ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ತಿಂಗಳಿಂದ ಸ್ಥಳ ಬಿಟ್ಟು ಕದಲಿಲ್ಲ!

Last Updated 13 ಏಪ್ರಿಲ್ 2013, 10:25 IST
ಅಕ್ಷರ ಗಾತ್ರ

ಗಂಗಾವತಿ: `ಯಾರೋ ಯಾರೋ ಗೀಚಿ ಹೋದ... ಈ ಹಾಳು ಹಣೆಯ ಬರಹ.... ದಿಕ್ಕು ದಾರಿ ತೋಚದ... ಕಾಲ ಕಳೆಯುವ ವಿರಹ...' ಇದು ಕನ್ನಡ ಚಿತ್ರರಂಗದ ಕಿಚ್ಚ ಖ್ಯಾತಿಯ ಸುದೀಪ್ ಅಭಿನಯದ `ಹುಚ್ಚಾ' ಚಿತ್ರದ ಹಾಡೊಂದರ ಪಲ್ಲವಿ.

ಈ ಪಲ್ಲವಿಯ ಸಾರವೇ ಇಲ್ಲೊಬ್ಬ ವ್ಯಕ್ತಿಯನ್ನು ಹೋಲುವಂತಿದೆ. ಅದೇನು ಹಠ ಯೋಗವೋ, ಛಲವೋ, ಮುನಿಸೋ ಗೊತ್ತಿಲ್ಲ. ಆದರೆ ಈ ಅಸಾಮಿ ಕಳೆದ ಆರು ತಿಂಗಳಿಂದ ತಾನು ಕುಳಿತ ಸ್ಥಳ ಬಿಟ್ಟು ಇದುವರೆಗೂ ಕದಲಿಲ್ಲ. ಅನ್ನ, ನೀರು, ಶೌಚ ಎಲ್ಲವೂ ಕುಳಿತಲ್ಲೆ.

ನೆತ್ತಿ ಸುಟ್ಟು ಕರಕಲಾಗುವಷ್ಟು ಈ ಬಿರು ಬೇಸಿಗೆಯನ್ನು ಲೆಕ್ಕಿಸದ ಆ ವ್ಯಕ್ತಿ, ಆನೆಗೊಂದಿ ರಸ್ತೆಯ ಲಲಿತ ಮಹಲ್ ಎಂಬ ಖಾಸಗಿ ಹೊಟೇಲ್ ಸಮೀಪ ಕಳೆದ ಆರು ತಿಂಗಳಿಂದ ಸ್ಥಳಬಿಟ್ಟು ಕದಲದೇ ಕುಳಿತಲ್ಲೆ ಕುಳಿತಿದ್ದಾರೆ.

ಈ ವ್ಯಕ್ತಿ ಯಾರು, ಯಾವ ಕಾರಣಕ್ಕಾಗಿ ಇಲ್ಲಿ ದಯನೀಯ ಸ್ಥಿತಿಯಲ್ಲಿ ಕಾಲ ಕಳೆಯುತ್ತಿದ್ದಾರೆ. ಊರು, ಕೇರಿ, ಹೆಸರು, ಬಂಧು-ಬಳಗ ಯಾವದೊಂದರ ಬಗ್ಗೆಯೂ ಸ್ಥಳೀಯರಿಗೆ ಮಾಹಿತಿಯಿಲ್ಲ. ವ್ಯಕ್ತಿ ಯಾರೊಂದಿಗೂ ಮಾತನಾಡುತ್ತಿಲ್ಲ.

ಈ ಬಗ್ಗೆ ತಿಳಿಯಲು ಸ್ಥಳಕ್ಕೆ ಭೇಟಿ ನೀಡಿದ `ಪ್ರಜಾವಾಣಿ' ವ್ಯಕ್ತಿಯನ್ನು ಮಾತನಾಡಿಸಲು ಯತ್ನಿಸಿದರೆ, ಅಸ್ಪಷ್ಟ ಹಿಂದಿಯಲ್ಲಿ, ಕ್ಷೀಣವಾದ ಧ್ವನಿಯಲ್ಲಿ ಏನೋ ಪಿಸುಗುಟ್ಟಿದ್ದು ಬಿಟ್ಟರೆ, ಎಷ್ಟೆ ಯತ್ನಿಸಿದರೂ ವ್ಯಕ್ತಿ ಬೇರೆ ಏನನ್ನು ಹೇಳಲಿಲ್ಲ.

ದಾರಿಹೋಕರೇ ಅನ್ನದಾತರು: ಐತಿಹಾಸಿಕ ಆನೆಗೊಂದಿ ರಸ್ತೆಯಲ್ಲಿ ವಾಹನಗಳ ಓಡಾಟ ಅಧಿಕವಿದ್ದರಿಂದ ರಾತ್ರಿ ಹೊತ್ತು ರಸ್ತೆ ಪಕ್ಕವೇ ಮಲಗುವ ವೃದ್ಧನ ಮೇಲೆ ವಾಹನ ಚಲಿಸದಂತೆ ಸ್ಥಳೀಯ ಕೆಲ ವ್ಯಕ್ತಿಗಳು ಕಳೆದ ಆರು ತಿಂಗಳಿಂದ ಕಲ್ಲುಗಳನ್ನಿಟ್ಟು ವ್ಯಕ್ತಿಯ ಪ್ರಾಣ ಕಾಯುತ್ತಿದ್ದಾರೆ.

ಅನಾಥವಾಗಿ ಬಿದ್ದಿರುವ ವ್ಯಕ್ತಿಗೆ ಈ ಮಾರ್ಗದಲ್ಲಿ ಹೋಗುವ ಕಾಲೇಜು ವಿದ್ಯಾರ್ಥಿನಿಯರು, ದಾರಿಹೋಕರೇ ಅನ್ನದಾತರಾಗಿದ್ದು, ಅನುಕಂಪದಿಂದ ಬ್ರೆಡ್, ಅನ್ನ, ಇಡ್ಲಿ ಸಾಂಬಾರು ನೀಡುತ್ತಿದ್ದಾರೆ. ಲಲಿತ ಮಹಲ್ ಹೊಟೇಲ್‌ನಲ್ಲಿರುವ ಮಹಿಳೆಯೊಬ್ಬರು ನಿತ್ಯ ರಾತ್ರಿ ಅನ್ನ ನೀಡುತ್ತಾರೆ.

`ಸಂಬಂಧಿತ ಇಲಾಖೆ, ಸೇವಾ ಸಂಸ್ಥೆಗಳ ಪ್ರಮುಖರು, ಈ ವ್ಯಕ್ತಿ ಯಾರು, ಏಕೆ ಹೀಗೆ ಕಾಲ ಕಳೆಯುತ್ತಿದ್ದಾರೆ ಎಂದು ಪತ್ತೆ ಹಚ್ಚಿ ಪುನರ್ವಸತಿ ಕಲ್ಪಿಸುವಂತೆ' ಉಪನ್ಯಾಸಕರಾದ ಶರಣಬಸಪ್ಪ ಕೋಲ್ಕಾರ, ಡಾ. ಜಾಜಿ ದೇವೇಂದ್ರಪ್ಪ, ಕೆ.ಬಿ. ಗೌಡಪ್ಪನವರ್ ಮನವಿ ಮಾಡಿದ್ದಾರೆ. 
 
ಈ ಮಾರ್ಗದಲ್ಲಿ ನಿತ್ಯ ಮಿನಿ ವಿಧಾನಸೌಧಕ್ಕೆ ಹೋಗುವ ತಹಸೀಲ್ದಾರ, ಕಂದಾಯ, ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿಗೆ ಕಳೆದ ಆರು ತಿಂಗಳಿಂದ ದಯನೀಯ ಸ್ಥಿತಿಯಲ್ಲಿರುವ ಈ ವ್ಯಕ್ತಿ ಮಾತ್ರ ಕಾಣುತ್ತಿಲ್ಲದಿರುವುದು ಖೇದಕರ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT