ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗ್ರಾ ಅಭಿವೃದ್ಧಿಗೆ ಪಾಲಿಕೆಯಿಂದ ಹಲವು ಯೋಜನೆ

Last Updated 1 ಜನವರಿ 2011, 11:35 IST
ಅಕ್ಷರ ಗಾತ್ರ

ಆಗ್ರಾ (ಐಎಎನ್‌ಎಸ್):  ‘ಪ್ರೇಮನಗರಿ’ ಆಗ್ರಾಕ್ಕೆ ಮತ್ತಷ್ಟು ಮೆರಗು ನೀಡಲು ಅಲ್ಲಿನ ಮಹಾನಗರ ಪಾಲಿಕೆ 2011ರ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಪ್ರಕಟಿಸಿದೆ.
ವಿಶ್ವಪ್ರಸಿದ್ಧ ಪ್ರೇಮದ ಸಂಕೇತ ತಾಜ್‌ಮಹಲ್‌ನ ಸುತ್ತಮುತ್ತಲ ಪ್ರದೇಶಗಳನ್ನು ಇನ್ನಷ್ಟು ಸುಂದರವಾಗಿಸಲು ಪಾಲಿಕೆ ಆಗ್ರಾದ ಹಸಿರೀಕರಣ ಮತ್ತು ಶುಚೀಕರಣಕ್ಕೆ ಒತ್ತು ನೀಡಿದೆ.
 
ಇದರ ಮೊದಲ ಹಂತವಾಗಿ ಆಗ್ರಾದಲ್ಲಿ ಜ.1ರಿಂದ ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಅದು ಆದೇಶ ಹೊಡಿಸಿದೆ. ಅಲ್ಲದೆ ಐತಿಹಾಸಿಕ ಸ್ಮಾರಕಗಳ ಅಕ್ರಮ ಒತ್ತುವರಿಯ ವಿರುದ್ಧ ಸಹ ಅದು ಸಮರ ಸಾರಿದೆ.

ಇದಕ್ಕಾಗಿ ಭಾರತೀಯ ಪುರಾತತ್ವ ಸಮೀಕ್ಷೆ ಇಲಾಖೆ ಜೊತೆಗೂಡಿ ಐತಿಹಾಸಿಕ ಸ್ಮಾರಕಗಳ ಒತ್ತುವರಿಯನ್ನು ತೆರವುಗೊಳಿಸಲು ಯೋಜನೆ ರೂಪಿಸಿದೆ. ಜ.1ರಿಂದ ಜಾರಿಗೆ ಬರುವಂತೆ ಸರಳ ಹಾಗೂ ವೈಜ್ಞಾನಿಕ ಸಂಚಾರ ವ್ಯವಸ್ಥೆಯನ್ನು ತಯಾರಿಸಿದೆ. ಮಾಲಿನ್ಯ ತಡೆಗಟ್ಟುವ ಹಲವಾರು ಕಾರ್ಯಕ್ರಮಗಳನ್ನು ಸಂಯೋಜಿಸಲಾಗಿದೆ.

ನೀರಿನ ಸರಬರಾಜು ಉತ್ತಮ ಪಡಿಸುವುದು, ಶುಚೀಕರಣಕ್ಕೆ ಆದ್ಯತೆ ನಿಡಲಾಗಿದೆ. ಗಂಗಾ ನದಿಯ 140 ಕ್ಯೂಸೆಕ್ ನೀರನ್ನು ಕಾಲುವೆ ಮೂಲಕ ಆಗ್ರಾಕ್ಕೆ ತರುವ ಜಪಾನ್ ಬ್ಯಾಂಕ್ ಸಹಯೋಗದ ಯೋಜನೆ ಪ್ರಗತಿಯಲ್ಲಿದ್ದು, 2011ರಲ್ಲಿ ಇದು ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಆಗ್ರಾ ಮತ್ತು ನೋಯ್ಡಾ ನಡುವಿನ ಯಮುನಾ ಎಕ್ಸ್‌ಪ್ರೆಸ್ ಹೆದ್ದಾರಿ ಸಹ ಮುಂದಿನ ವರ್ಷ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ರಾಜಕೀಯ ಮುಖಂಡರ ಬೆಂಬಲವಿಲ್ಲದೆ ಈ ಹಿಂದೆ ಇಂತಹ ಮಹಾತ್ವಾಕಾಂಕ್ಷೆಯ ಯೋಜನೆಗಳು ವಿಫಲವಾಗಿದ್ದವು. ‘ಆದರೆ ಈ ಬಾರಿ ಜಿಲ್ಲೆಯ ಅಧಿಕಾರಿಗಳು ಸ್ಥಳೀಯ ಮುಖಂಡರು ಮತ್ತು ಕಾರ್ಪೊರೇಟರ್‌ಗಳ ಮನವೊಲಿಸಿದ್ದಾರೆ’ ಎಂದು ಬ್ರಜ್ ಮಂಡಲ್ ಸ್ಮಾರಕಗಳ ಸಂರಕ್ಷಣಾ ಸಮಾಜದ ಅಧ್ಯಕ್ಷ ಸುರೇಂದ್ರ ಶರ್ಮಾ ಹೇಳಿದರು.

‘ಆಗ್ರಾದ ನಿವಾಸಿಗಳು ನಮ್ಮ ಉದ್ದೇಶಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನಾವು ಖಂಡಿತವಾಗಿಯೂ ಯಶಸ್ಸು ಸಾಧಿಸುತ್ತೇವೆ’ ಎಂದು ಪಾಲಿಕೆ ಆಯುಕ್ತ ವಿನಯ್ ಶಂಕರ್ ಪಾಂಡೆ ಭರವಸೆ ವ್ಯಕ್ತಪಡಿಸಿದ್ದಾರೆ. ಪ್ರವಾಸಿಗರ ಅನುಕೂಲಕ್ಕಾಗಿ ಈಗಾಗಲೇ ಸುಮಾರು 60 ಐಷಾರಾಮಿ ಬಸ್‌ಗಳು ಕಾರ್ಯನಿರ್ವಹಿಸುತ್ತಿವೆ. ‘ನರ್ಮ್’ ಯೋಜನೆಯಡಿ ಇನ್ನೂ ಹಲವು ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.

ಪ್ರತಿವರ್ಷ ನಡೆಯುವ 10 ದಿನಗಳ ವಾರ್ಷಿಕ ‘ತಾಜ್ ಮಹೋತ್ಸವ’ದ ನಿರ್ವಹಣೆ ಬಗ್ಗೆ ಸಲಹೆ, ಸೂಚನೆ ನೀಡಲು ಸ್ಥಳೀಯ ನಿವಾಸಿಗಳು ಪಾಲ್ಗೊಳ್ಳುವಂತೆ ಮಾಡಲು ಮೊದಲ ಬಾರಿಗೆ  ಪಾಲಿಕೆ ಪ್ರಯತ್ನ ನಡೆಸಿದೆ.

ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಆಗ್ರಾದಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಎದುರು ನೋಡಲಾಗುತ್ತಿದೆ. ತಾಜ್‌ಮಹಲ್‌ನಿಂದ ಉಚಿತ ಆಂಬುಲೆನ್ಸ್ ಹಾಗೂ ವೈದ್ಯಕೀಯ ಸೇವೆಗಳನ್ನು ಸಹ ಜನವರಿಯಿಂದ ಪ್ರಾರಂಭಿಸಲಾಗುವುದು. ಪ್ರವೇಶದ ನಿರ್ಬಂಧಗಳನ್ನು ಸಹ ಸಡಿಲಗೊಳಿಸಲಾಗುವುದು ಎಂದು ಪಾಲಿಕೆ ತನ್ನ ಯೋಜನೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT