ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮೆಗತಿಯಲ್ಲಿ ಸೇತುವೆ ಕಾಮಗಾರಿ

Last Updated 26 ಜೂನ್ 2012, 6:35 IST
ಅಕ್ಷರ ಗಾತ್ರ

ಕೋಲಾರ: ಈ ಕಾಮಗಾರಿ ಪೂರ್ಣವಾಗುವುದು ಯಾವಾಗ? -ನಗರದ ಕ್ಲಾಕ್‌ಟವರ್ ಸಮೀಪ ಬೆಂಗಳೂರು ರಸ್ತೆಯಲ್ಲಿ ನಡೆಯುತ್ತಿರುವ ರೈಲು ಮೇಲು ಸೇತುವೆ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಬರುವ ಅಧಿಕಾರಿಗಳು ಮತ್ತು ಅಧಿಕಾರಿಗಳಂತೆ ಕಾಣುವ ಯಾರಿಗೇ ಆದರೂ ಇಲ್ಲಿನ ಜನ ಈ ಪ್ರಶ್ನೆಯನ್ನು ಕೇಳುತ್ತಾರೆ.

ಇಲ್ಲಿ ಕಾಮಗಾರಿ ಪ್ರಾರಂಭವಾಗಿ ಮಂಗಳವಾರಕ್ಕೆ ಸರಿಯಾಗಿ ಒಂದು ವರ್ಷ ಪೂರ್ಣಗೊಳ್ಳುತ್ತದೆ. ಕಾಮಗಾರಿಗೆ ನಿಗದಿ ಮಾಡಿದ್ದ ಅವಧಿ 9 ತಿಂಗಳು. ಅದಾಗಿ ಮೂರು ತಿಂಗಳು ಕಳೆದರೂ ಸೇತುವೆ ಪೂರ್ಣಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಸೇತುವೆ ಆಮೆಗತಿಯಲ್ಲಿ ಮೇಲೇಳುತ್ತಿದೆ.

ಸುತ್ತಮುತ್ತಲಿನ ನಿವಾಸಿಗಳು ಮಾತ್ರ ದಿನವೂ ದೂಳು, ದುರ್ವಾಸನೆ, ಕಸ, ಅಪಾಯಕಾರಿ ಕಿರು ರಸ್ತೆಗಳ ನಡುವೆ ದಿನ ನೂಕುತ್ತಿದ್ದಾರೆ. ಕಾಮಗಾರಿ ಶುರುವಾದಂದಿನಿಂದ ಇಲ್ಲಿವರೆಗೂ ಸುತ್ತಮುತ್ತಲಿನ ನಿವಾಸಿಗಳು ಬಳಸುತ್ತಿರುವ ಪರ್ಯಾಯ ರಸ್ತೆಯಂತೂ ಅಪಾಯಕಾರಿಯಾಗಿಯೇ ಉಳಿದಿದೆ.

ಕಳೆದ ವರ್ಷ ಜೂನ್ 26ರಂದು ಕಾಮಗಾರಿ ಶುರುವಾಗಿತ್ತು. ಕಾಮಗಾರಿ ಆರಂಭವಾದ ಕೆಲವು ದಿನಗಳ ಕಾಲ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ನಂತರ  ಕ್ಲಾಕ್ ಟವರ್‌ನಿಂದ ಸ್ವಲ್ಪ ದೂರದಲ್ಲಿ ಚಿಕ್ಕ ಪರ್ಯಾಯ ರಸ್ತೆಯೊಂದನ್ನು ನಿರ್ಮಿಸಲಾಗಿತ್ತು. ಕ್ಲಾಕ್‌ಟವರ್, ಶೆಹನ್‌ಶಾ ನಗರದ ಮೂಲಕ ರಾಷ್ಟ್ರೀಯ ಹೆದ್ದಾರಿ ತಲುಪುವವರಿಗೆ, ಕೀಲುಕೋಟೆ, ಜಿಲ್ಲಾ ಕ್ರೀಡಾಂಗಣಕ್ಕೆ ಹೋಗವವರಿಗೆ ರಸ್ತೆ ಅನುಕೂಲವಾದರೂ ಈಗಲೂ ಅಪಾಯದ ನೆರಳಲ್ಲೆ ಸಂಚರಿಸುತ್ತಿದ್ದಾರೆ.
 
ಪರ್ಯಾಯ ರಸ್ತೆ ಎಲ್ಲಿಯೂ ಸಮತಟ್ಟಾಗಿಲ್ಲ. ಕಾಮಗಾರಿ ಆರಂಭವಾದ ಒಂದು ತಿಂಗಳಿಗೇ ಮುಂಗಾರು ಮಳೆ ಶುರುವಾದ ಹಿನ್ನೆಲೆಯಲ್ಲಿ ರಸ್ತೆಯುದ್ದಕ್ಕೂ, ತಿರುವುಗಳಲ್ಲಿ ಕೆಸರು ತುಂಬಿದ ಹಳ್ಳದಲ್ಲೆ ವಾಹನಗಳು, ಜನ ಸಂಚರಿಸುವಂತಾಯಿತು. ಗೇಜ್ ಪರಿವರ್ತನೆ ಕೆಲಸ ಇನ್ನೂ ಶುರುವಾಗಿರದಿದ್ದ ಕಾರಣ ಹಳ್ಳ ದಾಟುವ ಸಾಹಸ ಎದುರಾಗಿತ್ತು.

ಡಿಸೆಂಬರ್‌ನಲ್ಲಿ ಸೇತುವೆ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲೆ ಗೇಜ್ ಪರಿವರ್ತನೆ ಕಾಮಗಾರಿ ಆರಂಭವಾದಾಗ ಪರ್ಯಾಯ ರಸ್ತೆ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸಿತು. ಹಳಿಗಳನ್ನು ಅಳವಡಿಸುವ ಸಲುವಾಗಿ ಉದ್ದಕ್ಕೂ ದೊಡ್ಡ ಹಳ್ಳವನ್ನು ಅಗೆದ ಪರಿಣಾಮ ಸಂಚಾರ ವ್ಯವಸ್ಥೆಯೇ ಅಸ್ತವ್ಯಸ್ತವಾಯಿತು.

ಪರ್ಯಾಯ ರಸ್ತೆ ಇರುವ ಪಕ್ಕದಲ್ಲೆ ರೈಲು ಮಾರ್ಗ ನಿರ್ಮಾಣವಾಗಿದೆ. ಹಳಿಗಳು ಹಳ್ಳದಲ್ಲಿವೆ. ಜನ ಹಳ್ಳದ ಮೇಲಿನ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ. ಹಳಿಗಳಿರುವ ಹಳ್ಳಕ್ಕೂ ರಸ್ತೆಗೂ ಮಧ್ಯೆ ಎಚ್ಚರಿಕೆ ಫಲಕವಾಗಲಿ, ತಾತ್ಕಾಲಿಕ ತಡೆಗೋಡೆ, ತಂತಿಬೇಲಿಯಾಗಲಿ ಇಲ್ಲ. ಇದೇ ರಸ್ತೆಯಲ್ಲಿ ಸುತ್ತಮುತ್ತಲಿನ ಪ್ರದೇಶಗಳ ಮಕ್ಕಳು ಸೈಕಲ್‌ಗಳ ಮೇಲೆ ಸಂಚರಿಸುತ್ತಾರೆ. ವೃದ್ಧರೂ ಹೆಚ್ಚಿನ ಸಂಖ್ಯೆಯಲ್ಲಿ ಕಾಣುತ್ತಾರೆ.
 
ಎಚ್ಚರ ತಪ್ಪಿದರೆ ಯಾವುದೇ ಕ್ಷಣದಲ್ಲಿ ಜಾರಿ ಹಳ್ಳಕ್ಕೆ ಬೀಳುವ ಸಾಧ್ಯತೆ ಹೆಚ್ಚಾಗಿದೆ. ಬೀದಿದೀಪದ ವ್ಯವಸ್ಥೆಯೂ ಇಲ್ಲದಿರುವುದರಿಂದ ಸಂಜೆ ವೇಳೆ ಸಂಚರಿಸುವುದು ಹೆಚ್ಚು ಅಪಾಯಕಾರಿಯಾಗಿದೆ.
ವರ್ಷವಾಯಿತು: 5 ಕೋಟಿ ರೂಪಾಯಿ ವೆಚ್ಚದ ಮೇಲು ಸೇತುವೆ ನಿರ್ಮಾಣ ಕಾಮಗಾರಿ ಅವಧಿ 9 ತಿಂಗಳು ಎಂದು ಆಗ ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದರು.

2012ರ ಮಾರ್ಚ್‌ವರೆಗೂ ಕ್ಲಾಕ್ ಟವರ್ ವೃತ್ತದ ಮಾರ್ಗ ಅಷ್ಟೂ ಅವಧಿಗೆ ಮುಚ್ಚಿರುತ್ತದೆ.  ಈ ಅವಧಿ ಏರು-ಪೇರಾಗುವ ಸಾಧ್ಯತೆಯೂ ಇದೆ ಎಂದಿದ್ದರು. ಈಗ ಈ ಅವಧಿ ಮುಗಿದು ಮೂರು ತಿಂಗಳೂ ಕಳೆದಿದೆ. ಕಾಮಗಾರಿ ಮಾತ್ರ ಇನ್ನೂ ನಡೆಯುತ್ತಲೇ ಇದೆ.

ಕಾಮಗಾರಿ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಹೀಗಾಗಿ ಸುತ್ತಮುತ್ತಲಿನ ಪರ್ಯಾಯ ರಸ್ತೆಗಳನ್ನಾದರೂ ಉತ್ತಮಪಡಿಸಬೇಕು. ಹಳ್ಳಗಳಲ್ಲಿರುವ ಕಸದ ರಾಶಿಯನ್ನು ಸ್ವಚ್ಛಗೊಳಿಸಬೇಕು ಎಂಬುದು ನಿವಾಸಿಗಳ ಆಗ್ರಹ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT