ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನಂದದ ಅಭಿವ್ಯಕ್ತಿಯೇ ಕಲೆ: ಗುಣಪಾಲ

Last Updated 10 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಮುಂಬೈ: ಆನಂದದ ಅಭಿವ್ಯಕ್ತಿಯೇ ಕಲೆ. ನಾಟಕ ಸಮಾಜದ ಕನ್ನಡಿ. ಸಮಾಜದ ಕೊಳೆ ಹೋಗಲಾಡಿಸುವಲ್ಲಿ ಅದು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಮುಂಬೈಯ ಹಿರಿಯ ರಂಗ ಕಲಾವಿದ ಗುಣಪಾಲ, ಉಡುಪಿ ಅವರು ಹೇಳಿದರು. ಇಲ್ಲಿ ಕರ್ನಾಟಕ ಸಂಘ ಏರ್ಪಡಿಸಿದ ಮೂರು ದಿನಗಳ 17ನೇ ಅಖಿಲ ಭಾರತ ಕುವೆಂಪು ಸ್ಮಾರಕ ಏಕಾಂಕ ನಾಟಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಬದುಕಿನಲ್ಲಿ ಕಲೆಗೆ ಮಹತ್ವವಿದೆ. ಕಲೆಯಿಲ್ಲದ ಬದುಕು ನಿರಸ ಎಂದು ಹೇಳಿದರು.
  
ಸಮಾರಂಭದ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ಡಾ.ಜಿ.ಡಿ. ಜೋಶಿ ಅವರು ಸ್ಪರ್ಧೆಯಲ್ಲಿ ಭಾಗಿಯಾಗಿರುವ ನಾಟಕಗಳಿಂದ ರಂಗ ಭೂಮಿ ಇನ್ನಷ್ಟು ಲಾಭ ಪಡೆಯಲಿ ಎಂದು ಆಶಿಸಿದರು. ಸಂಘದ ಕಾರ್ಯದರ್ಶಿ ಡಾ.ಭರತ್ ಕುಮಾರ್ ಪೊಲಿಪು ಮಾತನಾಡಿ ಕುವೆಂಪು ನಾಟಕ ಸ್ಪರ್ಧೆ ಏರ್ಪಡಿಸುತ್ತಿರುವುದರ ಹಿನ್ನೆಲೆಯನ್ನು ವಿವರಿಸಿದರು.

ಸಮಾರೋಪ: ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹಿರಿಯ ನಿರ್ದೇಶಕ ಸದಾನಂದ ಸುವರ್ಣ ಅವರು ಅರವತ್ತು, ಎಪ್ಪತ್ತರ ದಶಕದಲ್ಲಿ ಮುಂಬೈ ಮಹಾನಗರದಲ್ಲಿ ನಾಟಕಗಳು ವಿಜೃಂಭಿಸುತ್ತಿದ್ದವು. ಭಾರತೀಯ ವಿದ್ಯಾಭವನ, ಮುಂಬೈ ವಿಶ್ವವಿದ್ಯಾಲಯ, ಕರ್ನಾಟಕ ಥಿಯೇಟರ್ಸ್, ಕನ್ನಡ ಕಲಾ ಕೇಂದ್ರ ನಾಟಕೋತ್ಸವ, ನಾಟಕ ಸ್ಪರ್ಧೆ ಏರ್ಪಡಿಸಿದಾಗಲೆಲ್ಲ ಮುಂಬೈಯ ಕನ್ನಡ ರಂಗಭೂಮಿ ಸಕ್ರಿಯವಾಗಿತ್ತು. ಆದರೆ ಮುಂದೆ ಈ ನಾಟಕ ಉತ್ಸವ, ಸ್ಪರ್ಧೆ ಕಡಿಮೆಯಾದವು. ಇಂತಹ ಸಂದರ್ಭದಲ್ಲಿ ಕರ್ನಾಟಕ ಸಂಘ ನಾಟಕ ಸ್ಪರ್ಧೆ ಏರ್ಪಡಿಸುವ ಮೂಲಕ ಮುಂಬೈ ರಂಗಭೂಮಿಗೆ ಹೊಸ ಚೈತನ್ಯ ನೀಡಿತು ಎಂದು ಪ್ರಂಶಸಿದರು.

ಮುಂಬೈಯಲ್ಲಿ ಮತ್ತೆ ಕನ್ನಡ ರಂಗಭೂಮಿ ವಿಜೃಂಭಿಸುವ ಲಕ್ಷಣಗಳು ಕಂಡು ಬಂದಿವೆ. ರಂಗಭೂಮಿಯ ಜತೆಗೆ ಕಲಾವಿದರು, ನಿರ್ದೇಶಕರು, ಪ್ರೇಕ್ಷಕರು ಎಲ್ಲರೂ ಬೆಳೆಯುತ್ತಿರುವುದು ಕಂಡು ಬರುತ್ತಿದೆ ಎಂದರು. ಅಧ್ಯಕ್ಷತೆ ವಹಿಸಿದ ಕರ್ನಾಟಕ ಸಂಘದ ಅಧ್ಯಕ್ಷ ಡಾ.ಜಿ.ಡಿ. ಜೋಶಿ ಅವರು ಕುವೆಂಪು ನಾಟಕ ಸ್ಪರ್ಧೆಯ ಮೂಲಕ ಮುಂಬೈಯಲ್ಲಿ ನಾಟಕ ಕ್ರಿಯೆ ಮುಂದುವರಿಯುತ್ತಾ ಬಂದಿದೆ ಎಂದರು.

ಸ್ಪರ್ಧೆಯ ತೀರ್ಪುಗಾರರಾಗಿ ಗುರುರಾಜ ಮಾರ್ಪಳ್ಳಿ , ಎನ್. ಧನಂಜಯ, ಪದ್ಮಾ ಕೊಡಗು ಅವರು ಸಹಕರಿಸಿ ಸ್ಪರ್ಧೆಯಲ್ಲಿ ಭಾಗಿಯಾದ ನಾಟಕಗಳ ಬಗ್ಗೆ ಮಾತನಾಡಿದರು.  ಅತ್ಯುತ್ತಮ ನಾಟಕ ವಿಭಾಗದಲ್ಲಿ ಪ್ರಥಮ ಬಹುಮಾನ ಬೆಂಗಳೂರಿನ `ರೂಪಾಂತರ' ತಂಡ ಅಭಿನಯಿಸಿದ `ಹುಲಿ ಹಿಡಿದ ಕಡಸು' ನಾಟಕಕ್ಕೆ, ಎರಡನೆಯ ಬಹುಮಾನ ಟಿ.ಬಿ. ಡ್ಯಾಂನ ಕನ್ನಡ ಕಲಾ ಸಂಘ ತಂಡ ಅಭಿನಯಿಸಿದ ನಾಟಕ   `ನೀರು', ಅತ್ಯುತ್ತಮ ನಾಟಕ ತೃತೀಯ ಬಹುಮಾನ ಜಿ.ಪಿ.ಐ.ಇ.ಆರ್. ರಂಗ ತಂಡ ಮತ್ತು ಅನಿಕೇತನ ಸೋಶಿಯೋ ಕಲ್ಚರಲ್ ತಂಡ ಅಭಿನಯಿಸಿದ `ಓ ನನ್ನ ಕಾರ್ಡಿಲಿಯಾ' ಮತ್ತು `ಅವತಾರಮ್' ನಾಟಕಗಳಿಗೆ ದೊರೆತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT