ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧುನಿಕ ಗ್ರಂಥಾಲಯದ ಹಿರಿಮೆ

Last Updated 20 ಅಕ್ಟೋಬರ್ 2011, 8:55 IST
ಅಕ್ಷರ ಗಾತ್ರ

 ಕಡಬ : ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಹೋಬಳಿ ಕೇಂದ್ರವಾದ ಕಡಬ ಗ್ರಾಮದ ಪದವಿ ಪೂರ್ವ ಕಾಲೇಜು ಅತ್ಯಾಧುನಿಕ ಗ್ರಂಥಾಲಯದಿಂದಾಗಿ ಗಮನ ಸೆಳೆಯುತ್ತಿದೆ. ಜಾಗರೂಕತೆಯಿಂದ ಆರಿಸಲಾದ ಅಪರೂಪದ ಗ್ರಂಥಗಳನ್ನು ವೈಜ್ಞಾನಿಕವಾಗಿ ವಿಂಗಡಿಸಿ, ಜೋಪಾನವಾಗಿ ಸಂರಕ್ಷಿಸಲಾಗುತ್ತಿದೆ.

ಶಾರದಾಂಬೆಯ ದೇಗುಲದಂತಿರುವ ಪದವಿ ಪೂರ್ವ ಕಾಲೇಜಿನ ದ್ವಾರವನ್ನು ಹಾಯ್ದು ಒಳ ಪ್ರವೇಶಿಸಿದರೆ ಔಷಧಿವನ, ಗ್ರಂಥಾಲಯ ಸಮುಚ್ಚಯ, ವಿಶಾಲ ಆವರಣ, ಆಟದ ಮೈದಾನ, ಗಿಡಮರಗಳು ಜನರ ಗಮನ ಸೆಳೆಯುತ್ತವೆ. ಸುಂದರ ಪರಿಸರದ ಕಾಲೇಜಿನಲ್ಲಿ ಒಟ್ಟು 750 ವಿದ್ಯಾರ್ಥಿಗಳು ಭವಿಷ್ಯ ಎದುರಿಸಲು ಸಿದ್ಧತೆ ನಡೆಸುತ್ತಿದ್ದಾರೆ.

ಗಮನ ಸೆಳೆವ ಗ್ರಂಥಾಲಯ: ಅಮೆರಿಕದ `ನಾಸಾ~ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ ಹಿರಿಯ ವಿಜ್ಞಾನಿಯಾಗಿರುವ ಬಿ.ಜಿ.ಗೋಪಾಲ ಅಯ್ಯಂಗಾರ್ ತಮ್ಮ ತಂದೆ- ತಾಯಿ ನೆನಪಿನಲ್ಲಿ ರೂ. 14 ಲಕ್ಷ ವೆಚ್ಚದ ಗ್ರಂಥಾಲಯ ನಿರ್ಮಿಸಿದ್ದಾರೆ. ಗೋಪಾಲ್ ಅವರ ಈ ಸಾಹಸಕ್ಕೆ ರಾಜ್ಯ ಸರ್ಕಾರ ಮತ್ತು ಮೈಸೂರ್ ಸೇಲ್ಸ್ ಇಂಟರ್ ನ್ಯಾಷನಲ್ ಸಂಸ್ಥೆ ಪೂರಕವಾಗಿ ಸ್ಪಂದಿಸಿ, ರೂ. 4.5 ಲಕ್ಷ ವೆಚ್ಚದ ಕಂಪ್ಯೂಟರ್, ಪ್ರಿಂಟರ್, ಪೀಠೋಪಕರಣಗಳನ್ನು ಒದಗಿಸಿದೆ.

ಹೊನ್ನಶೆಟ್ಟಿಹಳ್ಳಿ ಗ್ರಾಮದ ಎಚ್.ಟಿ.ಕೃಷ್ಣಪ್ಪ ರೂ. 66 ಸಾವಿರ ಮೌಲ್ಯದ ಪುಸ್ತಕಗಳನ್ನು ದೇಣಿಗೆಯಾಗಿ ನೀಡಿ ಗ್ರಂಥಾಲಯದ ಸತ್ವ ಹೆಚ್ಚಿಸಿದ್ದಾರೆ. ಪ್ರೌಢಶಾಲಾ ವಿಭಾಗದ ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಹುಚ್ಚವೀರೇಗೌಡ ಗ್ರಂಥಾಲಯ ವ್ಯವಸ್ಥೆಯ ಬಗ್ಗೆ ಕಾಳಜಿ ವಹಿಸಿ ಪುಸ್ತಕಗಳ ಸಂಖ್ಯೆ ನಿರಂತರ ಹೆಚ್ಚಲು ನೆರವಾಗುತ್ತಿದ್ದಾರೆ. ಪ್ರಸ್ತುತ ಇಂಗ್ಲಿಷ್ ಉಪನ್ಯಾಸಕಿ ಅನುಸೂಯಕುಮಾರಿ, ರಾಜ್ಯಶಾಸ್ತ್ರ ಉಪನ್ಯಾಸಕ ಸಣ್ಣಹನುಮಯ್ಯ ಗ್ರಂಥಾಲಯದ ಜವಾಬ್ದಾರಿ ಹೊತ್ತಿದ್ದಾರೆ.

ಔಷಧಿವನ: ಕಾಲೇಜು ಆವರಣದಲ್ಲಿರುವ ಅರ್ಧ ಎಕರೆ ಪ್ರದೇಶದಲ್ಲಿ ಆಕರ್ಷಕ ಉದ್ಯಾನವನ ನಗುತ್ತಿದೆ. ಈ ವನದಲ್ಲಿರುವ ಎಲ್ಲ ಸಸ್ಯಗಳು ಔಷಧೀಯ ಮೌಲ್ಯ ಹೊಂದಿವೆ ಎನ್ನುವುದು ವಿಶೇಷ. ಸಸಿ ಪಾತಿಯ ಮುಂಭಾಗದಲ್ಲಿರುವ ಫಲಕಗಳಲ್ಲಿ ಸಸ್ಯಗಳ ಹೆಸರನ್ನು ಬರೆಯಲಾಗಿದೆ. ತುಳಸಿ, ಮಧುನಾಶಿನಿ, ಲೋಳೆಸರ, ಶತಾವರಿ, ಹಿರೇಮದ್ದು, ಸೆಗೋಡತಿ, ಬಿಲ್ಲಾವನೋನಿ ಇತ್ಯಾದಿ ಅಪರೂಪದ ಮೂಲಿಕೆಗಳು ಇಲ್ಲಿವೆ.

ಫಲಿತಾಂಶ: ದಾನಿಗಳು, ಉಪನ್ಯಾಸಕರು, ಪೋಷಕರು, ವಿದ್ಯಾರ್ಥಿಗಳ ಪರಿಶ್ರಮದಿಂದಾಗಿ ಕಳೆದ ಸಾಲಿನಲ್ಲಿ ಕಾಲೇಜು ಶೇ. 78ರಷ್ಟು ಫಲಿತಾಂಶ ಗಳಿಸಿದೆ. ಬಹುತೇಕ ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಅಂತರ್ಜಾಲ- ಪ್ರೊಜೆಕ್ಟರ್ ಸಂಪರ್ಕವಿರುವ ಕಂಪ್ಯೂಟರ್ ಕೇಂದ್ರವನ್ನು ಪಾಠ ಹೇಳುವ ಸಂದರ್ಭದಲ್ಲಿ ಪೂರಕವಾಗಿ ಬಳಸಲಾಗುತ್ತಿದೆ.

ಗ್ರಂಥಾಲಯದ ಪುಸ್ತಕ ಸಂಖ್ಯೆ ಹೆಚ್ಚಿಸುವುದು, ಕಾಂಪೌಂಡ್ ನಿರ್ಮಿಸುವುದು ಸೇರಿದಂತೆ ಬಾಕಿಯಿರುವ ಹಲವು ಕಾರ್ಯಗಳಿಗಾಗಿ ಹಳೆಯ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ನೆರವನ್ನು ಕಾಲೇಜು ಕೋರಿದೆ. ಆಸಕ್ತರು 9480262613 ಸಂಪರ್ಕಿಸಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT