ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧುನಿಕತೆ ಮತ್ತು ಅತ್ಯಾಚಾರ

Last Updated 25 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ದೇಶದ ಜನರ ತೀವ್ರ ಆಕ್ರೋಶಕ್ಕೆ ಗುರಿಯಾಗಿರುವ ದೆಹಲಿಯ ಪೈಶಾಚಿಕ ಅತ್ಯಾಚಾರದ ಘಟನೆಯನ್ನೂ ಒಳಗೊಂಡಂತೆ ಮಂಡ್ಯಕ್ಕೆ ತೆರಳುತ್ತಿದ್ದ ಯುವತಿಯೋರ್ವಳನ್ನು ಕೆಲ ಯುವಕರು ತಮ್ಮ ಕಾಮಲೀಲೆಗಳಿಗೆ ಸಹಕರಿಸದ ಕಾರಣಕ್ಕಾಗಿ ಚಲಿಸುತ್ತಿದ್ದ ರೈಲಿನಿಂದ ಹೊರದಬ್ಬಿದ ಘಟನೆಯಿರಬಹುದು, ಮಂಗಳೂರಿನ ಮನೆಯೊಂದರಲ್ಲಿ ಹುಟ್ಟುಹಬ್ಬ ಆಚರಿಸುತ್ತಿದ್ದ ಯುವತಿಯರ ಮೇಲೆರಗಿ ಪಿಶಾಚಿಗಳಂತೆ ವರ್ತಿಸಿದ ಹೋಂಸ್ಟೇ ಪ್ರಕರಣವಿರಬಹುದು, ಸಣ್ಣಮಗುವಿನಿಂದ ಹಿಡಿದು ವೃದ್ಧಮಹಿಳೆಯರಾದಿಯಾಗಿ ಅತ್ಯಾಚಾರಕ್ಕೆ ಬಲಿಯಾಗುತ್ತಿರುವ ದಿನನಿತ್ಯದ ವರದಿಗಳಿರಬಹುದು, ಕಾಮುಕ ತಂದೆಯ ವಿಕೃತ ತೃಷೆಗೆ ತುತ್ತಾಗಾಗುತ್ತಿರುವ ಹೆಣ್ಣುಮಕ್ಕಳ ಪ್ರಕರಣಗಳೇ ಇರಬಹುದು, ಇವೆಲ್ಲವು ಆಕಸ್ಮಿಕವಾಗಿಸಂಭವಿಸಿದ/ಸಂಭವಿಸಿಬಿಡುವಂತಹ ಬಿಡಿಬಿಡಿ ಘಟನೆಗಳೆಂದು ಯಾರಾದರೂ ಭಾವಿಸಿದರೆ ಅದಕ್ಕಿಂತ ಅಪಾಯಕಾರಿಯಾದ ತಪ್ಪು ತಿಳಿವಳಿಕೆ ಬೇರೊಂದಿರಲಾರದು. ಈ ಎಲ್ಲ ಪ್ರಕರಣಗಳನ್ನೂ ಒಳಗೊಂಡಂತೆ ಮಹಿಳೆಯರ ಮೇಲೆ ದಾಖಲೆ ಪ್ರಮಾಣದಲ್ಲಿ ಏರುತ್ತಿರುವ ದೌರ್ಜನ್ಯದ ಅಂಕಿ-ಸಂಖ್ಯೆಗಳು ನಮ್ಮ ಭಾರತೀಯ ಸಮಾಜ ಸಾಗುತ್ತಿರುವ ದಿಕ್ಕಿನ ದಿಕ್ಸೂಚಿಗಳಷ್ಟೆ.

ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಅಳಿಸಿಹೋಗುತ್ತಿರುವ ನೈತಿಕ ಮೌಲ್ಯಗಳಿಗೆ ಉದಾಹರಣೆಯಾಗಿಯಷ್ಟೆ ಈ ಬಿಡಿ ಘಟನೆಗಳನ್ನು ಪರಿಗಣಿಸಬೇಕೆ ಹೊರತು `ಆದರ್ಶಸಂಸ್ಕೃತಿ'ಯ ಪ್ರತಿಪಾದಕನಾಗಿರುವ ನಮ್ಮ ಸಮಾಜದ ಒಳಗಡೆ ಸಂಭವಿಸಿಬಿಟ್ಟ ಅಪವಾದಗಳಿವು  ಎಂಬುದಾಗಿ ಇವುಗಳನ್ನು ಎಣಿಸಲೇಬಾರದು. ಸರಿಯಾದ ಶಿಕ್ಷೆಗೊಳಪಡಿಸಿ ಅಪರಾಧಿಗಳಿಗೆ ತಕ್ಕ ಪಾಠ ಕಲಿಸಲು, ನೊಂದವರ ಮನಸ್ಸಿಗೆ ಸಾಂತ್ವನ ಒದಗಿಸಲು, ಕಾನೂನು ವ್ಯವಸ್ಥೆಯನ್ನು ಬಿಗಿಗೊಳಿಸುವ ಸಲುವಾಗಿ ಇಂತಹ ಘಟನೆಗಳನ್ನು ಬಿಡಿ-ಬಿಡಿಯಾಗಿ, ಪ್ರತ್ಯೇಕವಾಗಿ ದಾಖಲು ಮಾಡಬೇಕೆ ಹೊರತು ಇಷ್ಟರಿಂದಲೇ ಸಮಾಜದಲ್ಲಿ  ನೈತಿಕ ಮೌಲ್ಯಗಳನ್ನು ಸ್ಥಾಪಿಸುವುದು ಅಸಾಧ್ಯ ಎಂಬುದನ್ನು ನಾವೆಲ್ಲರು ಅರಿಯಲೇಬೇಕು. ಇದಕ್ಕೆ ಜೀವಂತ ಉದಾಹರಣೆಗಳು, ದೆಹಲಿ ಘಟನೆಯ ನಂತರವೂ ದೇಶದೆಲ್ಲೆಡೆ ಮುಂದುವರೆದಿರುವ ಸರಣಿ ಸಾಮೂಹಿಕ ಅತ್ಯಾಚಾರಗಳು.

ನಮ್ಮ ದೇಶ ಆಧುನಿಕತೆಗೆ ತೆರೆದುಕೊಂಡಿದೆಯೆಂದು ಬಹಳ ಜನರಿಗೆ ಅನಿಸುತ್ತಿರಬಹುದು, ಅಭಿವೃದ್ಧಿಯ ಮಾದರಿಗಳೂ ಕಣ್ಣೆದುರು ಗೋಚರಿಸುತ್ತಿರಬಹುದು. ಕೆಲವೇ ಜನರ ಹಿತಕಾಯುವ ಈ ಆರ್ಥಿಕ ಆಧುನಿಕತೆಗಳು ಮಹಿಳೆಯರನ್ನು ಭೋಗದ ವಸ್ತುಗಳನ್ನಾಗಿಯೇ ಮುಂದುವರೆಸಿವೆಯೇ ಹೊರತು ಆಕೆಯನ್ನು ಸಮಾನ ಪ್ರಜೆಯನ್ನಾಗಿ ಪರಿಗಣಿಸುವ ಮನಸ್ಥಿತಿಯಲ್ಲಿಲ್ಲ. ಇದಕ್ಕೆ ಸ್ಪಷ್ಟ ದಾಖಲೆ, ಕಳೆದೆರಡು ದಶಕಗಳಿಂದ ಬಿರುಸಿನಿಂದ ಜಾರಿಗೊಂಡ ನವಉದಾರೀಕರಣ ನೀತಿಗಳೂ ಇದೇ ಎರಡು ದಶಕಗಳಲ್ಲಿ ಶೇ 850ಕ್ಕೂ ಮೇಲ್ಪಟ್ಟು ಹೆಚ್ಚಿದ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳೂ ಒಟ್ಟೊಟ್ಟಿಗೆ ಸಾಗಿವೆ ಎಂಬುದು.

ಮೇಲಾಗಿ ನಮ್ಮ ಸಮಾಜವನ್ನು ಮುನ್ನಡೆಸುತ್ತಿರುವ ಬಹುತೇಕ ಜನಪ್ರತಿನಿಧಿಗಳು ಮನುವಾದಿ ಮನಸ್ಸುಗಳನ್ನೇ ಉಳ್ಳವರು. ಹೀಗಾಗಿಯೆ ಅತ್ಯಾಚಾರದ ಪ್ರಕರಣಗಳಲ್ಲಿ ಭಾಗಿಯಾಗಿರುವವರು, ಹೆಣ್ಣುಸಾಗಾಟ ಮಾಡುವವರೂ, ಪತ್ನಿಯನ್ನೇ ಕೊಲೆಗೈದವರು, ಅಶ್ಲೀಲ ಚಿತ್ರವೀಕ್ಷಣೆ ಮಾಡುವವರೂ ಸಂಸತ್ತು ಹಾಗೂ ವಿಧಾನಸಭೆಗಳಿಗೆ ಪ್ರವೇಶ ಪಡೆದಿರುವುದು.  ಮನುವಾದಿಗಳಲ್ಲದೇ ಹೋಗಿದ್ದರೆ ಸ್ವತಃ ಮಹಿಳೆಯಾಗಿರುವ, ದೀರ್ಘಕಾಲ ದೆಹಲಿ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿರುವ  ಶೀಲಾ ದೀಕ್ಷಿತ್, ಆಂಧ್ರಪ್ರದೇಶದ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರೂ ಹಾಗೂ ಸಾರಿಗೆ ಮಂತ್ರಿಗಳೂ ಆಗಿರುವ ಬೋತ್ಸ ಸತ್ಯನಾರಾಯಣ ರಂತಹ ಜವಾಬ್ಧಾರಿ ಸ್ಥಾನದಲ್ಲಿರುವ ವ್ಯಕ್ತಿಗಳು ಮಹಿಳೆಯರೇಕೆ ರಾತ್ರಿಸಮಯ ಮನೆಯಿಂದ ಹೊರಗಿರಬೇಕು ಎನ್ನುವಂತಹ ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತಿರಲಿಲ್ಲ. ಆ ಬಸ್ಸನ್ನು ಹತ್ತದೇ ಹೋಗಿದ್ದರೆ ಚೆನ್ನಾಗಿರುತ್ತಿತ್ತೆಂದು ಜನಸಾಮಾನ್ಯರೆಂದರೆ, ಆ ಯುವತಿ ಅಂತಹ ಅಪಾಯದಿಂದ ಪಾರಾಗುತ್ತಿದ್ದಳಲ್ಲ ಅನ್ನುವ ಕಾಳಜಿಯಷ್ಟೆ ಅವರ ಮಾತಿನಲ್ಲಿರುತ್ತದೆ.

ಅದೇ ಮಾತನ್ನು ಅಧಿಕಾರದ ಚುಕ್ಕಾಣಿ ಹಿಡಿದು ಜವಾಬ್ಧಾರಿ ಸ್ಥಾನದಲ್ಲಿ ಕೂತವರು ಹೇಳಿದರೆಂದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ಸಮಾಜವನ್ನು ಸರಿದಾರಿಗೆ ತರುವುದು ಅಸಾಧ್ಯವೆಂಬ ಕಲ್ಪನೆಯನ್ನು ಮೂಡಿಸಿದಂತಾಗುತ್ತದೆ. ದುಷ್ಟಮನಸ್ಸುಗಳಿಗೆ ಪರವಾನಗಿ ನೀಡಿ ರಹದಾರಿಗಳನ್ನು ಸೃಷ್ಟಿಸಿದಂತಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರತಿಗಾಮಿ ಮನಸ್ಸುಗಳ ಸ್ಥಾಪಿತ ಹಿತಾಸಕ್ತಿಗಳನ್ನು ಸಮಾಜದಲ್ಲಿ ಗಟ್ಟಿಗೊಳಿಸಿದಂತಾಗುತ್ತದೆ.

ಶೀಲಾದೀಕ್ಷಿತ್‌ರವರ ವಾದವನ್ನು ಒಪ್ಪುವುದಾದರೆ, ಈ ದೇಶ ಮಹಿಳಾ ಪ್ರಧಾನಿಯನ್ನು, ರಾಷ್ಟ್ರಾಧ್ಯಕ್ಷರನ್ನು, ಹಲವು ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರುಗಳನ್ನು ಹೊಂದುವುದು ಸಾಧ್ಯವಿತ್ತೆ?

ಅಷ್ಟೇ ಏಕೆ, ಮಹಿಳೆ ಹೊತ್ತು-ಗೊತ್ತು ಇಟ್ಟುಕೊಂಡಷ್ಟೇ ಮನೆಯಿಂದ ಹೊರಬರಬೇಕೆಂಬ ನಿಯಮವನ್ನನುಸರಿಸಿದ್ದರೆ ಸ್ವತಃ ಶೀಲಾ ದೀಕ್ಷಿತ್‌ರವರೇ ಮುಖ್ಯಮಂತ್ರಿಯಾಗಲು ಸಾಧ್ಯವಿತ್ತೆ? ವಿಜ್ಞಾನಿಗಳಾಗಿ, ವೈದ್ಯರುಗಳಾಗಿ, ಶಿಕ್ಷಣ ತಜ್ಞರಾಗಿ, ಬಾಹ್ಯಾಕಾಶ ಸಂಶೋಧಕರಾಗಿ, ಪತ್ರಕರ್ತರಾಗಿ, ವಿವಿಧ ಕ್ಷೇತ್ರಗಳ ತಂತ್ರಜ್ಞರಾಗಿ, ಹೊಲ-ಕಾರ್ಖಾನೆಗಳಲ್ಲಿ ಹೊತ್ತು-ಗೊತ್ತಿಲ್ಲದೆ ದುಡಿಯುತ್ತಿರುವ ಮಹಿಳೆಯರ ಸೇವೆಯನ್ನು ಪಡೆಯಲು ಈ ಸಮಾಜಕ್ಕೆ ಸಾಧ್ಯವಿತ್ತೆ? 

ರಾತ್ರಿ ಸಮ ಹೊರಗಡೆ ಓಡಾಡಿದರೆ ಅತ್ಯಾಚಾರಕ್ಕೆ ಬಲಿಯಾಗಬೇಕಾಗುತ್ತದೆ, ಜೀನ್ಸ್ ಪ್ಯಾಂಟ್ ಮಿಡಿ ಧರಿಸಿ ತಿರುಗಾಡಿದರೂ ಅತ್ಯಾಚಾರವಾಗುತ್ತದೆ. ಹೀಗೇ ಮುಂದುವರೆದು  ಹೆಣ್ಣಾಗಿ ಹುಟ್ಟಿದ್ದಕ್ಕೆ ಅತ್ಯಾಚಾರ ನಡೆಯುತ್ತದೆ  ಎನ್ನುವ ಹೇಳಿಕೆಗಳನ್ನೂ ಮುಂದಿನ ದಿನಗಳಲ್ಲಿ ದಾಖಲಿಸಬೇಕಾಗುತ್ತದೆ. ಹೆಣ್ಣೊಬ್ಬಳು ಒಬ್ಬಂಟಿಯಾಗಿದ್ದರೂ, ಸ್ನೇಹಿತರ ಜೊತೆಗಿದ್ದರೂ, ವೃದ್ಧೆಯಾಗಿದ್ದರೂ, ಮಗುವಾಗಿದ್ದರೂ ಅತ್ಯಾಚಾರವಾಗುತ್ತಿರುವ ಘಟನೆಗಳನ್ನು ಯಾರಾದರು ನಿರಾಕರಿಸಲು ಸಾಧ್ಯವೆ? ಇಂತಹ ಅವಸ್ಥೆಗೆ ಸಾಕ್ಷಿಯೆಂಬಂತೆ ಈ ಸಮಾಜ ಹೆಣ್ಣೇ ಬೇಡವೆಂಬ ನಿಲುವನ್ನೂ ಪ್ರದರ್ಶಿಸುತ್ತಿದೆ. ಆದ್ದರಿಂದಲೇ ಹೆಣ್ಣು- ಗಂಡಿನ ಲಿಂಗಾನುಪಾತದಲ್ಲಿ ಗಣನೀಯ ಏರುಪೇರು ದಾಖಲಾಗುತ್ತಿದೆ.

ಹೀಗಾಗಿ, ಪ್ರಸ್ತುತ ನಮ್ಮ ಸಮಾಜದೊಳಗೆ ಸಂಭವಿಸುತ್ತಿರುವ ರಾಜಕೀಯ, ಸಾಂಸ್ಕೃತಿಕ, ಆರ್ಥಿಕ, ಸಾಮಾಜಿಕ ಸ್ಥಿತ್ಯಂತರಗಳು ಸಮಾಜಮುಖಿಯಾಗಿ ಪರಿವರ್ತಿತವಾಗಬೇಕು. ಸಾಮಾನ್ಯ ಜನರ ಕಣ್ಣಿಗೆ ಗೋಚರಿಸದಂತೆ ನಮ್ಮ ದೇಶವನ್ನಾಳುತ್ತಿರುವ ಹೊರಗಿನ ಕಾರ್ಪೊರೇಟ್ ಶಕ್ತಿಗಳ  ಹಿತಾಸಕ್ತಿಗಳ ಕಪಿಮುಷ್ಟಿಯಿಂದ ನಮ್ಮ ದೇಶದ ನಾಯಕರುಗಳು ಹೊರಬಂದು ಈ ದೇಶದ ಸಾಮಾನ್ಯ ಜನರ ಹಿತ ಕಾಯುವಂತಹ ರಾಜಕೀಯ, ಸಾಂಸ್ಕೃತಿಕ ನೆಲೆಗಳನ್ನು ನಮ್ಮಲ್ಲಿ ಸೃಷ್ಟಿಸಲು ಬದ್ಧರಾಗಬೇಕು. ಹಾಗಾದಾಗ ಮಾತ್ರವೇ ಮಹಿಳೆಯರನ್ನು ಸರಕಾಗಿ ಬಿಂಬಿಸುವಲ್ಲಿ ಹಿಂದೆಂದಿಗಿಂತಲು ತೀವ್ರತರದ ಪೈಪೋಟಿಗಿಳಿದಿರುವ ಮಾರುಕಟ್ಟೆ ಶಕ್ತಿಗಳಿಗೆ, ಬಾಯಲ್ಲಿ ಆಧುನಿಕತೆ-ಅಭಿವೃದ್ಧಿಯ ಮಂತ್ರ ಜಪಿಸುತ್ತ ಮನದಲ್ಲಿ ಹಳೆಯ ಚಿಂತನಾಕ್ರಮಗಳಿಗೇ ಜೋತು ಬಿದ್ದು  ಸೃಷ್ಟಿ  ಮಾಡುವ ಅಹಿತಕರ ಸಾಮಾಜಿಕ ಸನ್ನಿವೇಶದ ಲಾಭ ಪಡೆಯುವ ಸಮಾಜಘಾತುಕ ಶಕ್ತಿಗಳಿಗೂ ಪಾಠ ಕಲಿಸಿದಂತಾಗುವುದು. ಮಹಿಳೆಯರ ಸ್ಥಾನಮಾನದಲ್ಲಿ, ಬದುಕಿನಲ್ಲಿ ಘನತೆ ಮೂಡುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT