ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಆಟಿಸಂ' ಗೆದ್ದಳು ಆ ತಾಯಿ

Last Updated 1 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಗುಂಗುರು ಕೂದಲಿನ, ಗುಲಾಬಿ ವರ್ಣದ, ಅರಳು ಕಂಗಳ ಪುಟ್ಟ ಬಾಲೆ ಆ್ಯನ್ನೆ ಮೇರಿ. ಮೊದಲ ವರ್ಷದ ನಗು, ತೊದಲ್ನುಡಿ, ದುಡು ದುಡು ಓಡಲೆತ್ನಿಸುವ ಪುಟ್ಟ ಕಾಲ್ಗಳು. ಕ್ಯಾಥರೀನ್ ಮತ್ತು ಮಾರ್ಕ್ ಮಾರಿಸ್ ದಂಪತಿಯ ಪಾಲಿಗೆ ಸ್ವರ್ಗಕ್ಕೆ ಮೂರೇ ಗೇಣು. ಸುಂದರ ಮನೆ, ಪ್ರೀತಿಸಿ ಮದುವೆಯಾದ ಸಂಗಾತಿ, ಕೈತುಂಬಾ ಸಂಬಳ ತರುವ ಕೆಲಸ, ಎರಡು ಮುದ್ದಾದ ಮಕ್ಕಳು, ಗರ್ಭದಲ್ಲಿ ಬೆಳೆಯುತ್ತಿರುವ ಮೂರನೇ ಕಂದ. ಇನ್ನೇನು ಬೇಕು? ಕ್ಯಾಥರೀನ್‌ಗೆ ಬದುಕಿನಲ್ಲಿ ಬಯಸಿದ್ದೆಲ್ಲವೂ ಸಿಕ್ಕಿತ್ತು. ಆಗ ಆಕೆ ತುಂಬು ಗರ್ಭಿಣಿ. ಮೂರನೇ ಮಗು ಹುಟ್ಟುವ ಸಮಯ. ಆದರೆ ವಿಧಿಯ ಆಟ ಬೇರೆಯೇ ಇತ್ತು ಎಂಬುದು ಯಾರಿಗೆ ತಾನೇ ಗೊತ್ತಿತ್ತು?

ಚುರುಕು ಕಂಗಳ ಆ್ಯನ್ನೆ ಇದ್ದಕ್ಕಿದ್ದಂತೆ ಮಂಕಾಗತೊಡಗಿದಳು. ಗಂಟೆಗಟ್ಟಲೆ ಅಳು. ಮಾತನ್ನೇ ಆಡದೆ, ಯಾವುದರಲ್ಲೂ ಆಸಕ್ತಿ ತೋರದೆ, ತನ್ನದೇ ಪ್ರಪಂಚದಲ್ಲಿ ಆ್ಯನ್ನೆ ಮುಳುಗಿದಾಗ ಮಾರಿಸ್ ದಂಪತಿಗೆ ವೈದ್ಯರ ಸಲಹೆ ಪಡೆಯದೇ ವಿಧಿಯಿರಲಿಲ್ಲ. ಆ್ಯನ್ನೆಯ ಸಮಸ್ಯೆಗೆ ವೈದ್ಯರು ಕೊಟ್ಟ ಹೆಸರು `ಆಟಿಸಂ'. ಇತರರಿಗೆ ಸ್ಪಂದಿಸದ, ಮಾತನಾಡದ, ಪ್ರೀತಿ ತೋರದ, ಅರ್ಥ ಮಾಡಿಕೊಳ್ಳಲು ಸಾಧ್ಯವಿರದ ಸ್ಥಿತಿಯನ್ನು ಆ್ಯನ್ನೆಗೆ ತಂದೊದಗಿಸಿದ್ದು ಈ `ಆಟಿಸಂ' ಎಂಬ ತೊಂದರೆ. ಇದು ಸಾಲದೆಂಬಂತೆ ಮೂರನೇ ಮಗು ಮೈಕೆಲ್‌ಗೂ ಎರಡು ವರ್ಷವಾಗುತ್ತಿದ್ದಂತೆಯೇ `ಆಟಿಸಂ' ತಲೆದೋರಿತ್ತು. 1985ರ ಆ ದಶಕದಲ್ಲಿ `ಆಟಿಸಂ'ಗೆ ಹೆಚ್ಚಿನ ಚಿಕಿತ್ಸೆಯಾಗಲೀ, ಆ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿಯಾಗಲೀ ಲಭ್ಯವಿರಲಿಲ್ಲ.

ಇಂತಹ ಸ್ಥಿತಿಯಲ್ಲಿ ಮಾರಿಸ್ ಕುಟುಂಬಕ್ಕೆ ಸಹಜವಾಗಿಯೇ ಹಲವು ವಿಧದ ಸಲಹೆ, ವಿಚಿತ್ರ ಟೀಕೆ, ಅನುಕಂಪ ಎಲ್ಲವೂ ಎದುರಾದವು. ಕೆಲವರು ಸರಿಯಾದ ಪಾಲನೆ-ಪೋಷಣೆ ಮಾಡದಿದ್ದರೆ ಹೀಗಾಗುತ್ತದೆ ಎಂದರೆ, ಹಲವರು `ಅದು ನಿಮ್ಮ ಹಣೆಬರಹ' ಎಂದರು. ಕೊನೆಗೆ ಮಾರಿಸ್ ಕುಟುಂಬದ ಸಹಾಯಕ್ಕೆ ಬಂದದ್ದು ಕ್ಯಾಥರೀನ್‌ಳ ಆರು ಸೋದರಿಯರಲ್ಲಿ ಒಬ್ಬಳು ಓದಿದ್ದ `ಸೈಕಾಲಜಿ ಟುಡೇ' ಪತ್ರಿಕೆಯ ಲೇಖನ. ಡಾ. ಲೋವಾಸ್ ಅವರ ಈ ಲೇಖನ ಓದಿದ ಕ್ಯಾಥರೀನ್ ಮತ್ತು ಮಾರ್ಕ್‌ಗೆ ಅರಿವಾದದ್ದು `ಆಟಿಸಂ ಗೆಲ್ಲಲು ಏನೇನು ಸಾಧ್ಯವೋ ಅವೆಲ್ಲವನ್ನೂ ಅವರು ಮಕ್ಕಳಿಗಾಗಿ ಪ್ರಯತ್ನಿಸಬೇಕು' ಎಂಬುದು.

ವೈದ್ಯ- ವಾಕ್ ತಜ್ಞ- ವರ್ತನಾ ಚಿಕಿತ್ಸೆ ತಜ್ಞ ಈ ಮೂವರ ಮಾರ್ಗದರ್ಶನದಲ್ಲಿ ಪತಿ  ಮಾರ್ಕ್‌ನ ಭಾವನಾತ್ಮಕ ಬೆಂಬಲದೊಂದಿಗೆ ಕ್ಯಾಥರೀನ್ ಮಾಡಿದ್ದು ಒಂದು ತಪಸ್ಸನ್ನು ಮತ್ತು ಅದರಿಂದ ಒಂದು ಮಹತ್ ಸಾಧನೆಯನ್ನು. ಒಂದೂವರೆ ವರ್ಷದ ಸತತ ಪರಿಶ್ರಮದಿಂದ ಆ್ಯನ್ನೆಗೆ 6 ವರ್ಷ ಮತ್ತು ಮೈಕೆಲ್‌ಗೆ 4 ವರ್ಷವಾಗುವಷ್ಟರಲ್ಲಿ ಅವರಿಬ್ಬರೂ ಸಹಜ ಮಕ್ಕಳ ಮಟ್ಟಕ್ಕೆ ಏರಿದ್ದರು.

ಕ್ಯಾಥರೀನ್ ಇದನ್ನಿಷ್ಟೇ ಮಾಡಿದ್ದರೆ ಅದರ ಉಪಯೋಗ ಬರೀ ಆಕೆಯ ಕುಟುಂಬಕ್ಕೆ ಮಾತ್ರ ಆಗಿರುತ್ತಿತ್ತು. ಆದರೆ ಏನೂ ಮಾಹಿತಿ ಇರದ `ಆಟಿಸಂ' ಜಗತ್ತು, ಅದರಿಂದ ತಾನು ಅನುಭವಿಸಿದ ತಾಕಲಾಟ, ಗೊಂದಲ ಇತರ `ಆಟಿಸಂ' ಮಕ್ಕಳ ಪೋಷಕರಿಗೂ ಬರದಿರಲಿ ಎಂಬುದು ಕ್ಯಾಥರೀನ್ ಯೋಚನೆ. ಅದಕ್ಕಾಗಿ ಸಾಹಿತ್ಯ ವಿಮರ್ಶಕಿಯೂ ಆಗಿದ್ದ ಆಕೆ ಬರೆದ ಮನ ಕರಗಿಸುವ ಪುಸ್ತಕ "Let me hear your voice".

ಪುಸ್ತಕದುದ್ದಕ್ಕೂ ಕ್ಯಾಥರೀನ್‌ಳ ಗಟ್ಟಿ ವ್ಯಕ್ತಿತ್ವ, ತಾಯಿಯಾಗಿ ಆಕೆ ತೋರಿದ ಸಹನೆ-ಪ್ರೀತಿ, ಮಕ್ಕಳನ್ನು ಶಿಸ್ತಿಗೆ ಒಳಪಡಿಸಲು ಹೆಚ್ಚಿನ ತಾಯಂದಿರಿಗೆ ಸಾಧ್ಯವಾಗದ ರೀತಿ ಎದ್ದು ಕಾಣುತ್ತದೆ. ಜೊತೆಗೆ `ಆಟಿಸಂ' ಬಗ್ಗೆ ಆಕೆ ಮತ್ತೆ ಮತ್ತೆ ಕಲೆ ಹಾಕಿದ ವಿವರ, ಸಂಶೋಧಿಸಿದ ಸತ್ಯಗಳು ಮತ್ತು ತನ್ನದೇ ಅನುಭವಗಳು, ತಾನು ಮಕ್ಕಳಿಗೆ ಕಲಿಸಿದ ಕ್ರಮದ ಪ್ರತಿಯೊಂದು ವಿವರವನ್ನೂ ದಾಖಲಿಸಿರುವ ರೀತಿ ಕ್ಯಾಥರೀನ್ ಮಾರೀಸ್ `ಆಟಿಸಂ' ಸಂಶೋಧನಾ ಕ್ಷೇತ್ರದಲ್ಲಿ ಇಂದು ಪ್ರಮುಖ ಹೆಸರಾಗಿ ನಿಲ್ಲುವಂತೆ ಮಾಡಿದೆ.

ಅಲ್ಲದೆ ಆಕೆಯ ಪುಸ್ತಕ ಭಾವನಾತ್ಮಕ ಸಮಸ್ಯೆ ಹೊಂದಿದ ಮಕ್ಕಳ ಬಗ್ಗೆ ತಂದೆ-ತಾಯಿ ಮಾಡಬೇಕಾದ ತೀವ್ರ ಪ್ರಯತ್ನಗಳನ್ನೂ ಚರ್ಚೆಗೆ ಒಳಪಡಿಸುತ್ತದೆ. ಮಕ್ಕಳ ಸಹಜ ಹಟಮಾರಿತನವನ್ನೇ ನಿಭಾಯಿಸಲಾಗದೆ ಲಕ್ಷಾಂತರ ತಂದೆ-ತಾಯಿ ಒದ್ದಾಡುವಾಗ ಕ್ಯಾಥರೀನ್ ತನ್ನ ಮನೋಸ್ಥೈರ್ಯವನ್ನೇ ಊರುಗೋಲಾಗಿಸಿ ಆ್ಯನ್ನೆಯ ತೀವ್ರ ಮಟ್ಟದ ಸಮಸ್ಯೆಗಳನ್ನು ವರ್ತನಾ ಚಿಕಿತ್ಸೆಯ ಮೂಲಕ ನಿಯಂತ್ರಣಕ್ಕೆ ತಂದುದಷ್ಟೇ ಅಲ್ಲ, ಗುಣಪಡಿಸಲೂ ಮುಂದಾದುದು ಸ್ಫೂರ್ತಿದಾಯಕ ಎನಿಸುತ್ತದೆ. `ಆಟಿಸಂ' ಮಕ್ಕಳ ತಂದೆ-ತಾಯಿಗಳಿಗಂತೂ ಕ್ಯಾಥರೀನ್ ಮಾರೀಸ್ ಅನುಸರಿಸಬೇಕಾದ, ಅನುಕರಿಸಬೇಕಾದ `ವ್ಯಕ್ತಿತ್ವ' ವಾಗಿ ಎದ್ದು ನಿಲ್ಲುತ್ತಾಳೆ.

ಸಾಹಿತ್ಯದಿಂದ ವೈದ್ಯಕೀಯ ರಂಗಕ್ಕೆ ಆಗುವ ಉಪಯೋಗಗಳಲ್ಲಿ, ಸಂಶೋಧನೆಗಳನ್ನು ಸಾಹಿತ್ಯದ ಮೂಲಕ ವೈದ್ಯರಿಗೆ ಪ್ರಚುರಪಡಿಸುವುದು ಒಂದಾದರೆ, ವೈದ್ಯಕೀಯ ಸಂಶೋಧನೆಗಳ ಸಾಮಾನ್ಯ ಮಾಹಿತಿಯನ್ನು ಜನಸಾಮಾನ್ಯರಿಗೆ ತಲುಪಿಸುವುದು ಇನ್ನೊಂದು. ಇದೆಲ್ಲಕ್ಕಿಂತ ಮುಖ್ಯವಾಗಿ ರೋಗಿಯ, ಅವರ ಸಂಬಂಧಿಗಳ ಅನುಭವ ಕಥನಗಳು ಇನ್ನೊಂದು ಆಯಾಮವನ್ನೇ ತೆರೆದಿಡುತ್ತವೆ.

ಅದೃಷ್ಟವಶಾತ್, ಭಾಷೆ- ಸಂವಹನಗಳಿಗೆ ಸಂಬಂಧಿಸಿದ ಮಾನಸಿಕ ತೊಂದರೆಯಾದ `ಆಟಿಸಂ' ಸಾಮಾಜಿಕ ಜೀವನ ಕ್ರಮದಿಂದಾಗಿ ಪಾಶ್ಚಾತ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಕಡಿಮೆಯೇ. ಶೀಘ್ರವಾಗಿ ಕುಟುಂಬಗಳು ಒಡೆಯುತ್ತಿರುವ, ಮನಸ್ಸು- ಮದುವೆಗಳು ಮುರಿದು ಬೀಳುತ್ತಿರುವ ಈ ಜಗತ್ತಿನಲ್ಲಿ  ಮಾರಿಸ್ ಕುಟುಂಬವನ್ನು ಆದರ್ಶವಾಗಿ ಇಟ್ಟುಕೊಂಡು ಪ್ರೀತಿ- ಸಾಹಿತ್ಯ- ಸಂವಹನಗಳ ಮೂಲಕ `ಆಟಿಸಂ' ನಮ್ಮ ಮಕ್ಕಳಲ್ಲಿ ಬರದಂತೆ ತಡೆಯೋಣವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT