ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನಂದ್‌ಸಿಂಗ್‌ ಜಾಮೀನು ಅರ್ಜಿಗೆ ಸಿಬಿಐ ತಕರಾರು

Last Updated 25 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ‘ಬೇಲೆಕೇರಿ ಬಂದರಿನ ಮೂಲಕ ನಡೆದಿರುವ ಅದಿರು ಕಳ್ಳಸಾಗಣೆ ಪ್ರಕರಣದ ವಿಚಾರಣೆ­ಯಿಂದ ತಪ್ಪಿಸಿಕೊಳ್ಳುವು­ದಕ್ಕಾಗಿಯೇ ಶಾಸಕ ಆನಂದ್‌ ಸಿಂಗ್‌ ಸಿಂಗಪುರಕ್ಕೆ ಹೋಗಿದ್ದಾರೆ. ಹೀಗಾಗಿ, ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡ­ಬಾರದು’ ಎಂದು ಸಿಬಿಐ ಬುಧವಾರ  ನ್ಯಾಯಾಲಯದಲ್ಲಿ ಆಕ್ಷೇಪಣೆ ಸಲ್ಲಿಸಿದೆ.

ಹೃದ್ರೋಗ ಸಮಸ್ಯೆಗೆ ಸಿಂಗಪುರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರಣ ತಮಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು ಎಂದು ಸಿಂಗ್‌ ಅವರು ಸೋಮವಾರ ನಗರದ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

‘ಅದಿರು ಕಳ್ಳಸಾಗಣೆಯಲ್ಲಿ ಆರೋಪಿ ಶಾಸಕರ ಪಾತ್ರದ ಬಗ್ಗೆ ಸಿಬಿಐ ಬಲವಾದ ಸಾಕ್ಷ್ಯಗಳನ್ನು ಕಲೆಹಾಕಿದೆ.  ತನಿಖಾ ತಂಡವು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವಿದೆ. ಕೆಲವು ದಿನಗಳಿಂದ ಆನಂದ್‌ ಸಿಂಗ್‌ ತನಿಖೆಗೆ ಸಹಕಾರ ನೀಡುತ್ತಿಲ್ಲ. ದುರುದ್ದೇಶದಿಂದಲೇ ಅವರು ವಿದೇಶಕ್ಕೆ ತೆರಳಿದ್ದಾರೆ. ಈ ಎಲ್ಲವನ್ನೂ ನ್ಯಾಯಾಲಯ ಪರಿಗಣನೆಗೆ ತೆಗೆದುಕೊಳ್ಳಬೇಕು’ ಎಂದು ಸಿಬಿಐ ವಕೀಲರು ವಾದಿಸಿದರು.

ಸರಿಯಾಗಿದ್ದಾರೆ: ‘ಸೆಪ್ಟೆಂಬರ್‌ 21ರಂದು ಬೆಳಿಗ್ಗೆ ವಿಚಾರಣೆಗೆ ಹಾಜರಾಗುವಂತೆ ಆನಂದ್‌ ಸಿಂಗ್‌ ಅವರಿಗೆ ನೋಟಿಸ್‌ ಜಾರಿ ಮಾಡಲಾಗಿತ್ತು. ಈ ನೋಟಿಸ್‌ ತಲುಪಿದ ಬಳಿಕವೇ ಅವರು ಸಿಂಗಪುರಕ್ಕೆ ಹೋಗಿದ್ದಾರೆ. ಈ ಕುರಿತು ತನಿಖಾ ತಂಡಕ್ಕೆ ಯಾವುದೇ ಮಾಹಿತಿಯನ್ನೂ ನೀಡಿರ­ಲಿಲ್ಲ. ಶಾಸಕರಾದ ಟಿ.ಎಚ್‌.ಸುರೇಶ್‌ ಬಾಬು ಮತ್ತು ಸತೀಶ್‌ ಸೈಲ್‌ ಅವರ ಬಂಧನದ ಬಳಿಕ ಆನಂದ್‌ ಸಿಂಗ್ ತಲೆಮರೆಸಿ­ಕೊಂಡಿದ್ದಾರೆ’ ಎಂದು ಸಿಬಿಐ ಆಕ್ಷೇಪಣಾ ಹೇಳಿಕೆಯಲ್ಲಿ ತಿಳಿಸಿದೆ.

‘ಹೃದ್ರೋಗ ಸಮಸ್ಯೆಗೆ ಚಿಕಿತ್ಸೆಗಾಗಿ ಸಿಂಗಪುರಕ್ಕೆ ತೆರಳಿರುವುದಾಗಿ ಆರೋಪಿ ಶಾಸಕರು ಅರ್ಜಿಯಲ್ಲಿ ಹೇಳಿಕೊಂಡಿ­ದ್ದಾರೆ. ಆದರೆ, ವಿದೇಶಕ್ಕೆ ತೆರಳುವ ಮುನ್ನ ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು? ಖಚಿತವಾಗಿ ಯಾವ ಸಮಸ್ಯೆ ಇದೆ? ಸಿಂಗಪುರದಲ್ಲಿ ಚಿಕಿತ್ಸೆ ಪಡೆಯುವಂತೆ ಶಿಫಾರಸು ಮಾಡಿರುವ ವೈದ್ಯರು ಯಾರು? ಎಂಬ ಮಾಹಿತಿ­ಯನ್ನು ಅರ್ಜಿಯಲ್ಲಿ ಉಲ್ಲೇಖಿಸಿಲ್ಲ. ಹೃದ್ರೋಗ ಸಮಸ್ಯೆಗೆ ಅತ್ಯುತ್ತಮ ಚಿಕಿತ್ಸೆ ನೀಡುವ ಆಸ್ಪತ್ರೆಗಳು ಬೆಂಗಳೂರಿನಲ್ಲೇ ಇವೆ. ಸಮಸ್ಯೆ ಇರುವುದು ನಿಜ ಆಗಿದ್ದಲ್ಲಿ ಇಲ್ಲಿಯೇ ಚಿಕಿತ್ಸೆ ಪಡೆಯಲು ಅವಕಾಶ ಇತ್ತು. ಅನಾರೋಗ್ಯದ ಕಾರಣ ಸಂಪೂರ್ಣವಾಗಿ ಸುಳ್ಳು’ ಎಂದು ಅದು ನ್ಯಾಯಾಲಯದ ಗಮನಕ್ಕೆ ತಂದಿದೆ.

‘ಎಸ್.ಬಿ.ಲಾಜಿಸ್ಟಿಕ್ಸ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ನನ್ನನ್ನು ಸಾಕ್ಷಿ ಎಂದು ಪರಿಗಣಿಸಲಾಗಿತ್ತು. ಆದರೆ, ಈಗ ಈ ಪ್ರಕರಣದಲ್ಲಿ ಸಿಲುಕಿಸಲು ಸಿಬಿಐ ಪ್ರಯತ್ನಿಸುತ್ತಿದೆ’ ಎಂದು ಆನಂದ್‌ ಸಿಂಗ್‌ ಅರ್ಜಿಯಲ್ಲಿ ದೂರಿದ್ದರು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿಬಿಐ, ‘ಆನಂದ್‌ ಸಿಂಗ್‌ ಅದಿರು ಕಳ್ಳಸಾಗಣೆಯಲ್ಲಿ ನೇರವಾಗಿ ಭಾಗಿಯಾಗಿದ್ದರು ಎಂಬ ಅಂಶ ಹೆಚ್ಚಿನ ತನಿಖೆಯ ನಂತರ ಬೆಳಕಿಗೆ ಬಂದಿತ್ತು. ಈ ಸಂಬಂಧ ಬಲವಾದ ಸಾಕ್ಷ್ಯಗಳು ನಮ್ಮ ಬಳಿ ಇವೆ. ನ್ಯಾಯಾಲಯದಿಂದ ಸೂಕ್ತ ಆದೇಶ ಪಡೆದ ಬಳಿಕವೇ ಅವರನ್ನು ಆರೋಪಿ ಎಂದು ಹೆಸರಿಸಲಾಗಿದೆ’ ಎಂದು ಸ್ಪಷ್ಟಪಡಿಸಿದೆ.

ಜಾಮೀನು ಅರ್ಜಿ ವಿಚಾರಣೆ ಗುರುವಾರ ಮಧ್ಯಾಹ್ನ ನಡೆಯಲಿದೆ. ಸಿಬಿಐ ಸಲ್ಲಿಸಿದ ಆಕ್ಷೇಪಣಾ ಹೇಳಿಕೆಯನ್ನು ದಾಖಲು ಮಾಡಿಕೊಂಡ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾ­ಧೀಶ ವಿ.ಶ್ರೀಶಾನಂದ ಅವರು, ವಿಚಾರಣೆ­ಯನ್ನು ಗುರುವಾರಕ್ಕೆ ಮುಂದೂಡಿದರು.

‘ದಿಕ್ಕು ತಪ್ಪಿಸುವ ಯತ್ನ’
ಶಾಸಕ ಆನಂದ್‌ ಸಿಂಗ್‌ ವಿದೇಶಕ್ಕೆ ತೆರಳಿರುವುದು ಚಿಕಿತ್ಸೆ ಪಡೆಯುವುದಕ್ಕಾಗಿ ಅಲ್ಲ. ತನಿಖೆಯ ದಿಕ್ಕು ತಪ್ಪಿಸುವು­ದಕ್ಕಾಗಿ. ಹೀಗಾಗಿ ಅವರ ಅರ್ಜಿ­ಯನ್ನು ಮಾನ್ಯ ಮಾಡ­ಬಾರದು.
–ಸಿಬಿಐ ವಕೀಲರು

ಆಸ್ಪತ್ರೆಯಲ್ಲಿರಲು ಅನುಮತಿ

ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿ­ರುವ ಡೆಕ್ಕನ್‌ ಮೈನಿಂಗ್‌ ಸಿಂಡಿಕೇಟ್‌ ಮಾಲೀಕ ರಾಜೇಂದ್ರ ಕುಮಾರ್‌ ಜೈನ್‌ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಿತೇಶ್‌ಕುಮಾರ್‌ ಜೈನ್‌ ಅವರಿಗೆ ಅಕ್ಟೋಬರ್‌ 7ರವರೆಗೆ ನಗರದ ವಿಕ್ರಂ ಆಸ್ಪತ್ರೆ­ಯಲ್ಲಿ ಚಿಕಿತ್ಸೆ ಪಡೆಯಲು ಸಿಬಿಐ ವಿಶೇಷ ನ್ಯಾಯಾಲಯ ಅನುಮತಿ ನೀಡಿದೆ.

ನ್ಯಾಯಾಂಗ ಬಂಧನದಲ್ಲಿದ್ದ ಇಬ್ಬರೂ ಆರೋಪಿ­­ಗಳನ್ನು ವಿಕ್ರಂ ಆಸ್ಪತ್ರೆಗೆ ದಾಖಲಿಸ­ಲಾ­ಗಿತ್ತು. ಆರೋಪಿಗಳ ಪರ ವಕೀಲರು ಸಲ್ಲಿಸಿದ ವೈದ್ಯರ ವರದಿಯನ್ನು ಬುಧವಾರ ಪರಿ­ಶೀಲಿಸಿದ ನ್ಯಾಯಾಲಯ, ಅ.7ರವರೆಗೆ ಆಸ್ಪತ್ರೆಯಲ್ಲಿರಲು ಅವಕಾಶ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT