ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಭರಣ ಪಾಲಿಷ್ ವಂಚಕ ಆತ್ಮಹತ್ಯೆ

Last Updated 26 ಫೆಬ್ರುವರಿ 2011, 20:10 IST
ಅಕ್ಷರ ಗಾತ್ರ

ಬೆಂಗಳೂರು: ಆಭರಣಗಳಿಗೆ ಪಾಲಿಷ್ ಮಾಡಿಕೊಡುವ ಸೋಗಿನಲ್ಲಿ ಮನೆಯೊಂದಕ್ಕೆ ಬಂದು ಸಿಕ್ಕಿ ಬಿದ್ದ ವಂಚಕರ ಗುಂಪಿನ ಸದಸ್ಯನೊಬ್ಬ ಸೈನೈಡ್ ನುಂಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜಪೇಟೆಯ ವಾಲ್ಮೀಕಿನಗರದಲ್ಲಿ ಶನಿವಾರ ನಡೆದಿದೆ. ಮೃತನ ವಯಸ್ಸು ಸುಮಾರು 20 ವರ್ಷವಿದ್ದು, ಆತನ ಗುರುತು ಪತ್ತೆಯಾಗಿಲ್ಲ ಎಂದು ಚಾಮರಾಜಪೇಟೆ ಪೊಲೀಸರು ತಿಳಿಸಿದ್ದಾರೆ.

ಮೂವರು ಅಪರಿಚಿತ ವ್ಯಕ್ತಿಗಳು ಮಧ್ಯಾಹ್ನ 2 ಗಂಟೆ ಸುಮಾರಿಗೆ ವಾಲ್ಮೀಕಿನಗರ ನಿವಾಸಿ ಆಶಿಯಾ ಎಂಬುವರ ಮನೆಗೆ ಬಂದು ಆಭರಣಗಳಿಗೆ ಪಾಲಿಷ್ ಹಾಕಿಕೊಡುವುದಾಗಿ ಹೇಳಿದರು. ಅವರ ಮಾತನ್ನು ನಂಬಿದ ಆಶಿಯಾ ಏಳು ಗ್ರಾಂ ತೂಕದ ಚಿನ್ನದ ಸರವನ್ನು ಅವರಿಗೆ ಕೊಟ್ಟರು. ನಂತರ ಆ ವ್ಯಕ್ತಿಗಳು ಸರವನ್ನು ದ್ರಾವಣ ತುಂಬಿದ ಪಾತ್ರೆಯಲ್ಲಿ ಹಾಕಿ ಪಾಲಿಷ್ ಮಾಡಿರುವುದಾಗಿ ಹೇಳಿ ವಾಪಸ್ ಕೊಟ್ಟರು.

ಸರದ ತೂಕ ಕಡಿಮೆಯಾಗಿರುವ ಬಗ್ಗೆ ಅನುಮಾನಗೊಂಡ ಆಶಿಯಾ, ಆ ವ್ಯಕ್ತಿಗಳಿಗೆ ಮನೆಯಲ್ಲೇ ಇರುವಂತೆ ಹೇಳಿ ಪಕ್ಕದಲ್ಲೇ ಇದ್ದ ಚಿನ್ನಾಭರಣ ಮಳಿಗೆಗೆ ಹೋಗಿ ಸರದ ತೂಕವನ್ನು ಪರಿಶೀಲನೆ ಮಾಡಿಸಿದಾಗ ಸರ ಮೂರು ಗ್ರಾಂ ಇರುವುದು ಗೊತ್ತಾಯಿತು. ಕೂಡಲೇ ಅವರು ಸಹೋದರ ಹಯಾಜ್ ಎಂಬುವರಿಗೆ ಕರೆ ಮಾಡಿ ನಡೆದ ವಿಷಯವನ್ನೆಲ್ಲ ತಿಳಿಸಿ ಮನೆಗೆ ಬರುವಂತೆ ಹೇಳಿದರು. ಸ್ವಲ್ಪ ಸಮಯದಲ್ಲೇ ಮನೆಗೆ ಬಂದ ಹಯಾಜ್ ಸಾರ್ವಜನಿಕರ ನೆರವಿನಿಂದ ಆ ಮೂವರನ್ನು ಹಿಡಿಯಲು ಯತ್ನಿಸಿದರು. ಆದರೆ ಇಬ್ಬರು ತಪ್ಪಿಸಿಕೊಂಡರು. ಸಿಕ್ಕಿ ಬಿದ್ದ ಮತ್ತೊಬ್ಬ ಆರೋಪಿಯನ್ನು ಹಯಾಜ್ ಆಟೊದಲ್ಲಿ ಠಾಣೆಗೆ ಕರೆದುಕೊಂಡು ಬರುತ್ತಿದ್ದ ವೇಳೆ ಆತ ಸೈನೈಡ್ ನುಂಗಿ ಅಸ್ವಸ್ಥಗೊಂಡ. ಬಳಿಕ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟ ಎಂದು ಪೊಲೀಸರು ಹೇಳಿದ್ದಾರೆ.

‘ಆ ಮೂರು ಮಂದಿ ಪಶ್ಚಿಮ ಬಂಗಾಳದವರು ಎಂದು ಪರಿಚಯಿಸಿಕೊಂಡಿದ್ದರು. ಮೃತಪಟ್ಟ ವ್ಯಕ್ತಿ ತನ್ನ ಹೆಸರು ದೀಪಕ್‌ಕುಮಾರ್ ಎಂದು ಹೇಳಿಕೊಂಡಿದ್ದ’ ಎಂದು ಆಶಿಯಾ ವಿಚಾರಣೆ ವೇಳೆ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು, ಮೃತ ಆರೋಪಿಯ ಗುರುತು ಪತ್ತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT