ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟಕ್ಕೆ ಮೊದಲೇ ಮನಗೆದ್ದ ಬಾಂಗ್ಲಾ

Last Updated 17 ಫೆಬ್ರುವರಿ 2011, 18:55 IST
ಅಕ್ಷರ ಗಾತ್ರ

ಢಾಕಾ: ಭಾರತ ಉಪಖಂಡದ ಪೌರಾಣಿಕ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿರಿಮೆ ಸಾರುವ ವರ್ಣಮಯ ಕಾರ್ಯಕ್ರಮಗಳೊಂದಿಗೆ ಹತ್ತನೇ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಢಾಕಾದ ಬಂಗಬಂಧು ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಾಂದಿ ಹಾಡಲಾಯಿತು.

ಇದೇ ಮೊದಲ ಬಾರಿಗೆ ಭಾರತ ಮತ್ತು ಶ್ರೀಲಂಕಾ ಜೊತೆ ವಿಶ್ವಕಪ್ ಟೂರ್ನಿ ನಡೆಸುವ ಜವಾಬ್ದಾರಿ ಹೊತ್ತುಕೊಂಡಿರುವ ಬಾಂಗ್ಲಾದೇಶ, ಟೂರ್ನಿಯ ಇತಿಹಾಸದಲ್ಲೇ ಯಾವ ಆತಿಥೇಯ ರಾಷ್ಟ್ರವೂ ಮಾಡಿರದಂಥ ಆರಂಭೋತ್ಸವವನ್ನು ಸಂಘಟಿಸಿ ಕ್ರಿಕೆಟ್ ಜಗತ್ತಿನ ಗಮನ ಸೆಳೆಯಿತು.

ಎರಡು ವರ್ಷಗಳ ಹಿಂದೆ ಬೀಜಿಂಗ್‌ನಲ್ಲಿ ನಡೆದ ಒಲಿಂಪಿಕ್ ಕ್ರೀಡೆಗಳ ಉದ್ಘಾಟನಾ ಸಮಾರಂಭ ಮತ್ತು ಕೆಲವು ತಿಂಗಳುಗಳ ಹಿಂದೆ ನವದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡೆಗಳ ಆರಂಭೋತ್ಸವ ವೀಕ್ಷಕರ ನೆನಪಿಗೆ ಬರುವಂತೆ ಮಾಡಿದ ಮೂರೂ ದೇಶಗಳ ಕಲಾವಿದರು ಕ್ರೀಡಾಂಗಣದ ತುಂಬ ಸಂತಸದ ದೀಪಗಳನ್ನು ಬೆಳಗಿದರು. ಬುಧವಾರವಷ್ಟೇ ಈದ್ ಮಿಲಾದ್ ಆಚರಣೆಯ ಸಂಭ್ರಮದಲ್ಲಿದ್ದ ಬಾಂಗ್ಲಾದೇಶದ ಜನತೆ ಕಾರ್ಯಕ್ರಮಗಳನ್ನು ಮನದುಂಬಿ ಆನಂದಿಸಿದರು.

ಕ್ರೀಡಾಂಗಣದಲ್ಲಿ 25 ಸಾವಿರ ಜನ ತುಂಬಿದ್ದರೆ ಕ್ರೀಡಾಂಗಣದ ಹೊರಗೆ ಹತ್ತು ಸಾವಿರ ಜನ ಹರುಷದಿಂದ ಚಪ್ಪಾಳೆ ತಟ್ಟುತ್ತಿದ್ದರಾದರೂ ಒಳಗೆ ಹೋಗುವ ಅವಕಾಶ ಸಿಗದ್ದಕ್ಕೆ ಸಂಬಂಧಪಟ್ಟವರನ್ನು ಶಪಿಸುತ್ತಿದ್ದರು. ಸಂಜೆ ಐದು ಗಂಟೆಗೆ ಸ್ಥಳೀಯ ಕಲಾವಿದರ ಕಾರ್ಯಕ್ರಮಗಳು ಆರಂಭವಾದವು. ಪ್ರಧಾನಿ ಬೇಗಂ ಶೇಖ್ ಹಸೀನಾ ಮತ್ತು ಇತರ ಗಣ್ಯ ವ್ಯಕ್ತಿಗಳು ಆಗಮಿಸಿದ ಮೇಲೆ ಬಾಂಗ್ಲಾದೇಶ ರಾಷ್ಟ್ರಗೀತೆಯನ್ನು ನುಡಿಸಲಾಯಿತು. ಹಣೆಯ ಮೇಲೆ ಕಾಸಗಲದ ಕುಂಕುಮ, ಕೆಂಪಂಚಿನ ಹಸಿರು ಬಣ್ಣದ ಸೀರೆ ತೊಟ್ಟಿದ ವನಿತೆಯರು ಹಾಗೂ ಜುಬ್ಬಾ ಪೈಜಾಮ ಧರಿಸಿದ್ದ ಗಾಯಕರು ರಾಷ್ಟ್ರಗೀತೆ ಹಾಡಿದರು.

ಬೃಹತ್ ಪರದೆಯ ಮೇಲೆ ಹಿಂದಿನ ಒಂಬತ್ತು ವಿಶ್ವ ಕಪ್ ಟೂರ್ನಿಗಳ ವಿಜೇತ ತಂಡಗಳು ಹಾಗೂ ನಾಯಕರ ಚಿತ್ರ ಮೂಡಿಬಂದ ಮೇಲೆ ಸ್ವಾಗತ ಗೀತೆಯನ್ನು ವಿವಿಧ ಗಾಯಕರು ಹಾಡಿದರು. ಹಾಡು ಮುಗಿಯುತ್ತಿದ್ದಂತೆ ಟೂರ್ನಿಯ ಲಾಂಛನವಾದ ಪುಟ್ಟ ಆನೆಮರಿ ಸೈಕಲ್ ರಿಕ್ಷಾದಲ್ಲಿ ಕ್ರೀಡಾಂಗಣದೊಳಗೆ ಬಂತು. ಅದರ ಹಿಂದೆ ಎಲ್ಲ ತಂಡಗಳ ನಾಯಕರೂ ಸೈಕಲ್ ರಿಕ್ಷಾ (ಬಾಂಗ್ಲಾದ ರಾಷ್ಟ್ರೀಯ ವಾಹನ! ಢಾಕಾದಲ್ಲಿರುವಷ್ಟು ಸೈಕಲ್ ರಿಕ್ಷಾಗಳು ಜಗತ್ತಿನ ಯಾವ ನಗರದಲ್ಲೂ ಇರಲಿಕ್ಕಿಲ್ಲ. ನವದೆಹಲಿಯ ಕಾಮನ್‌ವೆಲ್ತ್ ಕ್ರೀಡೆಗಳಲ್ಲಿ ಹುಲಿಮರಿ ಶೇರೂ ಆಟೋರಿಕ್ಷಾ ಮೇಲೆ ಬಂದಿತ್ತು.) ಮೇಲೆಯೇ ಕ್ರೀಡಾಂಗಣದೊಳಗೆ ಬಂದರು. ಕ್ರೀಡಾಂಗಣದ ಮಧ್ಯೆ ನಿರ್ಮಿಸಲಾಗಿದ್ದ ದೊಡ್ಡ ವೇದಿಕೆ ಮೇಲೆ ಅವರೆಲ್ಲ ಸಾಲಾಗಿ ತಮ್ಮ ರಾಷ್ಟ್ರ ಧ್ವಜ ಹಿಡಿದು ನಿಂತರು. ವೇದಿಕೆಯ ಮಧ್ಯದಿಂದ ಪ್ರತ್ಯಕ್ಷರಾದ ಖ್ಯಾತ ಸಿನಿಮಾ ಗಾಯಕ ಸೋನು ನಿಗಮ್ (ಅವರು ಧರಿಸಿದ ಹಾವಿನ ಚರ್ಮದಂಥ ಓವರ್‌ಕೋಟ್ ವಿಚಿತ್ರವಾಗಿ ಕಂಡರೂ ಬಣ್ಣಗಳ ಬೆಳಕಿನಲ್ಲಿ ಹೊಳೆಯುತ್ತಿತ್ತು.) ‘ಕ್ರಿಕೆಟ್ ಆದರ್ಶ’ದ ಹಾಡನ್ನು ಮಧುರವಾಗಿಯೇ ಹಾಡಿ ಎಲ್ಲರೂ ತಾಳ ಹಾಕುವಂತೆ ಮಾಡಿದರು
.
ಸೋನು ನಿಗಮ್ ಹಾಡಿನ ಗುಂಗಿನಲ್ಲಿರುವಾಗಲೇ ಭಾಷಣಗಳು ಆರಂಭವಾದವು. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮುಸ್ತಫಾ ಕಮಲ್, ಬಾಂಗ್ಲಾದ ಯುವಜನ ಮತ್ತು ಕ್ರೀಡಾ ಸಚಿವ ಅಬುಲ್ ಮಾಲ್ ಅಬುಲ್ ಮುಹಿತ್, ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಶರದ್ ಪವಾರ್ ಮಾತನಾಡಿದರು. ಪ್ರಧಾನಿ ಬೇಗಂ ಶೇಖ್ ಹಸೀನಾ ಟೂರ್ನಿಯನ್ನು ಅಧಿಕೃತವಾಗಿ ಉದ್ಘಾಟಿಸಿದ ನಂತರ ವಿವಿಧ ಮನರಂಜನೆ ಕಾರ್ಯಕ್ರಮಗಳು ನಡೆದವು.

ಶ್ರೀಲಂಕಾದ ಕಲಾವಿದರ ಆಕರ್ಷಕ ಸಮುದ್ರಯಾನದ ಕಾರ್ಯಕ್ರಮದ ನಂತರ ಬಾಂಗ್ಲಾದೇಶದ ಖ್ಯಾತ ಗಾಯಕಿಯರಾದ ಮುಮ್ತಾಜ್, ಸಬೀನಾ ಯಾಸ್ಮಿನ್, ರೂನಾ ಲೈಲಾ ಅವರಿಂದ ಸುಮಧರ ಹಾಡುಗಳು ಮೂಡಿಬಂದವು. ಇವುಗಳಿಗೆ ಕಳಸವಿಟ್ಟಂತೆ ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟವನ್ನು ನೆನಪಿಸುವ ನೃತ್ಯರೂಪಕ ಪ್ರೇಕ್ಷಕರ ಕಣ್ಣುಗಳು ಒದ್ದೆಯಾಗುವಂತೆ ಮಾಡಿದವು. ಬಾಂಗ್ಲಾದೇಶದ ಸ್ವಾತಂತ್ರ್ಯಸೇನಾನಿ ಮುಜಿಬುರ್ ರೆಹಮಾನ್ ಅವರ ಐತಿಹಾಸಿಕ ಭಾಷಣದ ತುಣುಕುಗಳನ್ನು ಪರದೆಯ ಮೇಲೆ ತೋರಿಸಲಾಯಿತು. 1971 ರಲ್ಲಿ ಪಾಕಿಸ್ತಾನದ ಸರ್ವಾಧಿಕಾರಿ ಹಿಡಿತವನ್ನು ಬಿಡಿಸಿಕೊಂಡು ಸ್ವತಂತ್ರವಾದ ಬಾಂಗ್ಲಾದೇಶ ಜನರಿಗೆ  ಬಂಗಾಲಿ ಭಾಷೆಯ ಮೇಲಿರುವ ಅಪಾರ ಅಭಿಮಾನವನ್ನೂ ರೂಪಕದಲ್ಲಿ ಪ್ರದರ್ಶಿಸಲಾಯಿತು.

ಬಾಂಗ್ಲಾದೇಶದ ಸೌಂದರ್ಯವನ್ನು ಕಣ್ಣಲ್ಲಿ ತುಂಬಿಕೊಂಡ ಪ್ರೇಕ್ಷಕರು ವಿಶ್ವವಿಖ್ಯಾತ ಗಾಯಕ ಬ್ರಯಾನ್ ಆ್ಯಡಮ್ಸ್ ಮತ್ತು ಅವರ ಸಂಗಡಿಗರ ಇಂಗ್ಲಿಷ್ ಹಾಡುಗಳನ್ನು ಆನಂದಿಸಿದರಾದರೂ ಪಾಪ್ ಸಂಗೀತದ ಹುಚ್ಚನ್ನು ತೋರಲಿಲ್ಲ, ಕುಣಿದು ಕುಪ್ಪಳಿಸಲಿಲ್ಲ. ಕೊನೆಯಲ್ಲಿ ಶಂಕರ್ ಮಹಾದೇವನ್, ಎಹಸಾನ್ ಮತ್ತು ಲಾಯ್ ಅವರಿಂದ ‘ತಿರುಗಿ ಚೆಂಡನ್ನು ಹೊಡಿ’ ಎಂಬ ಕ್ರಿಕೆಟ್ ಹಾಡಿನೊಂದಿಗೆ, ಢಾಕಾದ ಜನರ ಮನಸ್ಸಿನಲ್ಲಿ ಬಹಳ ದಿನ ಉಳಿಯುವಂಥ ಆರಂಭೋತ್ಸವಕ್ಕೆ ತೆರೆ ಬಿತ್ತು. ಅದರೊಂದಿಗೆ ಶನಿವಾರ ಶೇರ್-ಎ-ಬಾಂಗ್ಲಾ ಕ್ರೀಡಾಂಗಣದಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆಯಲಿರುವ ಟೂರ್ನಿಯ ಮೊದಲ ಪಂದ್ಯದ ಫಲಿತಾಂಶದ ಬಗ್ಗೆಯೂ ನಿರೀಕ್ಷೆಗಳು ಗರಿಗೆದರಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT