ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮ್ಲಜನಕ ಕವಚದೊಂದಿಗೆ ಕೊನೆ ಕಛೇರಿ ಸವಿದರು...

Last Updated 12 ಡಿಸೆಂಬರ್ 2012, 19:50 IST
ಅಕ್ಷರ ಗಾತ್ರ

ಮೈಸೂರು: 2012ರ ಅಕ್ಟೋಬರ್ 19. ಸಂಜೆ 6.30ಕ್ಕೆ ಅಮೆರಿಕದ ಸ್ಯಾಂಡಿಯಾಗೊ ನಗರದಲ್ಲಿ ಮೈಸೂರು ನಾಗರಾಜ್ ಮತ್ತು ಡಾ.ಮೈಸೂರು ಮಂಜುನಾಥ್ ಅವರ ವಯಲಿನ್ ಕಛೇರಿ. ಇಡೀ ಸಭಾಂಗಣ ಭರ್ತಿಯಾಗಿತ್ತು. ಕಛೇರಿ ಆರಂಭವಾಗಿ ಸುಮಾರು 15 ನಿಮಿಷದ ನಂತರ ಸಭಾಂಗಣದ ಹಿಂಭಾಗದಲ್ಲಿ ಕೊಂಚ ಗಡಿಬಿಡಿ ಶುರುವಾಯಿತು. ನಾಗರಾಜ್ ಮತ್ತು ಮಂಜುನಾಥ್ ಆಗಷ್ಟೇ ಸಂಗೀತದ ಲಯ ಕಂಡುಕೊಳ್ಳುತ್ತಿದ್ದರು. ಕೊಂಚ ಕಿರಿಕಿರಿ ಆಯಿತು.

ಇಬ್ಬರೂ ಆ ಕಡೆ ಗಮನ ಹರಿಸಿದರೆ ಮೊದಲು ಇಬ್ಬರು ನರ್ಸ್‌ಗಳು ಕಾಣಿಸಿದರು. ನಂತರ ಒಂದು ಗಾಲಿ ಕುರ್ಚಿ ಕಂಡು ಬಂತು. ಅದರಲ್ಲಿ ಒಬ್ಬ ಹಣ್ಣು ಹಣ್ಣು ಮುದುಕ ಕುಳಿತಿದ್ದರು. ಅವರ ತೊಡೆಯ ಮೇಲೆ ಒಂದು ನಾಯಿ ಮರಿ. ಗಾಲಿ ಕುರ್ಚಿಗೆ ಆಮ್ಲಜನಕದ ಸಿಲಿಂಡರ್ ನೇತಾಡುತ್ತಿತ್ತು. ವೃದ್ಧರ ಮುಖಕ್ಕೆ ಆಮ್ಲಜನಕದ ಕವಚ ಮುಚ್ಚಿಕೊಂಡಿತ್ತು. ನಿಧಾನಕ್ಕೆ ಅವರು ವೇದಿಕೆಯ ಮುಂಭಾಗಕ್ಕೆ ಬಂದರು. ಆಗಲೇ ಗೊತ್ತಾಗಿದ್ದು ಆ ಕುರ್ಚಿಯಲ್ಲಿ ಕುಳಿತವರು ಸಿತಾರ್ ಮಾಂತ್ರಿಕ ಪಂಡಿತ್ ರವಿಶಂಕರ್ ಎನ್ನುವುದು.

ವೇದಿಕೆಯಲ್ಲಿ ಕಛೇರಿ ನೀಡುತ್ತಿದ್ದ ಈ ಇಬ್ಬರೂ ಯುವಕರು ಒಂದು ಕ್ಷಣ ಅವಾಕ್ಕಾದರು. ತಕ್ಷಣವೇ ಎಚ್ಚೆತ್ತುಕೊಂಡು ಕೈ ಮುಗಿದರು. ಕುಳಿತಲ್ಲಿಂದಲೇ ರವಿಶಂಕರ್ ಕೈಸನ್ನೆ ಮಾಡಿ ಕಛೇರಿ ಮುಂದುವರಿಸುವಂತೆ ಸೂಚಿಸಿದರು. ನಾಗರಾಜ್ ಮತ್ತು ಮಂಜುನಾಥ್ ಕಛೇರಿ ಮುಂದುವರಿಸಿದರು.

ವೇದಿಕೆಯ ಮುಂಭಾಗದಲ್ಲಿ ರವಿಶಂಕರ್ ಕುಳಿತುಕೊಂಡಿದ್ದರಿಂದ ಹಾಗೂ ಅವರಿಗೆ ಸಂಗೀತದ ಗಣಿತದ ಬಗ್ಗೆ ಸಾಕಷ್ಟು ಕುತೂಹಲ ಇದ್ದಿದ್ದರಿಂದ ನಾಗರಾಜ್ ಮತ್ತು ಮಂಜುನಾಥ್ ಅವರು ಮುಂದಿನ ರಾಗವಾಗಿ ಸಿಂಹೇಂದ್ರ ಮಧ್ಯಮರಾಗ, ಮಿಶ್ರ ಛಾಪು ತಾಳವನ್ನು ಆಯ್ಕೆ ಮಾಡಿಕೊಂಡರು. ಅದು ಕೊಂಚ ಕಷ್ಟದ ತಾಳ. ಈ ರಾಗ ತಾಳವನ್ನು ಕೇಳಿದ ರವಿಶಂಕರ್ ತಾವೂ ತಾಳ ಹಾಕಲು ಆರಂಭಿಸಿದರು. ತುಂಬಾ ಖುಷಿ ಆದಾಗ `ಆಹಾ' ಎಂಬ ಉದ್ಗಾರ ತೆಗೆಯುತ್ತಿದ್ದರು.

ಮುಂದಿನ ರಾಗ ಹಿಂದೋಳ. `ರಾಗಂ, ತಾಳಂ ಪಲ್ಲವಿಯನ್ನು ಪಂಡಿತ್ ರವಿಶಂಕರ್‌ಗೆ ಅರ್ಪಣೆ ಮಾಡುತ್ತಿದ್ದೇವೆ' ಎಂದು ಪ್ರಕಟಿಸಿಯೇ ಇಬ್ಬರೂ ಪಿಟೀಲು ನುಡಿಸಲು ತೊಡಗಿದರು. ಅದನ್ನೂ ಕೂಡ ಅತ್ಯಂತ ತನ್ಮಯರಾಗಿ ಪಂಡಿತ್ ಕೇಳಿದರು.
`6.45ರ ವೇಳೆಗೆ ಸಭಾಂಗಣಕ್ಕೆ ಬಂದಿದ್ದ ರವಿಶಂಕರ್, ಕಛೇರಿ ಸಂಪೂರ್ಣವಾಗಿ ಮುಗಿಯುವವರೆಗೂ ಅಂದರೆ ಸುಮಾರು 2 ಗಂಟೆ ಇದ್ದರು. ನಮ್ಮನ್ನು ಮನಸಾರೆ ಹರಸಿದರು.

ವೇದಿಕೆಯ ಮುಂಭಾಗದಲ್ಲಿ ಅವರನ್ನು ನೋಡಿದಾಗ ನಮಗೆ ಸಾಕ್ಷಾತ್ ಸಂಗೀತ ಸರಸ್ವತಿಯೇ ಬಂದು ಕುಳಿತಂತೆ ಆಯಿತು. ನಮ್ಮ ಭಾಗ್ಯಕ್ಕೆ ಎಣೆಯುಂಟೇ ಅನ್ನಿಸಿತು. ಇದೊಂದು ಕನಸೋ ನನಸೋ ಎಂದು ನಾವು ಬೆಚ್ಚಿ ಬೀಳುವಂತಾಯಿತು. ಇದಕ್ಕಿಂತ ಅದೃಷ್ಟ, ಭಾಗ್ಯ ಇನ್ನೇನು ಬೇಕು' ಎಂದು `ಪ್ರಜಾವಾಣಿ' ಜತೆ ನೆನಪಿಸಿಕೊಳ್ಳುವಾಗ ಡಾ.ಮೈಸೂರು ಮಂಜುನಾಥ್ ರೋಮಾಂಚನಗೊಂಡಿದ್ದರು.

`ಪಂಡಿತ್ ರವಿಶಂಕರ್ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಸಂಗೀತ ಕಛೇರಿಗೆ ಹಾಜರಾಗ್ದ್ದಿದು ಅದೇ ಕೊನೆ. ಇದಕ್ಕೆ ಮೊದಲು ನಾವು ಅವರನ್ನು ನೋಡಿರಲಿಲ್ಲ. ಅಂದೇ ಅವರ ಮೊದಲ ಭೇಟಿ. ಅದೇ ಕೊನೆಯ ಭೇಟಿಯೂ ಆಯಿತು. ಅವರ ಬಗ್ಗೆ ನಮಗೆ ಗೊತ್ತಿತ್ತು. ಅದು ಮುಖ್ಯ ಅಲ್ಲ. ನಮ್ಮ ಬಗ್ಗೆ ಅವರಿಗೆ ಗೊತ್ತಿತ್ತು. ನಮ್ಮ ಸಂಗೀತವನ್ನು ಕೇಳಲು ಅವರು ಬಂದಿದ್ದರು ಎನ್ನುವುದೇ ನಮ್ಮ ಪುಣ್ಯ' ಎಂದು ಧನ್ಯತೆಯಿಂದ ಹೇಳಿದರು.

`ನಮ್ಮ ಕಛೇರಿ ಮುಗಿದ ತಕ್ಷಣವೇ ಅವರು ಹೋಗಲಿಲ್ಲ. ನಾವು ಕೆಳಕ್ಕೆ ಇಳಿದು ಬಂದು ಅವರಿಗೆ ನಮಸ್ಕರಿಸಿದೆವು. ಆಗ ಅವರು, ನೀವು ಮೈಸೂರಿನ ರಾಜಕುಮಾರರು ಬಂದಿದ್ದೀರಿ. ನಿಮ್ಮ ಸಂಗೀತ ಕೇಳುವ ಮನಸ್ಸಾಯಿತು. ಅದಕ್ಕೇ ಬಂದೆ ಎಂದು ಹೇಳಿದರು. ಅದು ನಮ್ಮ ಬದುಕಿನ ಅತ್ಯಂತ ಸ್ಮರಣೀಯ ದಿನ' ಎಂದು ಅವರು ಹೇಳಿಕೊಂಡರು.

`ಕಳೆದ 28 ವರ್ಷಗಳಿಂದ ರವಿಶಂಕರ್ ಸ್ಯಾಂಡಿಯಾಗೊದಲ್ಲಿಯೇ ಇದ್ದಾರೆ. ನಮ್ಮ ಕಾರ್ಯಕ್ರಮ ಇರುವ 4 ದಿನ ಮುಂಚೆ ಅವರು ಆಸ್ಪತ್ರೆಯಿಂದ ಬಂದಿದ್ದರು. ಆದರೂ ನಮ್ಮ ಕಾರ್ಯಕ್ರಮಕ್ಕೆ ಹೋಗಲೇಬೇಕು ಎಂದು ಹಟ ಹಿಡಿದರಂತೆ. ನೀವು ಅವರ ಸಂಗೀತವನ್ನು ಕೇಳಬೇಕು ಅಥವಾ ಅವರನ್ನು ಭೇಟಿ ಮಾಡಬೇಕು ಎಂದರೆ ಮಂಜುನಾಥ್, ನಾಗರಾಜ್ ಅವರನ್ನೇ ಇಲ್ಲಿಗೆ ಕರೆಸೋಣ ಎಂದು ಪತ್ನಿ, ಶಿಷ್ಯರು ಹೇಳಿದರೂ ಕೇಳಲಿಲ್ಲವಂತೆ. ನಾನು ಅವರ ಲೈವ್ ಸಂಗೀತ ಕಛೇರಿ ಕೇಳಬೇಕು ಎಂದು ಆಕ್ಸಿಜನ್ ಮಾಸ್ಕ್‌ನೊಂದಿಗೆ ವ್ಹೀಲ್‌ಚೇರಿನಲ್ಲಿ ಬಂದು ನಮ್ಮ ಸಂಗೀತ ಕೇಳಿದರು. ಖುಷಿಪಟ್ಟರು. ಆಶೀರ್ವದಿಸಿದರು' ಎಂದು ನೆನಪಿಸಿಕೊಂಡರು.

`ನಿಮ್ಮ ಸಂಗೀತ ಕಛೇರಿ ಕೇಳಿದ ನಂತರ ಪಂಡಿತ್‌ಜಿ ಸಂತೋಷವಾಗಿದ್ದರು, ಗೆಲುವಾಗಿದ್ದರು ಎಂದು ನಮ್ಮ ಕಛೇರಿ ಮುಗಿದ ಕೆಲ ದಿನದ ನಂತರ ರವಿಶಂಕರ್ ಪತ್ನಿ ನಮಗೆ ಸಂದೇಶವೊಂದನ್ನು ಕಳುಹಿಸಿ ತಿಳಿಸಿದರು. ಜೀವನದಲ್ಲಿ ಅದಕ್ಕಿಂತ ದೊಡ್ಡ ಸೌಭಾಗ್ಯ ಇನ್ನೇನಿದೆ' ಎನ್ನುವಾಗ ಮಂಜುನಾಥ್ ಭಾವುಕರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT