ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಫ್ರಿಕಾದ ಮಹಿಳೆಗೆ ಹೊಸ ಕವಾಟ ಅಳವಡಿಕೆ

Last Updated 8 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಹೃದಯದ ಕವಾಟ ಸಮಸ್ಯೆಯಿಂದ ಬಳಲುತ್ತಿದ್ದ ಆಫ್ರಿಕಾದ ಮಹಿಳೆಯೊಬ್ಬರಿಗೆ ನಗರದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಯಶಸ್ವಿ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ನೆರವೇರಿಸಿ ನೂತನ ಕವಾಟ ಅಳವಡಿಸಲಾಗಿದೆ.ಆಫ್ರಿಕಾದ ಮಲವಿಯ ಲಿಸುಂಗು ಕಠೆಂಡುಲ ಅವರೇ ಯಶಸ್ವೀ ತೆರೆದ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾದ ಮಹಿಳೆ.

ಇತ್ತೀಚೆಗೆ ಈಕೆ ತಮ್ಮ ದೇಶದಲ್ಲಿ ತಪಾಸಣೆಗೆ ಒಳಗಾದಾಗ ಮೈಟ್ರಲ್ ಕವಾಟ ಸಮಸ್ಯೆಯಿಂದ ಬಳಲುತ್ತಿರುವುದು ಗೋಚರಿಸಿತು. ಹೀಗಾಗಿ, ಅದನ್ನು ಬದಲಿಸಬೇಕಾಗಿತ್ತು. ಇವರ ತಾಯಿ ಕೂಡ ಕೆಲವು ವರ್ಷಗಳ ಹಿಂದೆ ನಗರದಲ್ಲಿಯೇ ಯಶಸ್ವಿ ಮೈಟ್ರಲ್ ಕವಾಟ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಮಗಳಿಗೂ ಬೆಂಗಳೂರಿನಲ್ಲಿಯೇ ಚಿಕಿತ್ಸೆ ಕೊಡಿಸಲು ಇಲ್ಲಿಗೆ ಕರೆ ತಂದರು.

ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅವರು ಲಿಸುಂಗು ಅವರನ್ನು ತಪಾಸಣೆಗೆ ಒಳಪಡಿಸಿದಾಗ ಕೆಮ್ಮು, ಉಸಿರಾಟದ ತೊಂದರೆ ಹಾಗೂ ಆಯಾಸದಿಂದ ಬಳಲುತ್ತಿರುವುದು ಕಂಡು ಬಂದಿತು. ಎಕೋಕಾರ್ಡಿಯೋಗ್ರಾಂ ತಪಾಸಣೆಯಲ್ಲಿ ರೋಗಿಯ ಮೈಟ್ರಲ್ ಕವಾಟವು ಕಿರಿದಾಗಿದ್ದು ಕೂಡ ಕಂಡು ಬಂದಿತು. ಸಾಮಾನ್ಯವಾಗಿ ಇಂತಹ ಕವಾಟದ ಸಮಸ್ಯೆಗೆ ನಮ್ಮಲ್ಲಿ `ಬಲೂನ್ ವ್ಯಾಲ್ವುಲೋಪ್ಲಾಸ್ಟಿ~ ಚಿಕಿತ್ಸೆ ನೀಡಿ ಗುಣಪಡಿಸಲಾಗುತ್ತದೆ. ಆದರೆ, ರೋಗಿಯ ಮೈಟ್ರಲ್ ಕವಾಟವು ಬಹಳ ಹಾಳಾಗಿದ್ದರಿಂದ ಅದರ ಬದಲಾವಣೆಗಾಗಿ ಶಸ್ತ್ರ ಚಿಕಿತ್ಸೆಗೆ ಶಿಫಾರಸು ಮಾಡಲಾಯಿತು.

ತಕ್ಷಣ ಹೃದ್ರೋಗ ಶಸ್ತ್ರ ಚಿಕಿತ್ಸಾ ತಜ್ಞ ಡಾ.ಪಿ.ಎಸ್. ಸೀತಾರಾಮ್ ಭಟ್ ಮತ್ತು ಅವರ ತಂಡ ರೋಗಿಯನ್ನು ಕವಾಟ ಬದಲಾವಣೆ ಶಸ್ತ್ರ ಚಿಕಿತ್ಸೆಗೆ ಒಳಪಡಿಸಿದರು.

ಯಶಸ್ವೀ ಶಸ್ತ್ರ ಚಿಕಿತ್ಸೆ ನಡೆಸಿದ ತಂಡ ಆಕೆಗೆ ಹೊಸದಾಗಿ ಬಳಕೆಯಲ್ಲಿರುವ ಬಯೋ ಪ್ರೋಸ್ತೆಟಿಕ್ ಟಿಶ್ಯೂ ವಾಲ್ವ್ ಅಳವಡಿಸಿತು. ಇದರಿಂದ ರೋಗಿಯು ಜೀವನ ಪರ್ಯಂತ ಹೆಪ್ಪುಗಟ್ಟುವಂತಹ ನಿರೋಧಕ ಔಷಧಗಳನ್ನು ಬಳಸುವ ಮತ್ತು ಪದೇ ಪದೇ ರಕ್ತ ಪರೀಕ್ಷೆಗೆ ಒಳಪಡುವ ಅವಶ್ಯಕತೆ ಇರುವುದಿಲ್ಲ.

ಈ ಕವಾಟವು ಸುಮಾರು 20 ವರ್ಷಗಳ ಕಾಲ ಯಶಸ್ವಿಯಾಗಿ ಕಾರ್ಯನಿರ್ವಹಿಸಲಿದ್ದು, ರೋಗಿಯು ಶೀಘ್ರ ಗುಣಮುಖರಾಗಿ ತಮ್ಮ ಸ್ವದೇಶಕ್ಕೆ ಹಿಂತಿರುಗಲಿದ್ದಾರೆ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT