದ ಚಿಮ್ಮಿ ಸಿದ ಅವರು ಒಂದು ಬಾರಿ ಲಾಂಗ್ ಆನ್ ಕಡೆಯಿಂದ ಸಿಕ್ಸರ್‌ಗೆ ಹೊಡೆದ ಚೆಂಡು ಗ್ಯಾಲರಿಯ ಆಚೆ ಹೋಗಿ ಬಿತ್ತು. 196 ರನ್ ಗಳಿಸಿದ್ದಾಗ ಚೆಂಡನ್ನು ಮತ್ತೊಮ್ಮೆ ಫ್ಲಿಕ್ ಮಾಡಿ ಬ್ಯಾಟ್ ಹಾಗೂ ಹೆಲ್ಮೆಟ್ ತೆಗೆದು ಸಂಭ್ರಮಿಸಿದಾಗ ಸಹಪಾಠಿಗಳು ಹಾಗೂ ಸಹ ಆಟಗಾರರ ಸಂಭ್ರಮ ಮುಗಿಲು ಮುಟ್ಟಿತ್ತು. ಆಕ್ಸ್‌ಫರ್ಡ್ ಕಾಲೇಜಿನ ಬೃಹತ್ ಮೊತ್ತವನ್ನು ಬೆಂಬತ್ತಿದ ನಳಂದಾ ಕಾಲೇಜು ತಂಡ 15.1 ಓವರ್‌ಗಳಲ್ಲಿ 106 ರನ್‌ಗಳಿಗೆ ಪತನ ಕಂಡಿತು. ಬೌಲಿಂಗ್‌ನಲ್ಲೂ ಮಿಂಚಿದ ಪರೀಕ್ಷಿತ್ 2 ವಿಕೆಟ್ ಕಬಳಿಸಿದರು.

ಆಳ್ವಾಸ್‌ಗೆ ಜಯ
ಮತ್ತೊಂದು ಪಂದ್ಯದಲ್ಲಿ ನಾಯಕ ಸೋಮನಾಥ ಶೆಟ್ಟಿ ಆಲ್‌ರೌಂಡ್ ಆಟದ (39 ರನ್, 28ಕ್ಕೆ 2) ನೆರವಿನಿಂದ ಮೂಡಬಿದಿರೆ ಆಳ್ವಾಸ್ ತಂಡ, ಧಾರವಾಡದ ಜೆಎಸ್‌ಎಸ್ ಕಾಲೇಜು ತಂಡವನ್ನು 28 ರನ್‌ಗಳಿಗೆ ಮಣಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆಳ್ವಾಸ್ ತಂಡ ನೀಡಿದ 178 ರನ್ ಗುರಿ ಬೆಂಬತ್ತಿದ ಜೆಎಸ್‌ಎಸ್ ತಂಡ 19.5 ಓವರ್‌ಗಳಲ್ಲಿ 148 ರನ್‌ಗಳಿಗೆ ಆಲೌಟಾಯಿತು.
ಉದ್ಘಾಟನೆ: ಟೂರ್ನಿಯನ್ನು ಮಾಜಿ ರಣಜಿ ಆಟಗಾರ ಮನೋಜ ಮಲ್ಹೋತ್ರಾ ಉದ್ಘಾಟಿಸಿದರು. ಮೇಯರ್ ಡಾ. ಪಾಂಡುರಂಗ ಪಾಟೀಲ, ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣ, ಆಕ್ಸ್‌ಫರ್ಡ್ ಕಾಲೇಜಿನ ಅಧ್ಯಕ್ಷ ವಸಂತ ಹೊರಟ್ಟಿ, ಪ್ರಾಚಾರ್ಯ ಡಾ. ಸಂತೋಷ ಕೃಷ್ಣಾ ಪುರ ಮತ್ತಿತರರು ಭಾಗವಹಿಸಿದ್ದರು.

ಸಂಕ್ಷಿಪ್ತ ಸ್ಕೋರ್
ಆಕ್ಸ್‌ಫರ್ಡ್ ಕಾಲೇಜು: 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 368 (ಪರೀಕ್ಷಿತ್ ಶೆಟ್ಟಿ 223, ಶಿವಯೋಗಿ 36, ಅಭಿಷೇಕ ಹೊನ್ನಾವರ 31); ನಳಂದಾ ಕಾಲೇಜು: 15.1 ಓವರ್‌ಗಳಲ್ಲಿ 106 (ಯಶ್ 27; ಭರತ ದಯಾಮ 9ಕ್ಕೆ 3, ಶಿವಯೋಗಿ 23ಕ್ಕೆ 3, ಪರೀಕ್ಷಿತ್ ಶೆಟ್ಟಿ 32ಕ್ಕೆ 2).
ಆಳ್ವಾಸ್ ಕಾಲೇಜು: 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 177 (ಸೋಮನಾಥ ಶೆಟ್ಟಿ 39, ಲಲಿತ್ ಅಶುತೋಷ್ 37; ಪಿಯೂಷ್ 38ಕ್ಕೆ 3, ಶಶಾಂಕ 34ಕ್ಕೆ 2); ಜೆಎಸ್‌ಎಸ್ ಕಾಲೇಜು: 19.5 ಓವರ್‌ಗಳಲ್ಲಿ 148 (ಅರ್ಜುನ 39, ಬಸವರಾಜ 31, ಸಿದ್ಧಾರ್ಥ 28; ಭರತ್ 8ಕ್ಕೆ 4, ಸೋಮನಾಥ ಶೆಟ್ಟಿ 28ಕ್ಕೆ 2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT