ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡುವ ಕೈಯಲ್ಲಿ ಬಂದೂಕು!

Last Updated 22 ಜನವರಿ 2011, 19:30 IST
ಅಕ್ಷರ ಗಾತ್ರ

ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಮುಖಂಡರ ಸಮಿತಿ ಇತ್ತೀಚೆಗೆ ಹೇಳಿಕೆಯೊಂದನ್ನು ನೀಡಿ ಮಕ್ಕಳು ಕೂಡಾ ‘ಧರ್ಮಯುದ್ಧ’ದಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದೆ. ಹೆತ್ತವರು  ತಮ್ಮ ಮಕ್ಕಳನ್ನು ತಾಲಿಬಾನ್ ತರಬೇತಿ ಶಿಬಿರಗಳಿಗೆ ಕಳುಹಿಸಿಕೊಡಬೇಕೆಂದೂ ಆಗ್ರಹಿಸಿದೆ. ಈ ಸುದ್ದಿ  ಜಗತ್ತಿನ ಹಲವೆಡೆ ಆತಂಕದ ಅಲೆ ಎಬ್ಬಿಸಿದೆ. ಭಯೋತ್ಪಾದಕ ಚಟುವಟಿಕೆಯಲ್ಲಿ ಎಳೆಯ ವಯಸ್ಸಿನ  ಮುಗ್ಧರನ್ನು ತಂದು ಬಲಿ ಕೊಡುವುದು ಅಮಾನುಷ ಎಂದು ಪ್ರಜ್ಞಾವಂತರ ವಲಯದಲ್ಲಿ ಟೀಕೆ ವ್ಯಕ್ತವಾಗಿದೆ.

ಪೆರು, ಇರಾಕ್, ಇರಾನ್, ಕೊಲಂಬಿಯ, ಲೆಬನಾನ್, ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ದೇಶಗಳಲ್ಲಿ ನಡೆಯುತ್ತಿರುವ ಭಯೋತ್ಪಾದಕ ಚಟುವಟಿಕೆಗಳಲ್ಲಿ ಸುಮಾರು ಮೂರು ಲಕ್ಷಕ್ಕೂ ಅಧಿಕ ಮಕ್ಕಳನ್ನು ಬಳಸಿಕೊಳ್ಳಲಾಗಿದೆ ಎಂಬುದು ಲಂಡನ್ ವಿಶ್ವವಿದ್ಯಾಲಯವೊಂದರ ಸಂಶೋಧನಾ ವರದಿಯ ಅಂದಾಜು. ಹತ್ತು ವರ್ಷಗಳ ಹಿಂದೆಯೇ ಶ್ರೀಲಂಕಾದ ಎಲ್‌ಟಿಟಿಇ ಸಂಘಟನೆ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಮಕ್ಕಳಿರುವ ‘ಸೇನಾ ಘಟಕ’ ಹೊಂದಿದ್ದ ಸಂಗತಿ ಜಗಜ್ಜಾಹೀರಾಗಿತ್ತು. 90ರ ದಶಕದಲ್ಲಿ ಹದಿನೈದು ವರ್ಷದೊಳಗಿನ ಸುಮಾರು 20ಲಕ್ಷಕ್ಕೂ ಹೆಚ್ಚು ‘ಭಯೋತ್ಪಾದಕ ಮಕ್ಕಳು’ ಸತ್ತಿರುವ ಸಾಧ್ಯತೆಯ ಬಗ್ಗೆ ವಿಶ್ವಸಂಸ್ಥೆಯ ವರದಿ ತಿಳಿಸಿದೆ.

ಭಯೋತ್ಪಾದಕ ಚಟುವಟಿಕೆಗಳಲ್ಲಿ 6ರಿಂದ 14 ವರ್ಷದೊಳಗಿನ ಮಕ್ಕಳನ್ನು ವಿವಿಧ ರೀತಿಯಲ್ಲಿ ತೊಡಗಿಸಿಕೊಳ್ಳುತ್ತಿರುವುದರ ವಿರುದ್ಧ ಈಗಾಗಲೇ ಜನಾಭಿಪ್ರಾಯ ಮೂಡಿದೆ.

ಜನಜಂಗುಳಿ ಇರುವ ಕಡೆ ಪುಟ್ಟ ಮಕ್ಕಳು ನಡೆದುಕೊಂಡು ಹೋಗಿ ನಿರ್ದಿಷ್ಟ ಗುರಿಯ ಬಳಿ ಸ್ಪೋಟಿಸಿಕೊಳ್ಳುವುದು, ಕೈಯಲ್ಲೊಂದು ಆಟಿಕೆ ವಸ್ತು ಹಿಡಿದುಕೊಂಡು ನಿರ್ದಿಷ್ಟ ಸ್ಥಳ ತಲುಪಿದಾಗ ಆ ಆಟಿಕೆಯೇ ಸ್ಫೋಟಗೊಂಡು ಅಪಾರ ಪ್ರಾಣಹಾನಿ ಉಂಟಾಗುವುದು ಇತ್ಯಾದಿಗಳೆಲ್ಲ ಇರಾಕ್, ಆಫ್ಘನ್ ಮುಂತಾದೆಡೆ ತೀರಾ ಸಾಮಾನ್ಯವೆನಿಸಿಬಿಟ್ಟಿದೆ.

ಪ್ಯಾಲೆಸ್ಟೇನ್ ಮತ್ತು ಇಸ್ರೇಲ್ ನಡುವಣ ದ್ವೇಷಕ್ಕೆ ವಿಭಿನ್ನ ಆಯಾಮಗಳಿವೆ. ಇಸ್ರೇಲ್ ನಾಗರಿಕರ ಮೇಲೆ ಮತ್ತು ಸೇನಾ ಕೇಂದ್ರಗಳ ಮೇಲೆ ದಾಳಿ ನಡೆಸಿ ಭಾರಿ ಸಾವು ನೋವು, ಆಸ್ತಿಪಾಸ್ತಿಗೆ ನಷ್ಟ ಉಂಟು ಮಾಡುವ ದಿಸೆಯಲ್ಲಿ ಪ್ಯಾಲೆಸ್ಟೇನ್ ಸಾವಿರಾರು ಎಳೆಯರನ್ನು ಬಳಸಿಕೊಂಡಿರುವ ಕುರಿತು ಇಸ್ರೇಲ್ ದಶಕದ ಹಿಂದೆಯೇ ದಾಖಲೆ ಸಮೇತ ಪ್ರಕರಣಗಳ ದೊಡ್ಡ ಪಟ್ಟಿಯನ್ನೇ ಸಲ್ಲಿಸಿತ್ತು. 14ವರ್ಷ ವಯೋಮಾನದ ನೂರಾರು ಬಾಲಕ, ಬಾಲಕಿಯರ ದೊಡ್ಡ ಆತ್ಮಾಹುತಿ ದಳವನ್ನೇ ಪ್ಯಾಲೆಸ್ಟೇನ್ ಹೊಂದಿದೆ ಎಂದು ಇಸ್ರೇಲ್ ಬಹಳ ಹಿಂದೆಯೇ ಆರೋಪಿಸಿತ್ತು.

ಗಾಜಾಪಟ್ಟಿಯಲ್ಲಿ ‘ಹಾಮಾ’ ಭಯೋತ್ಪಾದಕರ ಗುಂಪು ನಿರಂತರವಾಗಿ ಮಕ್ಕಳನ್ನು ಉಗ್ರ ಚಟುವಟಿಕೆಗಳತ್ತ ತಳ್ಳುತ್ತಿರುವುದರ ಬಗ್ಗೆ ಇಸ್ರೇಲ್ ಹಿಂದೆ ವಿಶ್ವಸಂಸ್ಥೆಯ ಗಮನಕ್ಕೂ ತಂದಿತ್ತು. ಪ್ಯಾಲೆಸ್ಟೇನ್ ಸರ್ಕಾರದ ಕ್ರೀಡೆ ಮತ್ತು ಯುವಜನ ಸೇವಾ ಇಲಾಖೆಯೇ ಹಿಂದೆ ಮಕ್ಕಳನ್ನು ಭಯೋತ್ಪಾದಕ ಚಟುವಟಿಕೆಗಾಗಿ ಆಯ್ಕೆ ಮಾಡಿ, ತರಬೇತಿ ನೀಡಿರುವುದು ಕೂಡ ಅಷ್ಟೇ ಸತ್ಯ. ಅಲ್ಲಿನ ಕ್ರೀಡಾ ಇಲಾಖೆಯು ಪ್ರತಿ ವರ್ಷ ಶಾಲಾ ಪರೀಕ್ಷೆಗಳ ನಂತರ ಬೇಸಿಗೆ ಶಿಬಿರಗಳನ್ನು ಏರ್ಪಡಿಸುತ್ತದೆ. ಅಲ್ಲಿ ಧಾರ್ಮಿಕ ಮೌಲ್ಯಗಳು ಮತ್ತು ರಾಷ್ಟ್ರೀಯವಾದವನ್ನು ಮಕ್ಕಳ ಮನಸ್ಸಿನಲ್ಲಿ ಇನ್ನಿಲ್ಲದಂತೆ ಬಿತ್ತಲಾಗುತ್ತದೆ. ಭಯೋತ್ಪಾದಕ ಚಟುವಟಿಕೆಗಳಲ್ಲಿ ಸತ್ತವರನ್ನು ಹುತಾತ್ಮರೆಂದು ಬಿಂಬಿಸಿ ಅಂತಹ ವ್ಯಕ್ತಿತ್ವಗಳೇ ಮಕ್ಕಳಿಗೆ ಆದರ್ಶಪ್ರಾಯ ಎಂಬಂತೆ ಚಿತ್ರಿಸಲಾಗುತ್ತದೆ. ಇಸ್ರೇಲ್ ವಿರುದ್ಧ ದ್ವೇಷದ ಬೆಂಕಿಯನ್ನು ಹೊತ್ತಿಸುವ ಅಂತಹ ಬೇಸಿಗೆ ತರಬೇತಿ ಶಿಬಿರಗಳಲ್ಲಿ ದೈಹಿಕವಾಗಿ ಸಮರ್ಥವಾಗಿರುವವರನ್ನು ಆಯ್ಕೆ ಮಾಡಿ ಅವರಿಗೆ ಶಸ್ತ್ರಾಸ್ತ್ರಗಳನ್ನು ಉಪಯೋಗಿಸುವ ತರಬೇತಿ ನೀಡಲಾಗುತ್ತದೆ.

ಸಾಮಾನ್ಯವಾಗಿ ಮುಸ್ಲಿಂ ಭಯೋತ್ಪಾದಕ ಸಂಘಟನೆಗಳೇ ಹೆಚ್ಚಾಗಿ ಇಂತಹ ‘ಬಾಲಕರ ದಂಡು’ ಕಟ್ಟುತ್ತಿವೆಯಾದರೂ, ಪೆರು, ಮೆಕ್ಸಿಕೊ ಸೇರಿದಂತೆ ಹಲವು ಕಡೆ ಇತರ ಧರ್ಮಗಳಿಗೆ ಸೇರಿದ ಉಗ್ರ ಸಂಘಟನೆಗಳು ಇಂತಹದೇ ಕೃತ್ಯದಲ್ಲಿ ತೊಡಗಿವೆ. ಧರ್ಮವನ್ನೇ ಮುಂದಿಟ್ಟು ಮಕ್ಕಳ ಮನಸ್ಸು ಗೆಲ್ಲಲು ಯತ್ನಿಸುವವರು ‘ಬಲಿದಾನ ಮಾಡಿದವರಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ. ಅಲ್ಲಿ ಸುಖ ಸಮೃದ್ಧಿ ತುಂಬಿ ತುಳುಕುತ್ತಿರುತ್ತದೆ’ ಎಂಬ ನಂಬಿಕೆಗಳನ್ನು ಗಟ್ಟಿಗೊಳಿಸುತ್ತಾರೆ. ಮೊನ್ನೆ ಮೊನ್ನೆ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಸಂಘಟನೆಯ ಮುಖಂಡರು ಕೂಡಾ ಇದನ್ನೇ ಹೇಳಿರುವುದು ಗಮನಾರ್ಹ. ಇಂತಹ ಮಕ್ಕಳನ್ನು ಮನರಂಜನೆ, ಪುಸ್ತಕ, ಕ್ರೀಡೆ, ಕೌಟಂಬಿಕ ಸಂಬಂಧ ಇತ್ಯಾದಿಗಳಿಂದ ದೂರವಿರಿಸಿ ವಸತಿ ಶಾಲೆಗಳಲ್ಲೇ ಉಗ್ರ ವಿಚಾರಧಾರೆ ಕೊಡುತ್ತಾ ಶಸ್ತ್ರಾಸ್ತ್ರಗಳನ್ನು ಬಳಸುವ ಬಗ್ಗೆ ತರಬೇತಿ ನೀಡಲಾಗುತ್ತದೆ.

ಆದರೆ ಯಾವುದೇ ಧರ್ಮದಲ್ಲಿ ಮಕ್ಕಳನ್ನು ಸಮರಗಳಲ್ಲಿ ಬಳಸಿಕೊಳ್ಳಬೇಕೆಂದು ಹೇಳಿಲ್ಲ. ಇಸ್ಲಾಂನಲ್ಲಿ ಸ್ವತಃ ಪ್ರವಾದಿಯವರೇ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ಹೆತ್ತವರ ಮುಖ್ಯ ಜವಾಬ್ದಾರಿ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಮಕ್ಕಳನ್ನು ಅತ್ಯಂತ ಪ್ರೀತಿ, ಮಮತೆಯಿಂದ ನೋಡಿಕೊಳ್ಳಬೇಕೆಂದು  ಅವರು ತಿಳಿಸಿರುವುದನ್ನು ಧರ್ಮ ಗ್ರಂಥಗಳಲ್ಲಿ ವಿವರಿಸಲಾಗಿದೆ. ಆದರೆ  ‘ಧರ್ಮ ಯುದ ್ಧ’ದ ನೆಪದಲ್ಲಿ ಮಕ್ಕಳನ್ನು ಭಯೋತ್ಪಾದಕರು ಬಳಸಲೆತ್ನಿಸುವುದು ಸರಿಯೇ?

ಅನಕ್ಷರತೆ, ಬಡತನದ ಬೇಗೆಯಲ್ಲಿರುವ ಹೆತ್ತವರು ತಮ್ಮ ಮಕ್ಕಳಾದರೂ ಸ್ವರ್ಗದಲ್ಲಿ ಸುಖವಾಗಿರಲಿ ಎಂಬ ಆಶಯದೊಂದಿಗೆ ಉಗ್ರರ ಶಿಬಿರಗಳಿಗೆ ಸಂತಸದಿಂದಲೇ ಒಪ್ಪಿಸುತ್ತಾರೆಂಬ ಬಗ್ಗೆ ಪಾಕಿಸ್ತಾನದ ಶರ್ಮಿನ್ ಒಬೇದ್ ಚಿನಾಯ್ ಎಂಬ ಚಿಂತಕಿ ಮತ್ತು ಸಿನಿಮಾ ನಿರ್ದೇಶಕಿ ಅಭಿಪ್ರಾಯಪಟ್ಟಿದ್ದಾರೆ. ಚಿನಾಯ್ ಅವರು ಎರಡು ವರ್ಷಗಳ ಹಿಂದೆ ‘ಚಿಲ್ಡ್ರನ್ಸ್ ಆಫ್ ದಿ ತಾಲಿಬಾನ್’ ಎಂಬ ಸಾಕ್ಷ್ಯ ಚಿತ್ರ ನಿರ್ಮಿಸಿದ್ದರು. ಇದಕ್ಕೂ ಮೊದಲು ಅವರು ‘ಚಿಲ್ಡ್ರನ್ ಆಫ್ ಟೆರರ್’ ಎಂಬ ಚಲನಚಿತ್ರವನ್ನೂ ನಿರ್ದೇಶಿಸಿದ್ದರು. ಪಾಕಿಸ್ತಾನದಲ್ಲಿ ಎಳೆಯ ಮಕ್ಕಳ ಮೇಲೆ ಭಯೋತ್ಪಾದಕರ ಪ್ರಭಾವ ಮತ್ತು ಅಂತಹ ಸಂಘಟನೆಗಳು ಮಕ್ಕಳನ್ನು ತಮ್ಮತ್ತ ಸೆಳೆದುಕೊಳ್ಳುವ ಪ್ರಕ್ರಿಯೆಗಳ ಬಗ್ಗೆ ಆ ಚಲನಚಿತ್ರದಲ್ಲಿ ತಿಳಿಸಲಾಗಿದ್ದು ಜಗತ್ತಿನಾದ್ಯಂತ ಆ ಚಿತ್ರ ಗಮನ ಸೆಳೆದಿತ್ತು.

ದಕ್ಷಿಣ ಆಫ್ಘಾನಿಸ್ತಾನದಲ್ಲಿ ಹದಿನಾಲ್ಕು ವರ್ಷಗಳಿಗೂ ಕಡಿಮೆ ವಯಸ್ಸಿನ ತಮ್ಮ ಮಕ್ಕಳು ಬಂದೂಕು ಹಿಡಿದು ಹೋರಾಡುವುದು, ಬಾಂಬನ್ನು ಸ್ಫೋಟಿಸಿಕೊಂಡು ಆತ್ಮಾಹುತಿ ಮಾಡಿಕೊಂಡಿದ್ದು ಇತ್ಯಾದಿ ಸಂಗತಿಗಳನ್ನು ಬಡ ತಂದೆ ತಾಯಂದಿರು ಹೆಮ್ಮೆಯಿಂದ ಹೇಳಿಕೊಂಡಿದ್ದನ್ನು ತಾವು ಕಿವಿಯಾರೆ ಕೇಳಿರುವುದಾಗಿ ಚಿನಾಯ್ ವರ್ಷದ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಆದರೆ ಬಹಳಷ್ಟು ಕಡೆ ಶ್ರೀಮಂತರ ಮಕ್ಕಳು ಉತ್ತಮ ಶಿಕ್ಷಣ ಪಡೆದು ಇಂತಹ ಚಟುವಟಿಕೆಗಳಿಂದ ದೂರವಿರುತ್ತಾರೆ ಎನ್ನುವ ಮೂಲಕ ಚಿನಾಯ್ ಜನರಲ್ಲಿರುವ ವರ್ಗಸಂಬಂಧಿ ತಿಳಿವಳಿಕೆಯ ವ್ಯತ್ಯಾಸಗಳತ್ತಲೂ ಗಮನ ಸೆಳೆದಿದ್ದರು.
ಕೆಲವು ದೇಶಗಳಲ್ಲಿ ಉಗ್ರವಾದಿ ಸಂಘಟನೆಗಳು ವಿಡಿಯೊ ಚಿತ್ರಗಳ ಮೂಲಕ ಮಕ್ಕಳ ಮನಸ್ಸುಗಳನ್ನು ಆವರಿಸಿ ‘ಸ್ವರ್ಗಕ್ಕೆ ಸಾಗೋಣ ಬನ್ನಿ’ ಎಂಬ ಕರೆ ನೀಡುತ್ತಾರೆ. ಆ ಮೂಲಕ ಎಳೆಯ ಮಕ್ಕಳ ಮನಸ್ಸನ್ನು ‘ಬಲಿದಾನ’ಕ್ಕೆ ಸಿದ್ಧಗೊಳಿಸುತ್ತಾರೆ ಎಂಬ ಸಂಗತಿಯೂ ಈಗಾಗಲೇ ಜಗತ್ತಿನಾದ್ಯಂತ ಚರ್ಚೆಗೆ ಗ್ರಾಸ ಒದಗಿಸಿದೆ. ಇಂತಹ ವಿಷಯಗಳು ಕೇವಲ ಇಸ್ಲಾಂ ದೇಶಗಳಿಗಷ್ಟೇ ಸೀಮಿತಗೊಂಡಿದ್ದೂ ಅಲ್ಲ. ಶ್ರೀಲಂಕಾದಲ್ಲಿ ಹಿಂದೆ ಎಲ್‌ಟಿಟಿಇ ಸಂಘಟನೆಯ ಬೇಬಿ ಬ್ರಿಗೇಡ್ ಬಹಳಷ್ಟು ಕುಖ್ಯಾತಿ ಪಡೆದಿತ್ತು. 6ರಿಂದ 14 ವರ್ಷದೊಳಗಿನ ನೂರಾರು ಮಕ್ಕಳು ಉಗ್ರರ ಶಿಬಿರಗಳಲ್ಲಿ ಅಡುಗೆ ಸಹಾಯಕರಾಗಿ, ವೈದ್ಯರಿಗೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದರಲ್ಲದೆ, ಯುದ್ಧರಂಗದಲ್ಲಿ ಮದ್ದು ಗುಂಡು ಸರಬರಾಜು ಮಾಡುತ್ತಿದ್ದರು.

ಒಂದೂವರೆ ದಶಕದ ಹಿಂದೆ ವೆಲಿಒಲಿಯಾ ಸೇನಾ ಕೇಂದ್ರದ ಮೇಲೆ ಎಲ್‌ಟಿಟಿಇ ದಾಳಿ ನಡೆಸಿದಾಗ, ಶ್ರೀಲಂಕಾ ಸೈನಿಕರು ತೀವ್ರ ಪ್ರತಿರೋಧ ಒಡ್ಡಿದ್ದರು. ಆಗ ಸತ್ತ ಎಲ್‌ಟಿಟಿಯ ಮೂರು ಸಾವಿರ ಜನರಲ್ಲಿ ಹೆಚ್ಚಿನವರು ಮಕ್ಕಳೇ ಆಗಿದ್ದರು. ಹನ್ನೆರಡು ವರ್ಷಗಳ ಹಿಂದೆ ಕಿಲಿನೋಚಿಯಲ್ಲಿ 500 ಮಕ್ಕಳು ಸತ್ತಿದ್ದರು.

ವಿಶ್ವಸಂಸ್ಥೆಯ 1948ರ ಜಿನಿವಾ ಅಧಿವೇಶನದಲ್ಲಿ 15ವರ್ಷದೊಳಗಿನ ಮಕ್ಕಳು ಶಸ್ತ್ರಾಸ್ತ್ರ ಹಿಡಿದು ಸಮರಗಳಲ್ಲಿ ಪಾಲ್ಗೊಳುವಂತೆ ಮಾಡುವುದು ಘೋರ ಅಪರಾಧ ಎಂದು ನಿರ್ಣಯಿಸಲಾಗಿತ್ತು. ಆದರೆ ಎಲ್‌ಟಿಟಿಇ ಸೇರಿದಂತೆ ಹಲವು ಉಗ್ರರ ಸಂಘಟನೆಗಳಲ್ಲಿ ಯುವಕರ ಸಂಖ್ಯೆ ಕಡಿಮೆಯಾಗುತ್ತಿದ್ದಂತೆಯೇ ಪುಟ್ಟ ಮಕ್ಕಳನ್ನೇ ಯುದ್ಧಭೂಮಿಗೆ ಕಳುಹಿಸಲಾಗುತಿತ್ತು. ಇದೀಗ ತಾಲಿಬಾನ್ ಸಂಘಟನೆ ಕೂಡಾ ಅದೇ ಜಾಡಿನಲ್ಲಿ ಸಾಗಿರುವುದು ಆತಂಕ ಮತ್ತು ಅಮಾನವೀಯ ಸಂಗತಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT