ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತಕ್ಕೆ ಚುರುಕು: ಜಿಲ್ಲಾಧಿಕಾರಿ ಪ್ರಕಾಶ್ ಭರವಸೆ

Last Updated 4 ಡಿಸೆಂಬರ್ 2012, 9:42 IST
ಅಕ್ಷರ ಗಾತ್ರ

ಮಂಗಳೂರು: ಆಡಳಿತದಲ್ಲಿ ಚುರುಕು ತಂದರೆ ಮಾತ್ರ ಸರ್ಕಾರದ ಕಾರ್ಯಕ್ರಮಗಳು ಜನರಿಗೆ ತಲುಪಲು ಸಾಧ್ಯ. ಗ್ರಾಮ ಲೆಕ್ಕಿಗರಿಂದ ಹಿಡಿದು ಜಿಲ್ಲಾಧಿಕಾರಿ ಕಚೇರಿಯವರೆಗೆ ಆಡಳಿತಕ್ಕೆ ಚುರುಕು ತರುವುದು ತಮ್ಮ ಆದ್ಯತೆ. ಆಡಳಿತ ಎಂಬುದು ಸಾಮೂಹಿಕ ಹೊಣೆಗಾರಿಕೆಯ ಕೆಲಸವಾದ್ದರಿಂದ ಎಲ್ಲರನ್ನೂ ಸೇರಿಸಿಕೊಂಡು ಉತ್ತಮ ಆಡಳಿತ ನೀಡಲು ಪ್ರಯತ್ನಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಎನ್.ಪ್ರಕಾಶ್ ಹೇಳಿದ್ದಾರೆ.

ಸೋಮವಾರ ಇಲ್ಲಿ ನಿರ್ಗಮಿತ ಜಿಲ್ಲಾಧಿಕಾರಿ ಎನ್.ಎಸ್.ಚನ್ನಪ್ಪ ಗೌಡ ಅವರಿಂದ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಾಕ್ಷರರ ಪ್ರಮಾಣ ಅಧಿಕ ಇದೆ. ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಹೆಚ್ಚು ತಿಳಿವಳಿಕೆ ಇದೆ. ಹೀಗಾಗಿ ಮಾಹಿತಿಗಳ ರವಾನೆ, ಜನರ ಅಹವಾಲು ಸ್ವೀಕಾರದಂತಹ ವಿಚಾರಗಳು ಈ ಜಿಲ್ಲೆಯಲ್ಲಿ ಅಂತಹ ಸವಾಲಿನ ಸಂಗತಿಯಾಗಲಾರದು ಎನಿಸುತ್ತದೆ ಎಂದರು.

ಆಡಳಿತಕ್ಕೆ ಚುರುಕು ಯಾವ ರೀತಿ ಎಂದು ಕೇಳಿದಾಗ, ಅದನ್ನು ಈಗಲೇ ಹೇಳಲಾಗದು, ಮಾಡಿ ತೋರಿಸಿದಾಗಲೇ ಗೊತ್ತಾಗಬೇಕು ಎಂದರು.

ಪ್ಲಾಸ್ಟಿಕ್ ನಿಷೇಧಕ್ಕೆ ಈಗಾಗಲೇ ಚಾಲನೆ ದೊರೆತಿದೆ. ಹಲವಾರು ವರ್ಷಗಳಿಂದ ಬಳಕೆಯಲ್ಲಿರುವ ಪ್ಲಾಸ್ಟಿಕ್ ಬಳಕೆಯನ್ನು ತಕ್ಷಣಕ್ಕೆ ಸಂಪೂರ್ಣ ರದ್ದುಪಡಿಸುವುದು ಕಷ್ಟದ ಕೆಲಸವಾದರೂ, ಮಹಾನಗರ ಪಾಲಿಕೆ ವತಿಯಿಂದ ಏಜೆನ್ಸಿಗಳ ಮೂಲಕ ಈ ಕಾರ್ಯ ಆರಂಭವಾಗಿದೆ. ಇದನ್ನು ಖಂಡಿತ ಮುಂದುವರಿಸಲಾಗುವುದು ಎಂದು ಅವರು ಹೇಳಿದರು.

ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕೈಗೆತ್ತಿಕೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಹೇಗೆ ಮುಂದುವರಿಸುವ ವಿಚಾರ ಇದೆ ಎಂದು ಕೇಳಿದಾಗ, ತಾವು ಈ ದಿನವಷ್ಟೇ ಅಧಿಕಾರ ಸ್ವೀಕರಿಸಿರುವುದರಿಂದ ಅದರ ಬಗ್ಗೆ ಮುಂದಿನ ದಿನಗಳಲ್ಲಿ ಪ್ರತಿಕ್ರಿಯಿಸುವುದಾಗಿ ತಿಳಿಸಿದರು.

ಇದಕ್ಕೆ ಮೊದಲು ಎನ್.ಎಸ್.ಚನ್ನಪ್ಪ ಗೌಡ ಅವರು ಅಧಿಕಾರ ಹಸ್ತಾಂತರದ ವಿಧಿವಿಧಾನಗಳನ್ನು ಪೂರೈಸಿ ನೂತನ ಡಿಸಿಗೆ ಶುಭ ಕೋರಿದರು. ಅಧಿಕಾರ ಸ್ವೀಕರಿಸಿದ ಎನ್.ಪ್ರಕಾಶ್ ಅವರಿಗೆ ಜಿ.ಪಂ.ಸಿಇಒ ಕೆ.ಎನ್.ವಿಜಯಪ್ರಕಾಶ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎ.ದಯಾನಂದ, ಪಾಲಿಕೆ ಆಯುಕ್ತ ಹರೀಶ್ ಕುಮಾರ್, ಉಪವಿಭಾಗಾಧಿಕಾರಿ ಎಂ.ವಿ.ವೆಂಕಟೇಶ್ ಇತರರು ಶುಭ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT