ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದರ್ಶವು ಯಾವಾಗಲು ಕಲಿ; ಪಟ್ಟಭದ್ರ ಹಿತಾಸಕ್ತಿಗೆ ಬಲಿ

Last Updated 7 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮಾನವ ಸಂಘಜೀವಿ. ಅವನಿಗೆ ಸಮಾಜ, ಸಮೂಹ, ಸಂಘ-ಸಂಸ್ಥೆ ಎಲ್ಲ ಬೇಕು. ಇದರೊಟ್ಟಿಗೆ ಸಂಪರ್ಕ. ಮಾನವ ಸಮಾಜದಲ್ಲಿ ಸಂಪರ್ಕದ ಅಗತ್ಯತೆ. ಸಂಪರ್ಕದ ಉದ್ದೇಶವೇನೆಂದರೆ, ಸಂಬಂಧವನ್ನು ಸಾಧಿಸುವುದು.

ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಕೊಡುಗೆಯಿಂದ ಇಡೀ ಜಗತ್ತೇ ಒಂದು ಗ್ರಾಮವಾಗಿದೆ. ಅದನ್ನು ಗ್ಲೋಬಲ್ ವಿಲೇಜ್ ಎಂದು ಕರೆಯಲಾಗುತ್ತದೆ. ಜಾಗತಿಕ ಗ್ರಾಮದಲ್ಲಿ ಸಂಪರ್ಕವು ಅತಿಸರಳವಾಗಿದೆ. ಸರಳ ಆಗುವಂತಹ ಸಂಪರ್ಕ ಸಾಧನಗಳನ್ನು ಕಂಡುಹಿಡಿಯಲಾಗಿದೆ.

ಅವುಗಳ ಬಳಕೆಯಿಂದಾಗಿ ಒಂದು ವಿಚಾರವು ಕ್ಷಣಾರ್ಧದಲ್ಲಿ ಜಗತ್ತಿನ ಯಾವ ಮೂಲೆಯನ್ನಾದರೂ ಮುಟ್ಟಬಹುದಾಗಿದೆ. ಅದರಿಂದ ಅನುಕೂಲವೂ ಇದೆ; ಅನಾನುಕೂಲವೂ ಆಗುತ್ತದೆ. ರಾಜ್ಯ-ರಾಜ್ಯಗಳಲ್ಲಿ ಅನಾರೋಗ್ಯಕರ ವಾತಾವರಣವನ್ನು ಸೃಷ್ಟಿಸಿ, ಅಭಿವೃದ್ಧಿಯನ್ನು ಕುಂಠಿತಗೊಳಿಸಬೇಕೆಂಬ ಕುತಂತ್ರ ನಡೆಯಿತು.

ಯಾರೋ ಕೆಲವರು ತಪ್ಪು ಸಂದೇಶಗಳನ್ನು ಕಳುಹಿಸುವುದರಿಂದ ಸಾಮರಸ್ಯಕ್ಕೆ ದೊಡ್ಡ ಪೆಟ್ಟು. ಮತ್ತೆ ಅದನ್ನು ಸ್ಥಾಪಿಸಲು ಎಷ್ಟು ಕಷ್ಟಪಡಬೇಕಾಯಿತು !ಮಾನವ ಕುಲದಲ್ಲಿ ಸಂಬಂಧವನ್ನು ಕುದುರಿಸುವುದು ಅಷ್ಟೇ ಕಷ್ಟ. ಕ್ಷಣಿಕವಾದ ಕಾರಣಗಳಿಗೆ ಆತ ಸಂಬಂಧವನ್ನು ಕಳಕೊಳ್ಳುತ್ತಾನೆ.

ಎಲ್ಲದಕ್ಕೂ ಸಮಯವನ್ನು ವ್ಯಯಿಸುತ್ತಾನೆ. ಆದರೆ ಸಂಬಂಧದ ಬಗೆಗೆ ಅವನಲ್ಲಿ ಕಾಳಜಿ ಮಾಯವಾಗುತ್ತಿದೆ. ತನ್ನ ಸುತ್ತ ಕಠಿಣತರವಾದ ಗೋಡೆಯನ್ನು ಕಟ್ಟಿಕೊಂಡು, ಅದರಲ್ಲೇ ಮೈಮರೆಯುವ ಕ್ಷಣಗಳನ್ನು ತಂದುಕೊಳ್ಳುತ್ತಾನೆ. ಅವರವರದೇ ಆದ ಪ್ರತಿಷ್ಠೆಯ ಗೋಪುರ; ಭ್ರಮೆಯ ಕೋಟೆ.

ಸಂಬಂಧದಿಂದ ದೂರ ಉಳಿಯಲು ಇಷ್ಟು ಸಾಕಲ್ಲ? ಬಂಧನಗಳ ನಡುವೆ ಸೆರೆಯಾಗಿದ್ದರೂ, ಅವನು ಅದರಿಂದ ಹೊರಬಂದು ಸಂಬಂಧವನ್ನು ಸಾಧಿಸಬೇಕಾಗಿದೆ. ಅವನ ಪಾಲಿಗೆ ಸಂವಹನ ಮಹತ್ತರವಾದ ಸಾಧನ. ಸಂಪರ್ಕದ ಸಾಧನೆಯಲ್ಲಿ ಸಂಭಾಷಣೆಯ ಪಾತ್ರ ಅಷ್ಟೇ ಮುಖ್ಯ.

ಸಂದರ್ಶನವು ಅಷ್ಟೇ. ದರುಶನಕ್ಕಾಗಿ ಸಂದರ್ಶನ. ಒಮ್ಮಮ್ಮೆ ದರುಶನದಿಂದ ಮಾರ್ಗದರ್ಶನ. ಸಂದರ್ಶನ ನೆಪ ಮಾತ್ರ. ಸಂಭಾಷಣೆ, ಸಾಂದರ್ಭಿಕ ಚಿಂತನೆ ಬಹುಮುಖ್ಯ. ಬಂದವರ ಅಹವಾಲುಗಳನ್ನು ಕೇಳಿಸಿಕೊಳ್ಳುವ ಸಮಯ. ಉಭಯ ಕುಶಲೋಪರಿ. ಯೋಗ ಕ್ಷೇಮ. ಇದಕ್ಕೆಲ್ಲ ಒಂದಷ್ಟು ಔದಾರ್ಯ ಬೇಕಷ್ಟೇ.

ನಮ್ಮಲ್ಲಿ ತರಬೇತಿ ಪಡೆದ ಒಬ್ಬ ಸಾಧಕರು, ಬಹಳ ದಿನಗಳ ನಂತರ ಈ ಭೇಟಿ. ಔಪಚಾರಿಕ ಮಾತುಕತೆ ಆರಂಭ. ಎಲ್ಲಿದ್ದೀರಿ, ಏನು ಮಾಡುತ್ತಿದ್ದೀರಿ, ಬಹಳ ದಿನಗಳವರೆಗೆ ಈ ಕಡೆ ಬರಲೇಯಿಲ್ಲವಲ್ಲ... ಮುಂತಾಗಿ. ಅವರು ಮಾತುಕತೆಯ ಸಂದರ್ಭದಲ್ಲಿ ಹೇಳಿದ್ದು - ಆದರ್ಶವು ನನ್ನ ಬದುಕನ್ನು ಬಲಿ ತೆಗೆದುಕೊಂಡಿತೇನೋ? ಎಂಬ ಸಂದೇಹ ಆಗಾಗ ನನ್ನನ್ನು ಕಾಡುತ್ತಿದೆ ಅಂದರು. ಅವರ ಈ ಮಾತೇ ನನ್ನ ಈ ಲೇಖನಕ್ಕೆ ವಸ್ತು.

ಆದರ್ಶದ ಹಾದಿಯಲ್ಲಿ ಕಲ್ಲುಮುಳ್ಳು. ಅದು ಹೂವಿನ ಮೇಲೆ ನಡೆಯುವ ಹಾದಿಯಂತೂ ಮೊದಲಲ್ಲ. ಕಷ್ಟಕರವಾದ ಹಾದಿ. ಜನರು ಆರಂಭದಲ್ಲಿ ಆದರ್ಶಗಳನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಏಕೆಂದರೆ, ಆದರ್ಶದಲ್ಲಿ ಪರಿವರ್ತನೆ ಇರುತ್ತದೆ. ಪರಿವರ್ತನೆಯ ಪಥದಲ್ಲಿ ನಡೆಯಲು ಜನ ಸಿದ್ಧರಿರುವುದಿಲ್ಲ.

ಪರಿವರ್ತನೆ ಸಮೇತವಾಗಿರುವ ಆದರ್ಶದ ಅನುಕರಣೆಗೆ ಹೋದ ಕೆಲಸಂದರ್ಭದಲ್ಲಿ ಸಂಪ್ರದಾಯಬದ್ಧ ವ್ಯವಸ್ಥೆಯು ತಿರುಗಿಬಿದ್ದಂತಹ ಸಂದರ್ಭದಲ್ಲಿ ಬಲಿ ಆಗುವ ಸಂಭವ. ಹೀಗೆ ಪರಿವರ್ತನೆಗಾಗಿ ಮತ್ತು ಆದರ್ಶಕ್ಕಾಗಿ ಬದುಕನ್ನು ಬಲಿಕೊಟ್ಟವರು, ಸಾವಿನ ನಂತರವೂ ಇತಿಹಾಸವಾಗಿ ಉಳಿಯುತ್ತಾರೆ, ಉಳಿದಿದ್ದಾರೆ.  ಆದರ್ಶವಾದಿಯನ್ನು ಆದರ್ಶವು ಬಲಿ ತೆಗೆದುಕೊಳ್ಳುವುದಿಲ್ಲ.

ಬದಲಾಗಿ ವ್ಯವಸ್ಥೆಯು ವ್ಯಕ್ತಿಯನ್ನು ಬಲಿ ತೆಗೆದುಕೊಳ್ಳುತ್ತದೆ. ಆದರ್ಶವು ಬಲಿ ತೆಗೆದುಕೊಳ್ಳುತ್ತದೆಂಬ ಭಾವನೆಯಿದ್ದರೆ, ಯಾರೂ ಅದರೊಟ್ಟಿಗೆ ಸಾಗುವುದಿಲ್ಲ. ಆದರ್ಶವು ಬಲಿ ತೆಗೆದುಕೊಳ್ಳುವುದಿಲ್ಲ. ಬದಲಾಗಿ ಅದು ಬದುಕಿಸುತ್ತದೆ ; ಹೊಸ ಬದುಕನ್ನು ನೀಡುತ್ತದೆ.

ಮಾನವ ತೆಗೆದುಕೊಳ್ಳುವ ನಿರ್ಧಾರಗಳು ಒಮ್ಮಮ್ಮೆ ಸೂಕ್ತ ಆಗಿರುವುದಿಲ್ಲ. ಸೂಕ್ತ ನಿರ್ಧಾರ ತೆಗೆದುಕೊಂಡಾಗ, ಅದಕ್ಕೆ ಕೆಲವರು ವ್ಯತಿರಿಕ್ತವಾಗಿ ನಡೆದುಕೊಳ್ಳಬಹುದು. ನಿರಾಸಕ್ತಿ ವ್ಯಕ್ತವಾದ ಹಂತದಲ್ಲಿ  ವ್ಯಕ್ತಿ ಅಥವಾ ಸಂಘಟನೆಯು ಹೋರಾಟದಿಂದ ಹಿಂದೆ ಸರಿಯಬಹುದು. ನಿರಾಸಕ್ತಿಗಿಂತ ಬಲಿಷ್ಠವಾದುದು ಪಟ್ಟಭದ್ರಹಿತಾಸಕ್ತಿ.

ಅನೇಕ ಹೋರಾಟಗಳನ್ನು ಪಟ್ಟಭದ್ರಹಿತಾಸಕ್ತಿಯು ನುಂಗಿ ನೀರು ಕುಡಿದಿದೆ. ಸ್ವಾರ್ಥ, ಸ್ವಜನಪಕ್ಷಪಾತ ವೈಯಕ್ತಿಕ ಪ್ರತಿಷ್ಠೆ ಮತ್ತು ಆಂತರಿಕ ಕಚ್ಚಾಟಗಳು ಆದರ್ಶಪರವಾಗಿ ನಡೆದ ಚಳುವಳಿಗಳನ್ನು ಹಿಮ್ಮೆಟ್ಟಿಸಿದೆ. ತನ್ಮೂಲಕ ಹೋರಾಟಗಾರರಿಗೆ ಮತ್ತು ಹೋರಾಟಗಳಿಗೆ ಸೋಲುಂಟಾಗಿರಬಹುದು.

ಆದರ್ಶವು ಹೆಜ್ಜೆ ಹೆಜ್ಜೆಗೆ ಗೆಲ್ಲುತ್ತದೆ; ಆದರ್ಶವನ್ನು ಬೆನ್ನುಹತ್ತಿದವರು, ಅದರೊಟ್ಟಿಗೇ ಉಳಿಯುತ್ತಾರೆ. ಅದರಿಂದ ಹಿಮ್ಮೆಟ್ಟಿದವರು ಕಾಲಕ್ರಮೇಣ ಮರೆಯಾಗುತ್ತಾ ಹೋಗುತ್ತಾರೆ. ಆದರ್ಶವಾದವು ಅಮರ. ಅದರೊಂದಿಗೆ ಹೋದವನ ಬಾಳು ಬಾನೆತ್ತರ.

ಆದರ್ಶವು ಎಂದೆಂದಿಗೂ ಒಬ್ಬ ಕಲಿ (ವೀರಯೋಧ) ಇದ್ದಂತೆ. ಅವನು ಸಾವಿರದ ಸರದಾರ. ಸೋಲರಿಯದ ಶೂರ. ಬೆನ್ನು ತೋರಿಸಲಾರದ ಧೀರ. ಆದರ್ಶಗಳಿಗಾಗಿ ಹೋರಾಡುವವರು ಬಹು ವಿರಳ. ಆ ಹೋರಾಟದ ಪರಿಯನ್ನು ವರ್ಣಿಸುವ ಬಸವಣ್ಣನವರ ವಚನ -

ಎಲ್ಲರೂ ವೀರರು, ಎಲ್ಲರೂ ಧೀರರು.
ಎಲ್ಲರೂ ಮಹಿಮರು, ಎಲ್ಲರೂ ಪ್ರಮಥರು.
ಕಾಳಗದ ಮುಖದಲ್ಲಿ ಕಾಣಬಾರದು,
ಓಡುವ ಮುಖದಲ್ಲಿ ಕಾಣಬಹುದು.
ನಮ್ಮ ಕೂಡಲಸಂಗನ ಶರಣರು ಧೀರರು,
ಉಳಿದವರೆಲ್ಲರೂ ಅಧೀರರು.


ಭೌತಿಕತೆಗೆ ಹೋರಾಡಿದವರು ಅದಕ್ಕೆ ದಾಸರು; ಆದರ್ಶಕ್ಕಾಗಿ ಹೋರಾಡಿದವರು ಧೀರರು. ಬೆನ್ನು ತೋರಿಸಲಾರದ ವೀರರು. ಆದರ್ಶಕ್ಕೆ ಅವರೇ ಆಸ್ತಿ; ಇವರಿಗೆ ಆದರ್ಶವೇ ಆಸ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT