ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದೇಶಕ್ಕೆ ಮೀನು ಮಾರಾಟಗಾರರ ಆಕ್ಷೇಪ

Last Updated 22 ಏಪ್ರಿಲ್ 2013, 7:15 IST
ಅಕ್ಷರ ಗಾತ್ರ

ಬಾಗಲಕೋಟೆ: ನಾಡಿನ ಗಣ್ಯರ ಜಯಂತಿಯಂದು ಅವರ ತತ್ವಾದರ್ಶವನ್ನು ಗೌರವಿಸುವ ಉದ್ದೇಶದಿಂದ ಮತ್ತು ಸರ್ವ ಸಮಾಜವನ್ನು ಗೌರವದಿಂದ ಕಾಣುವ ಉದ್ದೇಶದಿಂದ ಸರ್ಕಾರ ಪ್ರಮುಖ ಜಯಂತಿಗಳಂದು ಮಾಂಸ ಮಾರಾಟಕ್ಕೆ ನಿಷೇಧ ವಿಧಿಸುವುದು ಮೊದಲಿನಿಂದಲೂ ಜಾರಿಯಲ್ಲಿದೆ.

ಆದರೆ, ರಾಜ್ಯ ಸರ್ಕಾರದ ಪೌರಾಡಳಿತ ನಿರ್ದೇಶನಾಲಯ 26.03. 2013ರನ್ವಯ ಹೊರಡಿಸಿರುವ ಹೊಸ ಆದೇಶಕ್ಕೆ ಬಾಗಲಕೋಟೆ ನಗರದ ಮೀನು ಮಾರಾಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

`ಕೇವಲ ಮಹಾತ್ಮ ಗಾಂಧಿ ಜಯಂತಿಗೆ ಸೀಮಿತವಾಗಿದ್ದ ಮಾಂಸ ಮಾರಾಟ ನಿಷೇಧ ಆದೇಶವನ್ನು ಪೌರಾಡಳಿತ ನಿರ್ದೇಶನಾಲಯವು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ, ರಾಮ ನವಮಿ, ಮಹಾವೀರ ಜಯಂತಿ ಸೇರಿದಂತೆ ಮತ್ತಿತರ ಜಯಂತಿಗಳಿಗೂ ವಿಸ್ತರಿಸಿದೆ. ಅಷ್ಟೇ ಅಲ್ಲದೇ ಮೀನು ಮಾರಾಟ ಮಾಡುವುದಕ್ಕೂ ನಿಷೇಧ ವಿಧಿಸಿರುವುದು ವ್ಯಾಪಾರಕ್ಕೆ ತೊಂದರೆಯಾಗಿದೆ' ಎಂದು `ಪ್ರಜಾವಾಣಿ' ಯೊಂದಿಗೆ ಮಾತನಾಡಿದ ಬಾಗಲಕೋಟೆ ನಗರದ ಮೀನು ಮಾರಾಟಗಾರರಾದ ಅಬ್ದುಲ್ ಸತ್ತಾರ್, ಡೋಂಗ್ರೆಪ್ಪ ನಾಗಪ್ಪ ಕಟ್ಟಿಮನಿ, ರುಕ್ಮುದ್ದಿನ್ ಉಸ್ಮಾನಸಾಬಾ ಮುಜಾವರ, ಬಾಷಾಸಾಬ್ ಕಲಾದಗಿ, ರೆಹಮಾನಸಾಬ್ ಪೆಂಡಾರೆ, ರಸೂಲ್‌ಸಾಬ್ ಕಲಾದಗಿ ದೂರಿದರು.

`ಯಾವುದೇ ಜಯಂತಿ ಇದ್ದರೂ ಹುಬ್ಬಳ್ಳಿ, ಕಾರವಾರ, ಮಂಗಳೂರು ನಗರದಲ್ಲಿ ಮೀನು ಮಾರಾಟಕ್ಕೆ ಯಾವುದೇ ನಿಷೇಧ ವಿಧಿಸಿಲ್ಲ. ಆದರೆ, ಬಾಗಲಕೋಟೆ ನಗರಸಭೆಯಲ್ಲಿ ಮಾತ್ರ ಮೀನು ಮಾರಾಟಕ್ಕೆ ನಿಷೇಧ ವಿಧಿಸಲಾಗಿದೆ. ಪೌರಾಯುಕ್ತರು, ಜನಪ್ರತಿನಿಧಿಗಳು ಆದೇಶವನ್ನು ಪುನರ್ ಪರಿಶೀಲನೆ ಮಾಡಿ ಮೀನು ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು' ಎಂದು ಮೀನು ಮಾರಾಟಗಾರರು ಮನವಿ ಮಾಡಿದರು.

`ಮಾಂಸ ಮಾರಾಟಕ್ಕೆ ನಿಷೇಧ ವಿಧಿಸಿರುವ ದಿನಗಳಲ್ಲಿ ಹಳೆ ಬಾಗಲಕೋಟೆಯ ಮಾಂಸ ಮಾರುಕಟ್ಟೆಯಲ್ಲಿ ಸಂಪೂರ್ಣ ನಿಷೇಧ ವಿಧಿಸಲಾಗುತ್ತದೆ. ಆದರೆ, ನಗರದ ವಿವಿಧೆಡೆ ಇರುವ ಚಿಕನ್‌ಸ್ಟಾಲ್‌ಗಳಲ್ಲಿ ಮಾತ್ರ ಎಂದಿನಂತೆ ಮಾರಾಟ ನಡೆದರೂ ನಗರಸಭೆ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ' ಎಂದು ಆರೋಪಿಸಿದರು.

ಮೀನು ಮಾರಾಟಗಾರರ ಆಕ್ಷೇಪ ಸಂಬಂಧ ಬಾಗಲಕೋಟೆ ನಗರಸಭೆ ಪೌರಾಯುಕ್ತ ವಿ.ಮುನಿಸ್ವಾಮಪ್ಪ ಅವರನ್ನು `ಪ್ರಜಾವಾಣಿ' ವಿಚಾರಿಸಿದಾಗ, `ರಾಜ್ಯ ಸರ್ಕಾರದ ಆದೇಶದಂತೆ ನಾಡಿನ ಗಣ್ಯ ವ್ಯಕ್ತಿಗಳ ಜಯಂತಿಯಂದು ಮತ್ತು ಪ್ರಮುಖ ದಿನಾಚರಣೆಗಳಂದು ಮೀನು, ಮಾಂಸ ಮಾರಾಟಕ್ಕೆ ನಿಷೇಧ ವಿಧಿಸಲಾಗುತ್ತದೆ. ಈ ಮೂಲಕ ಗಣ್ಯರ ವಿಚಾರಧಾರೆಗಳನ್ನು ಸರ್ವರೂ ಗೌರವಿಸುವ ಉದ್ದೇಶ ಅಡಗಿದೆ. ಯಾವುದೇ ದುರುದ್ದೇಶ ಅಡಗಿಲ್ಲ. ಪ್ರತಿಯೊಬ್ಬರೂ ಇದನ್ನು ಪಾಲಿಸಬೇಕು' ಎಂದು ಹೇಳಿದರು.

`ಮೀನು ಕೂಡ ಮಾಂಸಹಾರಿ ಆಗಿರುವುದರಿಂದ ಗಣ್ಯರ ಜಯಂತಿಯಂದು ಮಾರಾಟಕ್ಕೆ ನಿಷೇಧ ವಿಧಿಸಲಾಗಿದೆ' ಎಂದು ತಿಳಿಸಿದರು.
`ಮಾಂಸ ಮಾರಾಟಕ್ಕೆ ನಿಷೇಧ ಇರುವ ದಿನಗಳಂದು ಮಾರುಕಟ್ಟೆ ಹೊರತು ಪಡಿಸಿ ಇತರೆಡೆ ಇರುವ ಚಿಕನ್ ಸ್ಟಾಲ್‌ಗಳಲ್ಲಿ ಕೋಳಿ ಮಾಂಸ ಮಾರಾಟ ನಡೆಯುತ್ತದೆ ಎಂಬ ಮೀನುಗಾರರ ಆರೋಪದಲ್ಲಿ ಹುರುಳಿಲ್ಲ. ಎಲ್ಲ ಕಡೆಯೂ ಕಟ್ಟುನಿಟ್ಟಾಗಿ ನಿಷೇಧ ವಿಧಿಸಲಾಗುತ್ತದೆ. ಒಂದು ವೇಳೆ ಮಾರಾಟ ನಡೆಯುತ್ತಿದ್ದರೆ ಕ್ರಮಕೈಗೊಳ್ಳಲಾಗುವುದು' ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT