ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಪಿಗಳ ಖುಲಾಸೆ; ಪೊಲೀಸರಿಗೆ ಹಿನ್ನಡೆ

Last Updated 30 ಅಕ್ಟೋಬರ್ 2011, 9:30 IST
ಅಕ್ಷರ ಗಾತ್ರ

ತುಮಕೂರು: ಪಾವಗಡ ತಾಲ್ಲೂಕು ವೆಂಕಟಮ್ಮನಹಳ್ಳಿ ಸರ್ಕಾರಿ ಶಾಲೆಯಲ್ಲಿ ಬೀಡುಬಿಟ್ಟಿದ್ದ ರಾಜ್ಯ ಮೀಸಲು ಪೊಲೀಸ್ ಪಡೆ ಶಿಬಿರದ ಮೇಲೆ ದಾಳಿ ನಡೆಸಿದ ನಕ್ಸಲೀಯರ ತಂಡವು 8 ಪೊಲೀಸರು, ಒಬ್ಬ ನಾಗರಿಕನನ್ನು ಕೊಂದ ಪ್ರಕರಣದಲ್ಲಿ ಸಾಕ್ಷ್ಯಧಾರಗಳ ಕೊರೆತೆ ಕಾರಣ ಎಲ್ಲ ಆರೋಪಿಗಳನ್ನು ಇಲ್ಲಿನ ಎರಡನೇ ಅಧಿಕ ಸೆಷನ್ಸ್ ನ್ಯಾಯಾಲಯ ಶನಿವಾರ ಖುಲಾಸೆಗೊಳಿಸಿತು.

ಘಟನೆ ನಡೆದು 7 ವರ್ಷಗಳ ಬಳಿಕ ತೀರ್ಪು ಹೊರಬಿದ್ದಿದೆ. ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಈ ದಾಳಿ ಪ್ರಕರಣದಲ್ಲಿ ನಕ್ಸಲೀಯರನ್ನು ಬಂಧಿ ಸುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿತ್ತು. 8 ಪೊಲೀಸರನ್ನು ಕಳೆದುಕೊಂಡ ಇಲಾಖೆಗೆ ಈ ತೀರ್ಪು ದುಃಖದ ಜೊತೆಗೆ ಮುಖಭಂಗವನ್ನು ಉಂಟು ಮಾಡಿದೆ.

ಜಿಲ್ಲಾ 2ನೇ ಅಧಿಕ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಬಾಲಕೃಷ್ಣ ಅವರು ತೀರ್ಪು ಓದುತ್ತಿದ್ದಂತೆ ಪೊಲೀಸರ ಮುಖಗಳು ಕಳಾಹೀನಗೊಂಡವು. 8 ಜನ ಪೊಲೀಸರು ಹತ್ಯೆಗೀಡಾದ ಪ್ರಕರಣದಲ್ಲಿ ಆರೋಪಿಗಳನ್ನು ಹಿಡಿಯುವಲ್ಲಿ ವಿಫಲತೆಯನ್ನು ತೀರ್ಪು ಎತ್ತಿ ತೋರಿಸಿತು. ಪ್ರಕರಣದ `ಆರೋಪಿಗಳು ಅಪರಾಧಿಗಳಲ್ಲ ಅಥವಾ ನಿರ್ದೋಶಿಗಳೆಂದೂ ಹೇಳುತ್ತಿಲ್ಲ. ನಕ್ಸಲರಲ್ಲ ಅಥಾವ ನಕ್ಸಲೀಯ ಸಂಘಟನೆಗಳೊಂದಿಗೆ ಅವರ ಸಂಪರ್ಕ ಇಲ್ಲ ಎಂದೂ ಹೇಳುತ್ತಿಲ್ಲ.

ಸಾಕ್ಷ್ಯದ ಕೊರತೆ ಕಾರಣ ಸಂಶಯದ ಲಾಭ ಆರೋಪಿಗಳ ನೆರವಿಗೆ ಬಂದಿದ್ದು ಅವರನ್ನು ಬಿಡುಗಡೆ ಮಾಡಲಾಗುತ್ತಿದೆ~ ಎಂದರು. ತೀರ್ಪು ಪೊಲೀಸರತ್ತಲೆ ಬೆಟ್ಟು ತೋರಿಸುತ್ತದೆ. ಪೊಲೀಸರು ಹಾಜರುಪಡಿಸಿದ್ದ ಸಾಕ್ಷ್ಯಗಳು ತದ್ವಿರುದ್ದ ಹೇಳಿಕೆ ನೀಡಿರುವುದು ಪೊಲೀಸರ ತನಿಖೆ ವೈಫಲ್ಯವನ್ನು ಸೂಚಿಸುತ್ತದೆ.

ಬಂಧನದಿಂದ ಬಿಡಗಡೆಗೊಂಡ 19 ಜನರು ಕೂಡ ಮಾಧ್ಯಮಗಳ ಎದುರು ಪೊಲೀಸರ ಮೇಲೆ ಕೆಂಡಕಾರಿದರು.
ಘಟನೆಗೂ ನಮಗೂ ಸಂಬಂಧವೇ ಇಲ್ಲ. ಪೊಲೀಸರು ಸುಖಾಸುಮ್ಮನೇ ನಮ್ಮನ್ನು ಬಂಧಿಸಿದರು.
ವಿನಾಕಾರಣ ಪ್ರಕರಣ ಹೂಡಿ ನಮ್ಮ ಬದುಕನ್ನು ಹಾಳು ಮಾಡಿದರು. ನಿಜವಾದ ಆರೋಪಿಗಳನ್ನು ಬಂಧಿಸಿಲ್ಲ ಎಂದು ದೂರಿದರು.

ಆರೋಪಿಗಳ ಪರವಾಗಿ ವಾದ ಮಂಡಿಸಿದ ವಕೀಲ ಎಸ್.ಕೆ.ಮಲ್ಲಿಕಾರ್ಜುನ್, `ಘಟನೆಯನ್ನು ಅಲ್ಲಗಳೆಯುವುದಿಲ್ಲ. ನಕ್ಸಲೀಯರು ದಾಳಿ ನಡೆಸಿ ಪೊಲೀಸರನ್ನು ಕೊಂದಿರುವುದು ನಿಜ. ಆದರೆ ಆರೋಪಿಗಳು ಇವರಲ್ಲ. ಇವರೆಲ್ಲ ಅಮಾಯಕರು~ ಎಂದರು.

ತನಿಖೆ ನಡೆಸುವಾಗಲೇ ಪೊಲೀಸರು ಎಡವಿದರೆ ಅಥವಾ ನ್ಯಾಯಾಲಯಕ್ಕೆ ಪೂರಕ ಸಾಕ್ಷ್ಯಗಳನ್ನು ಒದಗಿಸಲು ವಿಫಲರಾದರೆ ಎಂಬುದನ್ನು ಈಗ ಪೊಲೀಸರೇ ಹೇಳಬೇಕಾಗಿದೆ ಎಂದು ಹೇಳಿದರು.

2005ರಲ್ಲೇ ಘಟನೆ ನಡೆದಿದ್ದರೂ ವಿಚಾರಣೆ ನಿಧಾನ ಮಾಡಲಾಗುತ್ತಿದೆ ಎಂದು ದೂರಿ ಆರೋಪಿಗಳು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ  ಪ್ರತಿ ದಿನ ವಿಚಾರಣೆ ನಡೆಸಿ 6 ತಿಂಗಳಲ್ಲಿ ತೀರ್ಪು ನೀಡುವಂತೆ ಹೈಕೋರ್ಟ್ ಜುಲೈ 2010ರಲ್ಲಿ ಆದೇಶ ನೀಡಿತ್ತು. ಹೈಕೋರ್ಟ್ ಆದೇಶ ನೀಡಿದ 8 ತಿಂಗಳ ಬಳಿಕ ತೀರ್ಪು ಹೊರಬಿದ್ದಿದೆ.
 

ಬಿಡುಗಡೆಗೊಂಡ ಆರೋಪಿಗಳು
ನಾಗರಾಜ, ಕೊತ್ತಗೆರೆ ಶ್ರೀನಿವಾಸ್, ಬಜ್ಜಪ್ಪ, ಮುತ್ಯಾಲು ಅಲಿಯಾಸ್ ಕೊಂಡಮುತ್ಯಾಲು, ಗೋವಿಂದ, ಗುರುಮೂರ್ತಿ, ಹರಿಜನಗೋಪಾಲ, ಸುರೇಶ, ಗಂಗಣ್ಣ, ಲಕ್ಷ್ಮೀನಾರಾಯಣ. ರಾಜೇಂದ್ರ, ರಾಜು ಅಲಿಯಾಸ್ ವೆಂಕಟೇಶ್, ನರೇಶ್, ಗೋಪಿ ಅಲಿಯಾಸ್ ವಂಶಿ, ನರಸಿಂಹ, ವೆಂಕಟರಾಮು, ಅಶ್ವಥ್, ಪೆದ್ದಣ್ಣ, ಹನುಮಂತ ಬಿಡುಗಡೆಗೊಂಡ ಆರೋಪಿಗಳು.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾಲಾಪರಾಧಿಗಳಾಗಿರುವ ಅನಂತಪುರ ಜಿಲ್ಲೆ ಕನಗಾನಪಲ್ಲಿಯ ನಲ್ಲಪ್ಪಗಾರಿ ಹನುಮಂತರೆಡ್ಡಿ, ಜಗದೀಶ್, ಧರ್ಮಾವರ ಮಂಡಲಂನ ಮಾಧಾಪುರಂನ ಅನಿಲ್ ವಿಚಾರಣೆ ಇನ್ನು ನಡೆಯುತ್ತಿದೆ.

ಸಾವನ್ನಪ್ಪಿದವರು
ನಕ್ಸಲೀಯರ ದಾಳಿ ವೇಳೆ ಸಾವನ್ನಪ್ಪಿದ ಪೊಲೀಸರ ವಿವರ: ಸೆಂಟ್ರಿ ವೆಂಕಟೇಶ್ (ಕೋಲಾರ), ಸಬ್‌ಇನ್ಸ್‌ಪೆಕ್ಟರ್ ವಿ.ವಿ. ಕಾಲವಾಡ (ಗದಗ), ಹೆಡ್‌ಕಾನ್‌ಸ್ಟೆಬಲ್‌ಗಳಾದ ಬಿ.ಕೆ.ಚಿಕ್ಕನರಸಿಂಹಯ್ಯ (ಕುಣಿಗಲ್), ಸಿದ್ದರಾಮಣ್ಣ (ಗುಬ್ಬಿ), ಎನ್.ರಾಜೀವ್ (ಬೆಂಗಳೂರು), ಜಯರಾಮು (ಬೆಂಗಳೂರು),  ಬೆಟ್ಟೇಗೌಡ ಹಾಗೂ ಬಸ್ ಕ್ಲೀನರ್ ಹನುಮಂತಯ್ಯ.

ಬಿಡುಗಡೆ ಇಲ್ಲ
ಪ್ರಕರಣದಲ್ಲಿ 19 ಜನರು ಬಿಡುಗಡೆಗೊಂಡಿದ್ದರೂ ಮೂವರು ಜೈಲಿನಿಂದ ಬಿಡುಗಡೆ ಸಾಧ್ಯವಿಲ್ಲವಾಗಿದೆ. ಬೇರೆ ಪ್ರಕರಣದಲ್ಲಿ ಬೇಕಿದ್ದರೆ ಆರೋಪಿಗಳ ಬಂಧನ ಮುಂದುವರಿಸಬಹುದು ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಈಗಾಗಿ ಶಸ್ತ್ರಾಸ್ತ್ರ ಕಾಯ್ದೆಯಡಿ ಮೂರು ಪ್ರಕರಣಗಳಲ್ಲಿ ಮಧುಗಿರಿ ನ್ಯಾಯಾಯದಲ್ಲಿ ಆರೋಪಿಗಳಾಗಿರುವ ಪೆದ್ದಣ್ಣ, ನಾಗರಾಜ್, ವಂಶಿ ಅವರನ್ನು ಬಿಡುಗಡೆ ಮಾಡುವುದಿಲ್ಲ. ನರೇಶ್ ಎಂಬಾತ ಆಂಧ್ರಪ್ರದೇಶದ ಪೊಲೀಸರಿಗೆ ಬೇಕಾಗಿದ್ದಾನೆ ಎಂದು ಟಿ.ಆರ್.ಸುರೇಶ್ ತಿಳಿಸಿದರು.

ಮನುಷ್ಯರಂತೆ ಬದುಕಿ

ಮನುಷ್ಯರು ಮನುಷ್ಯರ ಥರಾ ಬದುಕಬೇಕು. ಪ್ರಾಣ ಕಸಿಯುವ ಕೆಲಸ ಮಾಡಬಾರದು. ನಿಮ್ಮ ಆತ್ಮಸಾಕ್ಷಿಗಳನ್ನು ಕೇಳಿಕೊಳ್ಳಿ. ಇನ್ನಾದರೂ ಮನುಷ್ಯರಂತೆ ಬದುಕಿ ಎಂದು ತೀರ್ಪು ನೀಡುವಾಗ ನ್ಯಾಯಾಧೀಶ ಬಿ. ಬಾಲಕೃಷ್ಣ  ಬಿಡುಗಡೆಗೊಂಡ ಆರೋಪಿಗಳನ್ನು ಉದ್ದೇಶಿಸಿ ಕನ್ನಡದಲ್ಲಿ ಹೇಳಿದರು. ಕನ್ನಡ ಬಾರದವರಿಗೆ ತೆಲುಗಿನಲ್ಲಿ ಹೇಳುವಂತೆ ತಿಳಿಸಿದರು.

ನ್ಯಾಯಾಧೀಶರೇ ನಮ್ಮ ದೇವರು
ನ್ಯಾಯಾಧೀಶರೇ ನಮ್ಮ ದೇವರು. ನಮಗೆ ಪುನರ್ಜನ್ಮ ಸಿಕ್ಕಿದೆ. ತೀರ್ಪಿನಿಂದ ಸಂತಸವಾಗಿದೆ. ನಮ್ಮ ಹೆಂಡತಿ, ಮಕ್ಕಳಿಗೆ ಹೊಸ ಜೀವನ ಸಿಕ್ಕಿದೆ ಎಂದು ತೀರ್ಪು ಹೊರ ಬೀಳುತ್ತಿದ್ದಂತೆ ಬಿಡುಗಡೆಗೊಂಡ ಗಂಗಣ್ಣ ಹಂಚಿಕೊಂಡರು.

ನಮ್ಮ ಬದುಕನ್ನೇ ಹಾಳು ಮಾಡಿದರು...

ಪೊಲೀಸರು ವಿನಾ ಕಾರಣ ಬಂಧಿಸಿ ನಮ್ಮ ಬದುಕನ್ನೇ ಹಾಳು ಮಾಡಿದರು. ದಾಳಿಂಬೆ, ತೋಟ, 3 ಕೊಳವೆ ಬಾವಿ ಎಲ್ಲವೂ ಹಾಳಾಯಿತು. ನಕ್ಸಲರನ್ನು ಹಿಡಿಯುವುದನ್ನು ಬಿಟ್ಟು ಕೃಷಿ ಮಾಡಿಕೊಂಡಿದ್ದ ನಮ್ಮನ್ನು ಬಂಧಿಸಿ ನಮ್ಮ ತಂದೆ, ತಾಯಿ ನರಳುವಂತೆ ಮಾಡಿದರು. ನಮಗೆ ಇನ್ನಿಲ್ಲದಂತೆ ಮಾನಸಿಕ ಹಿಂಸೆ ನೀಡಿದರು ಎಂದು ಬಿಡುಗಡೆಯಾದ ನಾಗರಾಜು ಕೂಗಿ ಹೇಳಿದರು.

ಶ್ರಮಕ್ಕೆ ತಕ್ಕ ಫಲ
8 ತಿಂಗಳ ಕಾಲ ತಪ್ಪಸ್ಸಿನಂತೆ ಪ್ರಕರಣ ನಡೆಸಲಾಗಿದೆ. ಬೇರೆ ಎಲ್ಲ ಕೆಲಸ ಬದಿಗೊತ್ತಿ ಇದೊಂದೇ ಪ್ರಕರಣ ನಡೆಸಿದ್ದೇನೆ. ತೀರ್ಪು ಶ್ರಮಕ್ಕೆ ಸಿಕ್ಕ ಪ್ರತಿಫಲ ಎಂದು ಆರೋಪಿಗಳ ಪರ ವಕೀಲ ಎಸ್.ಎಂ.ಮಲ್ಲಿಕಾರ್ಜುನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT