ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೇಕಲ್ ಬಳಿ ಪತ್ತೆಯಾದ ಯುವತಿ ಚೇತರಿಕೆ

Last Updated 25 ಏಪ್ರಿಲ್ 2013, 19:35 IST
ಅಕ್ಷರ ಗಾತ್ರ

ಬೆಂಗಳೂರು: ಆನೇಕಲ್ ಸಮೀಪದ ಮುತ್ತಕಟ್ಟೆ ದಿಣ್ಣೆ ಸಮೀಪದ ಮಾವಿನ ತೋಪಿನಲ್ಲಿ ಬುಧವಾರ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ಯುವತಿ ಚೇತರಿಸಿಕೊಳ್ಳುತ್ತಿದ್ದು, ಶುಕ್ರವಾರ ಬೆಳಿಗ್ಗೆಯೊಳಗೆ ಆಕೆಗೆ ಪ್ರಜ್ಞೆ ಬರಬಹುದು ಎಂದು ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಹೇಳಿದ್ದಾರೆ.

`ಯುವತಿ ಬುಧವಾರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಳು. ಚಿಕಿತ್ಸೆ ನಂತರ ಉಸಿರಾಟ ಸಹಜ ಸ್ಥಿತಿಗೆ ಮರಳಿದೆ. ಶುಕ್ರವಾರ ಬೆಳಿಗ್ಗೆಯೊಳಗೆ ಆಕೆಗೆ ಪ್ರಜ್ಞೆ ಬರಬಹುದು ಎಂಬ ವಿಶ್ವಾಸ ವೈದ್ಯರಿಂದ ವ್ಯಕ್ತವಾಗಿದೆ. ಪ್ರಜ್ಞೆ ಬಂದ ನಂತರ ಪ್ರಕರಣದ ಸಂಪೂರ್ಣ ಮಾಹಿತಿ ಸಿಗಬಹುದು' ಎಂದು ಆನೇಕಲ್ ಠಾಣೆ ಇನ್‌ಸ್ಪೆಕ್ಟರ್ ರೇಣುಕಾಪ್ರಸಾದ್ `ಪ್ರಜಾವಾಣಿ'ಗೆ ತಿಳಿಸಿದರು.

ಅಸ್ವಸ್ಥಗೊಂಡಿದ್ದ ಯುವತಿಯನ್ನು ಸ್ಥಳೀಯರು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ, ಅಲ್ಲಿಂದ ವಿಕ್ಟೋರಿಯಾ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಯುವತಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆತರುವ ವೇಳೆ ಆಂಬುಲೆನ್ಸ್‌ನಲ್ಲಿ ಆಕೆಯ ಜತೆಗಿದ್ದ ವ್ಯಕ್ತಿಯೊಬ್ಬ, `ನನ್ನ ಹೆಸರು ಪ್ರಭಾಕರ್, ಈಕೆ ನನ್ನ ತಂಗಿ ಲತಾ. ಕಾಣೆಯಾಗಿದ್ದವಳು ಇಂದು ಪತ್ತೆಯಾಗಿದ್ದಾಳೆ' ಎಂದು ಆಸ್ಪತ್ರೆಯ ನೋಂದಣಿ ಪುಸ್ತಕದಲ್ಲಿ ಬರೆಸಿ ಹೋಗಿದ್ದಾನೆ. ಆನೇಕಲ್‌ನಿಂದ ಜತೆಗೆ ಬಂದಿದ್ದ ಆತ, ಇಲ್ಲಿಂದ ಏಕೆ ನಾಪತ್ತೆಯಾದ. ಈವರೆಗೂ ಆಸ್ಪತ್ರೆ ಬಳಿ ಏಕೆ ಬಂದಿಲ್ಲ ಎಂಬ ಹಲವು ಪ್ರಶ್ನೆಗಳು ತಲೆದೋರಿವೆ. ಸದ್ಯ ಆತನ ಹುಡುಕಾಟ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಹಾಸನದವಳು?
`ಎರಡು ದಿನಗಳಿಂದ ತಂಗಿ ಕಾಣೆಯಾಗಿದ್ದಾಳೆ ಎಂದು ಪೀಣ್ಯ ನಿವಾಸಿ ರಘು ಎಂಬುವರು ತಾವರೆಕೆರೆ ಠಾಣೆಗೆ ದೂರು ಕೊಟ್ಟಿದ್ದರು. ಈ ನಡುವೆ ಯುವತಿಯೊಬ್ಬಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿರುವ ವಿಷಯ ತಿಳಿದ ರಘು, ವಿಕ್ಟೋರಿಯಾ ಆಸ್ಪತ್ರೆ ಬಳಿ ಬಂದಿದ್ದಾರೆ. ಆದರೆ, ಆಕೆಯನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಿಸುತ್ತಿರುವುದರಿಂದ ಅವರು ಯುವತಿಯನ್ನು ನೋಡಲು ಸಾಧ್ಯವಾಗಿಲ್ಲ' ಎಂದು ಆನೇಕಲ್ ಡಿವೈಎಸ್‌ಪಿ ಜಿನೇಂದ್ರಗಣವಿ ತಿಳಿಸಿದರು.

`ನಾವು ಮೂಲತಃ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದವರು. ತಂಗಿ ಪೀಣ್ಯದ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಇಬ್ಬರೂ ಪೀಣ್ಯದಲ್ಲೇ ಬಾಡಿಗೆ ಮನೆ ಪಡೆದು ವಾಸ ಮಾಡುತ್ತಿದ್ದೇವೆ. ಎರಡು ದಿನಗಳಿಂದ ತಂಗಿ ನಾಪತ್ತೆಯಾಗಿದ್ದಾಳೆ' ಎಂದು ರಘು ಹೇಳಿದ್ದಾರೆ. ಆದರೆ, ಈ ಯುವತಿ ನಿಜಕ್ಕೂ ರಘು ಅವರ ತಂಗಿಯೇ ಎಂಬುದು ವಿಚಾರಣೆಯಿಂದ ಗೊತ್ತಾಗಬೇಕಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT