ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆ ಓಡಿಸುವ ಪಟಾಕಿಗೆ 1.62 ಕೋಟಿ ಖರ್ಚು

Last Updated 13 ಜೂನ್ 2011, 19:30 IST
ಅಕ್ಷರ ಗಾತ್ರ

ಹಾಸನ: `ಅರಣ್ಯ ಇಲಾಖೆಯಲ್ಲಿ ಕಳೆದ ಆರು ವರ್ಷಗಳಲ್ಲಿ 20 ಕೋಟಿ ರೂಪಾಯಿಯಷ್ಟು ಅವ್ಯವಹಾರ ನಡೆದಿದ್ದು, ಹಿಂದಿನ ಹಲವು ಅಧಿಕಾರಿಗಳು ಅವ್ಯವಹಾರದಲ್ಲಿ ಶಾಮೀಲಾಗಿದ್ದಾರೆ. ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ ತನಿಖೆ ನಡೆಸಬೇಕು~ ಎಂದು ಕಾಂಗ್ರೆಸ್ ಮುಖಂಡ ಶೇಷೇಗೌಡ ಆಗ್ರಹಿಸಿದ್ದಾರೆ.
 
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತ ದಾಖಲೆಗಳನ್ನು ಪ್ರದರ್ಶಿಸಿದ ಅವರು, ~2005 ರಿಂದ 2011ರ ವರೆಗಿನ ಅವಧಿಯಲ್ಲಿ ಆನೆಗಳನ್ನು ಓಡಿಸಲು ಪಟಾಕಿ ಖರೀದಿಗೆ ಇಲಾಖೆ 1.62 ಕೋಟಿ ರೂಪಾಯಿ ವೆಚ್ಚ ಮಾಡಿದೆ. ಒಂದು ಪಟಾಕಿಗೆ 38 ರೂಪಾಯಿ ದರ ನಿಗದಿಮಾಡಿ ಖರೀದಿಸಲಾಗಿದೆ ಎಂದರು.

ಈ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ ಇಲಾಖೆಗೆ 25 ಕೋಟಿ ರೂಪಾಯಿ ಬಂದಿದೆ. ಇದರಲ್ಲಿ ನಿಜವಾದ ಕಾರ್ಯಾಚರಣೆಗೆ ಬಳಕೆಯಾಗಿರುವುದು ಶೇ 20ರಷ್ಟು ಹಣ ಮಾತ್ರ ಎಂದು ಆರೋಪಿಸಿದರು.

ಇಲಾಖೆಯಲ್ಲಿ ಹಲವು ಹಂತಗಳಲ್ಲಿ ಭ್ರಷ್ಟಾಚಾರ ನಡೆದಿದೆ. ದಿನಕ್ಕೆ 122.78 ರೂಪಾಯಿ ವೇತನದ ಆಧಾರದಲ್ಲಿ ಪ್ರತಿ ದಿನ 30 ಮಂದಿಯಂತೆ ದಿನಗೂಲಿ ನೌಕರರ ನೇಮಕ ಮಾಡಲಾಗಿದೆ. ಹೀಗೆ ಒಟ್ಟಾರೆ 20 ಸಾವಿರ ಉದ್ಯೋಗ ಸೃಷ್ಟಿಮಾಡಿ ವೇತನ ಪಡೆಯಲಾಗಿದೆ. ಎಲ್ಲದಕ್ಕೂ ನಕಲಿ ಸಹಿ ಬಳಸಿ ಅಧಿಕಾರಿಗಳೇ ಹಣ ಪಡೆದಿದ್ದಾರೆ. ಈ ರೀತಿ 2.73 ಕೋಟಿ ರೂಪಾಯಿ ದುರ್ಬಳಕೆ ಮಾಡಲಾಗಿದೆ ಎಂದರು.

2005ರಿಂದ ಈ ವರೆಗೆ ಎರಡು- ಮೂರು ಬಾರಿ ಕಾಡಾನೆಗಳನ್ನು ಹಿಡಿಯುವ ಕಾರ್ಯಾಚರಣೆ ನಡೆದಿದೆ. ಈ ಸಂದರ್ಭದಲ್ಲಿ ಆನೆಗಳಿಗೆ ಕಟ್ಟುವ ಹಗ್ಗ ಖರೀದಿಗೆ 84 ಲಕ್ಷ ರೂಪಾಯಿ ವ್ಯಯಿಸಲಾಗಿದೆ. ಯಾವುದೇ ಟೆಂಡರ್ ಇಲ್ಲದೆ ಮೈಸೂರಿನ ಸಂಸ್ಥೆಯೊಂದು ಲೆಟರ್‌ಹೆಡ್‌ನಲ್ಲಿ ನೀಡಿರುವ ಬಿಲ್ ಆಧಾರದಲ್ಲಿ ಸಂಸ್ಥೆಗೆ ಚೆಕ್ ನೀಡಲಾಗಿದೆ. ಮೈಸೂರಿನ ಈ ಸಂಸ್ಥೆ ಒಂದು ಹಗ್ಗಕ್ಕೆ 36 ಸಾವಿರ ರೂಪಾಯಿ ಬಿಲ್ ಮಾಡಿದೆ. ~ಕಾಡಾನೆ ಸೆರೆ ಹಿಡಿಯಲು ಪಳಗಿದ ಆನೆಗಳನ್ನು ಬಳಸಬೇಕಾಗುತ್ತದೆ.

ಇಂಥ ಆನೆಗಳನ್ನು ಮೈಸೂರು ಅಥವಾ ಬಂಡೀಪುರದಿಂದ ಕರೆತರಬೇಕು. ಜಿಲ್ಲೆಯಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ಮಾಡಿದಾಗ ಆನೆಗಳನ್ನು ಕರೆತರಲೂ ಭಾರಿ ವೆಚ್ಚ ತೋರಿಸಲಾಗಿದೆ. ಒಂದು ಆನೆಯನ್ನು ಹಾಸನಕ್ಕೆ ಕರೆತರಲು 31 ಸಾವಿರ ಹಾಗೂ ಪುನಃ ಸ್ವಸ್ಥಾನಕ್ಕೆ ಕಳುಹಿಸಲು 31 ಸಾವಿರ ರೂಪಾಯಿಯಂತೆ ಒಟ್ಟಾರೆ ಇಲಾಖೆ 1.75 ಕೋಟಿ ರೂಪಾಯಿ ವೆಚ್ಚ ಮಾಡಿದೆ. ಕಾರ್ಯಾಚರಣೆಗೆ ಕರೆತಂದ ಆನೆಗಳ ಮಾವುತರ ಶೆಲ್ಟರ್ ನಿರ್ಮಾಣಕ್ಕೆ ವರ್ಷಕ್ಕೆ 25 ಲಕ್ಷ ರೂಪಾಯಿ, ಅವರ ಊಟ-ಉಪಚಾರಕ್ಕೆ 25 ಲಕ್ಷ ರೂಪಾಯಿ ಹಾಗೂ ಅವರಿಗೆ ಹಾಸಿಗೆ ದಿಂಬು ಮತ್ತಿತರ ವಸ್ತುಗಳ ಖರೀದಿಗೆ 16.12 ಲಕ್ಷ ರೂಪಾಯಿ ವೆಚ್ಚ ತೋರಿಸಲಾಗಿದೆ.

ಬಂದಿರುವ ಹಣದಲ್ಲಿ ಬಹುಪಾಲು ಇಲ್ಲಿಯ ಅಧಿಕಾರಿಗಳ ಜೇಬು ಸೇರಿದೆ. ಕಾಡಂಚಿನ ಜನರು ಮಾತ್ರ ಈಗಲೂ ಕಾಡುಪ್ರಾಣಿಗಳ ದಾಳಿಗೆ ಹೆದರಿ, ಜೀವ ಕೈಯಲ್ಲಿ ಹಿಡಿದುಕೊಂಡು ಜೀವನ ನಡೆಸಬೇಕಾಗಿದೆ ಎಂದು ದೂರಿದರು.

~ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯ ಸಂರಕ್ಷಣಾಧಿಕಾರಿಗಳು, ಎಸಿಎಫ್ ಸೇರಿದಂತೆ ಎಲ್ಲ ಹಂತದ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ. ಇವರಲ್ಲಿ ಅನೇಕರು ಜೆಡಿಎಸ್ ಮುಖಂಡರ ಸಂಬಂಧಿಕರೂ ಇದ್ದುದರಿಂದ ಆ ಪಕ್ಷ ಇವರಿಗೆ ಆಶ್ರಯ ನೀಡುತ್ತ ಬಂದಿದೆ. ಕೇಂದ್ರದ ಹಣ ದುರುಪಯೋಗ ಆಗಿರುವ ಬಗ್ಗೆ ಈಗಲಾದರು ರಾಜ್ಯ ಸರ್ಕಾರ ತನಿಖೆಗೆ ಮುಂದಾಗಬೇಕು. ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT