ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮದು ಸುಂಕ: ರೇಷ್ಮೆ ಮಂಡಳಿ ಇಕ್ಕಟ್ಟು

Last Updated 22 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಳೆಗಾರರು ಮತ್ತು ನೇಕಾರರ ನಡುವೆ ಸಮನ್ವಯ ಸಾಧಿಸುವ ಜವಾಬ್ದಾರಿ ಹೊತ್ತಿರುವ ರೇಷ್ಮೆ ಮಂಡಳಿ ಇಕ್ಕಟ್ಟಿಗೆ ಸಿಲುಕಿದೆ ಎಂದು   ಕೇಂದ್ರ ರೇಷ್ಮೆ ಮಂಡಳಿಯ ಜಂಟಿ ನಿರ್ದೇಶಕ ಕೆ.ಎಸ್. ಮೆನನ್ ಇಲ್ಲಿ ಅಭಿಪ್ರಾಯಪಟ್ಟರು.

ಚೀನಾದಿಂದ ಆಮದಾಗುತ್ತಿರುವ ರೇಷ್ಮೆ ಮೇಲಿನ ಆಮದು ಸುಂಕವನ್ನು ಶೇಕಡ 30ರಿಂದ ಶೇಕಡ 5ಕ್ಕೆ ಇಳಿಕೆ ಮಾಡಿರುವ ಕ್ರಮವನ್ನು ರೇಷ್ಮೆ ಬೆಳೆಗಾರರು ವಿರೋಧಿಸುತ್ತಿದ್ದಾರೆ. ಆದರೆ ಈ ಕ್ರಮವನ್ನು ನೇಕಾರರು ಸ್ವಾಗತಿಸುತ್ತಿದ್ದಾರೆ.  ಇದರಿಂದ ಮಂಡಳಿಯು ಇಕ್ಕಟ್ಟಿಗೆ ಗುರಿಯಾಗಿದೆ ಎಂದರು.

ಕೇಂದ್ರ ರೇಷ್ಮೆ ಮಂಡಳಿಯ ಬೆಂಗಳೂರಿನ ಕಚೇರಿಯಲ್ಲಿ ಗುರುವಾರ ಆಯೋಜಿಸಲಾಗಿದ್ದ `ದೇಸಿ ರೇಷ್ಮೆಯಿಂದ ಉತ್ಕೃಷ್ಟ ದರ್ಜೆಯ ನೂಲು ತಯಾರಿಕೆ~ ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಜಾಗತಿಕ ರೇಷ್ಮೆ ನೂಲು ಉತ್ಪಾದನೆಯಲ್ಲಿ ಭಾರತ ಮತ್ತು ಚೀನಾ ದೇಶಗಳ ಒಟ್ಟು ಪಾಲು ಶೇಕಡ 95ರಷ್ಟಿದೆ. ಮುಂದಿನ ಐದು ವರ್ಷಗಳಲ್ಲಿ 32 ಸಾವಿರ ಟನ್ ರೇಷ್ಮೆ ನೂಲು ಉತ್ಪಾದಿಸುವ ಗುರಿ ಇದೆ .

ಸ್ವಯಂಚಾಲಿತ  ನೂಲು ತೆಗೆಯುವ ಯಂತ್ರ: ಕೇಂದ್ರ ರೇಷ್ಮೆ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯು ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಒಟ್ಟು ಏಳು ಸ್ವಯಂಚಾಲಿತ ರೇಷ್ಮೆ ನೂಲು ತೆಗೆಯುವ ಯಂತ್ರಗಳನ್ನು ಸ್ಥಾಪಿಸಿದೆ ಎಂದು ಸಂಸ್ಥೆಯು ನಿರ್ದೇಶಕ ಡಾ. ಅರಿಂದಮ್ ಬಸು ತಿಳಿಸಿದರು.

`ಸ್ವಯಂಚಾಲಿತ ಯಂತ್ರಗಳ ಸ್ಥಾಪನೆಯ ನಂತರ ಚೀನಾ ದೇಶದ ರೇಷ್ಮೆ ನೂಲಿನಷ್ಟೇ ಗುಣಮಟ್ಟದ ರೇಷ್ಮೆ ನೂಲನ್ನು ದೇಸಿ ಮಾರುಕಟ್ಟೆಯಿಂದಲೇ ಪಡೆದುಕೊಳ್ಳಲು ಸಾಧ್ಯವಾಗುತ್ತಿದೆ~ ಎಂದರು.

ಕರ್ನಾಟಕದ ರಾಮನಗರ ಮತ್ತು ಚನ್ನಪಟ್ಟಣಗಳಲ್ಲಿ ತಲಾ ಒಂದು ಸ್ವಯಂಚಾಲಿತ ರೇಷ್ಮೆ ನೂಲು ತೆಗೆಯುವ ಯಂತ್ರ, ಆಂಧ್ರಪ್ರದೇಶದ ಹಿಂದೂಪುರದಲ್ಲಿ ಎರಡು ಮತ್ತು ತಮಿಳುನಾಡಿನಲ್ಲಿ ಮೂರು ಯಂತ್ರಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದರು.

ಚೀನಾ ದೇಶದ ರೇಷ್ಮೆಗಿಂತ ದೇಸಿ ತಳಿಯಾದ ಮಲ್ಬರಿ ರೇಷ್ಮೆ ಹೆಚ್ಚು ಗುಣಮಟ್ಟದ್ದಾಗಿದೆ. ರಾಜ್ಯದಲ್ಲಿ ಈ ತಳಿಯ ರೇಷ್ಮೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲು ಪ್ರೋತ್ಸಾಹ ನೀಡಬೇಕು ಎಂದು ದೊಡ್ಡಬಳ್ಳಾಪುರದ ವಿದ್ಯುತ್ ಚಾಲಿತ ಮಗ್ಗಗಳ ಸಹಕಾರಿ ಸಂಘದ ಅಧ್ಯಕ್ಷ ಜಗನ್ನಾಥ ಆಗ್ರಹಿಸಿದರು.

ರೇಷ್ಮೆ ಬೆಳೆಗಾರರು ಮತ್ತು ನೇಕಾರರು ತಮ್ಮ ಲಾಭಾಂಶವನ್ನು ಹಂಚಿಕೊಳ್ಳುವ ಒಪ್ಪಂದಕ್ಕೆ ಬಂದರೆ ಚೀನಾ ರೇಷ್ಮೆ ಆಮದಿನಿಂದ ಆಗುತ್ತಿರುವ ಸಮಸ್ಯೆಗಳಿಗೆ ಆಸ್ಪದ ಇರುವುದಿಲ್ಲ ಎಂದು ರೇಷ್ಮೆ ಮಂಡಳಿಯ ಅಧ್ಯಕ್ಷ (ತಾಂತ್ರಿಕ ವಿಭಾಗ) ಡಾ.ಬಿ. ಶರತ್‌ಚಂದ್ರ ಸಲಹೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT